







ನನ್ನ ಅವಧಿಯಲ್ಲಿ ಆತ್ಮಸಾಕ್ಷಿಯಾಗಿ ಕೆಲಸ ಮಾಡಿದ್ದೇನೆ- ವಂ|ಲಾರೆನ್ಸ್ ಮಸ್ಕರೇನಸ್
ಧೈರ್ಯವಂತರು, ಉತ್ತಮ ಆಡಳಿತಗಾರರಾಗಿದ್ದರು- ಅಲ್ವಿನ್ ಎಡ್ವರ್ಡ್ ಡಿಕುನ್ಹ
ಉತ್ತಮ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ- ಜೋಸ್ಲಿನ್ ಫೆರ್ನಾಂಡೀಸ್


ಪುತ್ತೂರು: ಕಳೆದ ಆರು ವರ್ಷಗಳಿಂದ ಪುತ್ತೂರು ಮಾಯ್ ದೆ ದೇವುಸ್ ಚರ್ಚ್ನಲ್ಲಿ ಪ್ರಧಾನ ಧರ್ಮಗುರುಗಳಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡು ವಾಮಂಜೂರು ಚರ್ಚ್ಗೆ ತೆರಳುತ್ತಿರುವ ವಂ|ಲಾರೆನ್ಸ್ ಮಸ್ಕರೇನಸ್ರವರಿಗೆ ಚರ್ಚ್ ಪಾಲನಾ ಪರಿಷತ್ನಿಂದ ಚರ್ಚ್ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭ ಮೇ.17ರಂದು ನಡೆಯಿತು.




ಸನ್ಮಾನ ಸ್ವೀಕರಿಸಿ ವಂ|ಲಾರೆನ್ಸ್ ಮಸ್ಕರೇನಸ್ರವರು ಮಾತನಾಡಿ ಜವಾಬ್ದಾರಿ ಸರಿಯಾಗಿ ನಿಭಾಯಿಸುವಂತಹದ್ದೇ ಸಾಧನೆಯಾಗಿದೆ. ಪುತ್ತೂರು ಚರ್ಚ್ನಲ್ಲಿ ಧರ್ಮಗುರುಗಳಾಗಿ ನನ್ನ ಅವಧಿಯನ್ನು ನಾನು ಸಂಪೂರ್ಣಗೊಳಿಸಿದ್ದೇನೆ. ನಮ್ಮ ಸಮುದಾಯ ಕಟ್ಟುವ ಕೆಲಸ ಆಗಿದೆ. ಜನರ ಆಧ್ಯಾತ್ಮಿಕ ಬೆಳವಣಿಗೆಯಾಗಿದೆ. ಆಧ್ಯಾತ್ಮಿಕ ಜೀವನಕ್ಕೆ ಸಹಾಯ ಮಾಡಿದ್ದೇನೆ. ನನ್ನ ಆತ್ಮಸಾಕ್ಷಿಯ ಪ್ರಕಾರ ಕೆಲಸ ಮಾಡಿದ್ದೇನೆ. ಆರು ವರ್ಷಗಳ ಅವಧಿಯನ್ನು ಯಶಸ್ವಿಯಾಗಿ ಪೂರೈಸಿ ನಾನು ಸಂತೋಷದಿಂದ ಇದ್ದೇನೆ. ಇದಕ್ಕಾಗಿ ದೇವರನ್ನು ಸ್ತುತಿಸುತ್ತೇನೆ ಎಂದರು.

ದೇವರ ಮೇಲಿನ ವಿಶ್ವಾಸದಿಂದ ಇಲ್ಲಿಗೆ ಬಂದೆ
ಪುತ್ತುರು ಚರ್ಚ್ಗೆ ಬರುವಾಗ ಕೋವಿಡ್ ಸಮಯವಾಗಿತ್ತು. ಅಲ್ಲದೆ ಇಲ್ಲಿನ ವಾತಾವರಣ ಕೂಡ ಅಷ್ಟು ಹಿತಕರವಾಗಿರಲಿಲ್ಲ. ಇಲ್ಲಿ ಬರುವ ಮೊದಲು ಒತ್ತಡದ ಸಂದರ್ಭ ಇತ್ತು. ಆದರೂ ಇಲ್ಲಿಗೆ ಬಂದೆ. ಇಲ್ಲಿ ಕೆಲಸದ ಒತ್ತಡ, ಸಮಸ್ಯೆ ಚಾಲೆಂಜ್ಗಳು ಇತ್ತು. ನಾನು ಛಲವಾದಿ, ಹಠವಾದಿಯಾಗಿದ್ದೇನೆ. ಹಠ ಇಲ್ಲದಿದ್ದರೆ ಸಾಧಿಸಲು ಸಾದ್ಯವಿಲ್ಲ. ಚಾಲೆಂಜ್ ತೆಗೆದುಕೊಳ್ಳುವ ಗುಣ ನನ್ನಲ್ಲಿತ್ತು. ದೇವರ ದಯೆಯಿಂದ, ನಿಮ್ಮೆಲ್ಲರ ಸಹಕಾರದಿಂದ ಸಮಸ್ಯೆ, ಚಾಲೆಂಜ್ ಎದುರಿಸಲು ಸಾಧ್ಯವಾಯಿತು. ಎಂದರು.

ನಿಮ್ಮ ಪ್ರೀತಿ, ಅಭಿಮಾನ ಹೃದಯಲ್ಲಿದೆ
ಎಲ್ಲಾ ಧರ್ಮಗುರುಗಳು ಪ್ರಾಮಾಣಿಕತೆಯೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಆದ್ದರಿಂದ ಅಭಿವೃದ್ಧಿಯಾಯಿತು. ಜತೆಗೆ ಶಾಲಾ ಕಾಲೇಜು ಅಭಿವೃದ್ಧಿಯಾಗಿದೆ. ಅದಕ್ಕೆ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ತೆಗೆದುಕೊಂಡವರು ಕಾರಣಕರ್ತರಾಗಿದ್ದಾರೆ. ಚರ್ಚ್ನ ಮುಖ್ಯಸ್ಥರು, ವಿವಿಧ ಸಮಿತಿ ಆಯೋಗಗಳ ಮುಖ್ಯಸ್ಥರ ಸಹಕಾರ ಸಿಕ್ಕಿದೆ. ಪುತ್ತೂರಿನ ಕ್ರೈಸ್ತ ಬಾಂಧವರು ಒಳ್ಳೆಯ ಕೆಲಸದಲ್ಲಿ ಭಾಗಿಗಳಾಗಿದ್ದೀರಿ. ಈ ಅಭಿವೃದ್ಧಿಗೆ ನೀವೆಲ್ಲರೂ ಕರ್ತವ್ಯ ಮಾಡಿದ್ದೀರಿ. ನಾನು ಕಾಣಿಕೆ ಅಭಿನಂದನೆ ಬೇಡ ಎಂದು ಹೇಳಿದ್ದೆ. ಆದರೂ ಚರ್ಚ್ ಪಾಲನಾ ಸಮಿತಿಯಿಂದ ಕಾಣಿಕೆ ನೀಡಿದ್ದೀರಿ. ಇದಕ್ಕೆ ಅಭಾರಿಯಾಗಿದ್ದೇನೆ. ಇದು ನನ್ನ ಹೃದಯದಲ್ಲಿದೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.
ಡ್ಯೂಟಿಫುಲ್ ಪರ್ಸನ್ ಈಸ್ ಬ್ಯೂಟಿಫುಲ್ ಪರ್ಸನ್
ಪುತ್ತೂರಿನಲ್ಲಿ ಹಲವು ಒತ್ತಡಗಳಿತ್ತು. ಕಛೇರಿ ಸಮಯ ಮೀರಿ ಕೂಡ ಕೆಲಸ ನಿರ್ವಹಿಸಿದ್ದೇನೆ. ಎಲ್ಲವೂ ಸುಸೂತ್ರವಾಗಿ ನಡೆಯಲು ತುಂಬಾ ಶ್ರಮ ಬೇಕಾದ ಕಾರಣ ಅದಕ್ಕೆ ಕರ್ತವ್ಯಕ್ಕೆ ಸಮಯ ಕೊಟ್ಟಿದ್ದೇನೆ. ನನಗೆ ಕರ್ತವ್ಯ ಮೊದಲು ಆಗಿತ್ತು. ಕರ್ತವ್ಯ ಸರಿಯಾಗಿ ಮಾಡುವವರು ಒಳ್ಳೆಯ ವ್ಯಕ್ತಿಗಳು. ಎಲ್ಲರೂ ಅವರ ಕರ್ತವ್ಯ ಒಳ್ಳೆಯ ರೀತಿಯಲ್ಲಿ ಮಾಡಿದ್ದಾರೆ. ತುಂಬಾ ತ್ಯಾಗ, ಪರಿಶ್ರಮ ಇತ್ತು. ನಮಗೆ ವರ್ಷದಲ್ಲಿ ಒಂದು ತಿಂಗಳು ರಜೆ ತೆಗೆದುಕೊಳ್ಳುವ ಹಕ್ಕು ಇತ್ತು. ಆದರೆ ನಾನು ರಜೆ ತೆಗೆಯದೆ ಸಮುದಾಯಕ್ಕಾಗಿ ಕೆಲಸ ಮಾಡಿದ್ದೇನೆ ಎಂದರು.
ಫಾದರ್ ಎಂದರೆ ತಂದೆ ಇದ್ದ ಹಾಗೆ
ಫಾದರ್ ಎಂದರೆ ತಂದೆ ಇದ್ದ ಹಾಗೆ. ತಂದೆಯ ಸ್ಥಾನದಲ್ಲಿ ಇದ್ದುಕೊಂಡು ಕೆಲಸ ಮಾಡಿದ್ದೇನೆ. ತಂದೆಯು ಮಕ್ಕಳ ಎಲ್ಲಾ ಕೆಲಸವನ್ನು ಒಪ್ಪುವುದಿಲ್ಲ. ಅದೇ ರೀತಿ ತಪ್ಪಾದಾಗ ಬುದ್ಧಿ ಹೇಳಿದ್ದೇನೆ. ಸರಿ ಮಾಡಿದಾಗ ಬೆನ್ನು ತಟ್ಟಿದ್ದೇನೆ. ಆದರೆ ಮಕ್ಕಳಿಗೆ ಅರ್ಥವಾಗದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ ಎಂದರು.
ಯಾರ ದಾಕ್ಷಿಣ್ಯಕ್ಕೆ ಬೀಳದೆ ದೇವರ ಇಚ್ಚೆಯಂತೆ ನಾನು ಕೆಲಸ ಮಾಡಿದ್ದೇನೆ. ಸತ್ಯದ ದಾರಿಯಲ್ಲಿ ನೀತಿಯ ದಾರಿಯಲ್ಲಿ ನಡೆದಿದ್ದೇನೆ. ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ. ಆದುದರಿಂದ ನಾನು ಸಂತೋಷದಿಂದ ನಿರ್ಗಮಿಸುತ್ತಿದ್ದೇನೆ. ಯಾರಿಗೂ ಬೇಸರವಾಗಿದ್ದರೆ ಕ್ಷಮೆ ಇರಲಿ ಎಂದ ಅವರು ದೇವರ ಸೇವಕರೆಂದು ತಿಳಿದು ನಮ್ಮ ಸಮುದಾಯವನ್ನು ಇನ್ನಷ್ಟು ಬಲಿಷ್ಠಗೊಳಿಸಿ. ನಮ್ಮ ಸಂಸ್ಥೆಗಳನ್ನು ಎತ್ತರಕ್ಕೆ ಕೊಂಡೊಯ್ಯಿರಿ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.
ಧೈರ್ಯವಂತರು, ಉತ್ತಮ ಆಡಳಿತಗಾರರಾಗಿದ್ದರು
ಸುಳ್ಯ ಸಂತ ಬ್ರಿಜೆಡ್ಸ್ ದೇವಾಲಯದ ಪ್ರಧಾನ ಧರ್ಮಗುರು ಅಲ್ವಿನ್ ಎಡ್ವರ್ಡ್ ಡಿಕುನ್ಹ ಮಾತನಾಡಿ ಲಾರೆನ್ಸ್ ಮಸ್ಕರೇನಸ್ರವರು ಮಹಾ ಧೈರ್ಯವಂತರಾಗಿದ್ದರು. ಅವರನ್ನು ನೀರಿಗೆ ದೂಡಿಹಾಕಿದರೂ ಅವರು ಮೇಲೆ ಬರುವುದು ಮಾತ್ರ ಅಲ್ಲ ಬರುವಾಗ ಮೀನು ಹಿಡಿದುಕೊಂಡು ಬರುತ್ತಾರೆ. ಹೀಗೆ ಸವಾಲನ್ನು ಸ್ವೀಕರಿಸಿ ಎದುರಿಸುವ ಗುಣವುಳ್ಳವರು ಎಂದರು. ವಲಯದಲ್ಲಿನ ೧೧ ಚರ್ಚ್ಗಳ ಧರ್ಮಗುರುಗಳು ಒಗ್ಗಟ್ಟಾಗಿರಲು ಇವರೇ ಕಾರಣ. ಇವರು ಉತ್ತಮ ಆಡಳಿತಗಾರರಾಗಿದ್ದು ದೂರದೃಷ್ಟಿಯುಳ್ಳವರಾಗಿದ್ದರು. ಮುಂದಾಲೋಚನೆಯಿಂದ ಕೆಲಸ ಮಾಡುತ್ತಿದ್ದರು. ಅಲ್ಲದೆ ಭವಿಷ್ಯತ್ನ್ನು ತಿಳಿದುಕೊಂಡು ಯೋಜನೆ ಹಾಕಿಕೊಂಡು ಕಾರ್ಯರೂಪಕ್ಕೆ ತರುತ್ತಿದ್ದರು ಎಂದು ಹೇಳಿ ಶುಭ ಹಾರೈಸಿದರು.
ಉತ್ತಮ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ
ಪುತ್ತೂರು ಅಬಕಾರಿ ಇಲಾಖೆಯ ಇನ್ಸ್ಪೆಕ್ಟರ್ ಜೋಸ್ಲಿನ್ ಫೆರ್ನಾಂಡೀಸ್ ಮಾತನಾಡಿ ಇಂದು ತುಂಬಾ ಬೇಸರದ ದಿನವೂ ಕುಷಿಯ ದಿನವೂ ಆಗಿದೆ. ಪ್ರಧಾನ ಧರ್ಮಗುರುಗಳಾಗಿ ಉತ್ತಮ ಕೆಲಸ ಮಾಡಿ ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿ ಶುಭಹಾರೈಸಿದರು.
ಕಾರ್ಯವೈಖರಿ ನೋಡಿ ಇಷ್ಟು ಮಂದಿ ಆಗಮಿಸಿದ್ದಾರೆ
ಚರ್ಚ್ ಆಯೋಗಗಳ ಸಂಯೋಜಕರಾದ ಪೌಲ್ ಹೆರಾಲ್ಡ್ ಮಸ್ಕರೇನಸ್ ಮಾತನಾಡಿ ಚರ್ಚ್ನಲ್ಲಿ ವಿದಾಯ ಕೂಟ ಮೊದಲ ಬಾರಿಗೆ ಸಂಜೆಯ ಸಮಯದಲ್ಲಿ ನಡೆದಿದೆ. ಧರ್ಮಗುರುಗಳ ಕಾರ್ಯವೈಖರಿ ನೋಡಿ ಇಷ್ಟು ಮಂದಿ ಆಗಮಿಸಿದ್ದಾರೆ. ಇದು ಇತಿಹಾಸವಾಗಿದೆ. ಇಲ್ಲಿ ಸೇರಿದ ಜನರೇ ಧರ್ಮಗುರುಗಳ ಪ್ರೀತಿ, ಕೆಲಸಕ್ಕೆ ಸಾಕ್ಷಿಯಾಗಿದ್ದಾರೆ. ಇಲ್ಲಿನ ಅನುಭವವನ್ನು ಹೊತ್ತುಕೊಂಡು ಬೇರೆ ಚರ್ಚ್ಗೆ ತರಳಲಿದ್ದಾರೆ ಎಂದ ಅವರು ಈ ಮೊದಲಿನ ಧರ್ಮಗುರುಗಳ ಕಾರ್ಯವನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿ ವಂ|ಲಾರೆನ್ಸ್ ಮಸ್ಕರೇನಸ್ರವರ ಸಾಧನೆಯನ್ನು ಕವನ ರೂಪದಲ್ಲಿ ತಿಳಿಸಿದರು.
ಜಾನ್ ಕುಟಿನ್ಹಾ ಸೇರಿದಂತೆ ಹಲವರು ಅನಿಸಿಕೆ ವ್ಯಕ್ತಪಡಿಸಿದರು. ಚರ್ಚ್ ಪಾಲನಾ ಪರಿಷತ್ ಉಪಾಧ್ಯಕ್ಷ ರೋಶನ್ ಲಸ್ರಾದೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಧರ್ಮಗುರುಗಳು, ಭಗಿನಿಯರು, ಚರ್ಚ್ ಅಧೀನದ ೯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಿಬಂದಿಗಳು ಹಾಗೂ ಅಭಿಮಾನಿಗಳು, ಕ್ರೈಸ್ತ ಭಾಂಧವರು ವಂ|ಲಾರೆನ್ಸ್ ಮಸ್ಕರೇನಸ್ರವರನ್ನು ಅಭಿನಂದಿಸಿದರು. ಬನ್ನೂರು ಚರ್ಚ್ನ ಧರ್ಮಗುರು ಬಾಲ್ತಜಾರ್ ಪಿಂಟೊ, ಮರೀಲ್ ಚರ್ಚ್ನ ಪ್ರಧಾನ ಧರ್ಮಗುರು ಜೆ.ಬಿ. ಮೊರಾಸ್, ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೊ, ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ|ಅಶೋಕ್ ರಾಯನ್ ಕ್ರಾಸ್ತಾ, ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ವಂ|ಮ್ಯಾಕ್ಸಿಂ ಡಿಸೋಜ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲಾ ಮುಖ್ಯಶಿಕ್ಷಕಿ ರೋಸ್ಲಿನ್ ಲೋಬೋ, ಚರ್ಚ್ ಪಾಲನಾ ಪರಿಷತ್ ಮಾಜಿ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಧರ್ಮಗುರುಗಳ ಸಾಧನೆಯನ್ನು ಒಳಗೊಂಡ ಡಾಕ್ಯಮೆಂಟರಿ ಚಿತ್ರ ಪ್ರದರ್ಶಿಸಲಾಯಿತು. ಚರ್ಚ್ನ ಸಹಾಯಕ ಧರ್ಮಗುರು ವಂ| ಮರ್ವಿನ್ ಪ್ರವೀಣ್ ಲೋಬೋ ಸ್ವಾಗತಿಸಿ ಚರ್ಚ್ ಪಾಲನಾ ಪರಿಷತ್ ಕಾರ್ಯದರ್ಶಿ ಸಿಲ್ವಿಯಾ ನಿರ್ಮಲ ಮೊರಾಸ್ ವಂದಿಸಿದರು. ಕ್ಲೆಮೆಂಟ್ ಪಿಂಟೋ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಫಿಲೋಮಿನಾ ಕಾಲೇಜಿನ ಉಪನ್ಯಾಸಕಿ ಡಿಂಪಲ್ ಫೆರ್ನಾಂಡೀಸ್ ಸಭಾಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಚರ್ಚ್ ಪಾಲನಾ ಪರಿಷತ್ ಸದಸ್ಯರು, ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಉಪನ್ಯಾಸಕರು, ಸಿಬಂದಿಗಳು, ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.
ಬಿಷಪ್ರವರ ಮಾತಿಗೆ ವಿಧೇಯರಾಗಿ ಪುತ್ತೂರಿಗೆ ಬಂದೆ
ಪುತ್ತೂರಿಗೆ ಪ್ರಥಮ ಬಾರಿ 2017ರಲ್ಲಿ ಆಗಮಿಸಿದ್ದೆ. ಆಗಿನ ಪ್ರಧಾನ ಧರ್ಮಗುರುಗಳು ಇಲ್ಲಿಗೆ ಬಂದಾಗ ಅವರೊಂದಿಗೆ ಇಲ್ಲಿಗೆ ಬಂದಿದ್ದೆ. ನಂತರ ನಾವು 17 ಧರ್ಮಗುರುಗಳು ಸೇರಿ ಕೊಂಕಣಿ ನಾಟಕ ಪ್ರದರ್ಶನ ನೀಡಲು 2019ರಲ್ಲಿ ಎರಡನೇ ಬಾರಿಗೆ ಬಂದಿದ್ದೆ. ಬಳಿಕ 2020ರ ಜುಲೈ 31ರಂದು ಮೂರನೇ ಬಾರಿ ಬಂದೆ. ಹಾಗೆ ಬಂದು ಇಂದಿಗೆ 6 ವರ್ಷ ಆಗುತ್ತಿದೆ ಎಂದರು. 2017ರಿಂದ ಮಡಂತ್ಯಾರು ಚರ್ಚ್ನಲ್ಲಿ ಇದ್ದೆ. ಅಲ್ಲಿ ಮತ್ತೆ ಮೂರು ವರ್ಷ ಅಧಿಕಾರವಧಿ ಇತ್ತು. 2020ರಲ್ಲಿ ದರ್ಮಗುರುಗಳಿಗೆ ವರ್ಗಾವಣೆ ಸರದಿ ಬಂದಾಗ ಪುತ್ತೂರಿಗೆ ಯಾವ ಧರ್ಮಗುರುಗಳೂ ಬರಲು ಒಪ್ಪಲಿಲ್ಲ. ಆದರೆ ಬಿಷಪ್ರವರ ಮಾತಿಗೆ ವಿಧೇಯರಾಗಿ ನಾನು 2020ರಲ್ಲಿ ಪುತ್ತೂರು ಚರ್ಚ್ಗೆ ಬಂದೆ ಎಂದು ವಂ|ಲಾರೆನ್ಸ್ ಮಸ್ಕರೇನಸ್ ಹೇಳಿದರು.
ವಂ|ಲಾರೆನ್ಸ್ ಮಸ್ಕರೇನಸ್ರವರಿಗೆ ಸನ್ಮಾನ
ಚರ್ಚ್ ಪಾಲನಾ ಪರಿಷತ್ನಿಂದ ವಂ|ಲಾರೆನ್ಸ್ ಮಸ್ಕರೇನಸ್ರವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಮಾಯ್ ದೆ ದೇವುಸ್ ಚರ್ಚ್ನ ಚಿತ್ರ, ಸನ್ಮಾನ ಪತ್ರ ಹಾಗೂ ವಂ|ಲಾರೆನ್ಸ್ ಮಸ್ಕರೇನಸ್ರವರ ಫೋಟೋ ಒಳಗೊಂಡ ಬೃಹತ್ ಫೋಟೋ ಹಾಗೂ ಶಾಲು, ಪೇಟ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.










