







ಪುತ್ತೂರು: 94ಸಿ ಹಕ್ಕು ಪತ್ರ ಮಂಜೂರುಗೊಳಿಸಲು 15 ವರ್ಷ ವಾಸ್ತವ್ಯವಿರಬೇಕು. 2014ರ ಹಿಂದೆ ವಾಸ್ತವ್ಯ ಆಗಿರುವ ದೃಢೀಕರಣ ಪತ್ರದ ಅಗತ್ಯವಿದೆ. ಹೀಗಿರುವಾಗ ಪುಣಚದ ಮೂರು ಪರಿಶಿಷ್ಠ ಪಂಗಡದ ಕುಟುಂಬಕ್ಕೆ 94ಸಿ ಹಕ್ಕು ಪತ್ರ ನೀಡುವುದಕ್ಕೆ ಸಂಬಂಧಿಸಿ ಪ್ರತಿಭಟನೆ ನಡೆಸಿ, ಸಮಾಜದಲ್ಲಿ ಗೊಂದಲದ ವಾತಾವರಣ ಸೃಷ್ಟಿಸಲಾಗಿದೆ. ಬಿಜೆಪಿಯ ರಾಜಕೀಯದಿಂದಾಗಿ ಆ ಮೂರು ಕುಟುಂಬಕ್ಕೆ ಅನ್ಯಾಯವಾಗುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.


ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಈ 3 ಕುಟುಂಬದವರು 2026ರ ಮೇ 14ರಂದು ನಮ್ಮ ಕಚೇರಿಗೆ ಬಂದಾಗ ಹಣ ಕಟ್ಟಿ 94ಸಿ ಕೊಡಿಸುವ ಮೊದಲ ಹಂತದ ಕೆಲಸ ಮಾಡಿದ್ದೇವೆ. ಆದರೆ ಅವರು ಹಕ್ಕು ಪತ್ರ ನೀಡಿಲ್ಲ ಎಂದು ಮೇ 16ರಂದು ಪ್ರತಿಭಟನೆ ಮಾಡಿದ್ದಾರೆ. ಜಾಗ ಮಂಜೂರಾತಿಯ ವಿಚಾರದಲ್ಲಿ ಹೋರಾಟ ಮಾಡಿರುವುದರಿಂದ ಆಕ್ಷೇಪ ಅರ್ಜಿಯೂ ಸಲ್ಲಿಕೆಯಾಗಿದೆ. ಲೋಕಾಯುಕ್ತಕ್ಕೆ ಸೇರಿ ಸರ್ಕಾರಕ್ಕೆ ದೂರು ನೀಡಿದ್ದಾರೆ. ಇದೆಲ್ಲ ಬಿಜೆಪಿಯವರ ರಾಜಕೀಯದಿಂದ ಆಗಿದೆ. ಈಗ ಬಿಜೆಪಿಯ ರಾಜಕೀಯದಿಂದಾಗಿ ಆ ಕುಟುಂಬಗಳಿಗೆ ಅನ್ಯಾಯ ಆಗಿದೆ ಎಂದು ಶಾಸಕರು ಹೇಳಿದರು.



3 ವರ್ಷದಲ್ಲಿ 94ಸಿ ಮಾಡಿ ಕೊಡದ ಮಾಜಿ ಶಾಸಕರು:
ಮೂರೂ ಕುಟುಂಬದವರು 2020ರಲ್ಲಿ 94ಸಿಗೆ ಅರ್ಜಿ ನೀಡಿದ್ದರು. 2023ರ ವರೆಗೆ ಶಾಸಕರಾಗಿದ್ದವರು ಹಕ್ಕು ಪತ್ರ ಯಾಕೆ ನೀಡಿಲ್ಲ. ಮೂರು ವರ್ಷದಲ್ಲಿ 94ಸಿ ಮಾಡಿಕೊಡದ ಮಾಜಿ ಶಾಸಕರು ಒಂದು ವಾರದೊಳಗೆ ನಾನು ಮಾಡಿಕೊಟ್ಟಾಗ ಯಾಕೆ ಪ್ರತಿಭಟನೆ ಮಾಡಿದ್ದಾರೆ ? ಎಂದು ಪ್ರಶ್ನಿಸಿದ ಶಾಸಕರು, ಸರ್ಕಾರದ ಸುತ್ತೋಲೆಯ ಪ್ರಕಾರ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವರು, ಮುಖ್ಯಮಂತ್ರಿಗಳು ಹಕ್ಕುಪತ್ರಗಳನ್ನು ನೀಡಬಹುದಾಗಿದೆ. ಮಾಜಿ ಶಾಸಕರಿಗೆ ಸುತ್ತೋಲೆಯ ಮಾಹಿತಿ ಇಲ್ವಾ ಅಥವಾ ಅವರ ಅವಽಯಲ್ಲಿ ತಹಸೀಲ್ದಾರ್ ಅವರಲ್ಲಿ ಕೊಡಿಸುತ್ತಿದ್ದರಾ ಎಂಬುದನ್ನು ಸಾರ್ವಜನಿಕರಿಗೆ ಅವರೇ ಸ್ಪಷ್ಟ ಪಡಿಸಬೇಕು. ಅವರ ಕಾಲದಲ್ಲಿ ಅಕ್ರಮ ಸಕ್ರಮ, 94ಸಿ, 94ಸಿಸಿ ಸೇರಿ 32 ಸಾವಿರ ಕಡತ ನೆನೆಗುದಿಗೆ ಬಿದ್ದಿದ್ದು, ಈಗ ವಿಲೇವಾರಿ ಮಾಡಲಾಗುತ್ತಿದೆ. 2 ಸಾವಿರಕ್ಕೂ ಅಽಕ ಎಕ್ರೆ ಜಾಗ ನೀಡಲಾಗಿದೆ. 9 ಸಾವಿರ 94ಸಿ, 94ಸಿಸಿ ಅರ್ಜಿದಾರರು ಅರ್ಹರಲ್ಲ ಎಂದು ಕಡತಗಳನ್ನು ಜಿಲ್ಲಾಡಳಿತಕ್ಕೆ ಕಳುಹಿಸಿದ್ದು, ಈಗ ಅದನ್ನು ಪುನರ್ ಪರಿಶೀಲಿಸುವ ಕಾರ್ಯಕ್ಕೆ ಪ್ರಯತ್ನ ಮಾಡಲಾಗಿದೆ. ಕರ್ನಾಟಕದಲ್ಲಿ ಅಕ್ರಮ ಸಕ್ರಮ, 94 ಸಿ ಮತ್ತು 94 ಸಿಸಿ ಕಡತ ವಿಲೇವಾರಿಯಲ್ಲಿ ನಾನು ನಂ.1 ಸ್ಥಾನದಲ್ಲಿದ್ದೇನೆ. ಗೂಗಲ್ನಲ್ಲಿ ಸರ್ಚ್ ಮಾಡಿದರೆ ಈ ಮಾಹಿತಿ ಸಿಗುತ್ತದೆ. ಅಕ್ರಮ ಸಕ್ರಮ ವಿಚಾರವಾಗಿ ದ.ಕ. ಹಾಗೂ ಉಡುಪಿಯ ಬಿಜೆಪಿ ಶಾಸಕರು ಏನು ಮಾಡಿದ್ದಾರೆ ಎಂಬ ಅಂಕಿ ಅಂಶವನ್ನು ಬಿಜೆಪಿಯವರು ಪಡೆದುಕೊಳ್ಳಬೇಕು ಎಂದು ಅಶೋಕ್ ರೈ ಸವಾಲು ಹಾಕಿದರು.
ವೈಯುಕ್ತಿಕ ವಾಗ್ದಾಳಿ ನನ್ನ ಎದುರು ಮಾಡಲಿ:
ಪ್ರತಿ ವಾರ ಅಕ್ರಮ ಸಕ್ರಮ ಸಭೆ ಮಾಡಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಗ್ರಾಮದಲ್ಲಿ 94 ಸಿ ಮತ್ತು 94 ಸಿಸಿ ಹಕ್ಕು ಪತ್ರ ಕೊಡುವ ಕೆಲಸ ಮಾಡುತ್ತೇವೆ. ಇಂತಹ ಸಂದರ್ಭದಲ್ಲಿ ಧರಣಿ ಮಾಡುವುದು. ಬೇಡವಾದ ಶಬ್ದ ಪ್ರಯೋಗಿಸುವುದು ತುಂಬಾ ನೋವಾಗುತ್ತದೆ. ಸಮಾಜ ಇವರನ್ನು ಖಂಡಿಸಬೇಕಾಗಿದೆ. ಯಾವನೋ ಒಬ್ಬ ಅಶೋಕ್ ಕುಮಾರ್ ರೈ ಅವರ ಅಪ್ಪನ ಜಾಗ ಎಂದು ಪ್ರಶ್ನಿಸಿರುವುದು ನನಗೆ ನೋವಾಗಿದೆ. ಇನ್ನೊಂದು ಕಡೆ ನಮ್ಮ ಶಕ್ತಿಯನ್ನು ಪರಿಶೀಲಿಸುವ ಕೆಲಸಕ್ಕೆ ಅವರು ಕೈ ಹಾಕಿದ್ದಾರೆ ಎಂಬುದು ಕಾಣುತ್ತಿದೆ. ವೈಯುಕ್ತಿಕ ವಾಗ್ದಾಳಿ ಮಾಡುವುದಾದರೆ ನನ್ನ ಎದುರು ಬಂದು ಮಾಡಲಿ. ಒಳ್ಳೆಯ ಸಂಸ್ಕಾರಯುತ ಅಪ್ಪ ಅಮ್ಮನಿಗೆ ಹುಟ್ಟಿದವರು ಯಾರೂ ಕೂಡಾ ವಾಗ್ದಾಳಿ ಮಾಡುವುದಿಲ್ಲ. ನನ್ನ ಅಪ್ಪ ಅವರಿಗೆ ಏನು ಮಾಡಿದ್ದಾರೆ? ನಾವು ಅಕ್ರಮ ಸಕ್ರಮ ಮಾಡುವುದು ತಪ್ಪಾ ? ಎಂದು ಶಾಸಕರು ಪ್ರಶ್ನಿಸಿದರು.
ಪ್ರಸಾದಂ ಸ್ಕೀಂ ಕರ್ನಾಟಕಕ್ಕೆ ಬಂದಿಲ್ಲ:
ಕರ್ನಾಟಕಕ್ಕೆ ಇಲ್ಲಿಯ ತನಕ ಪ್ರಸಾದಂ ಸ್ಕೀಂ ಬಂದಿಲ್ಲ. ಖೇಲೋ ಇಂಡಿಯಾದಲ್ಲಿ ಒಂದೇ ಅನುದಾನ ಇಲ್ಲ. ವಿಧಾನ ಪರಿಷತ್ತಿನ ಸದಸ್ಯರಾಗಿರುವ ಕಿಶೋರ್ ಬೊಟ್ಯಾಡಿ ಅವರು ಪತ್ರಿಕೆಗಳನ್ನು, ಬಜೆಟ್ ಪುಸ್ತಕಗಳನ್ನು ಓದಬೇಕು. ಉಪ್ಪಿನಂಗಡಿ ದೇವಸ್ಥಾನಕ್ಕೆ ಅನುದಾನ ಪ್ರಸಾದ್ ಸ್ಕೀಂ ಅಲ್ಲಿ ಬಂದಿದ್ದು ಎಂದಿರುವವರು ಬಜೆಟ್ ಪುಸ್ತಕ ಓದುವ ಕಾರ್ಯ ಮಾಡಬೇಕು. ಪ್ರಸಾದಂ ಸ್ಕೀಂ ನಲ್ಲಿ ಕೇಂದ್ರ ವಿವಿಧ ಯೋಜನೆಯ ಹೆಸರಿನಲ್ಲಿ ಜನರಿಗೆ ಮೋಸ ಮಾಡಿದೆ. ಸುಳ್ಯದ ಮಲ್ಲಿಕಾರ್ಜುನ ದೇವಸ್ಥಾನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ ಪ್ರಸಾದಂ ಸ್ಕೀಮ್ ಕೇಳಲಾಗಿತ್ತು. ಈ ಕುರಿತು ಸಂಸದ ಬ್ರಿಜೇಶ್ ಚೌಟ ಅವರಲ್ಲೂ ಒಂದು ದೇವಸ್ಥಾನಕ್ಕಾದರೂ ಕೊಡಿಸಿ ಎಂದು ಮನವಿ ಮಾಡಲಾಗಿತ್ತು. ಆದರೆ ಒಂದೇ ಒಂದು ಪ್ರಸಾದಂ ಸ್ಕೀಂ ಬಂದಿಲ್ಲ. ಭಾರತ ಮಾತೆಯ ಪೇಟೆಂಟ್ ಯಾರಿಗಾದರೂ ನೀಡಲಾಗಿದೆಯಾ ?. ಸಂಸದ ಬ್ರಿಜೇಶ್ ಚೌಟ ಅವರು ನಾಲೆಜ್ ಇರುವ ಮನುಷ್ಯ ಎಂಬ ಗೌರವವಿತ್ತು. ಆದರೆ ಪ್ರತಿಭಟನೆಗೆ ಅವರು ಯಾಕೆ ಬಂದು ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಪಕ್ಷದ ಒತ್ತಡಕ್ಕೆ ಮಣಿದು ಮಾತನಾಡಿದ್ದಾರೆಯೇ ಎಂಬುದು ಗೊತ್ತಿಲ್ಲ. ಅವರ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಅವರು ಅಭಿವೃದ್ಧಿ ಪರ ಕೆಲಸ ಮಾಡಲಿ. ನಮಗೆ ಮಾಣಿಯಿಂದ ಸಂಪಾಜೆಯ ತನಕ ಎನ್ಎಚ್ನಲ್ಲಿ ರಸ್ತೆ ಬೇಕು. ಅದಕ್ಕೆ ಸ್ಪೀಡಪ್ ಮಾಡಿ. ಜೊತೆಯಲ್ಲಿ ಕೆಲಸ ಮಾಡೋಣ. ನಿಮ್ಮ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ. ನಾನು ತಪ್ಪು ಮಾಡಿದ್ದರೆ ಹೇಳಿ ಎಂದ ಅಶೋಕ್ ಕುಮಾರ್ ರೈ, ಕಾಂಗ್ರೆಸ್ ಪಕ್ಷದವರು ಭಾರತ ಮಾತೆಗೆ ಜೈಕಾರ ಹಾಕಬಾರದು ಎಂಬ ನಿಯಮವಿದೆಯಾ ?. ದೇಶದಲ್ಲಿ ಬಾಳುವುದಕ್ಕೆ ಎಲ್ಲರಿಗೂ ಅವಕಾಶವಿದೆ. ದೇಶದ ತೊಂದರೆಯನ್ನು ಜನರಿಗೆ ತಿಳಿಸುವ ಕಾರ್ಯ ಮಾಡಬೇಕಲ್ವಾ ?, ಸಂಘಟನೆಯನ್ನು ಕಟ್ಟಿಕೊಂಡು ವಿವಿಧ ಕೆಲಸ ಮಾಡಿಕೊಡುವುದಕ್ಕೆ ದುಡ್ಡು ವಸೂಲಿ ಮಾಡುವ ಕಾರ್ಯ ಸರಿಯಲ್ಲ ಎಂದು ಶಾಸಕರು ಹೇಳಿದರು.
ಮಾಜಿ ಶಾಸಕರು ಎಕ್ರೆಗೆ 2 ಲಕ್ಷ ರೂ.ಪಡೆಯುತ್ತಿದ್ದರು
ಪ್ರತಿಭಟನೆಯಲ್ಲಿದ್ದ ಮಾಜಿ ಶಾಸಕರು ಅವರ ಅವಧಿಯಲ್ಲಿ ಎಕ್ರೆಗೆ 2 ಲಕ್ಷ ರೂ.ಪಡೆಯುತ್ತಿದ್ದರು. ಈ ಕುರಿತು ನನ್ನಲ್ಲಿ 45 ಮಂದಿ ಸಾಕ್ಷಿಗೆ ಇದ್ದಾರೆ. ನಮ್ಮ ಮೇಲೆ ವಾಗ್ವಾದ ಮಾಡಲು ಬರಬೇಡಿ. ನಾವು ನಿಮ್ಮ ಮೇಲೆ ಯಾವುದೇ ವಾಗ್ವಾದಕ್ಕೆ ಹೋಗುವುದಿಲ್ಲ. ನಾವು ಅಭಿವೃದ್ದಿ ಪರ ಕೆಲಸ ಮಾಡುತ್ತೇವೆ. ನಾವು ಅಕ್ರಮ ಸಕ್ರಮ ಮಂಜೂರು ಮಾಡಿದವರಲ್ಲಿ ಬಿಜೆಪಿ ಪಕ್ಷದ ಪಂಚಾಯತ್ ಅಧ್ಯಕ್ಷರುಗಳಿದ್ದಾರೆ. ಮಾಜಿ ಜಿ.ಪಂ.ಸದಸ್ಯರಿದ್ದಾರೆ. ತಾ.ಪಂ ಸದಸ್ಯರಿದ್ದಾರೆ. ಶಕ್ತಿ ಕೇಂದ್ರದ ಅಧ್ಯಕ್ಷರೂ ಪಡೆದುಕೊಂಡಿದ್ದಾರೆ. ಈ ಕುರಿತು ಪಟ್ಟಿಯೇ ನಾವು ಕೊಡುತ್ತೇವೆ. ಆದರೆ ಮಾಧ್ಯಮದ ಮುಂದೆ ಅವರ ಹೆಸರು ಬಹಿರಂಗ ಪಡಿಸುವುದಿಲ್ಲ. ಅವರ ಪಕ್ಷದವರಿಗೆ ಹಕ್ಕು ಪತ್ರ ಕೊಡಿಸದ ಮಾಜಿ ಶಾಸಕರು ಬೇರೆ ಯಾರದ್ದು ಮಾಡುತ್ತಾರೆ. ಪಕ್ಷದ ಹುದ್ದೆಯಲ್ಲಿದ್ದ ಯಾರದ್ದು ಮಾಡಿದ್ದೀರಿ ಎಂದು ಅವರು ಪಟ್ಟಿ ಕೇಳಿದರೆ ಅವರಿಗೆ ಕೊಡಲು ನಾನು ಸಿದ್ಧ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಬಿಜೆಪಿ ನನ್ನನ್ನು ಮೇಲ್ಗಡೆಯಿಂದ ಕುತ್ತಿದ್ದು
ಪ್ರತಿಭಟನೆಯಲ್ಲಿ ಅಶೋಕ್ ಕುಮಾರ್ ರೈ ಅವರು ಬಿಜೆಪಿಯಿಂದ ಬೆಳೆದು ಬಂದವರು ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಬಿಜೆಪಿ ನನಗೆ ಮೇಲ್ಗಡೆಯಿಂದ ಕುತ್ತಿದ್ದು. ಅವರು ನನ್ನನ್ನು ತಳ್ಳುವಂತಹ, ತುಳಿಯುವಂತಹ ಕೆಲಸ ಮಾಡಿದ್ದಾರೆ. ನನ್ನ ಆತ್ಮೀಯರಾದ ವಿಧಾನ ಪರಿಷತ್ ಸದಸ್ಯರು ಸ್ವಲ್ಪ ಪತ್ರಿಕೆ ಓದಲಿ.
ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು
ಬೆದ್ರಾಳದಲ್ಲಿ ಎಸ್ಟಿಪಿ ಘಟಕ ನಿರ್ಮಾಣ
ಎಸ್ಟಿಪಿ ಘಟಕದ ವಿಚಾರದಲ್ಲಿ ಅಽಕಾರಿಗಳ ಸಭೆಯನ್ನು ಕರೆಯಲಾಗಿದ್ದು, ಜಿಲ್ಲಾಧಿಕಾರಿಯವರು ಬರುವುದಾಗಿ ತಿಳಿಸಿದ್ದಾರೆ. 20 ಕೋಟಿ ರೂ. ಮಂಜೂರಾಗಿ ಸ್ಥಳ ಸಮೀಕ್ಷೆ ಮಾಡಿದ್ದು, ಸರ್ಕಾರದಿಂದ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುವುದು. ಘಟಕ ನಿರ್ಮಾಣ ಮಾಡುವುದರಲ್ಲಿ ಹಿಂದೆ ಮುಂದೆ ನೋಡುವ ಪ್ರಶ್ನೆಯೇ ಇಲ್ಲ, ಅಲ್ಲೇ ಘಟಕ ನಿರ್ಮಾಣವಾಗುತ್ತದೆ. ನಗರದ ಎಲ್ಲಾ ತ್ಯಾಜ್ಯವೂ ಅಲ್ಲಿಗೇ ಹೋಗಲಿದೆ. ನ್ಯಾಯಾಲಯದ ಇಂಜೆಕ್ಷನ್ ತೆರವಿಗೆ ಅಗತ್ಯ ಕ್ರಮ ವಹಿಸಲಾಗಿದೆ. ಘಟಕದ ಸುತ್ತ ಬೇಕಾದಷ್ಟು ರಸ್ತೆಗಳೂ ಇದೆ. ಜನರಿಗೆ ತೊಂದರೆಯಾಗದ ರೀತಿಯಲ್ಲಿ ಘಟಕ ನಿರ್ಮಾಣವಾಗಲಿದೆ. ಪುತ್ತೂರಿನ ಅಭಿವೃದ್ಧಿಗೆ ಬೇರೆ ಜಾಗವಿಲ್ಲ. ಪೈಪ್ಲೈನ್ ಹೋಗುವ ಎಲ್ಲಾ ಮಾರ್ಗಗಳನ್ನು ಈಗಾಗಲೇ ಗುರುತು ಮಾಡಲಾಗಿದೆ. ಲೇಔಟ್ ಒಳಗೆ ಹೋಗುವ ರಸ್ತೆಗಳೆಲ್ಲಾ ನಗರ ಸಭೆಗೆ ಸೇರಿದ್ದು, ಅದಕ್ಕೆ ಯಾರೂ ಅಡ್ಡಿಪಡಿಸಲಾಗದು.
ಅಶೋಕ್ಕುಮಾರ್ ರೈ ಶಾಸಕರು ಪುತ್ತೂರು










