







‘112’ ತುರ್ತು ಕರೆಯನ್ನು ದುರ್ಬಳಕೆ ಮಾಡಿದರೆ ಕ್ರಮ


ಪುತ್ತೂರು:ಎಲ್ಲಾ ಸಮಯದಲ್ಲೂ ಪೊಲೀಸರು ಇರಲು ಸಾಧ್ಯವಿಲ್ಲ.ಆಗ ಸಾರ್ವಜನಿಕರ ಸಹಕಾರವೂ ಅಗತ್ಯವಿದೆ.ನೂರಕ್ಕೆ 98 ಜನರು ಕಾನೂನು ಪಾಲನೆ ಮಾಡುತ್ತಾರೆ.ಕೇವಲ 2 ಪರ್ಸೆಂಟ್ ಜನ ಮಾತ್ರ ಕಾನೂನು ಉಲ್ಲಂಘನೆ ಮಾಡುವುದು.ಇಂತಹ ಸಂದರ್ಭದಲ್ಲಿ ಸಮಸ್ಯೆಯನ್ನು ಅಲ್ಲೇ ಇತ್ಯರ್ಥ ಮಾಡುವ ಪ್ರಯತ್ನ ಮಾಡಬೇಕು.ಇಲ್ಲಾಂದ್ರೆ ಠಾಣೆಗೆ ಬಾರದೆ ದೂರು ದಾಖಲು ಮಾಡುವ ವ್ಯವಸ್ಥೆಯೂ ಇದೆ.ಈ ನಿಟ್ಟಿನಲ್ಲಿ ಕೆಎಸ್ಪಿ ಆಪ್ ಅನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಪುತ್ತೂರು ಉಪವಿಭಾಗದ ಡಿವೈಸ್ಪಿ ಪ್ರಮೋದ್ ಕುಮಾರ್ ಬಿ. ಅವರು ಹೇಳಿದರು.



ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ನಡೆದ ಪುತ್ತೂರು ಪೊಲೀಸ್ ಉಪವಿಭಾಗಮಟ್ಟದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಸರಕಾರ ಮತ್ತು ಇಲಾಖೆಯು ಸಾಕಷ್ಟು ಸೌಲಭ್ಯಗಳನ್ನು ಜನರಿಗಾಗಿ ಕಲ್ಪಿಸುತ್ತಿದೆ.ಅದನ್ನು ಬಳಸಿಕೊಳ್ಳಿ ಎಂದ ಅವರು,ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಖಂಡಿತಾ ಕ್ರಮ ಕೈಗೊಳ್ಳುತ್ತೇವೆ ಎಂದರಲ್ಲದೆ,ಕೆಎಸ್ಪಿ ಆಪ್ ಮೂಲಕ ಠಾಣೆಗೆ ಬಾರದೆ ದೂರು ದಾಖಲಿಸಬಹುದು.ಈ ಮೂಲಕ ಠಾಣೆಯಲ್ಲಿ ದೂರು ದಾಖಲಾಗಿ ನಿಮಗೆ ಠಾಣೆಯಿಂದಲೇ ಕರೆ ಬರುತ್ತದೆ ಎಂದರು.ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ವಿವಿಧೆಡೆ ಚೆಕ್ಪೋಸ್ಟ್ ಹಾಕಿದ್ದೇವೆ.ಬೀಟ್ ಸಿಬ್ಬಂದಿಯನ್ನು ಅಲರ್ಟ್ ಮಾಡಿದ್ದೇವೆ.ಏನಾದರೂ ಸಮಸ್ಯೆ ಬಂದಾಗ 112ಕ್ಕೆ ಕರೆ ಮಾಡಿ ಎಂದು ಡಿವೈಎಸ್ಪಿ ಹೇಳಿದರು.ನಮ್ಮಲ್ಲಿ ಜಾತ್ರೆ, ಹಬ್ಬದ ಸಂದರ್ಭ ಯಾವ ಸಮಸ್ಯೆಯೂ ಇಲ್ಲಿನ ತನಕ ಅಗಿಲ್ಲ ಎಂದು ಸಭೆಯಲ್ಲಿದ್ದವರು ಹೇಳಿದರು.
‘112’ ತುರ್ತು ಕರೆಯನ್ನು ದುರ್ಬಳಕೆ ಮಾಡಿದರೆ ಕ್ರಮ:
ಕಾನೂನು ಕೈಗೆತ್ತಿಕೊಳ್ಳುವವರ ಕೆಲಸಕ್ಕೆ ಇಲಾಖೆ ಕಡಿವಾಣ ಹಾಕಬೇಕೆಂದು ಸಭೆಯಲ್ಲಿ ಸದಸ್ಯರು ಪ್ರಸ್ತಾಪಿಸಿದಾಗ ಡಿವೈಎಸ್ಪಿ ಅವರು ಮಾತನಾಡಿ, ತೊಂದರೆ ಆದಾಗ ತಕ್ಷಣಕ್ಕೆ 112ಕ್ಕೆ ಕರೆ ಮಾಡಿ.ಅವರು 5 ನಿಮಿಷದಲ್ಲಿ ಸ್ಥಳಕ್ಕೆ ಬರುತ್ತಾರೆ.ನೀವು ಸಮಸ್ಯೆಯ ಕುರಿತು ವೀಡಿಯೋ ಮಾಡಿದರೆ ಸಾಕು.ಕೆಲವೊಂದು ಕಡೆ, ಮನೆಯೆದುರು ಹೆಗ್ಗಣ ಬಿದ್ದಿದೆ ಎಂದು 112ಕ್ಕೆ ಕರೆ ಮಾಡಿದವರೂ ಇದ್ದಾರೆ.ಈ ರೀತಿ ದುರ್ಬಳಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ದೂರು ನೀಡಿದವರ ಮಾಹಿತಿ ಗೌಪ್ಯ:
112ಕ್ಕೆ ಕರೆ ಮಾಡಿದರೆ ಅವರು ಬಳಿಕ ದೂರು ನೀಡಿದವರನ್ನು ಸಂಪರ್ಕಿಸುತ್ತಾರೆ ಮತ್ತು ದಾಖಲೆಗಾಗಿ ಅವರೊಂದಿಗೆ -ಟೋ ಕ್ಲಿಕ್ಕಿಸುತ್ತಾರೆ.ಇದು ದೂರು ನೀಡಿದವರಿಗೆ ಸಮಸ್ಯೆ ಆಗುತ್ತದೆ ಎಂದು ಸದಸ್ಯರು ಪ್ರಸ್ತಾಪಿಸಿದಾಗ ಉತ್ತರಿಸಿದ ಡಿವೈಎಸ್ಪಿ ಅವರು, ತುರ್ತು ಕರೆ ಬಂದಾಗ ಸಂಬಂಽಸಿದವರು ಜಿಪಿಎಸ್ ಮಾಹಿತಿಗಾಗಿ ಮತ್ತು ಇಲಾಖೆ ನಿಯಮ ಪಾಲನೆ ನಿಟ್ಟಿನಲ್ಲಿ,ದೂರು ನೀಡಿದವರನ್ನು ಸಂಪರ್ಕಿಸುತ್ತಾರೆ.ಒಂದು ವೇಳೆ ಫೋಟೋ ತೆಗೆಯಬಾರದು ಎಂದಿದ್ದರೆ ತೊಂದರೆ ಇಲ್ಲ.ಫರ್ಸೆಬಲ್ ಅಗಿ ಫೋಟೋ ತೆಗೆಯುವಂತಿಲ್ಲ.ಏನಿದ್ದರೂ ನಿಮ್ಮ ದೂರು ಗೌಪ್ಯವಾಗಿರುತ್ತದೆ ಎಂದು ಡಿವೈಎಸ್ಪಿ ಸ್ಪಷ್ಟಪಡಿಸಿದರು.
ಹಬ್ಬದ ಸಂದರ್ಭ ವಾಹನ ತಪಾಸಣೆ:
ಹಬ್ಬದ ಸಂದರ್ಭ ವಾಹನ ಅಪಘಾತ ಜಾಸ್ತಿ ಆಗುತ್ತಿರುತ್ತದೆ.ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ.ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸಭೆಯಲ್ಲಿ ಪ್ರಸ್ತಾಪವಾಯಿತು.ಅದೇ ರೀತಿ ಹಬ್ಬದ ಸಂದರ್ಭ ಹಿಂಬದಿ ಸವಾರನಿಗೆ ಹೆಲ್ಮೆಟ್ ಇಲ್ಲದೇ ಇದ್ದರೂ ರಿಯಾಯಿತಿ ಇರಲಿ ಎಂಬ ವಿಚಾರವೂ ಪ್ರಸ್ತಾಪವಾಯಿತು.ಉತ್ತರಿಸಿದ ಡಿವೈಎಸ್ಪಿಯವರು, ಹೆಲ್ಮೆಟ್ ಧರಿಸುವುದು ಪೊಲೀಸರಿಗಾಗಿ ಅಲ್ಲ.ನಿಮ್ಮ ಸುರಕ್ಷತೆಗಾಗಿ ಎಂಬುದು ತಿಳಿದಿರಲಿ.ಕಾನೂನು ಉಲ್ಲಂಘನೆ ಮಾಡಿದಾಗ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ರಾತ್ರಿ ವ್ಯಾಪಾರಕ್ಕೆ ಅವಕಾಶ ನೀಡಿ:
ಹಬ್ಬದ ಎರಡು ದಿನ ಮುಂದೆ ರಾತ್ರಿಯೂ ವ್ಯಾಪಾರಕ್ಕೆ ಅವಕಾಶ ನೀಡಬೇಕು.ಯಾರೋ ಕರೆ ಮಾಡಿದಕ್ಕೆ ಪೊಲೀಸರು ಬಂದಾಗ ಗ್ರಾಹಕರು ಹೆದರಿ ಹೋಗುವುದರಿಂದ ವ್ಯಾಪಾರಕ್ಕೆ ಅಡ್ಡಿಯಾಗುತ್ತದೆಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.ಉತ್ತರಿಸಿದ ಡಿವೈಎಸ್ಪಿಯವರು, ರಾತ್ರಿ ಅಂಗಡಿ ವ್ಯಾಪಾರಕ್ಕೆ ಅವಕಾಶ ನೀಡುತ್ತೇವೆ.ಆದರೆ ಯಾರಾದರೂ ನ್ಯೂಸೆನ್ಸ್ ಮಾಡಿದರೆ ನಾವು ಬಿಡುವುದಿಲ್ಲ.ನಮಗೆ, ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶವಿಲ್ಲ.ರೂಲ್ಸ್ ವಯಲೇಶನ್ ಮಾಡುವವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸ್ಥಳೀಯ ಸಮಸ್ಯೆಗಳ ಪ್ರಸ್ತಾಪಕ್ಕೆ ಪರಿಹಾರ- ಡಿವೈಎಸ್ಪಿಗೆ ಧನ್ಯವಾದ
ಶಾಂತಿ ಸಭೆಯಲ್ಲಿ ಸ್ಥಳೀಯ ಮಟ್ಟದ ಸಮಸ್ಯೆಗಳ ಕುರಿತು ಪ್ರಸ್ತಾಪ ಮಾಡಲಾಯಿತು.ವಿದ್ಯುತ್ ಸಮಸ್ಯೆ, ಮಳೆ ನೀರು ಹೋಗುವ ಚರಂಡಿ ಸಮಸ್ಯೆ,ಅನುಮತಿ ಇಲ್ಲದೆ ಮಕ್ಕಳಿಗೆ ಶಿಕ್ಷಣ ಕೊಡಿಸುವ ನೆಪದಲ್ಲಿ ತೊಂದರೆ ಕೊಡುವ ವಿಚಾರ ಸೇರಿ ಹಲವಾರು ವಿಚಾರಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.ಈ ಕುರಿತು ಆಯಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಸಮರ್ಪಕ ಉತ್ತರ ನೀಡಿದರು.ಈ ಹಿಂದಿನ ಶಾಂತಿ ಸಭೆಯಲ್ಲಿ ಇತರ ಸಮಸ್ಯೆಗಳ ವಿಚಾರ ಪ್ರಸ್ತಾಪವಾಗಿ ಅದಕ್ಕೆ ಪರಿಹಾರ ನೀಡುವ ಕಾರ್ಯ ಆಗಬೇಕೆಂದು ಮನವಿ ಮಾಡಿದ್ದಕ್ಕೆ ಸ್ಪಂದಿಸಿದ ಡಿವೈಎಸ್ಪಿಯವರು ಉಪವಿಭಾಗ ಮಟ್ಟದ ಸಭೆಗೆ ಮೆಸ್ಕಾಂ ಮತ್ತು ನಗರಸಭೆಯ ಅಧಿಕಾರಿಗಳನ್ನೂ ಕರೆಸಿದ್ದರು.ಸಭೆಯಲ್ಲಿದ್ದವರು ಡಿವೈಎಸ್ಪಿಯವರಿಗೆ ಧನ್ಯವಾದ ಸಮರ್ಪಿಸಿದರು.
ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಬೇಡಿ
ಯಾವುದೇ ಸಮಸ್ಯೆ, ತೊಂದರೆ ಇರಬಹುದು.ಆದರೆ ವ್ಯತಿರಿಕ್ತವಾಗಿ ನಡೆಯಬೇಡಿ.ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸದೆ ಸಹಕಾರ, ತಾಳ್ಮೆ ಇಟ್ಟುಕೊಳ್ಳಿ.ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ
-ಜಾನ್ಸನ್ ಡಿ’ಸೋಜ, ಇನ್ಸ್ಪೆಕ್ಟರ್
ಪುತ್ತೂರು ನಗರ ಪೊಲೀಸ್ ಠಾಣೆ
ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸುನಿಲ್ ಕುಮಾರ್, ಸುಳ್ಯ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ, ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಾನ್ಸನ್ ಡಿ’ಸೋಜ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಮೆಸ್ಕಾಂ ಪುತ್ತೂರು ನಗರದ ಕಿರಿಯ ಇಂಜಿನಿಯರ್ ಕೀರ್ತನಾ ಪರಮೇಶ್, ದುರ್ಗಾಸಿಂಗ್, ನಗರಸಭೆಯ ಜಯಲಕ್ಷ್ಮಿ ಬೇಕಲ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಎಸ್.ಐ ಸುಷ್ಮಾ ಭಂಡಾರಿ, ಪುತ್ತೂರು ನಗರ ಪೊಲೀಸ್ ಠಾಣೆ ಎಸ್.ಐ ಸೇಸಮ್ಮ, ಸುರೇಶ್, ಬೆಳ್ಳಾರೆ ಪೊಲೀಸ್ ಠಾಣೆಯ ಎಸ್.ಐ ಈರಯ್ಯ ಡಿ.ಎನ್., ಪುತ್ತೂರು ಸಂಚಾರ ಪೊಲೀಸ್ ಠಾಣೆ ಎಸ್.ಐ ಸುಹಾಸ್,ಗ್ರಾಮಾಂತರ ಪೊಲೀಸ್ ಠಾಣೆ ಪ್ರೊಬೆಷನರಿ ಎಸ್.ಐ ಅರುಣ್ ಮಾಂತೇಶ್, ಬೆಳ್ಳಾರೆ ಠಾಣೆಯ ಪ್ರೊಬೆಷನರಿ ಎಸ್.ಐ ಗಣೇಶ್ ವಿವಿಧ ವಿಚಾರಗಳ ಮಾಹಿತಿ ನೀಡಿದರು.ದ.ಕ ಮತ್ತು ಉಡುಪಿ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ಶ್ರೀ ಮಹಮ್ಮಾಯಿ ಸೇವಾ ಸಮಿತಿಯ ಮೊಕ್ತೇಸರ ಸತೀಶ್ ನಾಯ್ಕ್, ಡಾ|ಅಬೂಬಕ್ಕರ್ ಆರ್ಲಪದವು, ಮುಕ್ವೆ ಮಸೀದಿಯ ಜೈನುದ್ದೀನ್, ನಿಝಾರ್ ಸಂಪ್ಯ, ಪ್ರಕಾಶ್ ಕಿಲ್ಲಾಡಿ, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಕಿರಣ್ ಬಲ್ನಾಡು, ಸಿದ್ದೀಕ್.ಎ, ಅಬೂಬಕ್ಕರ್ ಮುಲಾರ್, ರಜಾಕ್ ಬಪ್ಪಳಿಗೆ ಸಹಿತ ಹಲವಾರು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು.










