







ಪುತ್ತೂರು: ಜೂ.18ರಿಂದ ಹಾರಾಡಿ ರೈಲ್ವೆ ಸೇತುವೆ ಬಳಿ, ರಸ್ತೆಯ ಕಾಮಗಾರಿ ಆರಂಭವಾಗುವುದರಿಂದ, ಆ ರಸ್ತೆಯಲ್ಲಿ ಸಂಚರಿಸುವ ವಾಹನಗಳು, ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೋಟೆಚ ಹಾಲ್ ಬಳಿ ಹಾದು ಹೋಗುವ, ಎಪಿಎಂಸಿ ರೆಸ್ತೆಯನ್ನು ಪರ್ಯಾಯ ಮಾರ್ಗವಾಗಿ ಬಳಸುವಂತೆ ಆದೇಶ ಹೊರಡಿಸಲಾಗಿದೆ. ಆದರೆ ಈ ರಸ್ತೆಯಲ್ಲಿ ಮುನ್ನೆಚ್ಚರಿಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ನ್ಯಾಯವದಿ ನೂರುದ್ದೀನ್ ಸಾಲ್ಮರ ಅವರು ಆಗ್ರಹಿಸಿ ಪುತ್ತೂರು ಸಹಾಯಕ ಕಮೀಷನರ್ಗೆ ಮನವಿ ಸಲ್ಲಿಸಿದ್ದಾರೆ.





ಪರ್ಯಾಯ ರಸ್ತೆ ಎಪಿಎಂಸಿ ಆವರಣಕ್ಕೆ ತಾಗಿರುವ ಎರಡು ಭಾಗದ ಅಂದರೆ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯ ರಸ್ತೆಯಲ್ಲಿ ಪಾದಾಚಾರಿಗಳಿಗೆ, ಶಾಲಾ ಮಕ್ಕಳಿಗೆ ನಡೆದುಕೊಂಡು ಹೋಗಲು ವ್ಯವಸ್ಥೆಗಳು ಇರುವುದಿಲ್ಲ. ಈ ಹಿಂದೆ ಈ ಭಾಗದಲ್ಲಿ, ಪಾದಾ ಚಾರಿಗಳು ಸಂಚರಿಸುತ್ತಿದ್ದ ಸ್ಥಳವನ್ನು ಕುಡಿಯುವ ನೀರಿನ ಯೋಜನೆ (ಜಲ ಸಿರಿ)ಗೆ ಪೈಪು ಅಳವಡಿಸುವ ಸಂದರ್ಭ ಅಗೆದು ಹಾಕಿ, ಅದರ ಸಮರ್ಪಕ ಕೆಲಸ ಮಾಡಿ, ಸಮತಟ್ಟು ಮಾಡದ ಕಾರಣ ಪಾದಾಚಾರಿ ರಸ್ತೆಗಳು ಇಲ್ಲ ವಾಗಿವೆ. ಈ ಭಾಗದ ಎರಡು ಕಡೆಯ ರಸ್ತೆಗಳ ಅಂಚಿನಲ್ಲಿ, ಪೊದೆಗಿಡಗಳು ಬೆಳೆದು ಅದನ್ನು ಸಂಬಂಧಪಟ್ಟ ಇಲಾಖೆಯವರು ,ತೆಗೆಯದ ಕಾರಣ ಪಾದಾಚಾರಿಗಳಿಗೆ ನಡೆಯಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲ ಈ ಭಾಗದ ರಸ್ತೆಗಳು ಅಗಲ ಕಿರಿದ್ದಾಗಿದ್ದು, ಅದರಲ್ಲೂ ಎಪಿಎಂಸಿ ಬಳಿ ಇರುವ (ಮಸ್ಜಿದ್ ಪಕ್ಕ,) ರಸ್ತೆಯ ಅಗಲ ತೀರಾ ಕಡಿಮೆ ಹಾಗೂ ಇಳಿಜಾರಿನಿಂದ ಕೂಡಿರುತ್ತದೆ. ಮಸ್ಜಿದ್ ನ ಎದುರು ಇರುವ ರಸ್ತೆಯು ಸಣ್ಣ ತಿರುವಿನಿಂದ ಕೂಡಿದ್ದು, ಅದೇ ರಸ್ತೆಯ ಅಂಚಿನಲ್ಲಿ ಹಲವಾರು ಸಮಯದಿಂದ ಕಾಮಗಾರಿಗೊಳ್ಳದೆ, ಬಾಯಿ ತೆರಿದಿರುವ ಗುಂಡಿಯೊಂದು ಇದ್ದು, ಹಲವಾರು ಸಲ ಅಪಘಾತವಾದರೂ, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಯಾವುದೇ ಕ್ರಮ ವಹಿಸಿಲ್ಲ. ರಸ್ತೆಯ ಎರಡು ಬದಿಯಲ್ಲಿರುವ ಗಿಡ ಪೊಡೆಗಳನ್ನು ತೆರವು ಮಾಡದೆ ಇರುವುದರಿಂದ, ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಗಳಿಗೆ, ರಸ್ತೆವು ಸರಿಯಾಗಿ ಕಾಣುತ್ತಿಲ್ಲ.
ಈ ರಸ್ತೆಯಲ್ಲಿ ಈಗಾಗಲೇ ವಾಹನ ದಟ್ಟಣೆ ಅಧಿಕವಾಗಿದ್ದು,ದಿನಪ್ರತಿ ನೂರಾರು ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು, ನಡೆದುಕೊಂಡು ಹೋಗುತ್ತಿರಬೇಕಾದರೆ, ಹಾರಾಡಿ ರಸ್ತೆ ಮುಚ್ಚಲ್ಪಟ್ಟ ನಂತರ ಈ ರಸ್ತೆಯಲ್ಲಿ ವಾಹನಗಳ ದಟ್ಟಣೆ ಮತ್ತಷ್ಟು ಹೆಚ್ಚಳವಾಗುವುದರಿಂದ ಪಾದಾಚಾರಿಗಳು ನಡೆದುಕೊಂಡು ಹೋಗಲಾರದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗೂ ಈ ರಸ್ತೆಯು ಅಪಾಯಕ್ಕೆ ಕಟ್ಟಿಟ್ಟ ಬುತ್ತಿಯಾಗಿ ಮಾರ್ಪಾಟು ಗೊಳ್ಳುತ್ತದೆ. ಮಾತ್ರವಲ್ಲ ಎಪಿಎಂಸಿ ರಸ್ತೆ ಹಾದುಹೋಗುವ ಸಾಲ್ಮರ ರೈಲ್ವೆ ಅಂಡರ್ ಬ್ರಿಜ್ ಕಾಮಗಾರಿ ಪೂರ್ತಿಗೊಂಡು ವರುಷಗಳೆ ಕಳೆದರೂ, ಈ ರಸ್ತೆ ದ್ವಿಮುಖವಾದರೂ, ರಸ್ತೆಯ ಮತ್ತೊಂದು ಭಾಗ ತೆರೆದುಕೊಳ್ಳದೆ ಇರುವುದರಿಂದ, ಅಪಾಯಕಾರಿ ತಿರುವಿನಿಂದ ಕೂಡಿರುವ ಈ ರಸ್ತೆಯು ಏಕಮುಖ ರಸ್ತೆಯಾಗಿ ಮಾರ್ಪಟ್ಟು, ಇಲ್ಲಿ ಹಲವಾರು ಬಾರಿ ಅಪಘಾತ ಸಂಭವಿಸಿದರೂ, ಪತ್ರಿಕೆಗಳಲ್ಲಿ ಈ ಬಗ್ಗೆ ವರದಿಗಳು ಬಂದರೂ ಸಂಬಂಧಪಟ್ಟ ಇಲಾಖೆಯವರು ಈ ರಸ್ತೆಯನ್ನು ಪೂರ್ತಿ ಮಾಡಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಕ್ಕೆ ಯಾವುದೇ ಮನಸ್ಸು ಮಾಡಿಲ್ಲ. ರೈಲ್ವೆ ಅಂಡರ್ ಪಾಸ್ ಬಳಿ ಇರುವ ರಸ್ತೆಯಲ್ಲಿ ಯಾವುದೇ ವಿದ್ಯುತ್ ದೀಪದ ಸೌಲಭ್ಯಗಳು ಕಲ್ಪಿಸದೆ ಇರುವುದರಿಂದ, ಈ ಭಾಗದಲ್ಲಿ ರಾತ್ರಿ ಸಮಯ ಪಾದಾಚಾರಿಗಳು ಬಹಳ ಕಷ್ಟ ಹಾಗೂ ಹೆದರಿಕೆಯಿಂದ ಸಾಗುವಂತಾಗಿದೆ.
ಅದೇ ರೀತಿ ಈ ರಸ್ತೆಯ ಆದರ್ಶ ಆಸ್ಪತ್ರೆಯ ಬಳಿ ಸುಮಾರು ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ, ರಸ್ತೆಯ ಎರಡು ಕಡೆಯಲ್ಲಿ ಸಮರ್ಪಕ ನೀರು ಹರಿದುಹೋಗುವ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಳೆಗಾಲದಲ್ಲಿ ಈ ರಸ್ತೆಯು ಸಂಪೂರ್ಣ ಜಲಾವೃತವಾಗಿ ವಾಹನಗಳು ಸಂಚರಿಸಲು ಸಾಧ್ಯವಾಗುವುದಿಲ್ಲ. ಈ ಎಲ್ಲಾ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳದೆ ಏಕಾಏಕಿ ಈ ರಸ್ತೆಯನ್ನು ಪರ್ಯಾಯ ರಸ್ತೆಯವಾಗಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಿದ ಕಾರಣ,ಇಲಾಖೆಗಳ ಬೇಜವಾಬ್ದಾರಿ ಹಾಗೂ ಸಾರ್ವಜನಿಕ ಕೆಲಸ ನಿರ್ವಹಣೆ ಕೊರತೆಯಿಂದ ಮಾನವ ಜೀವಕ್ಕೆ ಅಪಾಯವಾದರೆ, ಇದರ ಹೊಣೆ ಹೊರಬೇಕಾಗದಿತು. ದುರಂತ ಸಂಭವಿಸುವ ಮೊದಲು ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಎಚ್ಚರ ವಹಿಸಿ, ಸೂಕ್ತ ಕ್ರಮ ಜರುಗಿಸಲು,ಸಾರ್ವಜನಿಕರ ಪರವಾಗಿ, ಪುತ್ತೂರಿನ ನ್ಯಾಯವಾದಿ ಮತ್ತು ನೋಟರಿ ನೂರುದ್ದೀನ್ ಸಾಲ್ಮರವರು, ಪುತ್ತೂರು ಉಪವಿಭಾಗ ಸಹಾಯಕ ಕಮಿಷನ್ ರವರನ್ನು ಮನವಿ ಮೂಲಕ ಒತ್ತಾಯಿಸಿರುತ್ತಾರೆ.









