







ಪುತ್ತೂರು: ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣ ಹಾಗೂ ವೃತ್ತಿ ಆಯ್ಕೆಯ ಕುರಿತು ಸಮಗ್ರ ಅರಿವು ಮೂಡಿಸುವ ಉದ್ದೇಶದಿಂದ ಸುದಾನ ಪದವಿ ಪೂರ್ವ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಮೇ 30 ರಂದು ಆಯೋಜಿಸಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರೊ| ವಿವೇಕ್ ರಂಜನ್ ಭಂಡಾರಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸರಿಯಾದ ಮಾರ್ಗದರ್ಶನ, ಸಮರ್ಪಕ ಯೋಜನೆ ಹಾಗೂ ಪರಿಣಾಮಕಾರಿ ಕಾರ್ಯತಂತ್ರಗಳ ಅಗತ್ಯವಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪಾಠ ಪುಸ್ತಕ ಜ್ಞಾನ ಮಾತ್ರ ಸಾಕಾಗದೆ, ಸಮಯ ನಿರ್ವಹಣೆ, ನಿರಂತರ ಅಭ್ಯಾಸ, ಆತ್ಮವಿಶ್ವಾಸ ಮತ್ತು ಸ್ಪಷ್ಟ ಗುರಿಯನ್ನು ಹೊಂದಿರುವುದು ಅತ್ಯಂತ ಮಹತ್ವದ್ದಾಗಿದೆ ಎಂದ ಅವರು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ಸಂದರ್ಭದಲ್ಲಿ ವಿಷಯದ ಆಳವಾದ ಅರಿವು, ನಿಯಮಿತ ಅಭ್ಯಾಸ ಹಾಗೂ ದಿನನಿತ್ಯದ ಅಧ್ಯಯನ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜೊತೆಗೆ, ಮಾನಸಿಕ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವುದು ಹಾಗೂ ಆತ್ಮವಿಶ್ವಾಸದಿಂದ ನಿರಂತರ ಪ್ರಯತ್ನಿಸುವ ಗುಣವೇ ಯಶಸ್ಸಿನ ಮೂಲಮಂತ್ರ ಎಂದು ಹೇಳಿದರು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಸುಪ್ರೀತ್ ಕೆ. ಸಿ. ಮಾತನಾಡಿ, ಸರಿಯಾದ ಮಾರ್ಗದರ್ಶನ ಮತ್ತು ದೃಢಸಂಕಲ್ಪದೊಂದಿಗೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಗಣಕ ವಿಜ್ಞಾನ ಉಪನ್ಯಾಸಕಿ ಶ್ರೀಮತಿ ಧನ್ಯಶ್ರೀ ಸ್ವಾಗತಿಸಿ, ಗಣಕ ವಿಜ್ಞಾನ ಉಪನ್ಯಾಸಕಿ ಶ್ರೀಮತಿ ಶ್ರುತಿ ವಂದಿಸಿದರು. ಇಂಗ್ಲಿಷ್ ಉಪನ್ಯಾಸಕಿ ಶ್ರೀಮತಿ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.










