






ಪುತ್ತೂರು: ಪುಣಚ ಗ್ರಾಮದ ದಲಿತ ಕುಟುಂಬಕ್ಕೆ ಹಕ್ಕುಪತ್ರ ವಿತರಣೆಯ ವಿಳಂಬ ಖಂಡಿಸಿ ಬಂಟ್ವಾಳ ತಾಲೂಕು ಕಚೇರಿ ಮುಂಭಾಗ ನಡೆದ ಪ್ರತಿಭಟನೆಗೆ ನಾವು ಬಿಜೆಪಿಯವರನ್ನು ಕರೆದಿಲ್ಲ ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಅಧ್ಯಕ್ಷ ಗಿರಿಧರ್ ನಾಯ್ಕ್ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಸ್ಪಷ್ಟನೆ ನೀಡಿದ್ದಾರೆ.


ಸೋಮವಾರ ಶಾಸಕರ ಕಚೇರಿಗೆ ಭೇಟಿ ನೀಡಿದ ಗಿರಿಧರ್ ನಾಯ್ಕ್, “ಪುಣಚ ದಲಿತ ಕುಟುಂಬಕ್ಕೆ ಹಕ್ಕುಪತ್ರ ನೀಡುವಲ್ಲಿ ಆಗುತ್ತಿರುವ ವಿಳಂಬದ ವಿರುದ್ಧ ನಾವು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯಡಿ ಧರಣಿ ನಡೆಸಿದೆವು. ಧರಣಿಯ ಮರುದಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಬಿಜೆಪಿಯವರನ್ನು ಕರೆದುಕೊಂಡು ಬಂದು ಅಲ್ಲಿ ಕೂರಿಸಿದ್ದಾರೆ. ನಾವು ಯಾರನ್ನೂ ಕರೆದಿಲ್ಲ, ಫಲಾನುಭವಿಗಳೂ ಕರೆದಿಲ್ಲ” ಎಂದು ತಿಳಿಸಿದರು.



“ನಮ್ಮ ಜೊತೆ ಕೂತುಕೊಂಡರೆ ಏನು ಮಾಡುವುದು? ಅಲ್ಲಿ ಕೂತವರು ಯಾವುದೇ ಪಕ್ಷದ ಕಾರ್ಯಕರ್ತರಲ್ಲ. ನಾನು ಕೂಡಾ ಬಿಜೆಪಿಯಲ್ಲ, ನಾನು ಅಪ್ಪಟ ಕಾಂಗ್ರೆಸ್ಸಿಗ. ಇವತ್ತಿಗೂ ಕಾಂಗ್ರೆಸ್ಸಿಗನಾಗಿಯೇ ಇದ್ದೇನೆ. ಅವರು ಬಂದು ಸೇರಿದ್ದಕ್ಕೂ ನಮ್ಮ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ” ಎಂದು ಅವರು ಹೇಳಿದರು.
“ನಾವು ಶಾಸಕರ ವಿರುದ್ಧ ಪ್ರತಿಭಟನೆ ಮಾಡಿಲ್ಲ, ಕಂದಾಯ ಇಲಾಖೆಯ ವಿಳಂಬಧೋರಣೆಯ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ” ಎಂದು ಶಾಸಕರಿಗೆ ಸ್ಪಷ್ಟಪಡಿಸಿದರು. ಇದೇ ವೇಳೆ ಮುಂಡೂರಿನ ದಾರಿ ಸಮಸ್ಯೆ ಬಗ್ಗೆ ಗಿರಿಧರ್ ನಾಯ್ಕ್ ಶಾಸಕರಿಗೆ ಮನವಿ ಸಲ್ಲಿಸಿದರು. ಮನವಿಗೆ ಶಾಸಕರು ಸೂಕ್ತ ಸ್ಪಂದನೆ ನೀಡಿದ್ದಾರೆ.










