ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಹರಕೆ ಘಂಟೆಗಳ ವಿಲೇವಾರಿಗೆ ಚಾಲನೆ- 70 ಟನ್ ಘಂಟಾಮಣಿ | 3.51 ಕೋಟಿ ರೂ.ಗೆ ಹರಾಜು

0

ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಕಳೆದ ಆರು ವರ್ಷಗಳಿಂದ ಆಡಳಿತಾತ್ಮಕ ಹಾಗೂ ತಾಂತ್ರಿಕ ಕಾರಣಗಳಿಂದ ವಿಲೇವಾರಿಯಾಗದೆ ದಾಸ್ತಾನಾಗಿದ್ದ ಸುಮಾರು 70 ಸಾವಿರ ಕೆ.ಜಿ.ಯಷ್ಟಿರುವ ಕಂಚಿನ ಹರಕೆ ಘಂಟಾಮಣಿಗಳ ವಿಲೇವಾರಿಗೆ ಜೂ.4ರಂದು ಅಧಿಕೃತ ಚಾಲನೆ ನೀಡಲಾಗಿದೆ.

ಕ್ಷೇತ್ರದಲ್ಲಿ ದಾಸ್ತಾನು ಇರಿಸಲಾಗಿದ್ದು ಸುಮಾರು 70 ಟನ್ ತೂಕದ ಘಂಟಾಮಣಿಗಳು 3,51,16,900 ರೂ.ಕ್ಕೆ ಹರಾಜಾಗಿದೆ. ಧಾರವಾಡದ ಈಶ್ವರ್ ಲಾಲ್ ಕನ್ಯಾಲಾಲ್ ಅಗ್ನಿಹೋತ್ರಿ ಅವರು ಅತಿ ಹೆಚ್ಚು ಬಿಡ್ಡು ಸಲ್ಲಿಸಿದ ಟೆಂಡರ್‌ದಾರರಾಗಿದ್ದು, 1 ಕೆ.ಜಿ.ಗೆ 425.14 ದರ ನಿಗದಿಪಡಿಸಲಾಗಿದೆ. ಶೇ.18 ಜಿಎಸ್ಟಿ ಸೇರಿ ಕಿಲೋಗ್ರಾಂಗೆ 501.67 ರಂತೆ ಒಟ್ಟು 3.51 ಕೋಟಿ ಮೊತ್ತಕ್ಕೆ ಘಂಟಾಮಣಿಗಳು ಮಾರಾಟಗೊಂಡಿವೆ. ಟೆಂಡರ್‌ದಾರರು ಏ.10 ಹಾಗೂ ಮೇ 5ರಂದು ಎರಡು ಕಂತುಗಳಲ್ಲಿ ಸಂಪೂರ್ಣ ಮೊತ್ತವನ್ನು ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾರೆ. ದೇವಸ್ಥಾನದ ಇತಿಹಾಸದಲ್ಲೇ ಇದೊಂದು ಅತಿ ದೊಡ್ಡ ವಿಲೇವಾರಿ ಪ್ರಕ್ರಿಯೆಯಾಗಿ ದಾಖಲಾಗಿದೆ.


ಜೂ.4ರಂದು ಬೆಳಗ್ಗಿನಿಂದಲೇ ವಿಲೇವಾರಿ ಕಾರ್ಯ ಆರಂಭಗೊಂಡಿದ್ದು, ಸುಮಾರು 2,800 ಬ್ಯಾಗ್‌ಗಳಲ್ಲಿ ಸಂಗ್ರಹಿಸಲಾಗಿದ್ದ ಘಂಟಾಮಣಿಗಳನ್ನು 3 ಲಾರಿಗಳಿಗೆ ತುಂಬಿಸಿ ಸಾಗಿಸುವ ಕಾರ್ಯ ನಡೆದಿದೆ. ಸಂಪೂರ್ಣ ಪ್ರಕ್ರಿಯೆಯನ್ನು ಪಾರದರ್ಶಕವಾಗಿಡುವ ಉದ್ದೇಶದಿಂದ ಉಪ್ಪಿನಂಗಡಿ ಸಮೀಪದ ಮಠದಲ್ಲಿರುವ ಅಶೋಕ್ ಅವರ ಮಾಲಕತ್ವದ ವೇ ಬ್ರಿಡ್ಜ್ ನಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ತೂಕ ಪರಿಶೀಲನೆ ನಡೆಸಲಾಯಿತು. ಮೊದಲು ಖಾಲಿ ಲಾರಿಯ ತೂಕ ದಾಖಲಿಸಿ, ಬಳಿಕ ಘಂಟಾಮಣಿಗಳನ್ನು ತುಂಬಿದ ನಂತರ ಮರು ತೂಕ ಮಾಡುವ ಮೂಲಕ ನಿಖರ ತೂಕವನ್ನು ಖಚಿತಪಡಿಸಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಂಪೂರ್ಣ ಪ್ರಕ್ರಿಯೆಯ ವಿಡಿಯೋ ಚಿತ್ರೀಕರಣವೂ ನಡೆದಿದ್ದು ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲಾಗಿದೆ.

ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶದಂತೆ ವಿಲೇವಾರಿ ಪ್ರಕ್ರಿಯೆ ನಡೆದಿದೆ. ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಪ್ರವೀಣ್, ತೂಕ ಮತ್ತು ಮಾಪನ ಇಲಾಖೆಯ ನಿರೀಕ್ಷಣಾಧಿಕಾರಿ ನರೇಂದ್ರ, ದೇವಸ್ಥಾನದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಸದಸ್ಯರಾದ ವಿಶ್ವನಾಥ ಕೊಲ್ಲಾಜೆ, ಗಣೇಶ್ ಕಾಶಿ ಮತ್ತು ಸಮಿತಿಯ ಸದಸ್ಯರು ಹಾಗೂ ದೇವಸ್ಥಾನದ ಸಿಬ್ಬಂದಿಗಳ ಸಮ್ಮುಖದಲ್ಲಿ ವಿಲೇವಾರಿ ಪ್ರಕ್ರಿಯೆ ನಡೆದಿದೆ. ಘಂಟಾಮಣಿಗಳ ಮಾರಾಟದಿಂದ ಬಂದಿರುವ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಲು ಆಡಳಿತ ಸಮಿತಿ ನಿರ್ಧಾರ ಕೈಗೊಂಡಿದೆ.

ನಮ್ಮ ಕೆಲಸಗಳೇ ಉತ್ತರ ನೀಡುತ್ತವೆ;
ಹರಾಜು ಮೌಲ್ಯ ರೂ.3 ಕೋಟಿಗೂ ಅಧಿಕವಾಗಿರುವುದರಿಂದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಅನುಮೋದನೆ ಪಡೆದು ನಿಯಮಾನುಸಾರ ವಿಲೇವಾರಿ ಪ್ರಕ್ರಿಯೆ ನಡೆಸಲಾಗಿದೆ. ಕೆಲವರು ಅನಗತ್ಯ ಆರೋಪಗಳನ್ನು ಮಾಡುತ್ತಿದ್ದರೂ ನಮ್ಮ ಕೆಲಸಗಳೇ ಉತ್ತರ ನೀಡುತ್ತವೆ. 70 ಸಾವಿರ ಕೆ.ಜಿ.ಯಷ್ಟಿದ್ದ ಘಂಟಾಮಣಿಗಳ ವಿಲೇವಾರಿ ದೇವಸ್ಥಾನದ ಇತಿಹಾಸದಲ್ಲಿ ಮಹತ್ವದ ಘಟ್ಟವಾಗಿದೆ. ಬಂದ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಸದ್ಬಳಕೆ ಮಾಡಲಾಗುತ್ತದೆ.

ಸುಬ್ರಹ್ಮಣ್ಯ ಶಬರಾಯ, ಅಧ್ಯಕ್ಷರು
ಸೌತಡ್ಕ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ

LEAVE A REPLY

Please enter your comment!
Please enter your name here