ಬೆಂಗಳೂರಿನಲ್ಲಿ ಮೇ.28ಕ್ಕೆ ‘ಸುದ್ದಿ’ ಪತ್ರಿಕೆಯ ಸ್ಥಾಪಕ ಡಾ. ಯು. ಪಿ. ಶಿವಾನಂದರಿಗೆ ಅಭಿನಂದನೆ-ಸನ್ಮಾನ ಹಾಗೂ ಸ್ನೇಹ ಸಮ್ಮಿಲನ

0

ಪುತ್ತೂರು: ಪಯಸ್ವಿನಿ ಗೆಳೆಯರ ಬಳಗ ಬೆಂಗಳೂರು ಇದರ ವತಿಯಿಂದ ಮೇ.28ರಂದು ನಗರದಲ್ಲಿ ವಿಶೇಷ ‘ಸ್ನೇಹ ಸಮ್ಮಿಲನ’ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ಗ್ರಾಮೀಣ ಪತ್ರಿಕೋದ್ಯಮದಲ್ಲಿ ಕ್ರಾಂತಿ ಸೃಷ್ಟಿಸಿದ ಕರಾವಳಿಯ ಪ್ರಸಿದ್ದ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಸುದ್ದಿ ಮಾಧ್ಯಮ ಸಮೂಹ ಸಂಸ್ಥೆಗಳ ಸಂಸ್ಥಾಪಕ, ಡಾ.ಯು.ಪಿ. ಶಿವಾನಂದ ಅವರಿಗೆ ‘ಅಭಿನಂದನೆ ಮತ್ತು ಸನ್ಮಾನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮೇ.28ರ ಗುರುವಾರ ಮಧ್ಯಾಹ್ನ 2:00 ಗಂಟೆಗೆ ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ನಯನ ರಂಗಮಂದಿರದಲ್ಲಿ ಈ ಸಮಾರಂಭ ಜರುಗಲಿದೆ.


ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಈಶ್ವರ ದೈತೋಟ ಉದ್ಘಾಟಿಸಲಿದ್ದಾರೆ. ಕೆಪಿಟಿಸಿಎಲ್‌ನ ನಿವೃತ್ತ ಹಿರಿಯ ಅಧಿಕಾರಿ ಎಂ. ಬಿ. ಜಯರಾಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಕಲ್ಮಡ್ಕ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಖ್ಯಾತ ಶಿಕ್ಷಣ ತಜ್ಞರಾದ ಪ್ರೊ. ಕೆ. ಇ. ರಾಧಾಕೃಷ್ಣ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಪರ ಆಯುಕ್ತ ಡಿ. ವಿ. ಶಿವರಾಮ, ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರು ಮತ್ತು ಕರ್ನಾಟಕ ಸರ್ಕಾರದ ಬೆಂಗಳೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಹಾಲಿ ಅಧ್ಯಕ್ಷ ಶಿವರಾಮ ಕೇವಳ, ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ನಿವೃತ್ತ ಹಿರಿಯ ಅಧಿಕಾರಿ ಇಬ್ರಾಹಿಂ ಗೂನಡ್ಕ, ಉದ್ಯಮಿ ಹಾಗೂ ಕಲಾಪೋಷಕ ಆರ್. ಕೆ. ಭಟ್ ಬೆಳ್ಳಾರೆ, ಲೇಖಕರು ಹಾಗೂ ಚಿಂತಕ ಕೆ. ಪಿ. ಸುರೇಶ್ ಕಂಜರ್ಪಣೆ, ವಿಶ್ವ ಕನ್ನಡ ಫೌಂಡೇಶನ್ ನಿರ್ದೇಶಕ ಯು. ಬಿ. ಪವನಜ ಮತ್ತು ಪತ್ರಕರ್ತೆ ಹೇಮಾ ವೆಂಕಟ್ ಸುಳ್ಯ ಅವರು ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ನಿವೃತ್ತ ಹಿರಿಯ ಅಧಿಕಾರಿಗಳಾದ ಸುಂದರ ನಾಯ್ಕ್, ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಗುರುಪ್ರಸಾದ್ ರೈ ಮೋರಂಗಲ್ಲು, ರಾಜ್ಯ ಬಿಜೆಪಿ ಕೇಂದ್ರ ಕಚೇರಿಯ ಮುಖ್ಯಸ್ಥ (ಆಡಳಿತ) ಲೋಕೇಶ್ ಅಂಬೆಕಲ್ಲು, ವಿಮರ್ಶಕರು ಹಾಗೂ ಸಾಹಿತಿ ಎಸ್. ಆರ್. ವಿಜಯಶಂಕರ್, ಹಿರಿಯ ವಕೀಲರಾದ ಬಾಲಕೃಷ್ಣ ಶಾಸ್ತ್ರಿ ಗಟ್ಟಿಮಾರು ಮತ್ತು ಧರ್ಮಪಾಲ ಗೌಡ ಎಣ್ಣೆಮಜಲು ಉಪಸ್ಥಿತರಿರಲಿದ್ದಾರೆ.


ಸ್ನೇಹ ಸಮ್ಮಿಲನದ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಮಧ್ಯಾಹ್ನ 2:00 ರಿಂದ ವಿದುಷಿ ಜಯಲಕ್ಷ್ಮಿ ಎಸ್. ಭಟ್ ಮತ್ತು ತಂಡದವರಿಂದ ಭಕ್ತಿ ಸಂಗೀತ, ಸಂಜೆ 4:00 ಕ್ಕೆ ಡಾ.ಯು.ಪಿ. ಶಿವಾನಂದ ಅವರಿಗೆ ಗೌರವಪೂರ್ವಕ ಅಭಿನಂದನಾ ಕಾರ್ಯಕ್ರಮ, ಸಂಜೆ 5:00ರಿಂದ ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಜರುಗಲಿದೆ. ಡಾ. ಶಿವಾನಂದ ಅವರನ್ನು ವೈಯಕ್ತಿಕ ನೆಲೆಯಲ್ಲಿ ಸನ್ಮಾನಿಸಿ ಶುಭಹಾರೈಸಲು ಇಚ್ಛಿಸುವವರಿಗೂ ಅವಕಾಶ ಕಲ್ಪಿಸಲಾಗಿದ್ದು, ಸಂಜೆ ಆಗಮಿಸುವ ಸರ್ವರಿಗೂ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪಯಸ್ವಿನಿ ಗೆಳೆಯರ ಬಳಗದ ಸಂಚಾಲಕರಾದ ಎಂ. ಸ್ವಯಂಪ್ರಕಾಶ್, ಸಹ-ಸಂಚಾಲಕರಾದ ಲಕ್ಷ್ಮೀಶ ಕಾಟುಕುಕ್ಕೆ ಮತ್ತು ಜಿ. ಕೆ. ಸತೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here