ನರೇಂದ್ರ ಪ.ಪೂ. ಕಾಲೇಜಿನಲ್ಲಿ ಮಾದಕದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ

0

ಪುತ್ತೂರು: ಜೂನ್ 26ರ ಅಂತರ್ರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ನರೇಂದ್ರ ಪ.ಪೂ. ಕಾಲೇಜಿನಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ವತಿಯಿಂದ ಮಾದಕದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ ಜೂನ್ 22, 2026ರಂದು ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ ಮಾತನಾಡಿ, “ಸಮಾಜದಲ್ಲಿ ಮಕ್ಕಳು ಮಾದಕ ವ್ಯಸನಕ್ಕೆ ತುತ್ತಾಗದಂತೆ ಪೋಷಕರು, ಶಾಲೆ-ಕಾಲೇಜುಗಳ ಶಿಕ್ಷಕರು ಹೆಚ್ಚಿನ ಪಾತ್ರ ವಹಿಸಬೇಕು. ವಿದ್ಯಾರ್ಥಿಗಳ ಹದಿಹರೆಯದ ಮಾನಸಿಕ, ದೈಹಿಕ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು. ಸೋಲು, ವೈಫಲ್ಯದ ಸಂದರ್ಭದಲ್ಲಿ ಅವರ ಮೇಲಿನ ಒತ್ತಡ ನಿವಾರಣೆಗೆ ಮಾರ್ಗದರ್ಶನ ನೀಡಬೇಕು” ಎಂದರು.“ಡ್ರಗ್ಸ್ ಮಾಫಿಯಾ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಮೂಹಿಕ ಪ್ರಯತ್ನ ಅಗತ್ಯ. ಇಂದಿನ ವೇಗದ ಬದುಕಿನಲ್ಲಿ ಒತ್ತಡ ಹೆಚ್ಚಾಗಿದ್ದು, ಕೆಲವರು ಒತ್ತಡ ನಿವಾರಣೆಗೆ ಮಾದಕ ವ್ಯಸನಿಗಳಾಗುತ್ತಿದ್ದಾರೆ.

ತಪ್ಪು ಹಾದಿಗೆ ಪ್ರೇರೇಪಿಸುವವರ ಬಗ್ಗೆ ಎಚ್ಚರ ವಹಿಸಬೇಕು. ನಮ್ಮ ಸಂಸ್ಕೃತಿಯಲ್ಲಿ ಒತ್ತಡ ನಿವಾರಣೆಗೆ ಯೋಗ, ಧ್ಯಾನದಂತಹ ಮಾರ್ಗಗಳಿವೆ. ವಿದ್ಯಾರ್ಥಿಗಳಿಗೆ ಅದರ ಪ್ರೇರಣೆ ನೀಡಬೇಕು” ಎಂದು ಅವರು ಹೇಳಿದರು.ಪೊಲೀಸ್ ಉಪನಿರೀಕ್ಷಕಿ ಸೇಸಮ್ಮ ಮಾತನಾಡಿ, “ರಾಜ್ಯಾದ್ಯಂತ ತಂಬಾಕು ಮತ್ತು ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಾದಕದ್ರವ್ಯ ವ್ಯಸನ ತಡೆಗಟ್ಟಲು ಸಮಾಜದ ಎಲ್ಲ ಸ್ತರದ ಜನರು ಇದನ್ನು ಸಾಮಾಜಿಕ ಹೊಣೆಗಾರಿಕೆ ಎಂದು ಭಾವಿಸಿ ಕೈಜೋಡಿಸಿದಾಗ ಮಾತ್ರ ಯಶಸ್ಸು ಸಾಧ್ಯ” ಎಂದರು.ಪೊಲೀಸ್ ಸಿಬ್ಬಂದಿ ಕಿಶನ್ ಅವರು ಸೈಬರ್ ಅಪರಾಧಗಳು, ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಅಪರಾಧ ತಡೆ ಕ್ರಮಗಳು, ಸೈಬರ್ ಕ್ರೈಮ್, ಆರೋಗ್ಯಕರ ಸಾಮಾಜಿಕ ಜಾಲತಾಣ ಬಳಕೆ, ಪೋಕ್ಸೊ ಕಾಯ್ದೆಯ ಅರಿವು ಹಾಗೂ ಸಮಾಜದಲ್ಲಿ ಶಾಂತಿ-ಭದ್ರತೆ ಕಾಪಾಡುವಲ್ಲಿ ಪ್ರತಿಯೊಬ್ಬರ ಪಾತ್ರದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ಪೊಲೀಸ್ ಸಿಬ್ಬಂದಿ ಪ್ರವೀಣ್, ಕಿಶನ್, ವಿರೂಪಾಕ್ಷ, ನವೀನ್ ಭಾಗವಹಿಸಿದ್ದರು.ದ್ವಿತೀಯ ವಿಜ್ಞಾನ ವಿಭಾಗದ ಕು. ಜೀವಿತಾ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here