







ಬಡಗನ್ನೂರು: ಬಡಗನ್ನೂರು ಗ್ರಾಮದ ಪಟ್ಟೆ ವಿದ್ಯಾಸಂಸ್ಥೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ದೀರ್ಘಕಾಲ ಕರ್ತವ್ಯ ನಿರ್ವಹಿಸುತ್ತಿರುವ ಮೋನಪ್ಪ ಎಂ. ಅವರು ಮೇ.30ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ.


ಬಂಟ್ರ ಗ್ರಾಮದ ಮರ್ದಾಳ ನಿವಾಸಿಯಾಗಿರುವ ಮೋನಪ್ಪ ಎಂ. ಅವರು ಕಳೆದ ಹಲವು ವರ್ಷಗಳಿಂದ ಪಟ್ಟೆ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದರು. ವಿವಿಧ ವಿದ್ಯಾಸಂಸ್ಥೆಗಳಲ್ಲೂ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಒಟ್ಟು 29 ವರ್ಷಗಳ ಕಾಲ ಕ್ರೀಡಾ ಕ್ಷೇತ್ರಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ಕೀರ್ತಿ ಇವರದ್ದು.



ಸಾಧನೆ ಹಾಗೂ ಪ್ರಶಸ್ತಿಗಳು:
ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ‘ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಹಾಗೂ ತಾಲೂಕು ಮಟ್ಟದ ‘ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರು ಕೇವಲ ಶಿಕ್ಷಕರಾಗಿರದೆ ವಾಲಿಬಾಲ್, ತ್ರೋಬಾಲ್ ಮತ್ತು ಕಬಡ್ಡಿ ಕ್ರೀಡೆಗಳ ಅತ್ಯುತ್ತಮ ತರಬೇತುದಾರರೂ ಆಗಿದ್ದರು. ಇವರಿಂದ ತರಬೇತಿ ಪಡೆದ ಹಲವಾರು ವಿದ್ಯಾರ್ಥಿಗಳು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಶಿಸ್ತಿನ ಸಿಪಾಯಿ:
ಯಾವಾಗಲೂ ಶಿಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದ ಮೋನಪ್ಪ ಅವರು, ಇಡೀ ತಾಲೂಕಿನಾದ್ಯಂತ ಅತ್ಯುತ್ತಮ ದೈಹಿಕ ಶಿಕ್ಷಣ ಶಿಕ್ಷಕ ಎಂದೇ ಜನಮನ್ನಣೆ ಗಳಿಸಿಕೊಂಡಿದ್ದರು.
ಸದ್ಯ ಇವರು ಅರಿಯಡ್ಕ ಗ್ರಾಮದ ಶೇಕಮಲೆಯಲ್ಲಿ ಪತ್ನಿ ಪಾಪೆಮಜಲು ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಹರಿಣಾಕ್ಷಿ, ಮಕ್ಕಳಾದ ಕೀರ್ತಿಕಾ ದೀಪಕ್ ಎಂ. ಮತ್ತು ಭಾರತೀಯ ನೌಕಾಸೇನೆಯಲ್ಲಿ ಉದ್ಯೋಗಿಯಾಗಿರುವ ಪುತ್ರ ಹೃತಿಕ್ ಎಂ. ಅವರೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.










