






ಯಶಸ್ಸು ಸಾಧಿಸಿದಾಗ ಇತರರಿಗೆ ಸಹಾಯ ಮಾಡಿ – ಕೇಶವ ಅಮೈ


ಪುತ್ತೂರು: ನೆಲ್ಲಿಕಟ್ಟೆ ಡಾ. ಕೆ.ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆ ಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಮತ್ತು ಉಚಿತ ಕೊಡೆ ವಿತರಣೆ ಹಾಗು ವಿವಿಧ ಸಂಘಗಳ ಉದ್ಘಾಟನೆಯೊಂದಿಗೆ ಶಾಲಾ ಮಂತ್ರಿ ಮಂಡಲದ ಪ್ರಮಾಣವಚನ ಕಾರ್ಯಕ್ರಮವು ಜೂ.23ರಂದು ನಡೆಯಿತು.




ಎಸ್.ಆರ್.ಕೆ ಲ್ಯಾಡರ್ಸ್ನ ಮಾಲಕರು ಮತ್ತು ಉಚಿತ ನೋಟ್ ಪುಸ್ತಕದ ಪ್ರಾಯೋಜಕರೂ ಆದ ಕೇಶವ ಅಮೈ ಅವರು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಸಿಗುತ್ತಿರುವ ಉತ್ತಮ ಗುಣಮಟ್ಟದ ಶಿಕ್ಷಣದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಹಾಗೂ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಯಶಸ್ಸನ್ನು ಸಾಧಿಸಿದಾಗ ಸಾರ್ಥಕತೆ ದೊರೆಯುತ್ತದೆ. ಹಾಗೂ ಜೀವನದಲ್ಲಿ ಯಶಸ್ಸನ್ನು ಸಾಧಿಸಿದಾಗ ನಮ್ಮಿಂದಾಗುವ ಸಹಾಯವನ್ನು ಇತರರಿಗೂ ನೀಡಿದಾಗ ಅವರೂ ಬೆಳೆಯಲು ಸಾಧ್ಯವಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನು ಇಟ್ಟುಕೊಂಡು ಅದನ್ನು ಸಾಧಿಸಲು ಸತತ ಪ್ರಯತ್ನಪಟ್ಟು ಯಶಸ್ಸನ್ನು ಗಳಿಸುವಂತಾಗಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭ ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಗೊಂಡ ಕೇಶವ ಅಮೈ ಅವರನ್ನು ಶಾಲಾ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಶಾಲಾ ಎಸ್ಡಿಎಂಸಿ ಕಾರ್ಯಾಧ್ಯಕ್ಷ ಪಂಚಾಕ್ಷರಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಜಲಜಾಕ್ಷಿ ಕೆ ಎಂ ನೂತನ ಮಂತ್ರಿಮಂಡಲಕ್ಕೆ ಪ್ರಮಾಣವಚನ ಬೋಧಿಸಿದರು. ಕಲಾ ಶಿಕ್ಷಕಿ ನಳಿನಿ ಎ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಂಗ್ಲ ಭಾಷಾ ಶಿಕ್ಷಕಿ ಡಾ.ಚಾಂದಿನಿ ಅವರು ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಎಸ್.ಆರ್.ಕೆ.ಲ್ಯಾಡರ್ಸ್ನ ಮಾಲಕ ಕೇಶವ ಅಮೈ, ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಇಂಜಿನಿಯರ್ ಪ್ರಮೋದ್ ಕುಮಾರ್ ಕೆ, ನಿವೃತ್ತ ಕನ್ನಡ ಭಾಷಾ ಶಿಕ್ಷಕ ನಾರಾಯಣ ನಾಯ್ಕ್ ಆಗ್ರಾಳ, ನಿವೃತ್ತ ಶಿಕ್ಷಕರಾದ ಬಾಲಕೃಷ್ಣ ಗೌಡ, ದಿವಂಗತ ಪ್ರವೀಣ್ ಕುಮಾರ್ ಪಾನತ್ತಿಲ ಅವರ ಸ್ಮರಣಾರ್ಥ ಅವರ ಸಹೋದರಿ ಪ್ರಮೀಳಾ ಬಿ.ಕೆ,ಬಳ್ಳಾರಿಯಲ್ಲಿ ಉದ್ಯಮಿಯಾಗಿರುವ ನಾಗೇಶ್ ರೈ ಕನ್ನಡಮೂಲೆ , ಹಾಗೂ ಹಿಂದಿ ಭಾಷಾ ಶಿಕ್ಷಕರಾಗಿರುವ ಅಬ್ರಹಾಂ ಎಸ್ ಎ ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಲಾಯಿತು. ಕನ್ನಡ ಶಿಕ್ಷಕಕಿ ಸವಿತಾ ಹೆಚ್ ರವರು ವಂದಿಸಿದರು. ಹಿಂದಿ ಶಿಕ್ಷಕ ಅಬ್ರಹಾಂ ಎಸ್ ಎ ರವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಸವಿತಾ ಯು ಆರ್, ಪ್ರಮೀಳಾ ಬಿ ಕೆ, ವೀಣಾ ಎ ವಿ ಹಾಗೂ ಕಚೇರಿ ಸಹಾಯಕಿ ಕು. ಗೌತಮಿ ಸಹಕರಿಸಿದರು.









