ಪುತ್ತೂರು: ಗ್ರಾಮೀಣ ಭಾಗದ ತಾಂತ್ರಿಕ ಶಿಕ್ಷಣದ ಬೆಳಕು – ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ರಜತ ಮಹೋತ್ಸವದ ಸಂಭ್ರಮ

0

ಪುತ್ತೂರು: ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತಾಂತ್ರಿಕ ಶಿಕ್ಷಣ ನೀಡುವ ಧ್ಯೇಯದೊಂದಿಗೆ 2001ರಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಪ್ರಾರಂಭವಾದ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಇಂದು ಕರಾವಳಿ ಭಾಗದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟಿರುವ ಈ ಕಾಲೇಜು ಪುತ್ತೂರಿನ ನೆಹರೂ ನಗರದ 25 ಎಕರೆ ಪ್ರಶಾಂತ ವಾತಾವರಣದಲ್ಲಿ ರೂಪುಗೊಂಡಿದೆ. ಎಲ್ಲ ವಿಭಾಗಗಳಿಗೆ ಬೇಕಾದಷ್ಟು ಸ್ಥಳಾವಕಾಶವಿರುವ ಕಟ್ಟಡಗಳು, ಆಧುನಿಕ ಉಪಕರಣಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಹೊಂದಿರುವ ಸುಸಜ್ಜಿತ ಪ್ರಯೋಗಾಲಯಗಳಿವೆ. ಸಂಶೋಧನಾ ನಿರತ ನುರಿತ ಉಪನ್ಯಾಸಕ ವೃಂದವು ವಿದ್ಯಾರ್ಥಿಗಳ ಪ್ರಗತಿಗೆ ನಿರಂತರ ಸಹಕಾರ ನೀಡುತ್ತಿದೆ.ಶೈಕ್ಷಣಿಕ ಸಾಧನೆ: ಈ ವರ್ಷ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಂಸ್ಥೆ ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡುತ್ತಿದ್ದು, ಇದುವರೆಗೆ ವಿದ್ಯಾರ್ಥಿಗಳು ಒಟ್ಟು 27 ರ‍್ಯಾಂಕುಗಳನ್ನು ಗಳಿಸಿದ್ದಾರೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಡಾಟಾ ಸೈನ್ಸ್ ವಿಭಾಗದಲ್ಲಿ 4, ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ 2 ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಶಿನ್ ಲರ್ನಿಂಗ್ ವಿಭಾಗದಲ್ಲಿ 1 ಸೇರಿ ಒಟ್ಟು 7 ರ‍್ಯಾಂಕುಗಳು ಲಭಿಸಿವೆ.

ಪ್ರಾರಂಭದಿಂದ ಇದುವರೆಗೆ ಒಟ್ಟು 6,533 ವಿದ್ಯಾರ್ಥಿಗಳು ಪದವಿ ಹಾಗೂ 870 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದಿದ್ದು, ಕೇಂದ್ರ-ರಾಜ್ಯ ಸರ್ಕಾರ ಮತ್ತು ಕಾರ್ಪೊರೇಟ್ ಜಗತ್ತಿನ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತೀಯ ಸೇನೆ, ನಾಗರಿಕ ಸೇವೆ, ಬ್ಯಾಂಕಿಂಗ್, ಕಾನೂನು, ಶೈಕ್ಷಣಿಕ, ಸಾಫ್ಟ್‌ವೇರ್ ಕ್ಷೇತ್ರಗಳಲ್ಲಿ ಹಾಗೂ ವಿದೇಶಗಳಲ್ಲಿಯೂ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.ಕಾಲೇಜಿನ 4 ವಿಭಾಗಗಳಿಗೆ ಎನ್‌ಬಿಎ ಮಾನ್ಯತೆ ಲಭಿಸಿದ್ದು, ಇದು ಶಿಕ್ಷಣದ ಗುಣಮಟ್ಟ, ಆಧುನಿಕ ಪ್ರಯೋಗಾಲಯ ಸೌಲಭ್ಯ, ಅನುಭವಿ ಬೋಧಕ ವೃಂದ, ಕ್ಯಾಂಪಸ್ ನೇಮಕಾತಿ ಹಾಗೂ ಕೈಗಾರಿಕಾ ಸಂಪರ್ಕಗಳ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ.ಕ್ಯಾಂಪಸ್ ನೇಮಕಾತಿ: ಈ ವರ್ಷ ಇದುವರೆಗೆ 86ಕ್ಕೂ ಹೆಚ್ಚು ಕಂಪೆನಿಗಳು ಕ್ಯಾಂಪಸ್ ನೇಮಕಾತಿಗಾಗಿ ಆಗಮಿಸಿದ್ದು, 183ಕ್ಕೂ ಹೆಚ್ಚು ಅರ್ಹ ವಿದ್ಯಾರ್ಥಿಗಳು ನೇಮಕಾತಿ ಆದೇಶ ಪಡೆದಿದ್ದಾರೆ. ಕೆಲ ಪ್ರತಿಭಾವಂತ ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚು ಕಂಪೆನಿಗಳಲ್ಲಿ ಆಯ್ಕೆಯಾಗಿದ್ದಾರೆ. ಗರಿಷ್ಠ ₹15 ಲಕ್ಷ ವಾರ್ಷಿಕ ವೇತನದ ಹುದ್ದೆಗೆ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಇದು ಕಾರ್ಪೊರೇಟ್ ಜಗತ್ತಿನೊಂದಿಗಿನ ಸಂಪರ್ಕ ಮತ್ತು ತರಬೇತಿಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ನೇಮಕಾತಿ ಪ್ರಕ್ರಿಯೆ ಇನ್ನೂ ಮುಂದುವರಿಯುತ್ತಿದೆ.ಪ್ರಾಜೆಕ್ಟ್ ಮತ್ತು ಸ್ಟಾರ್ಟ್‌ಅಪ್‌ಗಳು: ‘ಪ್ರಾಜೆಕ್ಟ್ ಟೂ ಪ್ರಾಡಕ್ಟ್’ ಪರಿಕಲ್ಪನೆಯಲ್ಲಿ ವಿದ್ಯಾರ್ಥಿಗಳ ಯೋಜನೆಗಳಿಗೆ ಮೂರ್ತಸ್ವರೂಪ ನೀಡಿ ಉತ್ಪನ್ನವನ್ನಾಗಿಸಲು ಕಾಲೇಜು ಸಹಕಾರ ನೀಡುತ್ತಿದೆ. ಉತ್ತಮ ಪ್ರಾಜೆಕ್ಟ್‌ಗಳಿಗೆ ಧನಸಹಾಯ ನೀಡಲಾಗುತ್ತದೆ. ಸ್ಟಾರ್ಟಪ್ ಪ್ರಾರಂಭಿಸುವವರಿಗೆ ‘ಲಾಂಚ್‌ವರ್ಸ್’ ಸ್ಟಾರ್ಟಪ್ ಸಂಕೀರ್ಣದಲ್ಲಿ ಸೌಲಭ್ಯ ಒದಗಿಸಲಾಗಿದ್ದು, ಈಗಾಗಲೇ 4 ಕಂಪೆನಿಗಳು ಪ್ರಾರಂಭವಾಗಿವೆ. ಇಂಡಸ್ಟ್ರಿಗಳ ಬೇಡಿಕೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಅನೇಕ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ‘ಸೆಂಟರ್ ಆಫ್ ಎಕ್ಸಲೆನ್ಸ್’ ಕೇಂದ್ರಗಳನ್ನು ತೆರೆಯಲಾಗಿದೆ.ತಾಂತ್ರಿಕ ಶಿಕ್ಷಣದ ಜತೆಗೆ ನೈತಿಕ ಶಿಕ್ಷಣವನ್ನೂ ನೀಡಲಾಗುತ್ತಿದ್ದು, ಸಮಾಜದ ಸತ್ಪ್ರಜೆಗಳಾಗಿ ಜೀವನ ನಡೆಸಲು ಅಗತ್ಯವಾದ ಜೀವನ ಮೌಲ್ಯಗಳನ್ನು ತಿಳಿಸಲಾಗುತ್ತದೆ.

ಕ್ರೀಡಾ ಸಾಧನೆ: ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ವಿಟಿಯು ಅಂತರ್ಕಾಲೇಜು ಕ್ರೀಡಾಕೂಟದಲ್ಲಿ ಸತತ 3 ಬಾರಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ. ಆಟೋಟ ಸ್ಪರ್ಧೆಗಳಲ್ಲೂ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಪ್ರತಿಭಾವಂತ ಕ್ರೀಡಾಪಟುಗಳು ಅಂತರ್ ವಿಶ್ವವಿದ್ಯಾನಿಲಯ ಸ್ಪರ್ಧೆಗಳಲ್ಲಿ ವಿಟಿಯು ಪ್ರತಿನಿಧಿಸಿದ್ದಾರೆ. ಇತ್ತೀಚೆಗೆ ನಡೆದ ವಿಟಿಯು 27ನೇ ಅಂತರ್ಕಾಲೇಜು ಅಥ್ಲೆಟಿಕ್ ಸ್ಪರ್ಧೆಯಲ್ಲಿ 5 ಚಿನ್ನ, 2 ಬೆಳ್ಳಿ ಮತ್ತು 2 ಕಂಚಿನ ಪದಕಗಳೊಂದಿಗೆ ಮಹಿಳೆಯರ ವಿಭಾಗದ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್ ಅಪ್ ಟ್ರೋಫಿ ಗೆದ್ದಿದ್ದಾರೆ. ಈ ಕ್ರೀಡಾ ಸಾಧನೆಗಾಗಿ ಕಾಲೇಜಿಗೆ ವಿಟಿಯು ₹1,25,000 ನಗದು ಪುರಸ್ಕಾರ ನೀಡಿದೆ.ಸಾಂಸ್ಕೃತಿಕ ಸಾಧನೆ: ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಅಪೂರ್ವ ಸಾಧನೆ ಮಾಡಿದ್ದು, ಇತ್ತೀಚೆಗೆ ನಡೆದ ವಿಟಿಯು ಅಂತರ್ಕಾಲೇಜು ಸಾಂಸ್ಕೃತಿಕ ಉತ್ಸವದಲ್ಲಿ 1 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕ ಪಡೆದಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸಮಾರಂಭಗಳಲ್ಲಿ ಕಾರ್ಯಕ್ರಮ ನೀಡಿ ಜನಮನ್ನಣೆ ಗಳಿಸಿದ್ದಾರೆ.ವಿಭಾಗಗಳು: ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಶಿನ್ ಲರ್ನಿಂಗ್, ಡಾಟಾ ಸೈನ್ಸ್, ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್, ಮೆಕ್ಯಾನಿಕಲ್ ಮತ್ತು ಸಿವಿಲ್ ಇಂಜಿನಿಯರಿಂಗ್ ಪದವಿ ವಿಭಾಗಗಳು ಹಾಗೂ ಎಂಬಿಎ ಮತ್ತು ಎಂಸಿಎ ಸ್ನಾತಕೋತ್ತರ ಪದವಿ ವಿಭಾಗಗಳಿವೆ.ದಾಖಲಾತಿ: ಪ್ರಸಕ್ತ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಮ್ಯಾನೇಜ್‌ಮೆಂಟ್ ಸೀಟುಗಳು ಭರ್ತಿಯಾಗಿವೆ. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ದಾಖಲಾತಿ ವಿಭಾಗದ ಮುಖ್ಯಸ್ಥೆ ಪ್ರೊ. ವಂದನಾ ಶಂಕರ್ – 9845065506 ಇವರನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here