ಸೂರಿಕುಮೇರು: ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ – ಬಾಲಕಿ‌ ಮೃತ್ಯು

0

ವಿಟ್ಲ: ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪುಟ್ಟ ಬಾಲಕಿಯೋರ್ವರು ಧಾರುಣವಾಗಿ ಮೃತಪಟ್ಟ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರು ಎಂಬಲ್ಲಿ ಜೂ.3ರಂದು ಸಾಯಂಕಾಲ ನಡೆದಿದೆ.


ಅಪಘಾತದಿಂದಾಗಿ ಬಾಳ್ತಿಲ ಗ್ರಾಮದ ಹೇಮಂತ್ ಕುಮಾರ್ ಎಂಬವರ ಪುತ್ರಿ ನೈರುತಿ ಎಂ. ಸುವರ್ಣ (10 ವ.) ಮೃತಪಟ್ಟ ಬಾಲಕಿ.


ಜೂ.3ರಂದು ಸಾಯಂಕಾಲ ಈ ಘಟನೆ ನಡೆದಿದ್ದು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿಯ ವೇಳೆ ಅವರು ಮೃತಪಟ್ಟಿದ್ದಾರೆ. ನೆಟ್ಲ ಸದಾಶಿವ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಪತ್ನಿ ಮತ್ತು ಮಕ್ಕಳಾದ ನೈರುತಿ ಮತ್ತು ಆಕೆಯ ತಂಗಿಯೊಂದಿಗೆ ಮನೆಗೆ ತೆರಳುತ್ತಿದ್ದ ವೇಳೆ ಹೇಮಂತ್ ಅವರಿದ್ದ ಬೈಕ್ ಗೆ ಸ್ಕೂಟರ್ ಒಂದು ಡಿಕ್ಕಿ ಹೊಡೆದಿದೆ. ಸೂರಿಕುಮೇರು ಸಮೀಪ ಈ ಘಟನೆ ನಡೆದಿದೆ. ಡಿಕ್ಕಿ ಹೊಡೆದ ಪರಿಣಾಮ, ಕಾಂಕ್ರೀಟ್ ರಸ್ತೆಗೆ ನೈರುತಿ ಬಿದ್ದಿದ್ದಾಳೆ. ಈ ಸಂದರ್ಭ ತಲೆಗೆ ಗಂಭೀರ ಪೆಟ್ಟಾಗಿದೆ. ಕೂಡಲೇ ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ವೇಳೆ ಆಕೆ ಮೃತಪಟ್ಟಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ನೈರುತಿ ಸ್ಥಳೀಯ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದರು. ಉತ್ತಮ ಭಜನಾಪಟುವೂ ಆಗಿದ್ದು, ಭಜನಾ ತರಬೇತಿಯನ್ನೂ ಪಡೆಯುತ್ತಿದ್ದರು. ಸ್ಥಳಕ್ಕೆ ಬಂಟ್ವಾಳ ಸಂಚಾರಿ‌ ಠಾಣಾ ಎಸ್.ಐ. ಆದರ್ಶ್ ಸಹಿತ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here