







ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 25ರಂದು ರಾತ್ರಿ ಪತ್ತನಾಜೆ ಉತ್ಸವ ನಡೆಯಿತು. ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ವೈದಿಕ ಕಾರ್ಯಕ್ರಮ ನೆರವೇರಿಸಿದರು. ಉತ್ಸವದ ಬಳಿಕ ಭಕ್ತರಿಗೆ ಪ್ರಸಾದ ರೂಪದಲ್ಲಿ ಫಲವಸ್ತುಗಳನ್ನು ವಿತರಣೆ ಮಾಡಲಾಯಿತು.


ಪತ್ತನಾಜೆ ಅಂಗವಾಗಿ ಬೆಳಗ್ಗೆ, ಮಧ್ಯಾಹ್ನ ವಿಶೇಷ ಪೂಜೆ, ಸಂಜೆ ಶ್ರೀ ದೇವರ ನಿತ್ಯ ಬಲಿ ಉತ್ಸವದಲ್ಲಿ ಉಡಿಕೆ, ಚೆಂಡೆ, ವಾದ್ಯ ಸುತ್ತು, ಪಲ್ಲಕಿ ಉತ್ಸವ ಮತ್ತು ಸೇವೆಯ ಬಳಿಕ ವಸಂತ ಪೂಜೆ ಸೇವೆ ಮಾಡಿಸಿದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ದೇವರು ಗರ್ಭಗುಡಿ ಪ್ರವೇಶಿಸಿದ ಬಳಿಕ ಪತ್ತನಾಜೆ ಉತ್ಸವದ ಪ್ರಸಾದ ರೂಪವಾಗಿ ಫಲವಸ್ತುಗಳನ್ನು ದೇವಳದ ಹೊರಾಂಗಣದಲ್ಲಿ ಭಕ್ತಾದಿಗಳಿಗೆ ವಿತರಣೆ ಮಾಡಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ದಿನೇಶ್ ಪಿ.ವಿ, ಈಶ್ವರ ಬೆಡೇಕರ್, ನಳಿನಿ ಪಿ ಶೆಟ್ಟಿ, ಕೃಷ್ಣವೇಣಿ, ಸುಭಾಷ್ ರೈ ಬೆಳ್ಳಿಪ್ಪಾಡಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾಮದಾಸ ಗೌಡ, ಹಿರಿಯರಾದ ಕಿಟ್ಟಣ್ಣ ಗೌಡ, ಕೃಷ್ಣನಾರಾಯಣ ಮುಳಿಯ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.




60ಕ್ಕೂ ಮಿಕ್ಕಿ ವಸಂತ ಪೂಜೆ
ಪತ್ತನಾಜೆಯ ದಿನ ನಡೆದ ಕೊನೆಯ ವಸಂತ ಪೂಜೆಯಲ್ಲಿ ಸುಮಾರು 60ಕ್ಕೂ ಮಿಕ್ಕಿ ಭಕ್ತರು ವಸಂತ ಪೂಜೆ ಸೇವೆ ಮಾಡಿಸಿದರು. ನಾಲ್ವರು ಪಲ್ಲಕ್ಕಿ ಸೇವೆ ಮಾಡಿಸಿದರು. ದೇವಳದ ಸ್ಯಾಕ್ಸೋಪೋನ್ ವಾದಕ ಪಿ.ಕೆ ಗಣೇಶ್ ಅವರ ನೇತೃತ್ವದಲ್ಲಿ ಸುಶ್ರಾವ್ಯವಾದ ಸಂಗೀತದೊಂದಿಗೆ ಪಲ್ಲಕ್ಕಿಯಲ್ಲಿ ಶ್ರೀದೇವರನ್ನು ಕುಳ್ಳಿರಿಸಿ ಉತ್ಸವ ನಡೆಸಲಾಯಿತು.
ತಡವಾಗಿ ಗರ್ಭಗುಡಿ ಪ್ರವೇಶಿಸುವ ದೇವರು
ಪತ್ತನಾಜೆಯಂದು ದೇವರ ಉತ್ಸವ ಮೂರ್ತಿಯನ್ನು ಗರ್ಭ ಗುಡಿಯೊಳಗೆ ಕೊಂಡೊಯ್ಯುವ ಮೊದಲು ಬ್ರಹ್ಮ ವಾಹಕರು ಉತ್ಸವ ಮೂರ್ತಿಯನ್ನು ಆನೆ ಮೆಟ್ಟಿಲಿನ ಮೂಲಕ ಒಳಗೆ ಕೊಂಡೊಯ್ದು ಮತ್ತೆ ಹಿಂದಕ್ಕೆ ತರುತ್ತಾರೆ. ಹೀಗೆ ಮೂರು ಬಾರಿ ಹೋಗಿ ಬರುವ ಕ್ರಮದ ಬಳಿಕ ಕೊನೆಗೆ ಉತ್ಸವ ಮೂರ್ತಿಯನ್ನು ಗರ್ಭಗುಡಿಯ ಒಳಗೆ ಕೊಂಡೊಯ್ಯುವುದು ವಿಶೇಷವಾಗಿದೆ.










