






ಪುತ್ತೂರು: ಪುತ್ತೂರಿನ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾಗಿ ಮೈಸೂರಿನಿಂದ ನೂತನವಾಗಿ ಆಗಮಿಸಿರುವ ರಮ್ಯ ಆರ್ ಅವರಿಗೆ ಪುತ್ತೂರು ವಕೀಲರ ಸಂಘದಿಂದ ಸ್ವಾಗತ ಕಾರ್ಯಕ್ರಮವು ಜೂ. 18ರಂದು ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ನಡೆಯಿತು.


ನೂತನ ನ್ಯಾಯಾಧೀಶರನ್ನು ಸ್ವಾಗತಿಸಿ,ಗೌರವಿಸಿದ ಐದನೇ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಮಾತನಾಡಿ, ನೂತನ ನ್ಯಾಯಾಧೀಶೆ ರಮ್ಯ ಅವರು ಮೈಸೂರಿನಲ್ಲಿ ಪ್ರಾಕ್ಟೀಸ್ ಮಾಡಿದ, ಅನುಭವೀ ಪರಿಪೂರ್ಣ ನ್ಯಾಯಾಧೀಶರಾಗಿದ್ದಾರೆ. ಪುತ್ತೂರಿನಲ್ಲಿ ವಿಶೇಷ ಅನುಭವ ದೊರೆಯಲಿದೆ. ನ್ಯಾಯಾಂಗ ವಿಭಾಗದಲ್ಲಿ ಪ್ರತಿನಿತ್ಯ ಕಲಿಯಲಿಕ್ಕಿದೆ. ಹೊಸದಾಗಿ ಆಗಮಿಸಿದ ನ್ಯಾಯಾಧೀಶರಿಗೆ ಹಿರಿಯ ವಕೀಲರ ಸಹಕಾರ ಅಗತ್ಯ ಎಂದರು.



ಏಳನೇ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ ಸುಮಂಗಳ ಮಾತನಾಡಿ, ಪುತ್ತೂರಿಗೆ ಪ್ರಾಕೃತಿಕವಾಗಿ ಸಾಂಸ್ಕೃತಿಕವಾಗಿ ವಿಶೇಷ ಸ್ಥಾನವಿದೆ. ಇಲ್ಲಿ ವೃತ್ತಿಗೆ ಯಾವುದೇ ಅನಾನುಕೂಲವಾಗುವ ಸಂದರ್ಭವೇ ಇಲ್ಲ. ವಕೀಲರು ಉತ್ತಮ ಸಲಹೆ ನೀಡಲಿದ್ದು ಹೊಸ ನ್ಯಾಯಾಧೀಶ ಯಾವುದೇ ಗಾಬರಿ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಹಿರಿಯ ನ್ಯಾಯವಾದಿ ಎನ್.ಕೆ. ಜಗನ್ನೀವಾಸ ರಾವ್ ಮಾತನಾಡಿ, ಪುತ್ತೂರಿಗೆ ನ್ಯಾಯಾಧೀಶರಾಗಿ ಬಂದವರೆಲ್ಲ ಹೊಸದಾಗಿ ನೇಮಕಗೊಂಡವರೇ. ಹೀಗಾಗಿ ನೀವು ಭಯಪಡಬೇಕಾದ ಅವಶ್ಯಕತೆ ಇಲ್ಲ. ಇಲ್ಲಿ ಯಾವುದೇ ಘರ್ಷಣೆಗಳಿಲ್ಲ. ಕಕ್ಷಿಗಾರರಿಗೆ ನ್ಯಾಯಧಾನವೇ ಮುಖ್ಯ. ಪುತ್ತೂರಿನಲ್ಲಿ ಅತ್ಯುತ್ತಮ ಬಾರ್ ಅಸೋಸಿಯೇಷನ್ ಇದ್ದು ನಿಮ್ಮೊಂದಿಗೆ ಸಹಕರಿಸಲಿದೆ ಎಂದರು.
ಗೌರವ ಸ್ವೀಕರಿಸಿದ ನೂತನ ನ್ಯಾಯಾಧೀಶೆ ರಮ್ಯ ಮಾತನಾಡಿ, ಪುತ್ತೂರು ಆಗಮಿಸಿ ಮೂರು ದಿನಗಳಾಗಿದೆ. ಪ್ರಾರಂಭದಲ್ಲಿ ಬಹಳಷ್ಟು ಅಲುಕು ಇತ್ತು. ಈಗ ಸುಧಾರಣೆ ಕಂಡಿದ್ದೇನೆ. ಇಲ್ಲಿ ಕಲಿಯಲು ಉತ್ತಮ ವಾತಾವರಣವಿದೆ. ವೃತ್ತಿಯಲ್ಲಿ ನಿರಂತರ ಕಲಿಕೆ ಮುಖ್ಯ. ಸೇವೆಯಲ್ಲಿ ವಕೀಲರು ಸದಾ ಸಹಕರಿಸುವಂತೆ ಅವರು ವಿನಂತಿಸಿದರು.
ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಮಾತನಾಡಿ, ನೂತನ ನ್ಯಾಯಾಧೀಶೆ ರಮ್ಯ ಅವರು ಕಡಬ ನ್ಯಾಯಾಲಯದ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸಲಿದ್ದು ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತೆ ವಿನಂತಿಸಿದರು. ಜೂ.21ರಂದು ವಿಶ್ವಯೋಗ ದಿನಾಚರಣೆಯನ್ನು ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಲಯದ ಆವರಣದಲ್ಲಿ ನಡೆಯಲಿದ್ದು ಎಲ್ಲಾ ನ್ಯಾಯವಾದಿಗಳು ಭಾಗವಹಿಸುವಂತೆ ವಿನಂತಿಸಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಪ್ರಕೃತಿ ಕಲ್ಯಾಣ್ ಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನ್ಯಾಯವಾದಿ ಗೌರೀಶ್ ಚಂದ್ರ ಶ್ಯಾನ್ ಭೋಗ್ ನೂತನ ನ್ಯಾಯಾಧೀಶರ ಪರಿಚಯ ಮಾಡಿದರು. ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಸ್ವಾಗತಿಸಿ, ವಂದಿಸಿದರು. ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ, ಜತೆ ಕಾರ್ಯದರ್ಶಿ ಮಮತಾ ಸುವರ್ಣ, ಉಪಾಧ್ಯಕ್ಷ ಮೋನಪ್ಪ ಎಂ., ಕೋಶಾಧಿಕಾರಿ ಮಹೇಶ್ ಕೆ.ಸವಣೂರು ಹಾಗೂ ನ್ಯಾಯವಾದಿಗಳು ಹಾಗೂ ನ್ಕಾಯಾಲಯದ ಸಿಬ್ರ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.










