






ಉಪ್ಪಿನಂಗಡಿ: ಇಲ್ಲಿನ ಪಂಚಾಯತ್ ಆಡಳಿತದ ನೆಲೆಯಲ್ಲಿ ಸಂಗ್ರಹಿಸಲಾಗುತ್ತಿರುವ ತ್ಯಾಜ್ಯವನ್ನು ನದಿಗೆ ಎಸೆಯಲಾಗುತ್ತಿದೆ ಎಂದು ಆರೋಪಿಸಿ ವಿಡಿಯೋ ದೃಶ್ಯಾವಳಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತ್ಯಾಜ್ಯ ವಿಲೇವಾರಿಗೆಂದು ಹಣ ಸಂಗ್ರಹಿಸಿ ಗ್ರಾ.ಪಂ. ತ್ಯಾಜ್ಯವನ್ನು ನದಿಗೆ ಎಸೆಯುತ್ತಿದೆ ಎಂದಾದರೆ ಸಾರ್ವಜನಿಕರು ಎಸೆಯಬಾರದೇಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಆಡಳಿತಕ್ಕೆ ಕೇಳಲ್ಪಡುತ್ತಿದೆ.


ಉಪ್ಪಿನಂಗಡಿ ಪೇಟೆಯ ಬಳಿ ನೇತ್ರಾವತಿ ನದಿ ದಡದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದ ಸಿಬ್ಬಂದಿಗಳು ಡ್ರಮ್‌ನಲ್ಲಿದ್ದ ತ್ಯಾಜ್ಯವನ್ನು ನದಿ ಭಾಗಕ್ಕೆ ಎಸೆಯುತ್ತಿರುವ ದೃಶ್ಯಾವಳಿಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪಂಚಾಯತ್ ಆಡಳಿತಕ್ಕೆ ಮುಜುಗರವನ್ನು ತಂದಿದೆ. ಈ ಮಧ್ಯೆ ಕರ್ನಾಟಕ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಖಲಂದರ್ ಎಂಬವರು ಉಪ್ಪಿನಂಗಡಿ ಪಂಚಾಯತ್ ಆಡಳಿತ ಜೀವ ನದಿ ನೇತ್ರಾವತಿಯ ಪಾವಿತ್ರತೆಯನ್ನು ಹಾಳುಗೆಡವುತ್ತಿದೆ ಎಂದು ಆರೋಪಿಸಿ ಪುತ್ತೂರು ಶಾಸಕರಿಗೆ ದೂರು ನೀಡಿದ್ದಾರೆ.



ತ್ಯಾಜ್ಯ ವಿಲೇವಾರಿ ಸಮಸ್ಯೆಯಿದ್ದರೂ ನದಿಗೆಸೆಯಲಿಲ್ಲ: ಪಿಡಿಒ
ಈ ಬಗ್ಗೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ರವರನ್ನು ಪತ್ರಿಕೆ ಸಂಪರ್ಕಿಸಿದಾಗ, ಸರಕಾರದ ನಿಯಮದಂತೆ ತ್ಯಾಜ್ಯ ವಿಲೇವಾರಿಯ ಹೊಣೆಯನ್ನು ಸಂಜೀವಿನಿ ಎಂಬ ಮಹಿಳಾ ಸಂಘಕ್ಕೆ ವಹಿಸಿಕೊಡಲಾಗಿದೆ. ತ್ಯಾಜ್ಯ ವಿಲೇವಾರಿಯ ಸಿಬ್ಬಂದಿಯು ಹೊರ ರಾಜ್ಯದವರಾಗಿದ್ದು, ಅವರು ರಜೆಯಲ್ಲಿ ಹೋದ ಕಾರಣ ವ್ಯವಸ್ಥೆಯಲ್ಲಿ ಸಮಸ್ಯೆ ಮೂಡಿದೆ. ಗ್ರಾಮದ ಹೊರ ವಲಯದಲ್ಲಿ ತ್ಯಾಜ್ಯ ವಿಲೇವಾರಿಗೆಂದು ಗೊತ್ತು ಪಡಿಸಿದ ಸ್ಥಳದ ಬಗ್ಗೆ ಸ್ಥಳೀಯರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದ ಪೇಟೆಯ ಮಧ್ಯದ ನದಿ ಬದಿಯ ಸ್ಥಳದಲ್ಲೇ ತ್ಯಾಜ್ಯ ವಿಲೇವಾರಿ ಅನಿವಾರ್ಯವಾಗಿದೆ. ಅಲ್ಲಿಯ 40 ಸೆಂಟ್ಸ್ ಭೂಮಿಯ ಧಾರಣ ಸಾಮರ್ಥ್ಯಕ್ಕಿಂತ ಹೆಚ್ಚು ಕಸ ಸಂಗ್ರಹವಾಗುತ್ತಿದ್ದು, ಸಂಗ್ರಹಿಸಲ್ಪಟ್ಟ ಕಸವನ್ನು ಬೇರೆಡೆಗೆ ಸಾಗಿಸಬೇಕಾದ ಅನಿವಾರ್ಯತೆ ಬಂದಿದೆ. ಪುತ್ತೂರು ನಗರ ಸಭೆಯ ಸಹಕಾರದಲ್ಲಿ ಅಲ್ಲಿನ ಸಿಎನ್‌ಜಿ ಘಟಕದಲ್ಲಿ ಹಸಿ ಕಸವನ್ನು ವಿಲೇವಾರಿ ಮಾಡಲು ಮಾತುಕತೆ ನಡೆದಿದ್ದು, ಮುಂದಿನ ಹತ್ತು ದಿನಗಳಲ್ಲಿ ಅದು ಅನುಷ್ಠಾನಗೊಳ್ಳಬಹುದು. ಸಾಮಾಜಿಕ ಜಾಲತಾಣದಲ್ಲಿ ಹರಿಯುತ್ತಿರುವ ವಿಡಿಯೋದಲ್ಲಿ ತ್ಯಾಜ್ಯ ಸುರಿಯುತ್ತಿರುವುದು ನದಿ ಬದಿಯ ತ್ಯಾಜ್ಯ ಸಂಗ್ರಹಣ ಸ್ಥಳಕ್ಕೆ. ಅದನ್ನು ವಿರುದ್ಧ ದಿಕ್ಕಿನಿಂದ ವಿಡಿಯೋ ಮಾಡಿದಾಗ ಅದು ನದಿಗೆ ಸುರಿಯುತ್ತಿದ್ದಂತೆಯೇ ಭಾಸವಾಗುತ್ತಿದೆಯೇ ವಿನಹ ವಾಸ್ತವವಾಗಿ ನದಿಗೆ ಸುರಿದಿರುವುದಿಲ್ಲ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡನೆಂದು ಹೇಳಿಕೊಂಡು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ಕೊಟ್ಟ ಖಲಂದರ್ ಎಂಬ ವ್ಯಕ್ತಿ ಅಲ್ಲಿನ ದೃಶ್ಯಾವಳಿಯನ್ನು ವಿಡಿಯೋ ಮಾಡಿರುವುದು ಪೋಟೋ ತೆಗೆದಿರುವುದಕ್ಕೆ ನಮ್ಮ ಯಾವುದೇ ಆಕ್ಷೇಪವಿಲ್ಲ. ಆದರೆ ಅಲ್ಲಿನ ವಾಹನಕ್ಕೆ ಅಡ್ಡ ನಿಂತು ತಡೆಯೊಡ್ಡುವುದು, ಅಲ್ಲಿನ ಸಿಬ್ಬಂದಿಯ ಕರ್ತವ್ಯಕ್ಕೆ ತಡೆಯೊಡ್ಡಿರುವುದು ಮಾತ್ರ ಕಾನೂನು ಬಾಹಿರ ಕೃತ್ಯ. ಅದಕ್ಕಾಗಿ ಅವರ ಅನುಚಿತ ವರ್ತನೆಯ ವಿಡಿಯೋ ಚಿತ್ರೀಕರಣದ ದಾಖಲೆಯನ್ನು ಮುಂದಿರಿಸಿ ಅಲ್ಲಿನ ಸಿಬ್ಬಂದಿಯು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮಧ್ಯೆ ಹೊಸದಾಗಿ 3 ಎಕ್ರೆ ಭೂಮಿಯನ್ನು ವೈಜ್ಞಾನಿಕ ರೀತಿಯ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಗೊತ್ತು ಪಡಿಸಲಾಗಿದ್ದು, ಅದು ಯಾವುದೇ ಅಡೆತಡೆ ಇಲ್ಲದೆ ಲಭಿಸಿದ್ದೇ ಆದಲ್ಲಿ ಈ ಎಲ್ಲಾ ಸಮಸ್ಯೆಗಳು ಶೀಘ್ರದಲ್ಲಿಯೇ ಬಗೆಹರಿಯಲಿದೆ ಎಂದವರು ತಿಳಿಸಿದರು.










