







ಪುತ್ತೂರು: ಶಾಲೆಯ ರಜೆಯ ಸಮಯದಲ್ಲಿ ಮಕ್ಕಳು ಕಟ್ಟಿಕೊಂಡಿದ್ದ ಪುಟ್ಟ ತಾತ್ಕಾಲಿಕ ಅಂಗಡಿಯೊಂದನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ ಎಂದು ಆರೋಪಿಸಲಾದ ಘಟನೆ ಬಪ್ಪಳಿಗೆಯಲ್ಲಿ ನಡೆದಿದೆ. ಆದರೆ ನಗರಸಭೆ ಅಧಿಕಾರಿಗಳು ಮಕ್ಕಳ ಅಂಗಡಿ ನಾವು ತೆರವುಗೊಳಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.


ಘಟನೆಯ ಹಿನ್ನೆಲೆ:
ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಬಪ್ಪಳಿಗೆಯಲ್ಲಿ ಸ್ಥಳೀಯ ಮಕ್ಕಳು ಸೇರಿ ಮನೆಯೊಂದರ ಕಂಪೌಂಡ್ಗೆ ತಾಗಿಕೊಂಡು ಸಣ್ಣದೊಂದು ಗೂಡಂಗಡಿ ರೀತಿಯಲ್ಲಿ ತಾತ್ಕಾಲಿಕ ಅಂಗಡಿ ನಿರ್ಮಾಣ ಮಾಡಿದ್ದರು. ಈ ಅಂಗಡಿಯಲ್ಲಿ ಚಿಲ್ಲರೆ ತಿನಿಸು ಸಾಮಾಗ್ರಿಗಳನ್ನು ಕೂಡ ಇಟ್ಟಿದ್ದರು. ಇದರಲ್ಲಿ ಮಕ್ಕಳು ತಮ್ಮೊಳಗೆ ವ್ಯಾಪಾರ ಮಾಡುತ್ತಿದ್ದರು. ಮಕ್ಕಳ ಈ ಅಂಗಡಿಯಲ್ಲಿದ್ದ ಸಾಮಾಗ್ರಿ ಹಾಗೂ ವಸ್ತುಗಳ ಮೌಲ್ಯ ಕೇವಲ ಅಲ್ಪಮೊತ್ತದ್ದಾಗಿದೆ ಎಂದು ಹೇಳಲಾಗಿದೆ.



ರಾತ್ರೋರಾತ್ರಿ ಅಂಗಡಿ ತೆರವು:
ಈ ಅಂಗಡಿಯ ಬಗ್ಗೆ ಯಾರೋ ನಗರಸಭೆಗೆ ದೂರು ನೀಡಿದ್ದು ಪುತ್ತೂರು ನಗರಸಭೆಯ ಅಧಿಕಾರಿಗಳ ತಂಡ ಆಗಮಿಸಿ ಎರಡು ದಿನದ ಹಿಂದೆ ಅಂಗಡಿಯನ್ನು ತೆರವುಗೊಳಿಸಿದೆ ಎಂಬ ಮಾಹಿತಿ ಹರಡಿದೆ. ತೆರವುಗೊಳಿಸಿದ ಅಧಿಕಾರಿಗಳ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪವೂ ವ್ಯಕ್ತವಾಗಿತ್ತು. ಪುತ್ತೂರು ನಗರದಾದ್ಯಂತ ಎಲ್ಲೆಂದರಲ್ಲಿ ಎಷ್ಟೋ ಬೃಹತ್ ಅಕ್ರಮ ಅಂಗಡಿಗಳು, ಕಟ್ಟಡಗಳು ತಲೆ ಎತ್ತಿ ನಿಂತಿವೆ. ಆದರೆ ಇವುಗಳನ್ನು ಮುಟ್ಟಲು ಅಥವಾ ತೆರವುಗೊಳಿಸಲು ನಗರಸಭೆಯ ಅಽಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ಆಪಾದಿಸಿದ್ದರು. ಆದರೆ ನಗರಸಭೆಗೆ ಅಂಗಡಿ ಹಾಕಿರುವ ಬಗ್ಗೆ ಮಾಹಿತಿ ಬಂದಿದ್ದು ಅಧಿಕಾರಿಗಳು ಪರಿಶೀಲನೆ ಮಾಡಿ ಅಂಗಡಿ ತೆರವಿಗೆ ಸೂಚನೆ ನೀಡಿದ್ದರು. ಆದರೆ ರಾತ್ರೋರಾತ್ರಿ ಅಂಗಡಿ ಮಾಯವಾಗಿತ್ತು.
ನಗರಸಭೆಯಿಂದ ತೆರವು ಮಾಡಿಲ್ಲ -ಪೌರಾಯುಕ್ತೆ ಸ್ಪಷ್ಟನೆ
ಪ್ರಕರಣದ ಬಗ್ಗೆ ನಗರಸಭೆಯ ಪೌರಾಯುಕ್ತರಾದ ವಿದ್ಯಾ ಕಾಳೆಯವರು ಸ್ಪಷ್ಟನೆ ನೀಡಿದ್ದು ಅಂಗಡಿ ಹಾಕಿರುವ ಬಗ್ಗೆ ನನಗೆ ವಾಟ್ಸಾಪ್ನಲ್ಲಿ ಮಾಹಿತಿ ಕಳಿಸಿದ್ದರು. ಆ ಸಂದರ್ಭದಲ್ಲಿ ನಾನು ಊರಿನಲ್ಲಿ ಇಲ್ಲದ ಕಾರಣ ಘಟನೆ ಬಗ್ಗೆ ಪರಿಶೀಲನೆಗೆ ನಮ್ಮ ಅಧಿಕಾರಿಗಳಿಗೆ ತಿಳಿಸಿದ್ದೆ. ಅವರು ಪರಿಶೀಲನೆ ಮಾಡಿ ವರದಿ ಕೊಟ್ಟಿದ್ದಾರೆ. ಆದರೆ ಅಂಗಡಿಯನ್ನು ನಗರಸಭೆ ತೆರವು ಮಾಡಿಲ್ಲ. ಅಲ್ಲದೆ ಅಂಗಡಿ ಹಾಕಿರುವ ಜಾಗ ನಗರಸಭೆ ರಸ್ತೆ ಹಾಗೂ ಪರಂಬೋಕು ಜಾಗ ಆಗಿರುತ್ತದೆ. ಮಕ್ಕಳು ರಸ್ತೆ ಬದಿಯಲ್ಲಿ ಆಟ ಆಡಬಾರದು. ಅವರಿಗೆ ತೊಂದರೆ ಆದರೆ ಯಾರು ಜವಾಬ್ದಾರಿ ? ಎಂದು ಹೇಳಿರುವ ಅವರು, ಘಟನೆ ಬಗ್ಗೆ ತಪ್ಪು ಮಾಹಿತಿ ರವಾನಿಸಲಾಗಿದೆ. ಪುತ್ತೂರಿನಲ್ಲಿ ಇರುವ ಯಾವುದೇ ಅಂಗಡಿಗಳಾದರೂ ಅನಧಿಕೃತ ಎಂದು ಗೊತ್ತಾದರೆ ಅದನ್ನು ತೆರವು ಮಾಡುತ್ತೇವೆ. ಮಕ್ಕಳು ರಜಾ ಸಮಯದಲ್ಲಿ ಸೇಫ್ ಇರುವ ಜಾಗದಲ್ಲಿ ಆಟ ಆಡಬೇಕು ಎಂದು ಹೇಳಿದ್ದಾರೆ.
ಮಕ್ಕಳು ಮೊಬೈಲ್ಗೆ ಅಡಿಕ್ಟ್ ಆಗದೆ ಆಟ ಆಡುತ್ತಿದ್ದರು
ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ಗೆ ಅಡಿಕ್ಟ್ ಆಗಿದ್ದಾರೆ. ಆದರೆ ಇಲ್ಲಿನ ಕೆಲವು ಮಕ್ಕಳು ಮೊಬೈಲ್ನ ಆಟಕ್ಕೆ ಹೋಗದೆ ಸಣ್ಣ ಅಂಗಡಿ ರೀತಿ ಮಾಡಿಕೊಂಡು ಸಣ್ಣಪುಟ್ಟ ತಿನಿಸು ಸಾಮಾಗ್ರಿ ಹಾಗೂ ಆಟೋಟದ ಸಾಮಾಗ್ರಿಗಳನ್ನು ಇಟ್ಟುಕೊಂಡಿದ್ದರು. ಇದರ ಬಗ್ಗೆ ನಗರಸಭೆಗೆ ಯಾರೋ ದೂರು ನೀಡಿದ್ದು ನಗರಸಭೆಯ ಅಧಿಕಾರಿಗಳು ನನ್ನಲ್ಲಿ ವಿಚಾರಿಸಿದ್ದು ಅಂಗಡಿಯನ್ನು ತೆರವುಗೊಳಿಸಲು ಶಿಫಾರಸ್ಸು ಮಾಡಿದ್ದರು. ಆದರೆ ಮರುದಿನ ಬೆಳಗಿನ ಜಾವ ನೋಡುವಾಗ ಅಂಗಡಿ ತೆರವುಗೊಳಿಸಲಾಗಿತ್ತು. ಪುತ್ತೂರು ನಗರದಾದ್ಯಂತ ಹಲವಾರು ಅನಧಿಕೃತ ಅಂಗಡಿಗಳಿವೆ. ಅದನ್ನು ನಗರಸಭೆ ತೆರವು ಮಾಡಿ ಸ್ವಚ್ಚ ಪುತ್ತೂರು ಮಾಡಲಿ. ಕಾನೂನು ಎಲ್ಲರಿಗೂ ಒಂದೇ ಆಗಿದೆ
ರಜಾಕ್ ಬಪ್ಪಳಿಗೆ










