






ಪುತ್ತೂರು:2025-26ನೇ ಸಾಲಿನ ರೋಟರಿ ಜಿಲ್ಲೆ 3181, ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಡಾ.ರಾಜಾರಾಮ್ ಕೆ.ಬಿರವರಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರೋಟರಿ ಕ್ಲಬ್ ಉಪ್ಪಿನಂಗಡಿ, ರೋಟರಿ ಕ್ಲಬ್ ಪುತ್ತೂರು ಸಿಟಿ ಹಾಗೂ ರೋಟರಿ ಕ್ಲಬ್ ವಿಟ್ಲ ಹೀಗೆ ತ್ರಿವಳಿ ಕ್ಲಬ್‌ಗಳ ಸಾರ್ಥಕ ಸಾಧನೆಗಳ ಸಂತೃಪ್ತ ಅವಲೋಕನಗಳ ಸಮ್ಮಿಲನದ ಸಮಾಗಮದ ಜಂಟಿ ಸಭೆಯು ಜೂ.23ರಂದು ಉಪ್ಪಿನಂಗಡಿ ರೋಟರಿ ಸಮುದಾಯ ಭವನದಲ್ಲಿ ಸಂಜೆ ನೆರವೇರಿತು.



ಉಪ್ಪಿನಂಗಡಿ ರೋಟರಿ ಸ್ವಂತ ಕಾಲಲ್ಲಿ ನಿಂತು ಹೆಸರು ಮಾಡುತ್ತಿದೆ-ಡಾ.ಶ್ಯಾಮ್ ಬಿ:
ಮುಖ್ಯ ಅತಿಥಿ, ಉಪ್ಪಿನಂಗಡಿ ರೋಟರಿ ಕ್ಲಬ್ ಸ್ಥಾಪಕರಾದ ಡಾ.ಶಿವರಾಮ ಭಟ್‌ರವರ ಪುತ್ರ ಡಾ.ಶ್ಯಾಮ್ ಬಿ.ರವರು ಮಾತನಾಡಿ, ಡಾ.ಶಿವರಾಮ ಭಟ್‌ರವರು ಈ ಉಪ್ಪಿನಂಗಡಿ ರೋಟರಿಯನ್ನು ಹುಟ್ಟು ಹಾಕಿದ್ದು, ಶಿಶುವಾಗಿದ್ದ ರೋಟರಿಯನ್ನು ಪೋಷಿಸಿ, ಇಂದು ಒಳ್ಳೆಯ ಸ್ಥಾನಮಾನಕ್ಕೆ ಬರಲು ರೋಟರಿ ಸದಸ್ಯರು ಶ್ರಮಿಸಿದ್ದಾರೆ. ನನ್ನ ತಂದೆಯವರು ಅಂದಿನ ದಿನಗಳಲ್ಲಿ ಸದಸ್ಯರಿಗೆ ಉತ್ತೇಜನ ಕೊಡಲು ಸೀರೆ ಹಾಗೂ ಚಾಕಲೇಟ್ ಕೊಡುವ ಹವ್ಯಾಸ ಬೆಳೆಸಿದ್ದರು ಯಾಕೆಂದರೆ ಕ್ಲಬ್ ಸಕ್ರಿಯವಾಗಿ ಇರಬೇಕು ಅಂತ. ಅದಕ್ಕಾಗಿ ಸದಸ್ಯರ ಶ್ರೀಮತಿಯವರಿಗೆ ಸೀರೆ ಸಿಕ್ಕಾಗ ಅವರೂ ಕೂಡ ತಮ್ಮ ಗಂಡಂದಿರನ್ನು ಖುಶಿಯಾಗಿ ಕಳುಹಿಸಿ ಕೊಡುವುದು ಉದ್ಧೇಶವಾಗಿತ್ತು. ರೋಟರಿ ಹಳ್ಳಿ ಹಳ್ಳಿಗಳಲ್ಲಿ ಬರಬೇಕು, ಒಳ್ಳೆಯ ಯೋಜನೆ ತರಬೇಕು ಎನ್ನುವ ಆಶಯ ಅವರದ್ದಾಗಿತ್ತು. ಈಗ ಉಪ್ಪಿನಂಗಡಿ ರೋಟರಿ ಕ್ಲಬ್ ಸ್ವಂತ ಕಾಲಲ್ಲಿ ನಿಂತು ಸಮಾಜಕ್ಕೆ ಒಳಿತನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.



ರೋಟರಿ ಕೇವಲ ಸಂಘಟನೆಯಲ್ಲ, ಮಾನವೀಯ ಮೌಲ್ಯಗಳ ಚಳುವಳಿಯಾಗಿದೆ-ಜೋನ್ ಕೆನ್ಯೂಟ್:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಉಪ್ಪಿನಂಗಡಿ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ಪ್ರಾಸ್ತಾವಿಕವಾಗಿ ಮಾತನಾಡಿ, ತ್ರಿವಳಿ ಜಂಟಿ ಸಭೆಯು ಕೇವಲ ಒಂದು ಸಭೆಯಲ್ಲ. ಇದು ಸ್ನೇಹ, ಸೇವೆ ಮತ್ತು ಸಹಯೋಗದ ಸುಂದರ ಸಂಗಮವಾಗಿದೆ. ಮೂರು ಕ್ಲಬ್‌ಗಳು ಒಂದೇ ವೇದಿಕೆಯಲ್ಲಿ ಸೇರಿ ಪರಸ್ಪರ ಅನುಭವಗಳನ್ನು ಹಂಚಿಕೊಳ್ಳುವುದು, ಹೊಸ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳುವುದು ಹಾಗೂ ಸೇವಾ ಕಾರ್ಯಗಳಿಗೆ ಹೊಸ ಧಿಕ್ಕನ್ನು ನೀಡುವುದು ಸಭೆಯ ಪ್ರಮುಖ ಉದ್ಧೇಶವಾಗಿದೆ. ರೋಟರಿ ಎಂಬುದು ಕೇವಲ ಸಂಘಟನೆಯಲ್ಲ ಅದು ಮಾನವೀಯ ಮೌಲ್ಯಗಳ ಚಳುವಳಿಯಾಗಿದೆ ಎಂದರು.
ಮೂರೂ ಕ್ಲಬ್‌ಗಳು ವರ್ಷಪೂರ್ತಿ ಸೇವೆ ನೀಡಿದ್ದಾರೆ-ಹರೀಶ್ ವಿಟ್ಲ:
ರೋಟರಿ ವಲಯ ಸೇನಾನಿ ಹರೀಶ್ ವಿಟ್ಲ ಮಾತನಾಡಿ, ರೋಟರಿ ವಲಯ ನಾಲ್ಕರ ಮೂರು ಕ್ಲಬ್‌ಗಳು ವರ್ಷಪೂರ್ತಿ ಬೇರೆ ಬೇರೆ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಉಪ್ಪಿನಂಗಡಿ ಕ್ಲಬ್‌ನವರು ನೆಕ್ಕಿಲಾಡಿ ಸರಕಾರಿ ಶಾಲೆಯಲ್ಲಿ ಯುಕೆಜಿ ಆರಂಭಿಸಿದ್ದಾರೆ. ರೋಟರಿ ಸಿಟಿಯವರು ರಾಮಕೃಷ್ಣ ಆಶ್ರಮದಲ್ಲಿ ಎಲ್.ಕೆ.ಜಿ/ಯುಕೆಜಿ ಹಾಗೂ ರೋಟರಿ ವಿಟ್ಲದವರು ಟರ್ಪಾಲಿನಲ್ಲಿ ಜೀವನ ಸಾಗಿಸುತ್ತಿದ್ದ ಮಹಿಳೆಗೆ ವಾಸ್ತವ್ಯಕ್ಕೆ ಉತ್ತಮ ಮನೆ ನಿರ್ಮಿಸಿ ಕೊಟ್ಟಿರುವುದು ಶ್ಲಾಘನೀಯ. ಮೂರೂ ಕ್ಲಬ್‌ಗಳು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯ ಮಾಡಿದ್ದು ಈ ಕ್ಲಬ್‌ಗಳಲ್ಲಿ ಮುಂದಿನ ದಿನಗಳಲ್ಲಿ ವಲಯ ಸೇನಾನಿ, ಅಸಿಸ್ಟೆಂಟ್ ಗವರ್ನರ್ ಹಾಗೂ ಜಿಲ್ಲಾ ಗವರ್ನರ್ ಸ್ಥಾನದಲ್ಲಿ ಮೂಡಿ ಬರುವಂತಾಗಲಿ ಎಂದರು.

ಎಲ್ಲರ ಸಹಕಾರದೊಂದಿಗೆ ರೋಟರಿಯಿಂದ ಅಮೂಲಾಗ್ರ ಸೇವೆ-ಉಲ್ಲಾಸ್ ಪೈ:
ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಉಲ್ಲಾಸ್ ಪೈ ಮಾತನಾಡಿ, ರೋಟರಿ ಶ್ರೀಮಂತರ ಕ್ಲಬ್ ಅನ್ನುವ ಮಾತಿದೆ. ಆದರೆ ರೋಟರಿ ಎಲ್ಲರೊಂದಿಗೆ ಜೊತೆಯಾಗಿ ಅನುಸರಿಸಿಕೊಂಡು ಹೋಗುವುದಾಗಿದೆ. ಸಾಧನೆ ಎಂಬುದು ನನ್ನ ಒಬ್ಬನ ಶ್ರಮವಲ್ಲ, ಅದು ಕ್ಲಬ್ ಪೂರ್ವಾಧ್ಯಕ್ಷರು, ಸದಸ್ಯರು, ಅಸಿಸ್ಟೆಂಟ್ ಗವರ್ನರ್ ಡಾ.ರಾಜಾರಾಮ್ ರವರ ಮಾರ್ಗದರ್ಶನದಿಂದ ಸಾಧನೆ ಸಾಧ್ಯವಾಗಿದೆ. ರೋಟರಿ ಅಂದರೆ ಸೇವೆ. ರೋಟರಿ ಮೂಲಕ ಸಮಾಜದಲ್ಲಿ ಸಮಾಜಮುಖಿ ಪ್ರಾಜೆಕ್ಟ್‌ಗಳನ್ನು ಮಾಡಿದ್ದರಿಂದ ಕ್ಲಬ್‌ಗೆ ಪ್ಲಾಟಿನಂ ಫ್ಲಸ್ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯಾಗಿದೆ ಎಂದರು.
ರೋಟರಿಯಿಂದ ಬಹಳಷ್ಟು ಗೆಳೆಯರು ಸಿಕ್ಕಿರುವುದು ಖುಶಿ ತಂದಿದೆ-ಜೈಕಿಶನ್:
ರೋಟರಿ ಕ್ಲಬ್ ವಿಟ್ಲ ಅಧ್ಯಕ್ಷ ಜೈಕಿಶನ್ ಮಾತನಾಡಿ, ಆರಂಭದ ಪದಪ್ರದಾನ ಸಮಾರಂಭದಲ್ಲಿನ ಉತ್ಸಾಹ ಕೊನೆಯಲ್ಲಿ ಕಡಿಮೆ ಆಗುತ್ತಾ ಬರುತ್ತದೆ. ಜೇಸಿ ಘಟಕದ ಅಧ್ಯಕ್ಷನಾಗಿದ್ದ ಅನುಭವ ನನಗೆ ರೋಟರಿ ಸಂಸ್ಥೆಯನ್ನು ಸರ್ವರ ಸಹಕಾರದಿಂದ ಮುನ್ನೆಡೆಸಲು ಸಾಧ್ಯವಾಗಿದೆ. ಕೆಲಸದ ಒತ್ತಡದಿಂದ ನನ್ನ ಅನುಪಸ್ಥಿತಿಯಲ್ಲಿ ಪದಾಧಿಕಾರಿಗಳು ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಗೋಲ್ಡನ್ ಕ್ಲಬ್ ಪ್ರಶಸ್ತಿಗೆ ಭಾಜನರಾಗಿರುವುದು ಖುಶಿ ತಂದಿದೆ. ರೋಟರಿ ಅಧ್ಯಕ್ಷನಾದ ಬಳಿಕ ಬಹಳಷ್ಟು ರೋಟರಿ ಗೆಳೆಯರು ಸಿಕ್ಕಿರುತ್ತಾರೆ ಎಂದರು.
ಅಭಿನಂದನೆ:
2026-27ನೇ ಸಾಲಿನಲ್ಲಿ ವಲಯ ಸೇನಾನಿಗಳಾಗಿ ಆಯ್ಕೆಯಾದ ಉಪ್ಪಿನಂಗಡಿ ರೋಟರಿ ಕ್ಲಬ್‌ನ ಅನುರಾಧ ಶೆಟ್ಟಿ, ರೋಟರಿ ಕ್ಲಬ್ ಪುತ್ತೂರು ಸಿಟಿಯ ಜ್ಯೋ ಡಿ’ಸೋಜ, ರೋಟರಿ ಕ್ಲಬ್ ವಿಟ್ಲದ ಪ್ರಕಾಶ್ ನಾಯಕ್ ರವರುಗಳಿಗೆ ಹೂ ನೀಡಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ರೋಟರಿ ಸಿಟಿ ಕಾರ್ಯದರ್ಶಿ ಡಾ.ಪೊಡಿಯ, ರೋಟರಿ ವಿಟ್ಲ ಕಾರ್ಯದರ್ಶಿ ದಿನೇಶ್ ಕುಮಾರ್ ಉಪಸ್ಥಿತರಿದ್ದರು. ಆನೆಟ್ ಮಾನ್ವಿ ಎಸ್ ಪ್ರಾರ್ಥಿಸಿದರು. ರೋಟರಿ ಉಪ್ಪಿನಂಗಡಿ ಕ್ಲಬ್ ಸದಸ್ಯರಾದ ರವೀಂದ್ರ ದರ್ಬೆ, ಇಸ್ಮಾಯಿಲ್ ಇಕ್ಬಾಲ್, ಚಂದಪ್ಪ ಮೂಲ್ಯ, ವಿಜಯಕುಮಾರ್ ಕಲ್ಲಳಿಕೆ, ಸ್ವರ್ಣೇಶ್ ಗಾಣಿಗ, ಕೇಶವ ಪಿ.ಎಂ, ಹರೀಶ್, ಅಝೀಝ್ ಬಸ್ತಿಕ್ಕಾರ್‌ರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ರೋಟರಿ ಉಪ್ಪಿನಂಗಡಿ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಕಾಂತ್ ಪಟೇಲ್ ವಂದಿಸಿದರು. ರೋಟರಿ ಕ್ಲಬ್ ಉಪ್ಪಿನಂಗಡಿ ಪೂರ್ವಾಧ್ಯಕ್ಷರಾದ ನವೀನ್ ಬ್ರ್ಯಾಗ್ಸ್ ಹಾಗೂ ಅಬ್ದುಲ್ ರಹಿಮಾನ್ ಯೂನಿಕ್ ಕಾರ್ಯಕ್ರಮ ನಿರೂಪಿಸಿದರು.

ಅವಾರ್ಡ್ ಸಿಕ್ಕಾಗ ನೋಬೆಲ್ ಪ್ರಶಸ್ತಿ ಸಿಕ್ಕಂತೆ ಸಂಭ್ರಮಿಸಿ..
ಸಂಗಮ ಕ್ಷೇತ್ರವಾಗಿರುವ ಉಪ್ಪಿನಂಗಡಿಯಲ್ಲಿ ತ್ರಿವಳಿ ಕ್ಲಬ್‌ಗಳ ಸಾರ್ಥಕ ಸಾಧನೆಗಳ ಸಂತೃಪ್ತ ಅವಲೋಕನಗಳ ಸಮ್ಮಿಲನದ ಸಮಾಗಮವಾಗಿದೆ. ಒಳಿತಿಗಾಗಿ ಒಂದಾಗೋಣ ತತ್ವದಡಿ ಕ್ಲಬ್‌ಗಳು ಇಡೀ ವರ್ಷ ಕೆಲಸ ಮಾಡಿ ಸಾರ್ಥಕತೆ ಕಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಮೂರು ಕ್ಲಬ್‌ಗಳ ಸಮಾಗಮವು ಮುಂದಿನ ನಿಯೋಜಿತ ಅಧ್ಯಕ್ಷರಿಗೆ ಸಮಾಜಮುಖಿ ಕೆಲಸ ಮಾಡಲು ಪ್ರೇರಣೆಯಾಗಲಿದೆ. ಜೀವನದಲ್ಲಿ ಯಶಸ್ಸು ಕಾಣಲು ನಿರ್ದಿಷ್ಟ ಗುರಿ ಹಾಗೂ ಸ್ಪಷ್ಟತೆಯ ಕನಸು ಕಾಣಬೇಕಿದೆ. ಅವಾರ್ಡ್ ಸಿಕ್ಕಾಗ ನೋಬೆಲ್ ಪ್ರಶಸ್ತಿ ಸಿಕ್ಕಂತೆ ಸಂಭ್ರಮಿಸಬೇಕು. ನಾವೆಲ್ಲರೂ ಬಾಂಧವ್ಯದ ಬೆಸುಗೆಯನ್ನು ಬೆಸೆಯಬೇಕು, ಪ್ರತಿಭೆಗೆ ವೇದಿಕೆ ಕೊಟ್ಟಾಗ ವ್ಯಕ್ತಿತ್ವ ವಿಕಸನವಾಗುವುದು. ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು ಆದರೆ ಕನಸಿಲ್ಲದ ಹಾದಿಯಲ್ಲಿ ನಡೆಯಲು ಸಾಧ್ಯವಿಲ್ಲ.
-ಡಾ.ರಾಜಾರಾಮ್ ಕೆ.ಬಿ, ರೋಟರಿ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್
ಪ್ರಶಸ್ತಿಗಳು..
*ರೋಟರಿ ಉಪ್ಪಿನಂಗಡಿ-ಡೈಮಂಡ್ ಕೆಟಗರಿ ಪ್ರಶಸ್ತಿ
*ರೋಟರಿ ಸಿಟಿ-ಫ್ಲಾಟಿನಂ ಫ್ಲಸ್ ಪ್ರಶಸ್ತಿ
*ರೋಟರಿ ವಿಟ್ಲ-ಗೋಲ್ಡನ್ ಕ್ಲಬ್ ಪ್ರಶಸ್ತಿ
ಸನ್ಮಾನ…
ರೋಟರಿ ಉಪ್ಪಿನಂಗಡಿ ಪೂರ್ವಾಧ್ಯಕ್ಷರಾಗಿದ್ದು, 2025-26ನೇ ಸಾಲಿನ ಅಸಿಸ್ಟೆಂಟ್ ಗವರ್ನರ್ ಆಗಿ ರೋಟರಿ ಉಪ್ಪಿನಂಗಡಿ, ರೋಟರಿ ವಿಟ್ಲ, ರೋಟರಿ ಪುತ್ತೂರು ಸಿಟಿಯನ್ನು ಯಶಸ್ವಿಯಾಗಿ ಮುನ್ನೆಡೆಸಿದ ಡಾ.ರಾಜಾರಾಮ್ ಕೆ.ಬಿ, ಉಪ್ಪಿನಂಗಡಿ ರೋಟರಿ ಕ್ಲಬ್ ಸ್ಥಾಪಕರಾದ ಡಾ.ಶಿವರಾಮ ಭಟ್‌ರವರ ಪುತ್ರ ಡಾ.ಶ್ಯಾಮ್ ಬಿ., ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕ್ಲಬ್ ಬೆಳವಣಿಗೆಯಲ್ಲಿ ತೆರೆಮರೆಯಲ್ಲಿ ಕೆಲಸ ಮಾಡುತ್ತಾ ‘ಅನ್ಸಂಗ್ ಹೀರೊ ಆಫ್ ದ ಕ್ಲಬ್’ ಪ್ರಶಸ್ತಿಗೆ ಭಾಜನರಾಗಿರುವ ರೋಟರಿ ಉಪ್ಪಿನಂಗಡಿಯ ಅಬ್ದುಲ್ ರಹಿಮಾನ್ ಯೂನಿಕ್, ರೋಟರಿ ವಿಟ್ಲದ ಅಣ್ಣಪ್ಪ ಸಾಸ್ತಾನರವರುಗಳನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.










