







ವಿಶೇಷ ವರದಿ-ಯತೀಶ್ ಉಪ್ಪಳಿಗೆ


ಪುತ್ತೂರು:ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಶೈಕ್ಷಣಿಕ ವರ್ಷ ಪ್ರಾರಂಭಗೊಳ್ಳಲಿದೆ.ದಾಖಲಾತಿ ಪ್ರಕ್ರಿಯೆಗಳು ಈಗಾಗಲೇ ನಡೆಯುತ್ತಿದೆ.ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಎಂಬ ಶಿಕ್ಷಣ ಇಲಾಖೆ ಅಭಿಯಾನವೂ ನಡೆಯುತ್ತಿದೆ.ಆದರೆ ಆಘಾತಕಾರಿ ಸಂಗತಿಯೆಂದರೆ ಅವಿಭಜಿತ ಪುತ್ತೂರು ತಾಲೂಕಿನಲ್ಲಿ ಶಿಕ್ಷಕರ ಕೊರತೆ ದೊಡ್ಡ ಪ್ರಮಾಣದಲ್ಲಿ ಎದ್ದು ಕಾಣುತ್ತಿದೆ.ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಬರೋಬ್ಬರಿ 388 ಮಂದಿ ಶಿಕ್ಷಕರ ಹುದ್ದೆ ಖಾಲಿಯಿದೆ.ಜೊತೆಗೆ 22 ಪ್ರಾಥಮಿಕ ಶಾಲೆಗಳಲ್ಲಿ ಖಾಯಂ ಶಿಕ್ಷಕರೇ ಇಲ್ಲದಿರುವುದು ಶೈಕ್ಷಣಿಕ ವ್ಯವಸ್ಥೆಯ ದುರಂತವಾಗಿದೆ.



2026-27ನೇ ಸಾಲಿನ ಶೈಕ್ಷಣಿಕ ವರ್ಷ ಜೂ.1ರಿಂದ ಪ್ರಾರಂಭಗೊಂಡು ಶಾಲೆಗಳಲ್ಲಿ ಮಕ್ಕಳ ಕಲರವ ಆರಂಭವಾಗಲಿದೆ.ಈ ಬಾರಿ 1ರಿಂದ 5ನೇ ತರಗತಿಗಳ ಮಕ್ಕಳಿಗೆ ದ್ವಿಭಾಷಾ ಮಾಧ್ಯಮದಲ್ಲಿ ಕಲಿಕೆ ಆರಂಭವಾಗಲಿದೆ.ಪ್ರತಿಯೊಂದು ಪಠ್ಯವನ್ನೂ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಶಿಕ್ಷಕರು ಪಾಠ ಮಾಡಬೇಕಿದೆ.ಇದಕ್ಕೆ ಪ್ರತಿಯೊಂದು ಪಠ್ಯವೂ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಕ್ಕಳಿಗೆ ಸಿಗಲಿದೆ.ಪರೀಕ್ಷೆ ಮಾತ್ರ ಇಂಗ್ಲೀಷ್ ಮಾಧ್ಯಮದಲ್ಲಿಯೇ ನಡೆಯಲಿದೆ.ಆದರೆ ಉಭಯ ತಾಲೂಕುಗಳಲ್ಲಿರುವ ಶಿಕ್ಷಕರ ಕೊರತೆಯು ಈ ಹೊಸ ಸಿದ್ಧತೆಗೆ ಪೂರಕವಾಗಿಲ್ಲ.ಇದರಿಂದ, ದ್ವಿಭಾಷಾ ಮಾಧ್ಯಮದ ಹೊಸಚಿಂತನೆಯು ಮಕ್ಕಳ ಪಾಲಿಗೆ ಯಾವ ಪರಿಣಾಮ ಬೀರಲಿದೆ ಎನ್ನುವುದು ಪ್ರಶ್ನಾರ್ಥಕವಾಗಿದೆ.
ಖಾಸಗಿ ಶಾಲೆಗಳ ಪೈಪೋಟಿ ನಡುವೆ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತುಂಬಾ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಎಂಬ ಶಿಕ್ಷಣ ಇಲಾಖೆ ಅಭಿಯಾನವೂ ಉಭಯ ತಾಲೂಕಿನಲ್ಲಿ ನಡೆಯುತ್ತಿದೆ.ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತಿದ್ದರೂ ಆಂಗ್ಲಭಾಷಾ ಮಾಧ್ಯಮದ ಮೋಹದಿಂದಾಗಿ ಖಾಸಗಿ ಶಾಲೆಗಳತ್ತ ಪೋಷಕರು ಗಮನ ಹರಿಸುತ್ತಿರುವುದು ಒಂದು ಕಡೆಯಾದರೆ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯ ಪರಿಣಾಮದಿಂದಾಗಿಯೂ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸುವಲ್ಲಿ ಪೋಷಕರು ಹಿಂದೇಟು ಹಾಕುತ್ತಿರುವುದೂ ಕಂಡುಬರುತ್ತಿದೆ.
ಸರಕಾರಿ ಶಾಲೆಗಳಲ್ಲಿ 388 ಶಿಕ್ಷಕರ ಹುದ್ದೆ ಖಾಲಿ:
ಪುತ್ತೂರು ಹಾಗೂ ಕಡಬ ತಾಲೂಕುಗಳಲ್ಲಿರುವ 178 ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಒಟ್ಟು 903 ಶಿಕ್ಷಕರ ಹುದ್ದೆ ಮಂಜೂರಾಗಿದ್ದರೂ ಈಗ ಕರ್ತವ್ಯ ನಿರ್ವಹಿಸುತ್ತಿರುವುದು ಕೇವಲ 563 ಶಿಕ್ಷಕರು ಮಾತ್ರ.340 ಶಿಕ್ಷಕ ಹುದ್ದೆಗಳು ಖಾಲಿಯಿದೆ.23 ಸರಕಾರಿ ಪ್ರೌಢಶಾಲೆಗಳಿಗೆ 221 ಶಿಕ್ಷಕರ ಹುದ್ದೆ ಮಂಜೂರಾಗಿದೆ.ಇದರಲ್ಲಿ 173 ಮಂದಿ ಶಿಕ್ಷಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.48 ಶಿಕ್ಷಕ ಹುದ್ದೆಗಳು ಖಾಲಿಯಾಗಿವೆ.
22 ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲ….!:
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ಪುತ್ತೂರು ಮತ್ತು ಕಡಬ ತಾಲೂಕಿನ 22 ಪ್ರಾಥಮಿಕ ಶಾಲೆಗಳಲ್ಲಿ ಖಾಯಂ ಶಿಕ್ಷಕರೇ ಇಲ್ಲದಿರುವುದು ಶೈಕ್ಷಣಿಕ ವ್ಯವಸ್ಥೆಯ ದುರಂತವೇ ಆಗಿದೆ.ಪುತ್ತೂರು ತಾಲೂಕಿನ ನೂಜಿಬೈಲು, ಬೆದ್ರೋಡಿ, ನನ್ಯ, ಪೆರ್ನಾಜೆ, ಎಟ್ಯಡ್ಕ, ಬೆಟ್ಟಂಪಾಡಿ, ಚಿಕ್ಕಮುಡ್ನೂರು, ಕೊಂರ್ಬಡ್ಕ, ಮಿತ್ತಡ್ಕ, ಕಡಬ ತಾಲೂಕಿನ ಕೊಂಡಾಡಿಕೊಪ್ಪ, ಬಲ್ಯಪಟ್ಟೆ, ಕೊಪ್ಪ, ಇಡ್ಯಡ್ಕ, ಅಂಕತ್ತಡ್ಕ, ಅಡೆಕ್ಕಲ್ಲು, ಕುಮಾರಮಂಗಲ, ಕಾರ್ಕಳ, ಕಳಾರ, ಕೋಡಿಂಬಾಳ, ಅಡೆಂಜ, ಹೊಸ್ಮಠ ಹಾಗೂ ಚೆನ್ನಾವರ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಯಂ ಶಿಕ್ಷಕರು ಇಲ್ಲ.ಕಳೆದ ಬಾರಿ 20 ಶಾಲೆಗಳಲ್ಲಿ ಖಾಯಂ ಶಿಕ್ಷಕರ ಕೊರತೆ ಇದ್ದುದು ಈ ಬಾರಿ 22ಕ್ಕೆ ಏರಿಕೆಯಾಗಿದೆ.ಇಂತಹ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಯಾವ ಪೋಷಕರೂ ಮನಸ್ಸು ಮಾಡುವುದು ಅಸಾಧ್ಯ.ಮೂಲಭೂತವಾಗಿ ಅಗತ್ಯವಾಗಿರುವ ಶಿಕ್ಷಕರ ಕೊರತೆ ನೀಗಿಸಲು ಸಾಧ್ಯವಾಗದಿದ್ದರೆ ಯಾವ ಅಭಿಯಾನಗಳನ್ನು ಕೈಗೊಂಡರೂ ಅದು ಅರ್ಥಹೀನವಾಗಲಿದೆ.
ಅನುದಾನಿತ ಶಾಲೆಗಳಲ್ಲಿ 277 ಹುದ್ದೆ ಖಾಲಿ:
ಇನ್ನು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲೂ ಶಿಕ್ಷಕರ ಕೊರತೆಯಿದೆ.ಉಭಯ ತಾಲೂಕುಗಳಲ್ಲಿರುವ 11 ಅನುದಾನಿತ ಪ್ರಾಥಮಿಕ ಶಾಲೆಗಳಿಗೆ 124 ಸರಕಾರಿ ನೇಮಕಾತಿಯ ಶಿಕ್ಷಕರಿಗೆ ಅವಕಾಶ ಇದೆ.ಆದರೆ ಪ್ರಸ್ತುತ ಕೇವಲ 19 ಮಂದಿ ಶಿಕ್ಷಕರು ಮಾತ್ರ ಕರ್ತವ್ಯದಲ್ಲಿದ್ದು 105 ಹುದ್ದೆಗಳು ಖಾಲಿಯಾಗಿದೆ.21 ಅನುದಾನಿತ ಪ್ರೌಢಶಾಲೆಗಳಿಗೆ ಒಟ್ಟು 269 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು 97 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.172 ಶಿಕ್ಷಕರ ಹುದ್ದೆಗಳು ಖಾಲಿಯಾಗಿದೆ.ಅನುದಾನಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಶಿಕ್ಷಕರ ನೇಮಕಾತಿ ಮಾಡಿಕೊಂಡು ಪ್ರಸ್ತಾವನೆ ಕಳಿಸಿದರೆ ಈ ನೇಮಕಾತಿ ಅಧಿಕೃತಗೊಳ್ಳುತ್ತದೆ.ಆದರೆ 2020ರಿಂದ ನಿವೃತ್ತಿಯಾದ ಶಿಕ್ಷಕರ ಹುದ್ದೆಗಳೇ ಈಗಲೂ ಖಾಲಿಯಾಗಿವೆ.
8 ತಿಂಗಳಿನಿಂದ ಬಿಇಓ ಹುದ್ದೆಯೇ ಖಾಲಿ…!
ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣದ ಸುವ್ಯವಸ್ಥೆ ಕಾಯ್ದುಕೊಳ್ಳಬೇಕಾದ ಪುತ್ತೂರು ಕ್ಷೇತ್ರ ಶಿಕ್ಷಣಾಽಕಾರಿ ಕಚೇರಿಯಲ್ಲಿನ ಮುಖ್ಯ ಹುದ್ದೆಯಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಯೇ ಕಳೆದ 8 ತಿಂಗಳಿನಿಂದ ಖಾಲಿಯಾಗಿದೆ.ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಲೋಕೇಶ್ ಎಸ್.ಆರ್ ಅವರು ಕಳೆದ ಸಪ್ಟೆಂಬರ್ನಲ್ಲಿ ವರ್ಗಾವಣೆಗೊಂಡು ತೆರಳಿದ್ದಾರೆ.ಆ ಬಳಿಕ ಶಾಂತಿನಗರ ಪ್ರೌಢಶಾಲಾ ಮುಖ್ಯ ಶಿಕ್ಷಕ ವಿಷ್ಣುಪ್ರಸಾದ್ ಸಿ.ಅವರು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಇಲಾಖೆಯ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ವಿಷ್ಣುಪ್ರಸಾದ್ ಅವರೂ ಈ ತಿಂಗಳಾಂತ್ಯಕ್ಕೆ ನಿವೃತ್ತರಾಗಲಿದ್ದಾರೆ.ಇದರಿಂದಾಗಿ ಶಾಂತಿನಗರ ಪ್ರೌಢಶಾಲಾ ಮುಖ್ಯಗುರು ಹುದ್ದೆ ಖಾಲಿಯಾಗುವುದರ ಜೊತೆಗೆ ಅವರು ಪ್ರಭಾರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಹುದ್ದೆಯೂ ಖಾಲಿಯಾಗಲಿದೆ.ಬಿಇಒ ಮಾತ್ರವಲ್ಲದೆ ಕಚೇರಿಯಲ್ಲಿ ಮಂಜೂರಾದ ಒಟ್ಟು 23 ಹುದ್ದೆಗಳಲ್ಲಿ 15 ಹುದ್ದೆಗಳು ಭರ್ತಿಯಾಗಿ 8 ಹುದ್ದೆಗಳು ಖಾಲಿಯಾಗಿವೆ.ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿಯೂ ಮಂಜೂರಾದ 30 ಹುದ್ದೆಗಳಲ್ಲಿ ಕೇವಲ 13 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು 17 ಹುದ್ದೆಗಳು ಖಾಲಿಯಾಗಿವೆ.
ಸರಕಾರಿ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳ ಕುರಿತು ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ.ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯಬೇಕಿದೆ.ಖಾಲಿಯಿರುವ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಅತಿಥಿ ಶಿಕ್ಷಕರ ನೇಮಕವಾಗುವ ಆಶಯವಿದೆ.ಶಾಲಾ ಪ್ರಾರಂಭೋತ್ಸವದ ಮೊದಲು ಭರ್ತಿಯಾಗುವ ನಿರೀಕ್ಷೆಯಿದೆ.ಇಲಾಖೆಯಿಂದ ಆದೇಶ ಬಂದ ಕೂಡಲೇ, ಬಿಡುಗಡೆಯಾದ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಅವಶ್ಯವಿರುವ ಶಾಲೆಗಳಿಗೆ ನೇಮಕಾತಿ ನಡೆಯಲಿದೆ.ಶೂನ್ಯ ಶಿಕ್ಷಕರು ಇರುವ ಶಾಲೆಗಳಿಗೆ ಇತರ ಶಾಲೆಗಳಿಂದ ಶಿಕ್ಷಕರನ್ನು ಕಾರ್ಯವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಅತಿಥಿ ಶಿಕ್ಷಕರ ನೇಮಕಾತಿ ನಡೆದ ಬಳಿಕ ಅವರ ಜೊತೆಗೆ ಕಾರ್ಯವ್ಯವಸ್ಥೆಯ ಶಿಕ್ಷಕರೂ ಕರ್ತವ್ಯ ನಿರ್ವಹಿಸಲಿದ್ದಾರೆ
-ವಿಷ್ಣುಪ್ರಸಾದ್ ಸಿ. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ
ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಹುದ್ದೆ ಖಾಲಿಯಿದೆ.ಇದಕ್ಕೆ ಅತಿಥಿ ಶಿಕ್ಷಕರ ನೇಮಕವಾಗಲಿದೆ.ಒಂದೇ ಒಂದು ಶಾಲೆಯಲ್ಲಿ ಶಿಕ್ಷಕರ ಕೊರತೆಯಾಗಲು ಬಿಡುವುದಿಲ್ಲ.ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಖಾಲಿಯಿರುವ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕವಾಗಲಿದೆ.ಸರಕಾರ ಈಗಾಗಲೇ ರಾಜ್ಯದಲ್ಲಿ 15,೦೦೦ ಶಿಕ್ಷಕರ ನೇಮಕಾತಿಗೆ ಆದೇಶ ಮಾಡಿದೆ.ಈ ನೇಮಕಾತಿ ಪ್ರಕ್ರಿಯೆಗಳು ನಡೆದ ಬಳಿಕ ಖಾಲಿಯರುವ ಶಾಲೆಗಳಿಗೆ ಖಾಯಂ ಶಿಕ್ಷಕರು ನೇಮಕಗೊಳ್ಳಲಿದ್ದು ಶಿಕ್ಷಕರ ಕೊರತೆ ನಿವಾರಣೆಯಾಗಲಿದೆ
-ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು










