






ರಾಮಕುಂಜ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಮಾರ್ಗದರ್ಶನದಲ್ಲಿ ಹಳೆನೇರೆಂಕಿ ಬಿಲ್ಲವ ಗ್ರಾಮ ಸಮಿತಿ ಮತ್ತು ಮಹಿಳಾ ವೇದಿಕೆಯ ಮಹಾಸಭೆ ಮತ್ತು ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಳೆನೇರೆಂಕಿ ಶಾಖಾ ವಠಾರದಲ್ಲಿ ನಡೆಯಿತು.



ಅಧ್ಯಕ್ಷತೆ ವಹಿಸಿದ್ದ ಪುರುಷೋತ್ತಮ ಪೂಜಾರಿ ಬರಂಬೆಟ್ಟು ಮಾತನಾಡಿ, ಕಳೆದ ೩೦ ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೆ ಪರದಾಡುತ್ತಿದ್ದ ಸಂಘ ಕಳೆದ ವರ್ಷದಿಂದ ಹೊಸ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೊಸ ಕಟ್ಟಡ ರಚನೆ ಸಂದರ್ಭದಲ್ಲಿ ಎದುರಾದ ಸಮಸ್ಯೆಗಳನ್ನು ಮೆಲುಕು ಹಾಕಿದ ಅವರು, ಮುಂದಿನ ದಿನಗಳಲ್ಲಿ ಬಿಲ್ಲವ ಸಮಾಜದ ಯುವಕರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಬೇಕು. ಸಂಸ್ಕಾರಯುತ ಮಕ್ಕಳನ್ನು ತಯಾರುಗೊಳಿಸುವುದು ಮತ್ತು ಉತ್ತಮ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಂಘಟನೆಗೆ ತಮ್ಮ ಆದಾಯದ ಒಂದು ಭಾಗವನ್ನು ಅರ್ಪಣೆ ಮಾಡಿದಲ್ಲಿ ಸಮಾಜದ ಅಶಕ್ತ ಬಂಧುಗಳಲ್ಲಿ ಶಕ್ತಿ ತುಂಬಲು ಸಾಧ್ಯವಿದೆ ಎಂದರು.



ಉದ್ಘಾಟಿಸಿದ ಪುತ್ತೂರು ತಾಲೂಕು ಬಿಲ್ಲವ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾವತಿ ಕೇಕುಡೆ ಅವರು ಹಳೆನೇರೆಂಕಿ ಬಿಲ್ಲವ ಗ್ರಾಮ ಸಮಿತಿ ಉತ್ತರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿದ್ದ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ ಮಾತನಾಡಿ, ಪ್ರತಿಭಾ ಪುರಸ್ಕಾರ ಹಾಗೂ ಉಚಿತ ಪುಸ್ತಕಗಳನ್ನು ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆದು ಉದ್ಯೋಗಿಗಳಾಗಿ ಮತ್ತೆ ಸಮಾಜಕ್ಕೆ ತಮ್ಮ ಕೈಲಾದ ಸೇವೆಯನ್ನು ನೀಡಬೇಕೆಮದು ಹೇಳಿದರು. ಪುತ್ತೂರು ಬಿಲ್ಲವ ಸಂಘದ ಕಾರ್ಯದರ್ಶಿ ಬಿ.ಟಿ.ಮಹೇಶ್ಚಂದ್ರ ಸಾಲಿಯಾನ್ ಮಾತನಾಡಿ, ಗ್ರಾಮ ಸಮಿತಿ ಪ್ರಾರಂಭವಾದ ದಿನದಿಂದ ಹಳೆನೇರೆಂಕಿ ಗ್ರಾಮ ಸಮಿತಿಯನ್ನು ಗಮನಿಸುತ್ತಾ ಬಂದಿದ್ದೇನೆ. ಇದೀಗ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಅಲಂಕಾರು ವಲಯ ಸಂಚಾಲಕ ದಿನೇಶ್ ಕೇಪುಳು ಶುಭಹಾರೈಸಿದರು. ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಜನಾರ್ದನ ಪೂಜಾರಿ ಕದ್ರ, ಹಳೆನೇರೆಂಕಿ ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಸುಚೇತ ಬರೆಂಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಿ| ಸೀತಮ್ಮ ಅವರ ಸ್ಮರಣಾರ್ಥ ಅವರ ಮಗ ಜನಾರ್ದನ ಪೂಜಾರಿ ಕದ್ರ ಅವರು ಕಳೆದ 12 ವರ್ಷಗಳಿಂದ ಉಚಿತ ಪುಸ್ತಕ ನೀಡಿ ಸಹಕರಿಸುತ್ತಿದ್ದಾರೆ. ಶ್ರೇಯಾ ಮತ್ತು ಜ್ಯೋತಿಕ ಪ್ರಾರ್ಥಿಸಿದರು. ಸುಚೇತ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ನಾರಾಯಣ ಪೂಜಾರಿ ಕದ್ರ ವಂದಿಸಿದರು. ಶಿಕ್ಷಕಿ ಶಶಿಕಲಾ ಕದ್ರ ನಿರೂಪಿಸಿದರು.









