ಉಪ್ಪಿನಂಗಡಿ: ಬೈಕ್ ಪಡೆದು ವಂಚನೆ-ಆರೋಪಿಯ ಬಂಧನ

0


ಉಪ್ಪಿನಂಗಡಿ: ಸ್ನೇಹಾಚಾರದ ನಾಟಕ ಮಾಡಿ ಸಲುಗೆ ಬೆಳೆಸಿಕೊಂಡು ದೇಗುಲಕ್ಕೆ ಹೋಗಿ ಬರುವೆನೆಂದು ತಿಳಿಸಿ ವ್ಯಕ್ತಿಯೋರ್ವರಿಂದ ಬೈಕ್ ಅನ್ನು ಪಡೆದು ಹೋದಾತ ಬೈಕಿನೊಂದಿಗೆ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಕೊನೆಗೂ ಯಶಸ್ವಿಯಗಿದ್ದಾರೆ.

ಆರೋಪಿ ಕರ್ನಾಟಕ ಕೇರಳ ರಾಜ್ಯಗಳ ಗಡಿ ಪ್ರದೇಶವಾದ ಗಾಳಿಮುಖ ಎಂಬಲ್ಲಿ ತಲೆ ಮರೆಯಿಸಿಕೊಂಡಿದ್ದು, ಆರೋಪಿಯನ್ನು ಬೈಕ್ ಸಮೇತ ವಶಕ್ಕೆ ಪಡೆದುಕೊಳ್ಳಲಾಗಿದೆ.


ಇಲ್ಲಿನ ರಾಜಧಾನಿ ಟವರ್ಸ್‌ನಲ್ಲಿರುವ ಶ್ರೀ ದೇವಿ ಸ್ಟಿಕ್ಕರ್ ಕಂಟಿಂಗ್ಸ್ ಸೆಂಟರ್ ಮಾಲಕ ಶೀನಪ್ಪ ಮುಗೇರ ಎಂಬವರಿಂದ ಅದೇ ಕಟ್ಟಡದಲ್ಲಿನ ಲಾಡ್ಜ್ ನಲ್ಲಿ ವಾಸ್ತವ ಹೂಡಿದ್ದ, ಶ್ಯಾಮ್ ಜಿ ಕೃಷ್ಣನ್ (31) ಎಂಬಾತ ಜೂ. 16 ರಂದು `ಒಮ್ಮೆ ಬೈಕ್ ಕೊಡಿ. ದೇವಸ್ಥಾನದಲ್ಲಿನ ನನ್ನ ಮನೆಯವರಿಗೆ ಬಟ್ಟೆ ಕೊಟ್ಟು ಎರಡೇ ನಿಮಿಷದಲ್ಲಿ ಹಿಂದಿರುಗುತ್ತೇನೆಂದು’ ತಿಳಿಸಿ ಬೈಕಿನೊಂದಿಗೆ ತೆರಳಿದಾತ ಬಳಿಕ ನಾಪತ್ತೆಯಾಗಿದ್ದ. ಆದರೆ ಆರೋಪಿಯು ದಿನ ನಿತ್ಯ ಶೀನಪ್ಪರವರಿಗೆ ಫೋನಾಯಿಸಿ ಹಣಕ್ಕಾಗಿ ಬೇಡಿಕೆಯನ್ನಿಡುತ್ತಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದರೂ ಆರೋಪಿಯ ಪತ್ತೆಯಾಗಿರಲಿಲ್ಲ.

ಘಟನೆ ನಡೆದು ಏಳು ದಿನವಾದರೂ ಆರೋಪಿಯ ಬಂಧನವಾಗದಿದ್ದಾಗ ಸಾರ್ವಜನಿಕ ವಲಯದಿಂದ ತೀವ್ರ ತರಹದ ಅಸಮಾಧಾನ ವ್ಯಕ್ತವಾಗಿತ್ತು. ಇದೀಗ ಪೊಲೀಸರು ಆರೋಪಿಯ ಪೋನ್ ಟ್ರಾಕಿಂಗ್ ನಡೆಸಿ ಗಾಳಿಮುಖದಲ್ಲಿ ಆತನ ಇರುವಿಕೆಯನ್ನು ಖಚಿತಪಡಿಸಿ ಮಂಗಳವಾರ ನಸುಕಿನಲ್ಲಿ ಆತನನ್ನು ಬಂಧಿಸಿ ಆತನಿಂದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿದ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಸುತೇಶ್‌ರವರು, ಪೋನ್ ನಂಬ್ರದ ಎಡವಟ್ಟಿನಿಂದಾಗಿ ಪ್ರಕರಣದ ಜಾಡು ಹಿಡಿಯುವಲ್ಲಿ ಒಂದಷ್ಟು ವಿಳಂಬವಾಗುವಂತಾಗಿದೆ. ಅಪರಿಚಿತರಿಗೆ ವಾಹನವನ್ನು ನೀಡುವುದಾಗಲಿ, ಅಪರಿಚಿತರೊಂದಿಗೆ ಆಧಾರ್ ಸಹಿತ ಪ್ರಮುಖ ದಾಖಲೆಗಳನ್ನು ಹಂಚಿಕೊಳ್ಳುವುದಾಗಲಿ, ಅಪರಿಚಿತರಿಗೆ ಮೊಬೈಲ್ ಪೋನ್ ನೀಡುವುದಾಗಲಿ, ಅಪರಿಚಿತರ ಮೂಲಕ ಖಾತೆಗೆ ಬಂದ ಹಣವನ್ನು ಬಳಸುವುದಾಗಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವಂತಹ ಅಪಾಯಕ್ಕೆ ಆಹ್ವಾನ ನೀಡಿದಂತಾಗುವುದು. ಈ ಕಾರಣಕ್ಕೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here