ಮೈಸೂರಿನಲ್ಲಿ ಮಿಂಚಿದ ರೋಟರಿ ಕ್ಲಬ್ ಉಪ್ಪಿನಂಗಡಿ

0

ಡೈಮಂಡ್ ಕೆಟಗರಿ ಪ್ರಶಸ್ತಿ ಮುಡಿಗೇರಿಸಿಕೊಂಡು ಜಿಲ್ಲೆಗೆ ಹೆಮ್ಮೆ ತಂದ ಸೇವಾ ಸಂಸ್ಥೆ

ಪುತ್ತೂರು:ಸೇವೆಯೇ ಧರ್ಮ, ಸಮಾಜೋತ್ಥಾನವೇ ಗುರಿ ಎಂಬ ಧ್ಯೇಯದೊಂದಿಗೆ ನಿರಂತರವಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ರವರು ರೋಟರಿ ಕ್ಲಬ್ ಉಪ್ಪಿನಂಗಡಿಯ ನೇತೃತ್ವ ವಹಿಸಿ ಒಂದು ವರ್ಷಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕ್ಲಬ್ ನ್ನು   ಅತ್ಯುತ್ತಮವಾಗಿ  ಸಾಬೀತುಪಡಿಸಿದ್ದು, ಮೈಸೂರಿನಲ್ಲಿ ನಡೆದ ಭವ್ಯ ಅವಾರ್ಡ್ ನೈಟ್ ಸೆರಮನಿಯಲ್ಲಿ ಪ್ರತಿಷ್ಠಿತ “ಡೈಮಂಡ್ ಕೆಟಗರಿ ಅವಾರ್ಡ್” ಪಡೆದು ಜಿಲ್ಲೆ ಹಾಗೂ ಉಪ್ಪಿನಂಗಡಿ ಭಾಗದ ಜನರಿಗೆ ಹೆಮ್ಮೆಯ ಕ್ಷಣವನ್ನು ಉಂಟುಮಾಡಿದೆ.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ರೋಟರಿ ಕ್ಲಬ್‌ಗಳ ನಡುವೆ ನಡೆದ ತೀವೃ ಸ್ಪರ್ಧೆಯಲ್ಲಿ, ಸಮಾಜಮುಖಿ ಕಾರ್ಯಕ್ರಮಗಳು, ಆರೋಗ್ಯ ಸೇವೆ, ಶಿಕ್ಷಣ ಕ್ಷೇತ್ರದ ಕೊಡುಗೆ, ಪರಿಸರ ಸಂರಕ್ಷಣೆ, ಯುವಜನ ಅಭಿವೃದ್ಧಿ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಅನೇಕ ವಿನೂತನ ಯೋಜನೆಗಳ ಆಧಾರದ ಮೇಲೆ ರೋಟರಿ ಕ್ಲಬ್ ಉಪ್ಪಿನಂಗಡಿಗೆ ಈ ಅತ್ಯುನ್ನತ ಗೌರವ ಲಭಿಸಿದೆ.

ಈ ಪ್ರಶಸ್ತಿ ಕೇವಲ ಒಂದು ಟ್ರೋಫಿ ಅಥವಾ ಪ್ರಶಂಸಾ ಪತ್ರವಲ್ಲ; ಕಳೆದ ಹಲವು ವರ್ಷಗಳಿಂದ ಕ್ಲಬ್ ಸದಸ್ಯರು ತೋರಿದ ಸಮರ್ಪಣೆ, ಸೇವಾ ಮನೋಭಾವ ಹಾಗೂ ತಂಡದ ಶ್ರಮಕ್ಕೆ ದೊರೆತ ಅಮೂಲ್ಯ ಮನ್ನಣೆಯಾಗಿದೆ. ವಿಶೇಷವಾಗಿ ಇತ್ತೀಚಿನ ಅವಧಿಯಲ್ಲಿ ಕ್ಲಬ್ ಕೈಗೊಂಡ ಹಲವಾರು ಜನಪರ ಕಾರ್ಯಕ್ರಮಗಳು ಜನಮನ ಗೆದ್ದಿದ್ದು, ಅದರ ಫಲವಾಗಿ ಈ ಗೌರವ ಕ್ಲಬ್‌ನ ಮುಡಿಗೇರಿದೆ. ರೋಟರಿ ಕ್ಲಬ್ ಉಪ್ಪಿನಂಗಡಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ಒಗ್ಗಟ್ಟಿನ ಪರಿಶ್ರಮ, ಹಿರಿಯ ರೋಟೇರಿಯನ್ಸ್ ಗಳ ಮಾರ್ಗದರ್ಶನ ಮತ್ತು ಸಮಾಜದ ಸಹಕಾರ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ ಎಂದು ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಗಣ್ಯರು ಶ್ಲಾಘಿಸಿದರು.

ಕ್ಲಬ್‌ನ ಸದಸ್ಯರು ಈ ಪ್ರಶಸ್ತಿಯನ್ನು ಸ್ವೀಕರಿಸಿದ ವೇಳೆ ಸಭಾಂಗಣದಲ್ಲಿ ಭರ್ಜರಿ ಚಪ್ಪಾಳೆಗಳ ಮೂಲಕ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತು. ಉಪ್ಪಿನಂಗಡಿಯಂತಹ ಗ್ರಾಮೀಣ ಪ್ರದೇಶದ ಕ್ಲಬ್ ರಾಜ್ಯಮಟ್ಟದಲ್ಲಿ ಡೈಮಂಡ್ ಕೆಟಗರಿ ಪ್ರಶಸ್ತಿ ಗಳಿಸಿರುವುದು ವಿಶೇಷ ಸಾಧನೆಯಾಗಿ ಗುರುತಿಸಲ್ಪಟ್ಟಿತು.

ಈ ಸಾಧನೆಯೊಂದಿಗೆ ರೋಟರಿ ಕ್ಲಬ್ ಉಪ್ಪಿನಂಗಡಿಗೆ ಹೊಸ ಚೈತನ್ಯ ಹಾಗೂ ಪುನಶ್ಚೇತನ ದೊರೆತಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸಮಾಜಸೇವೆಯ ಹಲವು ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿರುವ ಕ್ಲಬ್, ಈ ಪ್ರಶಸ್ತಿಯ ಮೂಲಕ ಇನ್ನಷ್ಟು ಉತ್ಸಾಹದಿಂದ ಜನಸೇವೆಯ ಹೊಸ ಅಧ್ಯಾಯ ಆರಂಭಿಸುವ ಸಂಕಲ್ಪ ವ್ಯಕ್ತಪಡಿಸಿದೆ.

ಕ್ಲಬ್‌ನ ಹಿರಿಯ ಸದಸ್ಯ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್   ಡಾ.ರಾಜಾರಾಂ ಕೆ.ಬಿ. ಮಾತನಾಡಿ, ಈ ಪ್ರಶಸ್ತಿ ನಮ್ಮೆಲ್ಲರ ಶ್ರಮದ ಫಲ. ಸಮಾಜದ ಆಶೀರ್ವಾದ ಮತ್ತು ಸದಸ್ಯರ ನಿಸ್ವಾರ್ಥ ಸೇವೆಯೇ ನಮ್ಮ ಶಕ್ತಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಥಪೂರ್ಣ ಯೋಜನೆಗಳ ಮೂಲಕ ಜನರ ಬದುಕಿನಲ್ಲಿ ಬೆಳಕು ಮೂಡಿಸುವ ಕಾರ್ಯವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕ್ಲಬ್‌ನ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದ್ದು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಶುಭಾಶಯಗಳನ್ನು ಕೋರಿದ್ದಾರೆ.

ಈ ಕಾರ್ಯಕ್ರಮದಲ್ಲಿ  ರೋಟರಿ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಡಾ.ರಾಜಾರಾಮ್ ಕೆ.ಬಿ, ಕ್ಲಬ್ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್, ಕಾರ್ಯದರ್ಶಿ ಶ್ರೀಕಾಂತ್ ಪಟೇಲ್, ಪೂರ್ವಾಧ್ಯಕ್ಷ ಅಬ್ದುಲ್ ರಹಿಮಾನ್ ಯೂನಿಕ್, ನಿಕಟಪೂರ್ವ ಅಧ್ಯಕ್ಷ ನವೀನ್ ಬ್ರ್ಯಾಗ್ಸ್,  ನಿಯೋಜಿತ ಅಧ್ಯಕ್ಷ ಕೇಶವ ಪಿ.ಎಂ, ಹರೀಶ್ ಅಮೀನ್, ಲೋಕೇಶ್ ನೆಕ್ಕರೆ ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here