ಪರವೂರಲ್ಲಿರುವ ಪುತ್ತೂರಿನವರು : ಬಂಟ್ವಾಳದ ಎಜುವೆಂಚರ್‌ ಪಿಯು ಕಾಲೇಜು ಪ್ರಾಂಶುಪಾಲರಾಗಿ ಮಹೇಶ್‌ ಕೆ.ಎನ್‌. ಪುತ್ತೂರು

0

ಪುತ್ತೂರು: ಬಂಟ್ವಾಳದ ಕಳ್ಳಿಗೆ ಗ್ರಾಮದ ನೆತ್ತರಕೆರೆಯಲ್ಲಿ ನೂತನವಾಗಿ ಆರಂಭಗೊಂಡ ಎಜುವೆಂಚರ್‌ (Eduventure) ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಮೂಲತಃ ಪುತ್ತೂರಿನ ಮಹೇಶ್‌ ಕೆ.ಎನ್‌. ರವರು ನೇಮಕಗೊಂಡು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದಾರೆ.

ಪುತ್ತೂರಿನ ಕೇಪುಳು ನಿವಾಸಿಯಾಗಿದ್ದ ನರಸಿಂಹ ಗೌಡ ಕೆ. ಮತ್ತು ರೇವತಿ ಎ. ದಂಪತಿ ಪುತ್ರರಾಗಿರುವ ಇವರು ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ, ಬೆಳ್ಳಾರೆ ಡಾ. ಕೆ. ಶಿವರಾಮ ಕಾರಂತ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ವಾಣಿಜ್ಯಶಾಸ್ತ್ರ ವಿಷಯದಲ್ಲಿ ಎಂ.ಕಾಂ. ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. 2018 ರಲ್ಲಿ ಇವರು ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಉಪನ್ಯಾಸಕರಾಗಿ ತನ್ನ ವೃತ್ತಿಜೀವನ ಆರಂಭಿಸಿದ್ದರು. 2019 ರಿಂದ 2025 ರವರೆಗೆ ಇವರು ಹಾಸನ ಎಚ್‌ಕೆಎಸ್‌ ಪಿಯು ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾಗಿದ್ದರು. ಪ್ರಸ್ತುತ ಅಮೃತ್‌ ರೈ ರವರು ಅಧ್ಯಕ್ಷರಾಗಿರುವ ಎಜುವೆಂಚರ್‌ ಪಿಯು ಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರಾಂಶುಪಾಲರ ಕಚೇರಿಯ ಅಧಿಕೃತ ಉದ್ಘಾಟನೆ ನಡೆದಿದೆ.

ಯಕ್ಷಗಾನ ಕಲಾವಿದ: ಮಹೇಶ್‌ ಕೆ.ಎನ್‌. ರವರು ಹಿರಿಯ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡರ ಸೋದರಳಿಯ. ಅವರ ಗರಡಿಯಲ್ಲೇ ಪಳಗಿರುವ ಇವರು ಓರ್ವ ಪ್ರತಿಭಾವಂತ ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದಾರೆ. ಬೆಟ್ಟಂಪಾಡಿ, ಪಾಣಾಜೆ, ಸುಳ್ಯಪದವು ಸಹಿತ ಪುತ್ತೂರಿನ ಹಲವು ಕಡೆ ವಿವಿಧ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಇವರು ಮುಮ್ಮೇಳ ಕಲಾವಿದರಾಗಿ ಪಾಲ್ಗೊಳ್ಳುತ್ತಿದ್ದರು.

ಕೃತಿಕಾರ:
ಪುಸ್ತಕ ಓದುವ ಮತ್ತು ಬರೆಯುವ ಹವ್ಯಾಸ ಹೊಂದಿರುವ ಇವರು ʻಬದುಕು ಬದಲಿಸುವ ನೂರೊಂದು ಸಣ್ಣ ಕಥೆಗಳುʼ ಹಾಗೂ ʻವರ್ಣʼ ಎಂಬ ಎರಡು ಕೃತಿಗಳನ್ನು ಬರೆದಿದ್ದಾರೆ. ಅಲ್ಲದೇ ʻಕಾಲʼ ಎಂಬ ಒಂದು ನಾಟಕವನ್ನೂ ಬರೆದಿದ್ದಾರೆ.

ಪುತ್ತೂರು ಕಸಬಾ ಕೇಪುಳು ನಿವಾಸಿಯಾಗಿದ್ದ ಇವರು ಪ್ರಸ್ತುತ ತಂದೆ ಹಾಗೂ ತಾಯಿಯ ಜೊತೆ ಬಂಟ್ವಾಳದ ಕಳ್ಳಿಗೆ ಗ್ರಾಮದ ಕೊಡ್ಮಣ್‌ನಲ್ಲಿ ವಾಸವಾಗಿದ್ದಾರೆ. ಇವರ ಸಹೋದರ ಮನೋಜ್‌ ಗೌಡರವರು ಬೆಂಗಳೂರಿನ ಲೊರಿಯಲ್‌ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಸಹೋದರಿ ಮಮತಾ ವಿಜಯ ಗೌಡ ರವರು ಬೆಟ್ಟಂಪಾಡಿಯ ಪಾರ ಕುಟುಂಬದವರಾಗಿದ್ದು, ಬೆಟ್ಟಂಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here