






ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ಬಳಿ ಪುನರ್ ನಿರ್ಮಾಣಗೊಂಡ ನೂತನ ಶಿಲಾಮಯ ಅಶ್ವತ್ಥಕಟ್ಟೆಯನ್ನು ಮೇ.20ರಂದು ದೇವಳಕ್ಕೆ ಸಮರ್ಪಿಸಲಾಯಿತು.



ಕಟ್ಟೆ ನಿರ್ಮಾಣದ ದಾನಿ ದ್ವಾರಕ ಕನ್‌ಸ್ಟ್ರಕ್ಷನ್ ಮತ್ತು ದ್ವಾರಕ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅವರನ್ನು ದೇವಳದ ವತಿಯಿಂದ ಪ್ರಸಾದ ನೀಡಿ ಗೌರವಿಸಲಾಯಿತು. ಕೆರೆಯ ಬಳಿ ಅಶ್ವತ್ಥಕಟ್ಟೆ ಪುನರ್ ನಿರ್ಮಾಣಕ್ಕಾಗಿ ಗೋಪಾಲ್ ಭಟ್ ಅವರು ರೂ.10 ಲಕ್ಷವನ್ನು ದೇವಳಕ್ಕೆ ಸಮರ್ಪಿಸಿದ್ದರು. ಶಾಸಕ ಅಶೋಕ್ ರೈ ದಂಪತಿ ಅಶ್ವತ್ಥ ಗಿಡವನ್ನು ನೆಡುವ ಮೂಲಕ ಶಿಲಾಮಯ ಕಟ್ಟೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಕಟ್ಟೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಡೆದ ಸಮರ್ಪಣಾ ಕಾರ್ಯಕ್ರಮದಲ್ಲಿ ದೇವಳದ ಪ್ರಧಾನ ಅರ್ಚಕ ವೇ.ಮೂ. ವಸಂತ ಕೆದಿಲಾಯ ಅವರು ಗೋಪಾಲಕೃಷ್ಣ ಭಟ್ ಅವರಿಗೆ ಪ್ರಸಾದ ನೀಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಶಲ್ಯ ತೊಡಿಸಿ ಗೌರವಿಸಿದರು. ಇದೇ ಸಂದರ್ಭ ಗೋಪಾಲಕೃಷ್ಣ ಭಟ್ ಅವರು ಶ್ರೀ ದೇವರಿಗೆ ಎಳ್ಳೆಣ್ಣೆ ಅಭಿಷೇಕಕ್ಕೆ ಎಳ್ಳೆಣ್ಣೆ ಸಮರ್ಪಣೆ ಹಾಗೂ ತುಪ್ಪದ ದೀಪ ಸೇವೆ ನೆರವೇರಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಳಿನಿ ಪಿ ಶೆಟ್ಟಿ, ಸುಭಾಶ್ ರೈ ಬೆಳ್ಳಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.













