ಇಳಂತಿಲ ದರೋಡೆ ಪ್ರಕರಣ : ಆರೋಪಿಗಳಿಗೆ ಮೂರು ವರ್ಷ ಕಠಿಣ ಶಿಕ್ಷೆ ; ದಂಡ ವಿಧಿಸಿ ಕೋರ್ಟ್ ತೀರ್ಪು

0

ಪುತ್ತೂರು: ಇಳಂತಿಲ ಗ್ರಾಮದ ರಿಫೈನ್ ನಗರದ ಮೇದಾರ ಬೆಟ್ಟುವಿನ ಪ್ರಯಾಣಿಕರ ತಂಗುದಾಣ ಮತ್ತು ಗೂಡಂಗಡಿಯ ಮದ್ಯದ ಖಾಲಿ ಜಾಗದಲ್ಲಿ 20-03-2023ರಂದು ನಡೆದ 10ಲಕ್ಷ ದರೋಡೆ ಪ್ರಕರಣ ಸಂಬಂದ ಇಬ್ಬರು ಆರೋಪಿಗಳಿಗೆ ಬೆಳ್ತಂಗಡಿ ಕೋರ್ಟ್ ಮೂರುವರ್ಷದ ಕಾರಾಗೃಹ ಶಿಕ್ಷೆ ಮತ್ತು ಒಟ್ಟು 20ಸಾವಿರ ದಂಡ ವಿಧಿಸಿದೆ.

ಪ್ರಕರಣದ ವಿವರ
20-03-2023ರಂದು ಮಧ್ಯಾಹ್ನ 3 ಗಂಟೆಗೆ ಇಳಂತಿಲ ಗ್ರಾಮದ ರಿಫೈನ್ ನಗರದ ಮೇದಾರ ಬೆಟ್ಟುವಿನ ಪ್ರಯಾಣಿಕರ ತಂಗುದಾಣ ಮತ್ತು ಗೂಡಂಗಡಿಯ ಮಧ್ಯದ ಖಾಲಿ ಜಾಗದಲ್ಲಿ ಈ ಘಟನೆ ನಡೆದಿತ್ತು. ಇಳಂತಿಲ ಕಾಯರ್ಪಾಡಿ ನಿವಾಸಿ ಮಹಮ್ಮದ್ ಕೆ ಅವರು ತಮ್ಮ ಮಗಳ ಮದುವೆಗಾಗಿ ಸಾಲ ರೂಪದಲ್ಲಿ ಸಂಗ್ರಹಿಸಿಟ್ಟಿದ್ದ ₹10 ಲಕ್ಷ ಹಣವನ್ನು ಸ್ಕೂಟರ್‌ನ ಸೀಟಿನಡಿ ಇಡುವಾಗ, ಹಿಂದಿನಿಂದ ಬಂದ ರಿಫೈನ್ ನಗರ ಕಡವಿನ ಬಾಗಿಲು ನಿವಾಸಿ ರಾಜೀಮ್ ಎಂಬಾತ ಹಣದ ಕಟ್ಟನ್ನು ದರೋಡೆ ಮಾಡಿ, ಕೊಕ್ಕಡದ ಮುಸ್ತಾಫ ಎಂಬಾತನಿಗೆ ನೀಡಿದ್ದ. ಈ ಬಗ್ಗೆ ಮಹಮ್ಮದ್ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆಗಿನ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್ ತನಿಖೆ ನಡೆಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಬೆಳ್ತಂಗಡಿ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಮನು ಬಿ.ಕೆ ಅವರು, ದರೋಡೆ ನಡೆಸಿದ ರಾಜೀಮ್ ಮತ್ತು ಸಹಕರಿಸಿದ ಮುಸ್ತಾಫರನ್ನು ದೋಷಿಗಳು ಎಂದು ತೀರ್ಮಾನಿಸಿ ತಲಾ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು ₹20 ಸಾವಿರ ದಂಡ ವಿಧಿಸಿದ್ದಾರೆ. ದಂಡದ ಮೊತ್ತದಲ್ಲಿ 10 ಸಾವಿರವನ್ನು ದೂರುದಾರ ಮಹಮ್ಮದ್ ಅವರಿಗೆ ನೀಡಲು ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here