






ನೆಲ್ಯಾಡಿ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಇಚ್ಲಂಪಾಡಿ ಬಿಲ್ಲವ ಗ್ರಾಮ ಸಮಿತಿ ಹಾಗೂ ಬಿಲ್ಲವ ಮಹಿಳಾ ವೇದಿಕೆಯ ವಾರ್ಷಿಕ ಮಹಾಸಭೆಯು ಮೇ ೨೪ರಂದು ಇಚ್ಲಂಪಾಡಿಯಲ್ಲಿ ನಡೆಯಿತು.



ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾದ ಸಾಲಿಯಾನ್ ಬದನೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಜಿತ್‌ಕುಮಾರ್ ಪಾಲೇರಿ ಅವರು ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕ ಪಡೆದ ಭವಿಕ್, ಪಿ.ಯು.ಸಿಯಲ್ಲಿ ಉತ್ತಮ ಅಮಕ ಪಡೆದ ಹಿತಾಶ್ರೀ ಅವರನ್ನು ಸನ್ಮಾನಿಸಿ ಮಾತನಾಡಿ, ಬಿಲ್ಲವ ಸಮಾಜದ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುವ ಮೂಲಕ ಸಾಧಕರಿಗೆ ಸ್ಫೂರ್ತಿ ತುಂಬುವ ಕೆಲಸವನ್ನು ಬಿಲ್ಲವ ಸಂಘ ಮಾಡುತ್ತಿದೆ. ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಇದು ನಿಮ್ಮ ಮುಂದಿನ ಸಾಧನೆಗೆ ಇನ್ನಷ್ಟು ಸ್ಫೂರ್ತಿಯನ್ನು ನೀಡಲಿ ಎಂದರು.



ಗ್ರಾಮ ಸಮಿತಿಯ ಗೌರವಾಧ್ಯಕ್ಷರಾದ ಇಂದ್ರ ಪೂಜಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಿಲ್ಲವ ಸಮಿತಿ ನಡೆದು ಬಂದ ದಾರಿಯನ್ನು ನೆನಪಿಸುವುದರೊಂದಿಗೆ ಗ್ರಾಮದ ಯುವ ಜನತೆ ಸಕ್ರಿಯರಾಗಿ ಸಮಾಜದ ಒಗ್ಗಟ್ಟಿಗೆ ತೊಡಗಿಸಿಕೊಳ್ಳಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಅಂಗನವಾಡಿಯಿಂದ ೭ನೇ ತರಗತಿವರೆಗಿನ ಮಕ್ಕಳಿಗೆ ಕೊಡೆ ಮತ್ತು ಬ್ಯಾಗ್ ವಿತರಣೆ, ೧೦ನೇ ತರಗತಿ ಮತ್ತು ಪಿಯುಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಪುರಸ್ಕರಿಸಲಾಯಿತು.
ತಾಲೂಕು ಬಿಲ್ಲವ ಸಂಘದ ಕಾರ್ಯದರ್ಶಿ ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್, ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ನಳಿನಿ ಮಾನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಜಾನಪ್ಪ ಪೂಜಾರಿ ಅನಿಸಿಕೆ ವ್ಯಕ್ತಪಡಿಸಿದರು. ಚಂಪಿಕಾ ಮತ್ತು ನೈನಿಕಾ ಪ್ರಾರ್ಥಿಸಿದರು. ಕಾರ್ಯದರ್ಶಿ ದೇವಿಪ್ರಸಾದ್ ವರದಿ ವಾಚಿಸಿದರು. ಸತೀಶ್ ಕಾಯರ್ತಡ್ಕ ನಿರೂಪಿಸಿದರು.










