ಕೇಂದ್ರ ಸರ್ಕಾರದ VB G RAM G ಯೋಜನೆಗೆ ಲೋಗೋ ಸ್ಪರ್ಧೆ : ಪುತ್ತೂರಿನ ರಾಮ್‌ಪ್ರಸಾದ್ ಕೆ. ವಿನ್ಯಾಸದ ಲೋಗೋ ಆಯ್ಕೆ

0

ಪುತ್ತೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ VB G RAM G ಯೋಜನೆಗೆ ಲೋಗೋ ರೂಪಿಸಲು ಏರ್ಪಡಿಸಲಾದ ಸ್ಪರ್ಧೆಯಲ್ಲಿ ಪುತ್ತೂರಿನ ರಾಮ್ ಪ್ರಸಾದ್ ಕೆ.ರವರು ರಚಿಸಿದ ಲೋಗೋ ಆಯ್ಕೆಯಾಗಿದೆ.


ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ವಿಬಿ ಜಿ ರಾಮ್ ಜಿ ಕಾಯ್ದೆ (ವಿಕಸಿತ್ ಭಾರತ್ ರೋಜ್‌ಗಾರ್ ಮತ್ತು ಅಜಿವಿಕಾ ಮಿಷನ್ ಗ್ರಾಮೀಣ)ಗೆ ಲಾಂಛನ (ಲೋಗೋ) ವಿನ್ಯಾಸಗೊಳಿಸಲು ಸರಕಾರದ ನಾಗರಿಕ ಸಂಪರ್ಕ ವೇದಿಕೆ MyGov ನಲ್ಲಿ ರಾಷ್ಟ್ರಮಟ್ಟದಲ್ಲಿ ಸ್ಪರ್ಧೆ ಆಯೋಜಿಸಿತ್ತು. ಗ್ರಾಮೀಣ ಸಬಲೀಕರಣ, ಉದ್ಯೋಗ ಸೃಷ್ಟಿ ಮತ್ತು ಸಮಗ್ರ ಅಭಿವೃದ್ಧಿಯ ದೃಷಿಕೋನ ಬಿಂಬಿಸುವ ನವೀನ ವಿನ್ಯಾಸಗಳನ್ನು ಸಲ್ಲಿಸುವಂತೆ ಸಚಿವಾಲಯ ತಿಳಿಸಿತ್ತು. “ವಿಕಸಿತ ಭಾರತ 2047” ಎಂಬ ಸರಕಾರದ ದೂರ ದೃಷ್ಟಿಕೋನಕ್ಕೆ ಹೊಂದಿಕೆಯಾಗುವ ಪ್ರಮುಖ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮದ ಬ್ರಾಂಡಿಂಗ್ ರೂಪಿಸಲು ಸಾರ್ವಜನಿಕರ ಭಾಗವಹಿಸುವಿಕೆಯನ್ನು ಉತ್ತೆಜಿಸುವುದು ಇದರ ಗುರಿಯಾಗಿತ್ತು.

ಕೇಂದ್ರ ಸರ್ಕಾರವು 2005ರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು (MGNREGA) ರದ್ದುಗೊಳಿಸಿ “ವಿಕಸಿತ ಭಾರತ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)” ಅಥವಾ “VB-G RAM G” ಕಾಯ್ದೆಯನ್ನು ಜಾರಿಗೆ ತಂದಿದೆ. ವಿಬಿ ಜಿ ರಾಮ್ ಜಿ ಯೋಜನೆ ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಉದ್ಯೋಗ ಮತ್ತು ಜೀವನೋಪಾಯವನ್ನು ಭದ್ರಪಡಿಸುವ ಗುರಿಯನ್ನು ಹೊಂದಿದ್ದು ಜುಲೈ 1ರಿಂದ ಈ ಯೋಜನೆ ಲೋಕಾರ್ಪಣೆಗೊಳ್ಳಲಿದೆ.

ರಾಮ್ ಪ್ರಸಾದ್ ಕೆ.ರವರು ಬಿವಿಎ ಪದವಿ ಪಡೆದಿದ್ದು ಪ್ರಸ್ತುತ ಪ್ರೀ ಲ್ಯಾನ್ಸರ್ ಆಗಿ ಡಿಸೈನಿಂಗ್ ವೃತ್ತಿ ಮಾಡುತ್ತಿದ್ದಾರೆ. ಇವರು ಪುತ್ತೂರು ಮಂದಿರಮನೆ ನಿವಾಸಿಯಾಗಿದ್ದು ಪುತ್ತೂರಿನ ಶ್ರೀರಾಮ ಜ್ಯುವೆಲ್ಲರ‍್ಸ್ ಮಾಲಕ ಮಲ್ಲೇಶ್ ಕುಮಾರ್‌ರವರ ಪುತ್ರ.

ಸ್ಪರ್ಧೆಗೆ 7233 ಲೋಗೋ ಬಂದಿತ್ತು
ರಾಷ್ಟ್ರಮಟ್ಟದಲ್ಲಿ ಆಯೋಜಿಸಿದ ಲೋಗೋ ಸ್ಪರ್ಧೆಯಲ್ಲಿ ಸುಮಾರು 7233 ಲೋಗೋಗಳು ಬಂದಿತ್ತು. ಇದರಲ್ಲಿ ಪುತ್ತೂರಿನ ಡಿಸೈನರ್ ರಾಮ್ ಪ್ರಸಾದ್ ಕೆ.ರವರು ರೂಪಿಸಿದ ಲೋಗೋ ಆಯ್ಕೆಯಾಗಿದೆ. ನವ ದೆಹಲಿಯಲ್ಲಿ ಜೂ.28 ಹಾಗೂ 29ರಂದು ನಡೆಯಲಿರುವ ರಾಷ್ಟ್ರೀಯ ಗ್ರಾಮೀಣ ವಿಕಾಸ ಸಮ್ಮೇಳನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

LEAVE A REPLY

Please enter your comment!
Please enter your name here