ಉಪ್ಪಿನಂಗಡಿಯಲ್ಲಿ ವಿಷನ್ ಐ ಕೇರ್ ಅಪ್ಟಿಕಲ್ಸ್‌ನ 3ನೇ ಶಾಖೆ ಶುಭಾರಂಭ

0

ಉಪ್ಪಿನಂಗಡಿ: ವಿದ್ಯೆ ಕಲಿತು ಇನ್ನೊಬ್ಬರ ಅಡಿಯಾಳಾಗಿ ದುಡಿಯುವ ಯುವಕರ ಮಧ್ಯೆ ನೇತ್ರ ತಜ್ಞ ಸುಜನ್‌ರಾಜ್ ಶೆಟ್ಟಿಯವರು ವಿಷನ್ ಐ ಕೇರ್ ಅಪ್ಟಿಕಲ್ಸ್ ಸಂಸ್ಥೆಯನ್ನು ಕಟ್ಟಿ ಅದೆಷ್ಟೋ ಜನರ ದೃಷ್ಟಿ ದೋಷಕ್ಕೆ ಪರಿಹಾರವೊದಗಿಸಿದ್ದಾರೆ. ಈಗ ಇದರ ಮೂರನೇ ಶಾಖೆಯು ಉಪ್ಪಿನಂಗಡಿಯಲ್ಲಿ ಉದ್ಘಾಟನೆಗೊಂಡಿದ್ದು, ಸುಸಜ್ಜಿತವಾದ ಈ ಕಣ್ಣಿನ ಪರೀಕ್ಷಾ ಕೇಂದ್ರದಿಂದಾಗಿ ಗ್ರಾಮಾಂತರ ಭಾಗದವರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದರು.


ಇಲ್ಲಿನ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಬಳಿಯ ವೆಂಕಟರಮಣ ಪ್ರಸಾದ್ ಬಿಲ್ಡಿಂಗ್‌ನಲ್ಲಿ ಜೂ.21ರಂದು ಶುಭಾರಂಭಗೊಂಡ ವಿಷನ್ ಐ ಕೇರ್ ಅಪ್ಟಿಕಲ್ಸ್‌ನ ಮೂರನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಸೇವೆ ನೀಡಿದಾಗ ಯಶಸ್ಸು ದೊರೆಯಲು ಸಾಧ್ಯ. ಸುಜನ್‌ರಾಜ್ ಶೆಟ್ಟಿಯವರು ಕಳೆದ ಆರು ವರ್ಷಗಳ ಹಿಂದೆ ಪುತ್ತೂರಿನಲ್ಲಿ ವಿಷನ್ ಐ ಕೇರ್ ಅಪ್ಟಿಕಲ್ಸ್ ಸಂಸ್ಥೆಯನ್ನು ಆರಂಭಿಸಿದ್ದು, ಅದರ ಉದ್ಘಾಟನೆಯನ್ನು ಕೂಡಾ ನಾನೇ ಮಾಡಿದ್ದೆ. ಈಗ ಅವರ ಸಂಸ್ಥೆಯ ಶಾಖೆ ಮೂರಕ್ಕೇರಿದ್ದು, ಮೂರನೇ ಶಾಖೆ ಅವರ ಹುಟ್ಟೂರಿನಲ್ಲೇ ಆರಂಭವಾಗಿದೆ. ಇವರ ಸಂಸ್ಥೆಯಲ್ಲಿ ಸಿಗುವ ಗುಣಮಟ್ಟದ ಸೇವೆಯಿಂದ ಇವರು ಜನರ ಪ್ರೀತಿ ಗಳಿಸಿದ್ದಾರೆ. ಇದರಿಂದ ಅವರಿಗೆ ಯಶಸ್ಸು ಪ್ರಾಪ್ತವಾಗಿದೆ. ಈ ಸಂಸ್ಥೆಯ ಇನ್ನಷ್ಟು ಶಾಖೆಗಳು ಆರಂಭವಾಗಲಿ ಎಂದು ಶುಭ ಹಾರೈಸಿದರು.


ದೀಪ ಪ್ರಜ್ವಲನೆಗೈದು ಮಾತನಾಡಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಆರು ವರ್ಷದ ಕಠಿಣ ಪರಿಶ್ರಮ, ಉತ್ತಮ ಸೇವೆ, ಸೇವಾ ಮನೋಭಾವದಿಂದ ನೇತ್ರ ತಜ್ಞ ಸುಜನ್‌ರಾಜ್ ಶೆಟ್ಟಿಯವರು ಸಮಾಜದ ಪ್ರೀತಿಗಳಿಸಲು ಸಾಧ್ಯವಾಗಿದೆ. ಆದ್ದರಿಂದಾಗಿ ಉಪ್ಪಿನಂಗಡಿಯಲ್ಲಿಯೂ ಅವರಿಗೆ ಶಾಖೆ ತೆರೆಯಲು ಸಾಧ್ಯವಾಗಿದೆ. ಇವರು ಕೇವಲ ವ್ಯಾಪಾರದ ದೃಷ್ಟಿಕೋನ ಹೊಂದದೇ ಉಚಿತ ಕಣ್ಣು ತಪಾಸಣಾ ಶಿಬಿರ, ಉಚಿತ ಕನ್ನಡಕ ವಿತರಣೆಗಳಂತಹ ಸಮಾಜ ಸೇವೆಯನ್ನು ನೀಡುವ ಮೂಲಕ ತಾನು ಗಳಿಸಿದ ಸಂಪತ್ತಿನ ಒಂದಂಶವನ್ನು ಸಮಾಜಕ್ಕೆ ನೀಡುತ್ತಿದ್ದಾರೆ. ಇದಕ್ಕೆ ಭಗವಂತನ ಆಶೀರ್ವಾದ ಖಂಡಿತಾ ಇದೆ. ಈ ಸಂಸ್ಥೆಯ ಶಾಖೆಗಳು ಇನ್ನಷ್ಟು ವಿಸ್ತರಿಸಲಿ ಎಂದು ಹಾರೈಸಿದರು.


ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್‌ ಮಾತನಾಡಿ, ಉತ್ತಮ ಚಿಂತನೆಯಿದ್ದಾಗ ಮಾತ್ರ ಉತ್ತಮ ಸೇವೆ ನೀಡಲು ಸಾಧ್ಯ. ಇವರ ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.


ಉಪ್ಪಿನಂಗಡಿ ಧನ್ವಂತರಿ ಹಾಸ್ಪಿಟಲ್‌ನ ಡಾ. ನಿರಂಜನ್ ರೈ ಮಾತನಾಡಿ, ವಿಷನ್ ಐ ಕೇರ್ ಅಪ್ಟಿಕಲ್ಸ್‌ನ ನಾನೋರ್ವ ಸಂತೃಪ್ತ ಗ್ರಾಹಕ. ನನಗೊಮ್ಮೆ ಕಣ್ಣಿನ ಚಿಕಿತ್ಸೆ ಅಗತ್ಯವಿದ್ದಾಗ ನಾನು 4-5 ಬಾರಿ ಮಂಗಳೂರಿನ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದೆ. ಆದರೆ ಅದ್ಯಾವುದೂ ನನಗೆ ತೃಪ್ತಿ ತಂದಿರಲಿಲ್ಲ. ಮತ್ತೆ ನಾನು ಪುತ್ತೂರಿನ ವಿಷನ್ ಐ ಕೇರ್ ಅಪ್ಟಿಕಲ್ಸ್ ಸಂಸ್ಥೆಗೆ ಭೇಟಿ ನೀಡಿದ್ದು, ಅಲ್ಲಿ ಒಂದೇ ಬಾರಿಗೆ ನನ್ನ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಇಂದಿಗೂ ನಾನು ಧರಿಸುವ ಕನ್ನಡಕ ಇವರ ಸಂಸ್ಥೆಯಿಂದಲೇ ಖರೀದಿಸಿದ್ದು. ಇವರ ಸೇವೆಯಲ್ಲಿ ನಾನು ಸಂತೃಪ್ತನಾಗಿದ್ದೇನೆ. ಒಬ್ಬ ವ್ಯಕ್ತಿ ಯಶಸ್ಸು ಗಳಿಸಿದ್ದಾನೆ ಎಂದರೆ ಆತ ಎಷ್ಟು ಹಣ ಗಳಿಸಿದ ಎಂಬುದು ಅಲ್ಲ. ಆತನಿಂದ ಎಷ್ಟು ಜನರಿಗೆ ಪ್ರಯೋಜನವಾಗಿದೆ ಎನ್ನುವುದೇ ನಿಜವಾದ ಯಶಸ್ಸು. ಇದರಿಂದ ಮಾತ್ರ ಜನರ ಪ್ರೀತಿ ಗಳಿಸಲು ಸಾಧ್ಯ. ಸುಜನ್‌ರಾಜ್ ಶೆಟ್ಟಿಯವರು ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುವ ಮೂಲಕ ನಿಜವಾದ ಯಶಸ್ಸು ಸಾಧಿಸಿದ್ದಾರೆ ಎಂದರು.


ಶ್ರೀರಾಮ ಶಾಲಾ ಸಂಚಾಲಕ ಯು.ಜಿ. ರಾಧಾ ಮಾತನಾಡಿ, ವ್ಯವಹಾರ ಧರ್ಮ ನಮ್ಮದಾದಾಗ ಮಾತ್ರ ಯಶಸ್ಸು ನಮ್ಮದಾಗಲು ಸಾಧ್ಯ. ಲಾಭ ನಷ್ಟದ ಲೆಕ್ಕಚಾರ ವ್ಯವಹಾರವಾದರೆ, ಪುಣ್ಯ ಸಂಪಾದನೆಯೇ ಧರ್ಮ. ಸುಜನ್‌ರಾಜ್ ಶೆಟ್ಟಿಯವರು ಸಂಘ ಸಂಸ್ಥೆಗಳೊಂದಿಗೆ ಸೇರಿಕೊಂಡು ಉಚಿತ ಶಿಬಿರಗಳನ್ನು ನಡೆಸಿ ಕಣ್ಣಿನ ಪರೀಕ್ಷೆ, ಉಚಿತ ಕನ್ನಡಕಗಳನ್ನು ವಿತರಣೆ ಮಾಡಿದ್ದಾರೆ. ಈ ನೂತನ ಶಾಖೆಯಲ್ಲಿ ಕೂಡಾ ಅತ್ಯಾಧುನಿಕ ಉಪಕರಣಗಳನ್ನು ಜೋಡಿಸಿದ್ದು, ಗುಣಮಟ್ಟದ ಕನ್ನಡಕ, ಫ್ರೇಮ್‌ಗಳು ಇಲ್ಲಿವೆ. ನಾನು ಹಾಗೂ ನನ್ನ ಮನೆಯವರು ಈ ಸಂಸ್ಥೆಯ ಸಂತೃಪ್ತ ಗ್ರಾಹಕರಾಗಿದ್ದೇವೆ. ಇವರಿಗೆ ಇನ್ನಷ್ಟು ಯಶಸ್ಸು ದೊರೆಯಲಿ ಎಂದರು.


ಉಪ್ಪಿನಂಗಡಿ ರೋಟರಿ ಕ್ಲಬ್‌ನ ಸ್ಥಾಪಕಾಧ್ಯಕ್ಷ ಅಝೀಝ್ ಬಸ್ತಿಕ್ಕಾರ್ ಮಾತನಾಡಿ, ಮೊಬೈಲ್‌ಗಳ ಬಳಕೆ ಹೆಚ್ಚಾದ ಈ ಕಾಲದಲ್ಲಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಮುಖ್ಯ. ಈಗ ತನ್ನೂರಿನಲ್ಲಿಯೇ ಸುಜನ್‌ರಾಜ್ ಶೆಟ್ಟಿಯವರು ವಿಷನ್ ಐ ಕೇರ್ ಅಪ್ಟಿಕಲ್ಸ್‌ನ ಶಾಖೆಯನ್ನು ತೆರೆಯುವ ಮೂಲಕ ಈ ಭಾಗದ ಜನರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ. ಇದು ಇನ್ನಷ್ಟು ಅಭಿವೃದ್ಧಿಯನ್ನು ಸಾಧಿಸಲಿ ಎಂದರು.


ನೇತ್ರಾವತಿ ಅಟೋ ರಿಕ್ಷಾ ಚಾಲಕ- ಮಾಲಕ ಸಂಘದ ಅಧ್ಯಕ್ಷ ಫಾರೂಕ್ ಜಿಂದಗಿ ಮಾತನಾಡಿ, ಉಪ್ಪಿನಂಗಡಿಯಲ್ಲಿ ಉತ್ತಮ ಕಣ್ಣಿನ ಪರೀಕ್ಷಾ ಕೇಂದ್ರವೊಂದು ಬೇಕಿತ್ತು. ಈ ಅಗತ್ಯತೆಯನ್ನು ಸುಜನ್‌ರಾಜ್ ಶೆಟ್ಟಿಯವರು ಪೂರೈಸಿದ್ದಾರೆ. ಇವರ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು.


ಕಾರ್ಯಕ್ರಮದಲ್ಲಿ ಆಯುರ್ವೇದ ತಜ್ಞೆ ಡಾ. ಶುತಿ ಪಾರ್ವತಿ ಕೈಲಾರ್, ಕಟ್ಟಡದ ಮಾಲಕರಾದ ವಾಸುದೇವ ಪ್ರಭು, ನಿವೃತ್ತ ಪ್ರಾಂಶುಪಾಲ ಶ್ರೀಧರ ರಾವ್, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಉದ್ಯಮಿ ಸುದರ್ಶನ್, ಸುಂದರ ಗೌಡ, ವಕೀಲ ಅರವಿಂದ ಭಂಡಾರಿ, ಗ್ರಾ.ಪಂ. ಮಾಜಿ ಸದಸ್ಯೆ ಉಷಾ ಮುಳಿಯ, ಪ್ರಮುಖರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಆದರ್ಶ ಶೆಟ್ಟಿ ಕೈಲಾರು, ಕೈಲಾರು ರಾಜಗೋಪಾಲ ಭಟ್, ಕೈಲಾರು ಸತ್ಯನಾರಾಯಣ ಭಟ್, ದೀಪಕ್ ಪೈ, ಜಯರಾಮ ಆಚಾರ್ಯ, ಸುಧಾಕರ ಶೆಟ್ಟಿ ಕೋಟೆ, ಉಪ್ಪಿನಂಗಡಿ ಸಿಎ ಬ್ಯಾಂಕ್‌ನ ನಿವೃತ್ತ ಜನರಲ್ ಮೆನೇಜರ್ ಹಾಗೂ ನೇತ್ರ ತಜ್ಞ ಸುಜನ್‌ರಾಜ್ ಶೆಟ್ಟಿಯವರ ತಂದೆ ಜಯರಾಮ ಶೆಟ್ಟಿ, ಟೀಚರ್ಸ್ ಕೋ ಅಪರೇಟಿವ್ ಸೊಸೈಟಿಯ ಜನರಲ್ ಮೆನೇಜರ್ ಸುಚಿನ್‌ರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಗ್ರಾ.ಪಂ. ಮಾಜಿ ಸದಸ್ಯ ಲೋಕೇಶ್ ಬೆತ್ತೋಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನೇತ್ರತಜ್ಞೆ ಹರ್ಷಿತಾ ಎಸ್. ಶೆಟ್ಟಿ ವಂದಿಸಿದರು.

ನೇತ್ರತಜ್ಞ ಸುಜನ್‌ರಾಜ್ ಶೆಟ್ಟಿ ಮಾತನಾಡಿ, ನಮ್ಮ ಸಂಸ್ಥೆಯು ‘ಐ ಕೇರ್ ಬೆಟರ್ ವಿಷನ್’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಪುತ್ತೂರಿನಲ್ಲಿ ಎರಡನೇ ಪ್ರಾರಂಭವಾಗಿದ್ದು, ಅಲ್ಲಿ ಎರಡನೇ ಶಾಖೆಯನ್ನು ಕೂಡಾ ಹೊಂದಿದೆ. ೬ ವರ್ಷಗಳ ನಿರಂತರ ಸೇವೆಯೊಂದಿಗೆ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಹುಟ್ಟೂರಾದ ಉಪ್ಪಿನಂಗಡಿಯಲ್ಲಿ ಮೂರನೇ ಶಾಖೆ ಇಂದು ಶುಭಾರಂಭಗೊಂಡಿದೆ. ಇಲ್ಲಿ ಇಲ್ಲಿ ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷೆ, ಕಡಿಮೆ ದರದಲ್ಲಿ ಕನ್ನಡಕಗಳು ಲಭ್ಯವಿದ್ದು, ಬಿ.ಪಿ., ಶುಗರ್, ತಲೆನೋವು ಸಮಸ್ಯೆ ಇರುವವರಿಗೂ ಕಣ್ಣಿನ ಪರೀಕ್ಷೆಯ ಸೌಲಭ್ಯವಿದೆ. ಉತ್ತಮ ಗುಣಮಟ್ಟದ ಪ್ರೇಮ್‌ಗಳು ಮತ್ತು ಲೆನ್ಸ್‌ಗಳು ಇಲ್ಲಿ ಲಭ್ಯವಿದ್ದು, ಇದಲ್ಲದೆ, ನಮ್ಮಲ್ಲಿ ಬಂದು ಉಚಿತವಾಗಿ ಕಣ್ಣಿನ ಪರೀಕ್ಷೆಗಳನ್ನು ಮಾಡಿಕೊಂಡು ಹೋಗಬಹುದು. ಕಣ್ಣಿನ ಪೊರೆ, ರೆಟಿನಾ ಸಮಸ್ಯೆಯ ಬಗ್ಗೆ ಮಾಹಿತಿಯನ್ನು ಇಲ್ಲಿ ಪಡೆಯಬಹುದು. ಕಣ್ಣಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಗೊಂದಲವಿದ್ದಲ್ಲಿ ನಮ್ಮನ್ನು ಸಂಪರ್ಕಿಸಬಹುದು. ನಿಮ್ಮ ಸೇವೆಗೆ ನಾವು ಸದಾ ಸಿದ್ಧರಿದ್ದೇವೆ. ನಮ್ಮ ಸಂಸ್ಥೆಯ ವತಿಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಸಾರ್ವಜನಿಕರಿಗೆ ಉಚಿತವಾಗಿ ಕಣ್ಣಿನ ಚಿಕಿತ್ಸೆಯ ಬಗ್ಗೆ ಮಾಹಿತಿ, ಕಣ್ಣಿನ ತೊಂದರೆಗಳ ಮಾಹಿತಿ ಕಾರ್ಯಾಗಾರಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ವಿವಿಧ ಸಂಘ- ಸಂಸ್ಥೆಗಳ ನೆರವಿನೊಂದಿಗೆ ಸುಮಾರು ೩೫ ಕಡೆಗಳಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಅನುಕೂಲಕರ ದರದಲ್ಲಿ ಕನ್ನಡಕವನ್ನು ಮಾಡಿಕೊಡುತ್ತ ಬಂದಿದ್ದೇವೆ. ಸಿಬ್ಬಂದಿ ವರ್ಗ, ಗ್ರಾಹಕರ ಸಹಕಾರದಿಂದ ನಮ್ಮ ಈ ಸಂಸ್ಥೆ ಬೆಳೆಯಲು ಕಾರಣವಾಗಿದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಸದಾ ನಮ್ಮ ಮೇಲಿರಲಿ ಎಂದರು.

LEAVE A REPLY

Please enter your comment!
Please enter your name here