ಬಾರೆ ಶಾಲೆಗೆ ಹೋಗೋಣ ಬಾ… ರಜಾ ಮುಗಿದ ಬಳಿಕ ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳು

0

ವಿಶೇಷ ವರದಿ : ಸಿಶೇ ಕಜೆಮಾರ್

ಪುತ್ತೂರು: ಬರೋಬ್ಬರಿ ಒಂದೂವರೆ ತಿಂಗಳ ರಜೆಯ ಬಳಿಕ ಮಕ್ಕಳು ಮತ್ತೆ ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ. ರಾಜ್ಯಾದ್ಯಂತ 2026-27 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮೇ.29ರಿಂದ ಶಾಲೆಗಳು ಪುನಃ ಪ್ರಾರಂಭಗೊಂಡಿದ್ದು ಜೂ.01 ರಿಂದ ಅಧಿಕೃತವಾಗಿ ಶಾಲೆಗಳು ಆರಂಭಗೊಳ್ಳುತ್ತಿದೆ. ರಜೆಯ ಬಳಿಕ ಮಕ್ಕಳು ಮತ್ತೆ ಶಾಲೆಗೆ ಮರಳುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಸಿದ್ಧರಾಗಿದ್ದಾರೆ. ಶಿಕ್ಷಣ ಇಲಾಖೆ ಕೂಡ ಮಕ್ಕಳನ್ನು ಸ್ವಾಗತಿಸಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ತಾಲೂಕಿನ ಶಾಲಾ ಪ್ರಾರಂಭೋತ್ಸವವು ಸಾಮೆತ್ತಡ್ಕ ಶಾಲೆಯಲ್ಲಿ ನಡೆಯಲಿದ್ದು ಶಾಸಕರು  ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಶಾಲೆಯ ವಾತಾವರಣ:
ಶಾಲೆ ಆರಂಭದ ದಿನ ಎಲ್ಲಾ ಶಾಲೆಗಳಲ್ಲೂ ಹಬ್ಬದ ವಾತಾವರಣ ಸೃಷ್ಟಿಸಬೇಕು. ಶಾಲೆಯನ್ನು ತಳಿರು ತೋರಣ, ರಂಗೋಲಿಯಿಂದ ಸಿಂಗರಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ. ಒಂದೂವರೆ ತಿಂಗಳ ಕಾಲ ರಜೆಯನ್ನು ಸಂಭ್ರಮಿಸಿ ಮತ್ತೆ ಶಾಲೆ ಸೇರುತ್ತಿರುವ ಮಕ್ಕಳ ಸಂಭ್ರಮವನ್ನು ವೃದ್ಧಿಸುವ ಕೆಲಸವನ್ನು ಶಿಕ್ಷಕರು, ಎಸ್‌ಡಿಎಂಸಿಯವರು ಮಾಡಬೇಕಾಗಿದೆ.

ಮಿಂಚಿನ ಸಂಚಾರ:
ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಮೇಲ್ವಿಚಾರಣಾ ಅಧಿಕಾರಿಗಳು ಖಾತರಿ ಪಡಿಸಲು ಮಿಂಚಿನ ಸಂಚಾರ (ಶಾಲೆಗೆ ಭೇಟಿ) ಕಾರ್ಯಕ್ರಮ ನಡೆಯಲಿದೆ. ಜೂ.1 ರಿಂದ ಈ ಮಿಂಚಿನ ಸಂಚಾರ ಆರಂಭಗೊಳ್ಳಲಿದ್ದು ಜೂನ್ 15ರವರೆಗೆ ನಡೆಯಲಿದೆ. ಶಾಲಾ ವಸ್ತುಸ್ಥಿತಿಯನ್ನು ಅವಲೋಕಿಸುವ ಅಧಿಕಾರಿಗಳ ತಂಡವು ಶಾಲೆ ಮುಖ್ಯ ಶಿಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡುವ ಕೆಲಸ ಆಗಲಿದೆ. ಮಿಂಚಿನ ಸಂಚಾರದಲ್ಲಿ ಶಾಲೆ ಆವರಣ, ಕುಡಿಯುವ ನೀರು, ಬಿಸಿಯೂಟ, ಶೌಚಾಲಯ, ಸಮವಸ್ತ್ರ ಪಠ್ಯಪುಸ್ತಕ, ದಾಖಲಾತಿ ಪರಿಶೀಲನೆಗಳು ನಡೆಯಲಿವೆ. ಜೂನ್ 15ರೊಳಗೆ ಉಪ ನಿರ್ದೇಶಕರು ಶೈಕ್ಷಣಿಕ ವರದಿಯನ್ನು ಆಯುಕ್ತರಿಗೆ ಸಲ್ಲಿಸಬೇಕಾಗಿದೆ.

ದಾಖಲಾತಿ ಆಂದೋಲನ:
ಶಾಲೆಗೆ ಹೋಗದ ಯಾವ ಮಕ್ಕಳು ಕೂಡ ಹೊರಗುಳಿಯಬಾರದು ಎಂಬ ನಿಟ್ಟಿನಲ್ಲಿ ಶಾಲೆಗಳ ದಾಖಲಾತಿ ಆಂದೋಲನ ಪ್ರತಿ ಶಾಲೆಗಳಲ್ಲಿ ಆರಂಭಗೊಂಡಿದೆ. ಸ್ಥಳೀಯಾಡಳಿತ ಸಹಕಾರದೊಂದಿಗೆ ಆಯಾ ವಲಯದ ಸಿಆರ್‌ಪಿ, ಶಾಲಾ ಮುಖ್ಯಗುರುಗಳ ನೇತೃತ್ವದೊಂದಿಗೆ ಆಂದೋಲನ ನಡೆಯಲಿದೆ. ಶಾಲೆಗೆ ಹೋಗದ ಮಕ್ಕಳ ಮನೆ ಭೇಟಿ ಆಳಿನ ಆಧಾರದ ಮೇಲೆ ಮಕ್ಕಳ ಪಾಲಕರಿಗೆ ಪೋಷಕರು ಮಾತನಾಡಿ, ಶಾಲೆಗೆ ಸೇರಿಸುವ ಕೆಲಸ ನಡೆಯಲಿದೆ. ಜೂನ್ ತಿಂಗಳು ಪೂರ್ತಿ ಈ ದಾಖಲಾತಿ ಆಂದೋಲನ ನಡೆಯಲಿದೆ.

ಶಾಲೆಗಳ ಮಾಹಿತಿ:
ಸರ್ಕಾರಿ ಕಿರಿಯ ಪ್ರಾಥಮಿಕ:  27
ಸರ್ಕಾರಿ ಹಿರಿಯ ಪ್ರಾಥಮಿಕ:  150
ಸರ್ಕಾರಿ ಪ್ರೌಢ ಶಾಲೆ: 23
ಅನುದಾನಿತ ಕಿರಿಯ ಪ್ರಾಥಮಿಕ:  0
ಅನುದಾನಿತ ಹಿರಿಯ ಪ್ರಾಥಮಿಕ:  10
ಅನುದಾನಿತ ಪ್ರೌಢ ಶಾಲೆ: 21
​ಅನುದಾನರಹಿತ ಕಿರಿಯ ಪ್ರಾಥಮಿಕ: 3
ಅನುದಾನರಹಿತ ಹಿರಿಯ ಪ್ರಾಥಮಿಕ:  14
ಅನುದಾನರಹಿತ ಪ್ರೌಢ ಶಾಲೆ:  39
ಇತರ ಇಲಾಖೆಯ ಕಿರಿಯ ಪ್ರಾಥಮಿಕ:  0
ಇತರ ಇಲಾಖೆಯ ಹಿರಿಯ ಪ್ರಾಥಮಿಕ:  2
ಇತರ ಇಲಾಖೆಯ ಪ್ರೌಢ ಶಾಲೆ: 3
ಒಟ್ಟು ಶಾಲೆಗಳ ಸಂಖ್ಯೆ:  292
ಕರ್ನಾಟಕ ಪಬ್ಲಿಕ್ ಶಾಲೆ:  2 ಕುಂಬ್ರ ಮತ್ತು ಕೆಯ್ಯೂರು 
ಪಿಎಂ ಶ್ರೀ : 3 ​
ಶಿಕ್ಷಕರ ಸಂಖ್ಯೆ: ಸರ್ಕಾರಿ ಪ್ರಾಥಮಿಕ: 558
ಅನುದಾನಿತ ಪ್ರಾಥಮಿಕ:18
ಅನುದಾನಿತ ಪ್ರೌಢ ಶಾಲೆ:96
ಅನುದಾನಿತ ಪ್ರಾಥಮಿಕ:169
ಒಟ್ಟು ಸರಕಾರಿ ಶಾಲೆಗಳು: 177

ಕರ್ನಾಟಕ ಪಬ್ಲಿಕ್ ಶಾಲೆ:
ತಾಲೂಕಿನಲ್ಲಿ ಕೆಯ್ಯೂರು ಮತ್ತು ಕುಂಬ್ರ 2 ಕರ್ನಾಟಕ ಪಬ್ಲಿಕ್ ಶಾಲೆಗಳಿದ್ದು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 1ನೇ ತರಗತಿ ಆಂಗ್ಲ ಮಾಧ್ಯಮ ಹಾಗೂ ಎಲ್.ಕೆ.ಜಿ ಕೂಡ ಆರಂಭಗೊಂಡಿದೆ.

ಶಾಲೆಯಿಂದ ಹೊರಗುಳಿದ ಮಕ್ಕಳಿದ್ದರೆ ಕರೆ ಮಾಡಿ
5.10 ವರ್ಷದಿಂದ 14 ವರ್ಷದೊಳಗಿನ ಮಕ್ಕಳು ಶಾಲೆಗೆ ಹೋಗದೆ ಹೊರಗುಳಿದಿದ್ದರೆ ಅಥವಾ ಅರ್ಧದಿಂದ ಶಾಲೆ ಬಿಟ್ಟವರಿದ್ದರೆ ಈ ಕೂಡಲೇ ಶಿಕ್ಷಣ ಇಲಾಖೆ ಆಯುಕ್ತಾಲಯ ಶಾಲೆಗೆ ಮುಖ್ಯ ಶಿಕ್ಷಕರಿಗೆ ಅಥವಾ ಶಿಕ್ಷಣ ಸಂಯೋಜಕರಿಗೆ ತಿಳಿಸಬೇಕಾಗಿದೆ. ದೂರವಾಣಿ 9480573184 ಅಥವಾ 5364121953ಗೆ ಕರೆ ಮಾಡುವ ಮೂಲಕ ತಿಳಿಸಬಹುದಾಗಿದೆ.

ಪುಸ್ತಕ, ಯೂನಿಫಾರಂ ವಿತರಣೆ
ಈಗಾಗಲೇ ಎಲ್ಲಾ ಶಾಲೆಗಳಿಗೂ ಯೂನಿಫಾರಂ ವಿತರಣೆಯಾಗಿದ್ದು ಇದಲ್ಲದೇ ಶೇ.85 ರಷ್ಟು ಪುಸ್ತಕ ಕೂಡ ವಿತರಣೆಯಾಗಿದೆ. ಶಾಲಾ ಪ್ರಾರಂಭೋತ್ಸವದ ದಿನ ಮಕ್ಕಳಿಗೆ ಪುಸ್ತಕ ಮತ್ತು ಯೂನಿಫಾರಂ ವಿತರಣೆ ನಡೆಯಲಿದೆ. ಇದಲ್ಲದೆ ಮಧ್ಯಾಹ್ನ ಸಿಹಿ ಭೋಜನದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.

ದ್ವಿಭಾಷಾ ಕಲಿಕಾ ಪದ್ದತಿ
ವಿಶೇಷವಾಗಿ ನಲಿಕಲಿ ಶಿಕ್ಷಣ ಪದ್ದತಿಯನ್ನು ಈ ಶೈಕ್ಷಣಿಕ ವರ್ಷದಿಂದ ಬದಲಾಯಿಸಿಕೊಂಡು ದ್ವಿಭಾಷಾ ಕಲಿಕಾ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಈ ದ್ವಿಭಾಷಾ ಕಲಿಕಾ ಪದ್ಧತಿಯಲ್ಲಿ 1ರಿಂದ 5 ನೇ ತರಗತಿಯವರೇಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಈ ಮೂಲಕ ಎಲ್ಲಾ ಸರಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣ ವಿದ್ಯಾರ್ಥಿಗಳಿಗೆ 1 ನೇ ತರಗತಿಯಿಂದಲೇ ದೊರೆಯಲಿದೆ.

“ ಎಂದಿನಂತೆ ಮೇ.29ರಿಂದ ಶಾಲೆಗಳು ಆರಂಭಗೊಂಡಿದ್ದು ಸರಕಾರದ ಆದೇಶದಂತೆ ಜೂ.1 ರಿಂದ ಶಾಲಾ ಪ್ರಾರಂಭೋತ್ಸವ ನಡೆಯುತ್ತಿದೆ. ಜೂ.01ರಿಂದ 15 ರವರೇಗೆ ಮಿಂಚಿನ ಸಂಚಾರ(ಶಾಲೆಗೆ ಭೇಟಿ) ನಡೆಯಲಿದೆ. ಯೂನಿಫಾರಂ ಹಾಗೇ ಶೇ.85ರಷ್ಟು ಪುಸ್ತಕಗಳು ಶಾಲೆಗಳಿಗೆ ಬಂದಿದೆ. ವಿತರಣೆ ನಡೆಯಲಿದೆ.ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಶಿಕ್ಷಣ ಸಂಯೋಜಕರಿಗೆ ಕೂಡಲೇ ಮಾಹಿತಿ ನೀಡುವುದು. ಸರಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳ, ಶಿಕ್ಷಣ ಪ್ರೇಮಿಗಳ ಹಾಗೇ ಊರವರ, ಪೋಷಕರ ಸಹಕಾರ ಅಗತ್ಯ.”
– ಮೋನಪ್ಪ ಬಿ.ಪೂಜಾರಿ , ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪುತ್ತೂರು

LEAVE A REPLY

Please enter your comment!
Please enter your name here