ಸವಣೂರು : ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ

0

ಮಾದಕ ವ್ಯಸನಗಳಿಂದ ದೂರವಿದ್ದು ಉತ್ತಮ ಜೀವನ ನಡೆಸಿ -ನ್ಯಾ.ಸದಾನಂದ ನಾಗಪ್ಪ ನಾಯ್ಕ

ಸವಣೂರು: ಇವತ್ತಿನ ದಿನಗಳಲ್ಲಿ ಯುವ ಜನಾಂಗ ಫ್ಯಾಶನ್‌ ಜೀವನ ಮತ್ತು ಸಹವಾಸ ದೋಷದಿಂದ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಅಂತಹ ಯುವ ಜನಾಂಗರಲ್ಲಿ ಮಾದಕ ವ್ಯಸನಗಳಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿದಾಗ ಅಂತಹ ವ್ಯಕ್ತಿಗಳು ಉತ್ತಮ ಜೀವನ ನಡೆಸಲು ಸಾಧ್ಯವಿದೆ ಎಂದು ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶರು ಮತ್ತು ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ರವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್‌ (ರಿ) ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ (ರಿ) ಕಡಬ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು, ವಕೀಲರ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಸವಣೂರು ಜೂನಿಯರ್‌ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗ ಇವುಗಳ ಸಹಕಾರದೊಂದಿಗೆ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗಾಗಿ ನಡೆದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಡ್ರಗ್ಸ್‌ ಎನ್ನುವುದು ಕ್ಯಾನ್ಸರ್‌ ರೋಗದಂತೆ ಮಾರಕ ಅದು ನಮ್ಮ ಬದುಕನ್ನೆ ಹಾಳು ಮಾಡುತ್ತದೆ. ಮಾದಕ ವ್ಯಸನಕ್ಕೆ ಸಂಬಂಧಿಸಿದ ಟಿ.ವಿ. ಮಾಧ್ಯಮದಲ್ಲಿ ಬರುತ್ತಿರುವ ಜಾಹೀರಾತುಗಳಿಂದ ದೂರವಿದ್ದು, ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಹೆಚ್ಚಿನ ಮಹತ್ವವನ್ನು ನೀಡುವುದರ ಜೊತೆಗೆ ತಮಗೆ ಬದುಕನ್ನು ಕಲಿಸಿಕೊಟ್ಟ ತಂದೆ ತಾಯಿ, ಶಿಕ್ಷಕರನ್ನು ಗೌರವಿಸಬೇಕು. ಈ ವಿದ್ಯಾಸಂಸ್ಥೆ ಗೆ ಕಳೆದ ಮೂರು ವರ್ಷಗಳಿಂದ ಶೇಕಡಾ ನೂರು ಫಲಿತಾಂಶ ಪಡೆದ ಹೆಗ್ಗಳಿಕೆಯನ್ನು ಇನ್ನು ಮುಂದಕ್ಕೂ ಮುಂದುವರಿಸಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾದ ಜಿ. ಜಗನ್ನಾಥ ರೈ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವಿದ್ಯಾವರ್ಜನ ಸಮಯದಲ್ಲಿ ವಿದ್ಯೆ ಹಾಗೂ ಶಾಲೆಯಲ್ಲಿ ನಡೆಯುವ ಪಠ್ಯೇತರ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆದು ಬರಲು ಸಾಧ್ಯವಿದೆ ಎಂದರು.

ಕಡಬ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ರಾಕೇಶ್‌ ರೈ ಕೆಡೆಂಜಿ ಮಾತನಾಡಿ ಮಾದಕ ವ್ಯಸನದ ಹತ್ತಿರಕ್ಕೆ ಹೋಗದೆ ದೂರದವಿದ್ದು ಉತ್ತಮ ಜೀವನ ನಡೆಸೋಣ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬದ ನಿಕಟ ಪೂರ್ವ ಅಧ್ಯಕ್ಷರಾದ ಮಹೇಶ್‌ ಕೆ ಸವಣೂರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರಿಯನ್ನು ಇಟ್ಟುಕೊಂಡಾಗ ಆ ಗುರಿ ಸಾಧನೆಗೋಸ್ಕರ ಸತತ ಅಧ್ಯಯನ, ಪರಿಶ್ರಮದಲ್ಲಿ ತೊಡಗಿಸಿಕೊಂಡಾಗ ಯಶಸ್ಸು ಕಾಣಲು ಸಾಧ್ಯವಿದೆ ಅಂತಹ ವಿದ್ಯಾರ್ಥಿಗಳು ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಉತ್ತಮ ಜೀವನ ನಡೆಸಲು ಸಾಧ್ಯವಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ನೆಲ್ಯಾಡಿ ಸಂತ ಜಾರ್ಜ್‌ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ವಿಶ್ವನಾಥ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವಿದ್ಯಾವರ್ಜನ ಸಮಯದಲ್ಲಿ ಮಾದಕ ವ್ಯಸನಗಳಿಗೆ ಆಕರ್ಷಿತರಾಗದೆ, ತಂದೆ ತಾಯಿಗಳ ಜೊತೆ ಉತ್ತಮ ಬಾಂಧ್ಯವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣ ಬದುಕನ್ನು ಕಟ್ಟಿಕೊಳ್ಳಲು ಹೊರತು ಹಾಳು ಮಾಡಿಕೊಳ್ಳಲ್ಲಿಕ್ಕೆ ಅಲ್ಲ ಎಂಬ ವಾಸ್ತವ ಸತ್ಯವನ್ನು ಅರಿತುಕೊಳ್ಳಬೇಕು. ಜೀವನದಲ್ಲಿ ಸಿಗುವ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಮಾಡಿಕೊಳ್ಳಬೇಕು. ಮಾದಕ ವ್ಯಸನಕ್ಕೆ ಬಲಿಯಾದ ವ್ಯಕ್ತಿ ತಮ್ಮ ಬದುಕಿನಲ್ಲಿ ಎಲ್ಲಾ ಸಂಬಂಧಗಳನ್ನು ಕಳೆದುಕೊಂಡು ಆತ ಕ್ರೂರಿಯಾಗುತ್ತಾನೆ. ಅಂತಹ ವ್ಯಕ್ತಿಗಳು ಮತ್ತೆ ಹೊಸ ಜೀವನವನ್ನು ನಡೆಸಿಕೊಳ್ಳಲು ಹರಸಾಹಸ ಪಡೆಯಬೇಕಾಗುತ್ತದೆ. ಆದುದ್ದರಿಂದ ನಾವೆಲ್ಲ ಅದರಿಂದ ದೂರವಿದ್ದು ನೆಮ್ಮದಿಯ ಜೀವನ ನಡೆಸೋಣ ಎಂದರು.

ವೇದಿಕೆಯಲ್ಲಿ ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಕಾರ್ಯಾಧ್ಯಕ್ಷರಾದ ಗಿರಿಶಂಕರ ಸುಲಾಯ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪದ್ಮಾವತಿ, ಸವಣೂರು ಯುವಕ ಮಂಡಲದ ಅಧ್ಯಕ್ಷರಾದ ಚೇತನ್‌ ಕುಮಾರ್‌ ಕೋಡಿಬೈಲು ಉಪಸ್ಥಿತರಿದ್ದರು. ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕರವರು ಸವಣೂರು ಜೂನಿಯರ್‌ ಕಾಲೇಜಿನ ಗ್ರಂಥಾಲಯಕ್ಕೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪ್ರಕಟಗೊಂಡ ಕಾನೂನು ಪುಸ್ತಕಗಳನ್ನು ಪ್ರಾಂಶುಪಾಲರಾದ ಪದ್ಮಾವತಿಯವರಿಗೆ ಹಸ್ತಾಂತರಿಸಿದರು.

ಸವಣೂರು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸವಣೂರು ಪ್ರೌಢ ಶಾಲಾ ವಿಭಾಗದ ಮುಖ್ಯ ಗುರುಗಳಾದ ಶ್ರೀಮತಿ ಶ್ರೀಲತಾ ಸ್ವಾಗತಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಸವಣೂರು ಪ್ರೌಢ ಶಾಲಾ ವಿಭಾಗದ ಶಿಕ್ಷಕರಾದ ಕಿಶಾನ್‌ ಬಿ ವಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸವಣೂರು ವಲಯದ ಮೇಲ್ವಿಚಾರಕಾರಾದ ಹೇಮಲತಾ ವಂದಿಸಿದರು. ಕಾನೂನು ಸೇವೆಗಳ ಸಮಿತಿಯ ಸಿಬ್ಬಂದಿ ಜ್ಯೋತಿ, ಸೇವಾ ಪ್ರತಿನಿಧಿಗಳಾದ ಅಮಿತಾ, ಮೀನಾಕ್ಷಿ ಮೊದಲಾದವರು ಸಹಕರಿಸಿದರು.

LEAVE A REPLY

Please enter your comment!
Please enter your name here