






ಅಭಿವೃದ್ದಿಗೆ ಯಾರೂ ಅಡ್ಡಿ ಮಾಡಬಾರದು: ಶಾಸಕ ಅಶೋಕ್ ರೈ


ವಿಟ್ಲ: ವಿಟ್ಲದಿಂದ ಮಂಗಳೂರಿಗೆ ತೆರಳುವ ಮುಖ್ಯ ರಸ್ತೆಯ ಬೊಬ್ಬೆಕೇರಿ ಎಂಬಲ್ಲಿ ರಸ್ತೆ ಅಭಿವೃದ್ದಿಗೆ 60 ಲಕ್ಷ ರೂ ಮಂಜೂರಾಗಿದ್ದು ಕಾಮಗಾರಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನೆರವೇರಿಸಿದರು. ಸುಮಾರು 15 ವರ್ಷಗಳಿಂದ ಇದ್ದ ಇಲ್ಲಿನ ಬಹುದೊಡ್ಡ ವಿವಾದಿತ ಸಮಸ್ಯೆಯೊಂದು ನಿವಾರಣೆಯಾಗಿದ್ದು ಮುಂದೆ ಇಲ್ಲಿ ರಸ್ತೆ ಅಭಿವೃದ್ದಿಯಾಗಲಿದೆ ಎಂದು ಹೇಳಿದರು.



ಬೊಬ್ಬೆಕೇರಿಯಲ್ಲಿ ರಸ್ತೆ ಅಗಲ ಕಿರಿದಾಗಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದ್ದದ್ದು ಮಾತ್ರವಲ್ಲದೆ ವಾಹನ ಸಂಚರಿಸುವಾಗ ಫುಟ್‌ಪಾತ್ ಇಲ್ಲದೆ ಪಾದಚಾರಿಗಳಿಗೆ ತೊಂದರೆಯಾಗುತ್ತಿರುವುದು ಮತ್ತು ಮಳೆಗಾಲದಲ್ಲಿ ಇಲ್ಲಿ ಮಳೆ ನೀರು ಕೂಡಾ ಹರಿದು ಹೋಗುವ ವ್ಯವಸ್ಥೆ ಇಲ್ಲದೇ ಇರುವ ಬಗ್ಗೆ ಸ್ಥಳೀಯರು ಬಂದು ನನ್ನಲ್ಲಿ ಮನವಿ ಮಾಡಿಕೊಂಡಿದ್ದರು. ವಿಟ್ಲ ಭಾಗದ ಕಾಂಗ್ರೆಸ್ ಪಕ್ಷದ ನಾಯಕರುಗಳ ಮೂಲಕ ಈ ರಸ್ತೆಯ ವಿಚಾರವನ್ನು ತಿಳಿದುಕೊಂಡಾಗ ರಸ್ತೆ ಬದಿಯಲ್ಲಿ ಖಾಸಗಿ ಜಾಗವಿದ್ದು ರಸ್ತೆ ಅಗಲೀಕರಣಕ್ಕೆ ಸಮಸ್ಯೆಯಾಗುತ್ತಿದೆ ಎಂಬುದು ಗಮನಕ್ಕೆ ಬಂದಿತ್ತು.ಈ ಬಗ್ಗೆ ಜಾಗದ ಮಾಲಿಕರನ್ನು ಭೇಟಿಯಾಗಿ ಮಾತುಕತೆ ನಡೆಸಿ ರಸ್ತೆಗೆ ಜಾಗಬಿಟ್ಟುಕೊಡುವಂತೆ ಕೇಳಿಕೊಂಡಿದ್ದೆ ಮತ್ತು ಜಾಗ ಬಿಟ್ಟು ಕೊಡದೇ ಇದ್ದರೂ ರಸ್ತೆ ಅಭಿವೃದ್ದಿ ಮಾಡಿಯೇ ಸಿದ್ದ ಎಂದು ಸೂಚನೆಯನ್ನು ಕೊಟ್ಟಿದ್ದೆ. ಇದಾದ ಬಳಿಕ ಜಾಗದ ಮಾಲಿಕರು ಜಾಗ ಬಿಟ್ಟು ಕೊಡಲು ಸಿದ್ದವಾಗಿದ್ದರು. ಈ ಮೂಲಕ 15 ವರ್ಷಗಳ ವಿವಾದವೊಂದು ಇತ್ಯರ್ಥವಾಗಿತ್ತು. ಇದೀಗ ಕೊಟ್ಟ ಮಾತಿನಂತೆ ರಸ್ತೆ ಅಭಿವೃದ್ದಿಗೆ 60 ಲಕ್ಷ ಅನುದಾನವನ್ನು ಇಟ್ಟಿದ್ದು ಶೀಘ್ರದಲ್ಲೇ ಕಾಮಗಾರಿ ನಡೆಯಲಿದೆ ಎಂದು ಶಾಸಕರು ಹೇಳಿದರು.
ಕಬಕದಿಂದ ವಿಟ್ಲಕ್ಕೆ ತೆರಳುವ ರಸ್ತೆಯನ್ನು ಅಭಿವೃದ್ದಿ ಮಾಡಲು 20 ಕೋಟಿ ಮತ್ತು ಇದೇ ರಸ್ತೆಯ ಎರಡು ಸೇತುವೆ ಅಭಿವೃದ್ದಿಗೆ 10 ಕೋಟಿ ಅನುದಾನವನ್ನು ನೀಡಲಾಗುತ್ತದೆ ಎಂದರು.
ವಿಟ್ಲ ಪಟ್ಟಣದ ರಸ್ತೆ ಅಗಲೀಕರಣವಾಗಬೇಕಿದೆ
ವಿಟ್ಲ ಪಟ್ಟಣದಲ್ಲಿ ರಸ್ತೆಗಳಿಗೆ ತಾಗಿಕೊಂಡೇ ಕಟ್ಟಡಗಳು ಇದ್ದು ಇದನ್ನು ಅಗಲೀಕರಣ ಮಾಡುವ ಮೂಲಕ ಅಭಿವೃದ್ದಿ ಮಾಡುವ ಆಲೋಚನೆ ಇದೆ.ಈ ಬಗ್ಗೆ ಈಗಾಗಲೇ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅಂಗಡಿ ಮಾಲಿಕರು, ಕಟ್ಟಡ ಮಾಲಿಕರು ಒಪ್ಪಿಗೆ ನೀಡಿದ್ದಲ್ಲಿ ಮಾತ್ರ ಈ ಕಾಮಗಾರಿ ನಡೆಯಬಹುದು, ಯಾರಿಗೂ ತೊಂದರೆಯನ್ನು ಕೊಡುವ ಉದ್ದೇಶವಿಲ್ಲ ಮತ್ತು ತೊಂದರೆ ಕೊಟ್ಟು ಮಾಡುವ ಅಗತ್ಯವೂ ಇಲ್ಲ ಎಂದ ಶಾಸಕರು ಪಟ್ಟಣ ರಸ್ತೆ ಅಗಲೀಕರಣವಾದರೆ ಪಟ್ಟಣ ದೊಡ್ಡದಾಗಿ ಬೆಳೆಯಲು ಸಾಧ್ಯವಾಗುತ್ತದೆ , ವರ್ತಕರು, ಮಾಲಿಕರು ಸಹಕಾರ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದು ಶಾಸಕರು ಹೇಳಿದರು.
200 ಮೀಟರ್ ರಸ್ತೆಗೆ 15 ವರ್ಷದಿಂದ ಹೋರಾಟ: ಪದ್ಮನಾಭ ಪೂಜಾರಿ
ಬೊಬ್ಬೆಕೇರಿಯಲ್ಲಿ ಕೇವಲ 200 ಮೀಟರ್ ನಷ್ಟು ರಸ್ತೆಯನ್ನು ಅಭಿವೃದ್ದಿ ಮಾಡಲು ಸಾರ್ವಜನಿಕರು ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು, ರಸ್ತೆ ಬದಿಯ ಕಟ್ಟಡ ಮಾಲಿಕರು ಈ ವಿಚಾರದಲ್ಲಿ ಕೋರ್ಟಿಗೆ ಹೋಗಿದ್ದರಿಂದ ಸಮಸ್ಯೆಯಾಗಿತ್ತು. ಶಾಸಕ ಅಶೋಕ್ ರೈ ಅವರು ಮುತುವರ್ಜಿ ವಹಿಸಿ 60 ಲಕ್ಷ ಅನುದಾನವನ್ನು ತಂದಿದ್ದಾರೆ ಮಾತ್ರವಲ್ಲ ವಿವಾದವನ್ನು ಇತ್ಯರ್ಥಪಡಿಸಿದ್ದಾರೆ ಎಂದು ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ ಹೇಳಿದರು.
ಬೇಡಿಕೆ ಈಡೇರಿಸುವುದೇ ನಮ್ಮ ಉದ್ದೇಶ: ಎಂ ಎಸ್ ಮಹಮ್ಮದ್
ಬೊಬ್ಬೆಕೇರಿ ರಸ್ತೆ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದೂ ಇದುವರೆಗೆ ಯಾವ ಶಾಸಕರೂ ಮುಂದೆ ನಿಂತು ಈ ಕೆಲಸ ಮಾಡುವ ಧೈರ್ಯ ಮಾಡಿಲ್ಲ, ಶಾಸಕ ಅಶೋಕ್ ರೈ ಅವರು ಛಲದಿಂದ ಈ ಕೆಲಸವನ್ನು ಮಾಡಿ , ಅನುದಾನವನ್ನು ಒದಗಿಸಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಹೇಳಿದರು.
ಶಾಸಕರ ಅಭಿವೃದ್ದಿ ಕೆಲಸವನ್ನು ಕಂಡು ಬೆದರಿದ ಬಿಜೆಪಿಯವರು ಅವರ ಮೇಲೆ ಸುಳ್ಳು ಆರೋಪವನ್ನು ಹೊರಿಸಿ ತೆಜೋವಧೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಅಧಿಕಾರವಿರುವಾಗ ಅಭಿವೃದ್ದಿ ಮಾಡದ ಮಾಜಿ ಶಾಸಕರು ಅಶೋಕ್ ರೈ ಅಭಿವೃದ್ದಿ ಕೆಲಸ ಕಂಡು ಬೆಕ್ಕಸ ಬೆರಗಾಗಿದ್ದಾರೆ ಇದೇ ಕಾರಣಕ್ಕೆ ಬಂಟ್ವಾಳ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ರಮನಾಥ ವಿಟ್ಲ, ಮಹಾಲಿಂಗ ನಾಯ್ಕ, ಶ್ರೀನಿವಾಸ ಶೆಟ್ಟಿ, ಹಂಝ ವಿಟ್ಲ, ಹಸೈನರ್ ನೆಲ್ಲಿಗುಡ್ಡೆ, ಡೀಕಯ್ಯ, ಲತಾ ಅಶೋಕ್ ಪೂಜಾರಿ, ಸುನಿತಾ ಕೋಟ್ಯಾನ್, ಜಾನ್ಸನ್ ವಿಟ್ಲ, ಸಂತೋಷ್ ವಿಟ್ಲ, ವಲೇರಿಯನ್ ಮಾರ್ತ, ಉಮೇಶ್, ಹಾರಿಸ್, ಸಿದ್ದಿಕ್, ಶರೀಫ್ ಒಕ್ಕೆತ್ತೂರು, ಶ್ರೀಧರ್ ಬಾಳೆಕಲ್ಲು, ಅಬ್ಬು ನವಗ್ರಾಮ, ಅಶೋಕ್ ಪೂಜಾರಿ, ಎಂ ಕೆ ಮೂಸಾ, ಶರೀಫ್ ಸೇರಾಜೆ, ಶೇಕಾಲಿ ಸೇರಾಜೆ, ಉರುಂಬಳ ಅಬ್ದುಲ್ ರಹಿಮಾನ್, ಬೂತ್ ಅಧ್ಯಕ್ಷ ಅಬ್ದುಲ್ ರಹಿಮಾನ್,ರಾಮಣ್ಣ ಪಿಲಿಂಜ ಮೊದಲಾದವರು ಉಪಸ್ಥಿತರಿದ್ದರು.










