






ಪುತ್ತೂರು:ಇಲ್ಲಿನ ಬಪ್ಪಳಿಗೆ ಸಮೀಪ ಕತ್ತಿಯಿಂದ ಕಡಿದು ಹಲ್ಲೆ ಮಾಡಿ ಬೆದರಿಕೆಯೊಡ್ಡಿದ್ದ ಆರೋಪಿಗಳಿಬ್ಬರಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.


ಬಪ್ಪಳಿಗೆ ಅರ್ಬಿ ನಿವಾಸಿ ಶಾಲಿನಿ ಎಂಬವರು ನೀಡಿದ್ದ ದೂರಿನ ಮೇರೆಗೆ ಚಿಕ್ಕಮಗಳೂರು ಮೂಲದ ಚಂದ್ರಶೇಖರ್ (44ವ.) ಮತ್ತು ಲತಾ (39ವ.)ಎಂಬವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.



ಮಳೆಯ ಕಾರಣದಿಂದ ತಮ್ಮ ಜಾಗದ ಮೇಲಿನ ಅಪರ್ಣ ಎಂಬವರ ಜಾಗದಿಂದ ಮಳೆನೀರು ತಮ್ಮ ಜಮೀನಿಗೆ ಬಂದಿದ್ದರ ಕುರಿತು ಅಪರ್ಣ ಅವರ ಜಾಗವನ್ನು ನೋಡಿಕೊಳ್ಳುವ ಲತಾ ಮತ್ತು ಚಂದ್ರಶೇಖರರೊಂದಿಗೆ ಹೇಳಿದಾಗ, ಈ ಬಗ್ಗೆ ನಮಗೇನೂ ಗೊತ್ತಿಲ್ಲ. ಮಣ್ಣು ನಾವು ನಿಮ್ಮ ಜಾಗಕ್ಕೆ ಹಾಕಿರುವುದಿಲ್ಲ ಎಂದು ಹೇಳಿದ್ದರು. ಮೇ 10ರಂದು ಸಂಜೆ ವೇಳೆ ನಾನು ಮತ್ತು ನೆರೆಯವರು ಸೇರಿ ಮಣ್ಣು ತೆಗೆಯುತ್ತಿದ್ದ ಸಂದರ್ಭ ಲತಾ ಮತ್ತು ಚಂದ್ರಶೇಖರ ಅವರು ಕತ್ತಿ ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು,ಕತ್ತಿಯಿಂದ ಹಲ್ಲೆ ಮಾಡಿ ಬೆದರಿಕೆಯೊಡ್ಡಿದ್ದಾಗಿ ಶಾಲಿನಿಯವರು ದೂರಿನಲ್ಲಿ ಆರೋಪಿಸಿದ್ದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಆರೋಪಿಗಳಾದ ಲತಾ ಮತ್ತು ಚಂದ್ರಶೇಖರ ಅವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ವಕೀಲರಾದ ಮಾಧವ ಪೂಜಾರಿ,ರಾಕೇಶ್ ಬಲ್ನಾಡು, ನಿಶಾ ಕುಮಾರಿ ಎಚ್.ವಾದಿಸಿದ್ದರು.










