ಉಪ್ಪಿನಂಗಡಿ: ಶಾಲಾ ಆವರಣದ ಜೇನುಗೂಡು ಸ್ಥಳಾಂತರ – 13ರ ಬಾಲಕನ ಪರಿಸರ ಕಾಳಜಿಗೆ ಮೆಚ್ಚುಗೆ

0

ಉಪ್ಪಿನಂಗಡಿ: ಶಾಲಾ ಆವರಣದಲ್ಲಿ ನೆಲೆಸಿದ್ದ ಜೇನು ಗೂಡನ್ನು ಶಾಲಾ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ 13ರ ಹರೆಯದ ಶಾಲಾ ವಿದ್ಯಾರ್ಥಿಯೇ ಸುರಕ್ಷಿತವಾಗಿ ತೆರವುಗೊಳಿಸಿದ ಘಟನೆ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ನಡೆದಿದೆ.


ಶಾಲಾ ಆವರಣದ ಪೊಟರೆಯಿಂದ ಜೇನು ನೊಣಗಳು ಕಾಣಿಸಿಕೊಳ್ಳುತ್ತಿದ್ದು, ಕ್ರೀಡಾಂಗಣದಲ್ಲಿ ಆಡುತ್ತಿದ್ದ ಮಕ್ಕಳಿಗೆ ಕಚ್ಚಿರುವ ಘಟನಾವಳಿಗಳು ನಡೆದಿತ್ತು. ಇದರಿಂದ ಕಳವಳಕ್ಕೀಡಾದ ಶಾಲಾಡಳಿತ ಪೊಟರೆಯಲ್ಲಿ ಆಶ್ರಯ ಪಡೆದಿರಬಹುದಾದ ಜೇನು ಸಂತತಿಯನ್ನು ತೆರವುಗೊಳಿಸಲು ನಿರ್ಧರಿಸಿತ್ತು. ಆದರೆ ಬೆಂಕಿಯ ಹೊಗೆಯನ್ನು ಪ್ರಸಹರಿಸಿ ಜೇನು ನೊಣಗಳನ್ನು ಓಡಿಸಬಹುದೆಂಬ ಸಲಹೆ ವ್ಯಕ್ತವಾಗಿತ್ತು. ಈ ಸಲಹೆಯನ್ನು ಆಲಿಸಿದ ಸದ್ರಿ ವಿದ್ಯಾಲಯದ 8 ನೇ ತರಗತಿಯ ವಿದ್ಯಾರ್ಥಿ ಗವಿನ್ ರೇಶಿಮೆ, ‘ಜೇನು ನೊಣಗಳ ರಕ್ಷಣೆಗಾಗಿ ಬೆಂಕಿಯ ಹೊಗೆಯನ್ನು ಹಾಕಿ ಜೇನು ನೊಣಗಳನ್ನು ತೆರವುಗೊಳಿಸಿದರೆ ನೊಣಗಳು ಸಾಯುವ ಸಂಭವವಿದೆ. ಅವಕಾಶ ಕೊಟ್ಟರೆ ತಾನೇ ಜೇನು ನೊಣಗಳನ್ನು ತೆರವುಗೊಳಿಸುವೆನೆಂದು’ ಶಾಲಾಡಳಿತದೊಂದಿಗೆ ವಿನಂತಿಸುತ್ತಾನೆ.


13 ವರ್ಷದ ವಿದ್ಯಾರ್ಥಿಯಿಂದ ಅಪಾಯಕಾರಿ ಜೇನು ನೊಣಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಶಾಲಾಡಳಿತ ಒಪ್ಪಿಗೆ ನೀಡದಿದ್ದರೂ, ಜೇನು ನೊಣಗಳ ಸುರಕ್ಷತೆಯ ಬಗ್ಗೆ ಈಗಾಗಲೇ ಸಂಶೋಧನಾ ನಿರತನಾಗಿರುವ ಗವಿನ್ ಬಗ್ಗೆ ಆತನ ಹೆತ್ತವರು ಬೆಂಗಾವಲು ಆಗಿ ತಾವು ನಿಲ್ಲುತ್ತೇವೆ ಎಂದು ಭರವಸೆ ನೀಡಿದ ಕಾರಣ ಶಾಲಾಡಳಿತ ಒಪ್ಪಿಗೆ ನೀಡಿತ್ತು.


ಈ ಕಾರಣದಿಂದ ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಈತನಿಗೆ ಅಚ್ಚರಿ ಕಾದಿತ್ತು. ಪೊಟರೆಯಲ್ಲಿ ಸಣ್ಣ ಪ್ರಮಾಣದ ಜೇನು ನೊಣಗಳಿರಬಹುದೆಂದು ಅಂದಾಜಿಸಿದ್ದ ಆತನಿಗೆ ಪೊಟರೆಯೊಳಗೆ ಹಲವು ಹಂತಗಳಲ್ಲಿ ಗೂಡು ಕಟ್ಟಿಕೊಂಡಿದ್ದ ಜೇನು ತುಪ್ಪ ಭರಿತ ದೊಡ್ಡ ಪ್ರಮಾಣದ ಜೇನು ಗೂಡು ಕಾಣಿಸಿತ್ತು. ಯಾವೊಂದೂ ಜೇನು ನೊಣಗಳಿಗೆ ಹಾನಿಯಾಗದಂತೆ ತಾನು ಮೊದಲೇ ತಂದಿರಿಸಿದ ಜೇನು ಗೂಡಿಗೆ ಜೇನು ನೊಣಗಳನ್ನು ಸ್ಥಳಾಂತರಿಸಿ, ಗೂಡಿನಲ್ಲಿದ್ದ ಜೇನು ತುಪ್ಪವನ್ನು ಸಂಗ್ರಹಿಸಿದ ಗವಿನ್, ಕ್ರೀಡಾಂಗಣದಲ್ಲಿನ ಚಿಕ್ಕು ಮರದಲ್ಲಿದ್ದ ಕೋಲ್ಜೇನನ್ನು ಕೂಡಾ ಸ್ಥಳಾಂತರಿಸುವ ಮೂಲಕ ತಾನೇ ಕಲಿಯುತ್ತಿರುವ ಶಾಲೆಯ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತರಿಪಡಿಸಿದರಲ್ಲದೆ ಪ್ರಕೃತಿಯಲ್ಲಿ ಪರೋಪಕಾರಿ ಜೀವಿಯಾಗಿರುವ ಜೇನು ನೊಣಗಳನ್ನೂ ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾದರು.


ಜೇನು ನೊಣಗಳ ಸುರಕ್ಷತೆಯ ಸಂಶೋಧನೆಗೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಾತ:
ಜೇನು ಕೃಷಿಕರಿಗೆ ಉಪಯುಕ್ತವಾಗುವ ಜೇನು ನೊಣಗಳ ಸುರಕ್ಷತೆಯನ್ನಾಧರಿಸಿದ ಜೇನು ಗೂಡಿನೊಳಗಿನ ವಿದ್ಯಾಮಾನಗಳನ್ನು ತಿಳಿಯುವ ಸಾಧನವನ್ನು ಗವಿನ್ ರೇಶಿಮೆ ಈಗಾಗಲೇ ಸಂಶೋಧಿಸಿದ್ದು, ಈತನ ‘ಹೈವ್ ಗಾಡ್ 360’ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಮೋಕರ್ ವಿತ್ ಹೈವ್ ಮಾನಿಟರಿಂಗ್ ಸಿಸ್ಟಮ್ ಎಂಬ ವಿಜ್ಞಾನ ಮಾದರಿ ಸಂಶೋಧನೆಗೆ ನವಾಚರ 26 -ಐರಿಸ್ ಜೂನಿಯರ್ ಸ್ಪರ್ಧೆಯಲ್ಲಿ ಟಾಪ್ ತ್ರಿ ಇನ್ನೋವೇಟರ್ ಅವಾರ್ಡ್ ಲಭಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.ಗವಿನ್ ರೇಶಿಮೆ ರವರು ಇರ್ದೆ ಬೆಟ್ಟಂಪಾಡಿ ನಿವಾಸಿಗರಾದ ಶಿವಪ್ರಸಾದ್ – ರೇಣುಕಾ ದಂಪತಿಯ ಪುತ್ರ.

LEAVE A REPLY

Please enter your comment!
Please enter your name here