






ಸಮಸ್ಯೆ ಬಗೆಹರಿಯದಿದ್ದರೆ ತಾಲೂಕಿನೆಲ್ಲೆಡೆ ಜೂ.24ರಿಂದ ಅಡಿಕೆ ಖರೀದಿ ಸ್ಥಗಿತ


ಪುತ್ತೂರು:ಈ ಭಾಗದಿಂದ ಅಡಿಕೆ ಸಾಗಾಟದ ಲಾರಿಗಳನ್ನು ಮಹಾರಾಷ್ಟ್ರದ ಆರೋಗ್ಯ ಇಲಾಖೆಯ ಆಯುಕ್ತರೋರ್ವರು ಗುಣಮಟ್ಟ ಪರೀಕ್ಷಿಸುವ ನೆಪದಲ್ಲಿ ತಡೆದು ಮುಟ್ಟುಗೋಲು ಹಾಕಿ ಕಿರುಕುಳ ನೀಡುತ್ತಿದ್ದಾರೆ.ಈ ವಿಚಾರದಲ್ಲಿ ಮಾತುಕತೆಗಳು ನಡೆಯುತ್ತಿದ್ದು ಎರಡು ದಿನಗಳೊಳಗೆ ಸಮಸ್ಯೆ ಬಗೆಹರಿಯದೇ ಇದ್ದರೆ ಎಲ್ಲಾ ಅಡಿಕೆ ವರ್ತಕರು ಜೂ.24ರಿಂದ ರೈತರಿಂದ ಅಡಿಕೆ ಖರೀದಿ ಮಾಡುವುದನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ಪುತ್ತೂರು ಅಡಿಕೆ ವರ್ತಕರ ಸಂಘದ ತುರ್ತು ಸಭೆಯಲ್ಲಿ ತೀರ್ಮಾನಿಸಲಾಗಿದೆ.



ಪುತ್ತೂರು ಅಡಿಕೆ ವರ್ತಕರ ಸಂಘದ ತುರ್ತು ಸಭೆಯು ಸಂಘದ ಅಧ್ಯಕ್ಷ ರವೀಂದ್ರನಾಥ ರೈ ಬಳ್ಳಮಜಲು ಅವರ ಅಧ್ಯಕ್ಷತೆಯಲ್ಲಿ ಜೂ.20ರಂದು ಎಪಿಎಂಸಿಯ ರೈತ ಸಭಾಂಗಣದಲ್ಲಿ ನಡೆಯಿತು.ಅಡಿಕೆ ಸಾಗಾಟದ ಲಾರಿಗಳನ್ನು ಮುಟ್ಟುಗೋಲು ಹಾಕಿರುವುದರಿಂದ ಟ್ರಾನ್ಸ್‌ಪೋರ್ಟ್‌ನವರು ಈಗಾಗಲೇ ಸೇವೆ ಸ್ಥಗಿತಗೊಳಿಸಿದ್ದಾರೆ.ಟ್ರಾನ್ಸ್‌ಪೋರ್ಟ್ ಸ್ಥಗಿತಗೊಂಡರೆ ವರ್ತಕರು ಖರೀದಿಸಿದ ಅಡಿಕೆಯನ್ನು ಏನು ಮಾಡುವುದು?ಇದರಿಂದ ವರ್ತಕರು ರೈತರಿಂದ ಅಡಿಕೆ ಖರೀದಿಯನ್ನೇ ನಿಲ್ಲಿಸಬೇಕಷ್ಟೆ.ಅಡಿಕೆ ಸಾಗಾಟದ ಲಾರಿಗಳನ್ನು ಮುಟ್ಟುಗೋಲು ಹಾಕಿ ಅಡಿಕೆಯನ್ನು ಗುಣಮಟ್ಟ ಪರೀಕ್ಷೆಗೆ ಒಳಪಡಿಸಿದ್ದಾರೆ.ಒಂದೊಮ್ಮೆ ಅಡಿಕೆಯಲ್ಲಿ ಹಾನಿಕಾರಕ ಅಂಶವಿದೆಯೆಂದೇನಾದರೂ ವರದಿ ಬಂದರೆ ಲಾರಿಗಳಲ್ಲಿರುವ ಅಡಿಕೆಯನ್ನು ನಾಶ ಪಡಿಸುವ ಸಾಧ್ಯತೆಗಳಿವೆ. ಅಡಿಕೆ ಖರೀದಿ ಸ್ಥಗಿತಗೊಂಡರೆ ಅಡಿಕೆ ಧಾರಣೆಯೂ ಕುಸಿತವಾಗಲಿದೆ.ಇದರಿಂದ ಅಡಿಕೆ ಬೆಳೆಗಾರರ ಮೇಲೆ ನೇರ ಹೊಡೆತ ಬೀಳಲಿದೆ.ಈ ನಿಟ್ಟಿನಲ್ಲಿ ಮಾತುಕತೆಗಳು ನಡೆಯುತ್ತಿದ್ದು, ಸೋಮವಾರ,ಮಂಗಳವಾರದೊಳಗೆ ಸಮಸ್ಯೆ ಇತ್ಯರ್ಥವಾಗುವ ಸಾಧ್ಯತೆಗಳಿವೆ.ಇತ್ಯರ್ಥವಾಗದೇ ಇದ್ದರೆ ಮುಂದಿನ ಬುಧವಾರದಿಂದಲೇ ಪುತ್ತೂರು ತಾಲೂಕಿನೆಲ್ಲೆಡೆ ಅಡಿಕೆ ಖರೀದಿ ಸ್ಥಗಿತಗೊಳಿಸಿ ಪ್ರತಿಭಟಿಸಲಾಗುವುದು.ಅಲ್ಲದೆ ಈ ವಿಚಾರದಲ್ಲಿ ಜಿಲ್ಲಾ ಸಂಘದವರು ಕೈಗೊಳ್ಳುವ ತೀರ್ಮಾನಕ್ಕೆ ಪುತ್ತೂರಿನ ಸಂಘದಿಂದ ಬೆಂಬಲ ನೀಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.ಅಡಿಕೆ ಖರೀದಿ ನಿರ್ಧಾರಕ್ಕೆ ಬೆಂಬಲ ನೀಡುವಂತೆ, ಅಡಿಕೆ ಬೆಳೆಗಾರರ ಅಂತರ್ರಾಜ್ಯ ಸಹಕಾರ ಸಂಸ್ಥೆಯಾಗಿರುವ ಕ್ಯಾಂಪ್ಕೋಗೆ ಮನವಿ ಮಾಡುವುದು ಹಾಗೂ ಶಾಸಕರು, ಸಂಸದರು, ರಾಜ್ಯ ಆರೋಗ್ಯ ಸಚಿವರನ್ನು ನಿಯೋಗದಿಂದ ಭೇಟಿಯಾಗಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಲಾಗುವುದು ಎಂದೂ ಸಭೆಯಲ್ಲಿ ತೀರ್ಮಾನಿಸಲಾಯಿತು.
ಎಪಿಎಂಸಿ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವೀಂದ್ರನಾಥ ರೈ ಬಳ್ಳಮಜಲು ಮಾತನಾಡಿ, ದೇಶದ ವಿವಿಧ ಭಾಗಗಳಿಂದ ಗುಜರಾತ್‌ಗೆ ತೆರಳುವ ಲಾರಿಗಳು ಮಹಾರಾಷ್ಟ್ರ ಗಡಿದಾಟಿ ತೆರಳಬೇಕಾಗಿದೆ.ಅಲ್ಲಿನ ಆಹಾರ ಇಲಾಖೆ ಆಯುಕ್ತರೋರ್ವರು ಗುಣಮಟ್ಟ ಪರೀಕ್ಷಿಸುವ ಕಾರಣ ನೀಡಿ ಲಾರಿಗಳನ್ನು ಮುಟ್ಟುಗೋಲು ಹಾಕಿದ್ದಾರೆ.ಕ್ಯಾಂಪ್ಕೋದ ೮ ಲಾರಿಗಳ ಸಹಿತ ರಾಜ್ಯದ ಸುಮಾರು ೪೦ ಲಾರಿಗಳನ್ನು ಈಗಾಗಲೇ ಮುಟ್ಟುಗೋಲು ಹಾಕಿದ್ದಾರೆ.ಇದು ಸರಕಾರದ ಆದೇಶವಲ್ಲ.ಅಽಕಾರಿಯ ದರ್ಪ.ತಾನೊಬ್ಬ ಖಡಕ್ ಅಽಕಾರಿ ಎಂದು ಹೇಳಿಕೊಂಡು ಕಿರುಕುಳ ನೀಡುತ್ತಿದ್ದಾರೆ.ಉತ್ತಮ ರೀತಿಯಲ್ಲಿ ನಡೆಯುತ್ತಿದ್ದ ಅಡಿಕೆ ವ್ಯಾಪಾರಕ್ಕೆ ಇದರಿಂದಾಗಿ ಏಕಾಏಕಿ ಹೊಡೆತ ಬಿದ್ದಿದೆ.ಇದರಿಂದ ವರ್ತಕರಿಗೆ ಮಾತ್ರವಲ್ಲ ರೈತರ ಮೇಲೆಯೂ ದೊಡ್ಡ ಹೊಡೆತ ಬೀಳಲಿದೆ.ವರ್ತಕರು ತೆರಿಗೆ ಪಾವತಿಸಿ ವ್ಯಾಪಾರ ಮಾಡಿ ಲಾರಿಯಲ್ಲಿ ಕಳುಹಿಸಿದ ಅಡಿಕೆ ನಾಶ ಪಡಿಸಿದರೆ ವರ್ತಕರ ಗತಿ ಏನು ಎಂದು ಪ್ರಶ್ನಿಸಿದರಲ್ಲದೆ,ಇದರ ವಿರುದ್ಧ ರೈತರು, ವರ್ತಕರು ಒಗ್ಗಟ್ಟಿನಿಂದ ಪ್ರತಿಭಟಿಸಬೇಕಾದ ಅನಿವಾರ್ಯತೆಯಿದೆ ಎಂದರು.
ಎಪಿಎಂಸಿ ಅಡಿಕೆ ವರ್ತಕ ಸಂಘದ ಮಾಜಿ ಅಧ್ಯಕ್ಷ ವಿ.ಎಚ್.ಎ ಶಕೂರ್ ಹಾಜಿ ಮಾತನಾಡಿ,ಅಽಕಾರಿಯ ನಡೆಯಿಂದ ಪುತ್ತೂರಿನ ವರ್ತಕರಿಗೆ ಮಾತ್ರವಲ್ಲ ಇಡೀ ದೇಶದ ಅಡಿಕೆ ಕೃಷಿಕರಿಗೆ, ವರ್ತಕರಿಗೆ ಮಾರಕವಾಗಲಿದೆ.ರಾಸಾಯನಿಕ ಬಳಸದ ಯಾವುದೇ ಆಹಾರ ವಸ್ತುಗಳಿಲ್ಲ.ದಿನನಿತ್ಯ ಸೇವಿಸುವ ಆಹಾರ ವಸ್ತುಗಳು ಕೊಳೆತು ಹೋಗದಂತೆ ತಡೆಯಲು ರಾಸಾಯನಿಕ ಬಳಸಲಾಗುತ್ತಿದೆ.ಅಡಿಕೆಗೆ ನೇರವಾಗಿ ರಾಸಾಯನಿಕ ಬಳಸಲಾಗುತ್ತಿಲ್ಲ.ಗೋದಾಮಿಗೆ ಅಲ್ಪ ಪ್ರಮಾಣದಲ್ಲಿ ಬಳಸುವ ಸಾಧ್ಯತೆಯಿದೆ.ನಿಷೇಽಸಿದರೆ ಎಲ್ಲವನ್ನು ನಿಷೇಽಸಬೇಕು.ಕೇವಲ ಅಡಿಕೆಯನ್ನು ಮಾತ್ರ ಗುರಿಯಾಗಿಸಿ ಈರೀತಿ ತೊಂದರೆಯೊಡ್ಡುವುದು ಸರಿಯಲ್ಲ.ಒಂದು ವೇಳೆ ನಿಷೇಧವಾದರೆ ಅಡಿಕೆ ಕೃಷಿ ಸಂಪೂರ್ಣ ನಾಶವಾಗಲಿರುವುದರಿಂದ ರೈತರೂ ಇದನ್ನು ಒಗ್ಗಟ್ಟಿನಿಂದ ವಿರೋಽಸಬೇಕು ಎಂದು ಹೇಳಿದರು.
ಕೊರೋನಾ ಸಮಯದಲ್ಲಿ ದ.ಕ ಜಿಲ್ಲೆಯನ್ನು ಬದುಕಿಸಿದ್ದೇ ಅಡಿಕೆ.ಹೀಗಾಗಿ ನಿಷೇಧವಾದರೆ ಜಿಲ್ಲೆಗೆ ಅತೀ ದೊಡ್ಡ ಹೊಡೆತ ಬೀಳಲಿದೆ.ಇದರಲ್ಲಿಯೂ ಪುತ್ತೂರಿನಲ್ಲಿ ಅತೀ ಹೆಚ್ಚು ಅಡಿಕೆ ವ್ಯವಹಾರವಾಗುತ್ತಿದೆ.ನಿಷೇಧವಾದರೆ ವರ್ತಕರ ಜೊತೆಗೆ ರೈತರಿಗೂ ಬಹುದೊಡ್ಡ ಹೊಡೆತ ಬೀಳಲಿದೆ.ಜಿಲ್ಲೆಯ ಆರ್ಥಿಕತೆಗೂ ತೊಡಕಾಗಲಿದೆ.ಈ ನಿಟ್ಟಿನಲ್ಲಿ ರೈತರು, ರೈತ ಸಂಘಟನೆಗಳು ಹಾಗೂ ವರ್ತಕರು ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಅವರು ಹೇಳಿದರು.
ಅಡಿಕೆ ವರ್ತಕ ಗಂಗಾಧರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಘದ ಕಾರ್ಯದರ್ಶಿ ಸಿದ್ದೀಕ್ ಕೆ.ಎ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಅಡಿಕೆ ವರ್ತಕರ ಸಂಘದ ಪದಾಧಿಕಾರಿಗಳು, ಅಡಿಕೆ ವರ್ತಕರು ಸಭೆಯಲ್ಲಿ ಭಾಗವಹಿಸಿದ್ದರು.
ವರ್ತಕರ ಅಭಿಪ್ರಾಯಗಳು
ಲಾರಿಗಳನ್ನು ಮುಟ್ಟುಗೋಲು ಹಾಕಿದ್ದರಿಂದಾಗಿ ಟ್ರಾನ್ಸ್‌ಪೋರ್ಟ್‌ನವರು ಅಡಿಕೆ ಸಾಗಾಟ ಸ್ಥಗಿತಗೊಳಿಸಿದ್ದಾರೆ.ಟ್ರಾನ್ಸ್‌ಪೋರ್ಟ್ ಸ್ಥಗಿತಗೊಂಡರೆ ವರ್ತಕರು ಖರೀದಿಸಿದ ಅಡಿಕೆಯನ್ನು ಏನು ಮಾಡುವುದು.ರೈತರ ಸಂಸ್ಥೆಯಾಗಿರುವ ಕ್ಯಾಂಪ್ಕೋ ಜತೆಯಾಗಿ ಹೋರಾಟ ಮಾಡಬೇಕು.ಹೋರಾಟಕ್ಕೆ ಬೆಂಬಲ ನೀಡುವಂತೆ ಕ್ಯಾಂಪ್ಕೋ ಸಂಸ್ಥೆಗೆ ವರ್ತಕರ ನಿಯೋಗ ಭೇಟಿ ಮಾಡಿ ಮನವರಿಕೆ ಮಾಡಬೇಕು.ಕ್ಯಾಂಪ್ಕೋ ಸಹಿತ ಎಲ್ಲಾ ಕಡೆ ಅಡಿಕೆ ಖರೀದಿ ಸ್ಥಗಿತಗೊಳಿಸಿ ನೇರವಾಗಿ ಬಿಸಿ ಮುಟ್ಟಿಸಬೇಕು.ಅಡಿಕೆ ಸಾಗಾಟ ಸ್ಥಗಿತ ರೈತರ ಮೇಲೆ ನೇರ ಪರಿಣಾಮ ಬೀರಲಿರುವುದರಿಂದ ರೈತರು, ರೈತ ಸಂಘಗಳ ಬೆಂಬಲ ಪಡೆಯಬೇಕು.ಎಪಿಎಂಸಿಯ ವರ್ತಕರು ಹಾಗೂ ಗ್ರಾಮಾಂತರ ಪ್ರದೇಶದ ಎಲ್ಲಾ ವರ್ತಕರು ಅಡಿಕೆ ಖರೀದಿ ಸ್ಥಗಿತಗೊಳಿಸಿ ಪ್ರತಿಭಟಿಸಬೇಕು.ಒಗ್ಗಟ್ಟಿನಿಂದ ಹೋರಾಟ ಮಾಡದಿದ್ದರೆ ಮುಂದೆ ಸಮಸ್ಯೆ ಎಲ್ಲರೂ ಎದುರಿಸಬೇಕಾಗುತ್ತದೆ.ಈ ವಿಚಾರದಲ್ಲಿ ಜಿಲ್ಲಾ ಸಂಘದ ಅಭಿಪ್ರಾಯ ಪಡೆಯಬೇಕು.ಈಗಾಗಲೇ ಮಾತುಕತೆ ನಡೆಯುತ್ತಿದ್ದು ಸ್ಪಂದನೆ ದೊರೆಯದಿದ್ದರೆ ಅಡಿಕೆ ಖರೀದಿ ಸ್ಥಗಿತಗೊಳಿಸುವ.ಅಡಿಕೆ ವ್ಯವಹಾರ ಸ್ಥಗಿತಗೊಳಿಸುವ ಕುರಿತು ಜಿಲ್ಲಾ ಸಂಘ ಕರೆ ಕೊಟ್ಟರೆ ಬೆಂಬಲ ನೀಡಬೇಕು ಎಂಬ ಅಭಿಪ್ರಾಯಗಳು ಸಭೆಯಲ್ಲಿ ವರ್ತಕರಿಂದ ವ್ಯಕ್ತವಾಯಿತು.










