






ಕಾಣಿಯೂರು: ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಣಿಕೆ ಡಬ್ಬಿಯಿಂದ ನಗದು ಕಳವು ಮಾಡಿರುವ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ದೇವಸ್ಥಾನದಲ್ಲಿ ಈಗಾಗಲೇ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದ್ದು, ಮೇ 24ರಂದು ಊರಿನ ಜನ ದೇವಸ್ಥಾನದ ಬಳಿ ಶ್ರಮದಾನಕ್ಕೆಂದು ಬಂದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ. 23-5-2026ರಂದು ಬೆಳಿಗ್ಗೆ 9-15 ಗಂಟೆಯಿಂದ 24-5-2026 ಬೆಳಿಗ್ಗೆ ಗಂಟೆ 8-15ರ ಮಧ್ಯೆ ಯಾರೋ ಕಳ್ಳರು ದೇವಸ್ಥಾನದ ಬಾಲಾಲಯದ ಎರಡೂ ಕಾಣಿಕೆ ಡಬ್ಬಿಯನ್ನು ಒಡೆದು ಹಾಕಿ ಅದರಲ್ಲಿದ್ದ ಹಣ ತೆಗೆದಿದ್ದು, ಹುಂಡಿಗಳ ಪೈಕಿ ಜೀರ್ಣೋದ್ಧಾರ ಸಮಿತಿಯ ಹುಂಡಿಯಿಂದ ಅಂದಾಜು ರೂ 5೦,೦೦೦ ನಗದು ಹಾಗೂ ವ್ಯವಸ್ಥಾಪನಾ ಸಮಿತಿಯ ಹುಂಡಿಯಿಂದ ಅಂದಾಜು ರೂ 1೦,೦೦೦ ಹಣವನ್ನು ಕಳ್ಳತನ ಮಾಡಿರುತ್ತಾರೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜತ್ತಪ್ಪ ರೈ ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.













