







ಪುತ್ತೂರು: ಕಳೆದ ಹಲವು ಸಮಯಗಳಿಂದ ಅಡಿಕೆ ಮಾರುಕಟ್ಟೆ ಹಾಗು ಸಾಗಾಟದ ಕುರಿತು ಬಹಳಷ್ಟು ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಈ ಕುರಿತು ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಮಾತುಕತೆ ನಡೆಸಿ ಪರಿಹಾರವನ್ನು ಕಂಡುಕೊಳ್ಳುವಂತೆ ರೈತ ಸಂಘ ಆಗ್ರಹಿಸಿದೆ.



ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ರೂಪೇಶ್ ರೈ ಅಲಿಮಾರ್ ಅವರು ಮಾತನಾಡಿ, ಕರ್ನಾಟಕವು ಭಾರತದ ಅತಿ ದೊಡ್ಡ ಅಡಿಕೆ ಉತ್ಪಾದಕ ರಾಜ್ಯವಾಗಿದೆ. ರೈತರು, ಕೂಲಿ ಕಾರ್ಮಿಕರು, ವ್ಯಾಪಾರಿಗಳು, ಸಾಗಾಣೆದಾರರು, ಸಂಸ್ಕರಣೆ ಘಟಕಗಳು ಸೇರಿದಂತೆ ಲಕ್ಷಾಂತರ ಮಂದಿ ಅಡಿಕೆ ಆಧಾರಿತ ಜೀವನ ನಡೆಸುತ್ತಿದ್ದಾರೆ. ಆದರೆ ಕಳೆದ 15 ರಿಂದ 20 ದಿವಸಗಳಿಂದ ಅಡಿಕೆ ಮಾರುಕಟ್ಟೆ ಹಾಗು ಸಾಗಾಟದ ಕುರಿತು ಬಹಳಷ್ಟು ಗೊಂದಲದ ವಾತಾವರಣ ನಿರ್ಮಾಣ ಆಗಿದೆ. ಇದರಿಂದ ಮಹಾರಾಷ್ಟ್ರ ಮೂಲಕ ಉತ್ತರ ಭಾರತದ ಹಲವು ರಾಜ್ಯಕ್ಕೆ ತೆರಳುವ ಅಡಿಕೆಯನ್ನು ಮಹಾರಾಷ್ಟ್ರದ ಆರೋಗ್ಯ ಇಲಾಖಾ ಆಯುಕ್ತರು ಆಹಾರದ ಕಳಪೆ ಮಟ್ಟದ ಪರಿಶೀಲನೆಯ ನೆಪದಲ್ಲಿ 1 ಸಾವಿರಕ್ಕೂ ಮಿಕ್ಕಿ ಲಾರಿಗಳನ್ನು ತಡೆದು ಅಡಿಕೆ ಬೆಳೆಗಾರರಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಸರಕಾರದ ತಪ್ಪು ನೀತಿಗಳಿಂದ ಈ ಅವ್ಯವಸ್ಥೆ ಆಗಿದೆ. ಈ ಗೊಂದಲಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ಪರಿಹಾರವನ್ನು ಕಂಡುಕೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಭಟ್ ಪಾದೇಕಲ್, ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಪುಚ್ಚೆತ್ತಡ್ಕ, ಕೋಡಿಂಬಾಡಿ ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಕುಮಾರನಾಥ ಎಸ್, ಬೆಳ್ಳಿಪ್ಪಾಡಿ ಘಟಕದ ಅಧ್ಯಕ್ಷ ಮಾರ್ಷಲ್ ವೇಗಸ್, ಕೋಡಿಂಬಾಡಿ ಗ್ರಾಮ ಸಮಿತಿ ಕಾರ್ಯದರ್ಶಿ ಯೋಗೀಶ್ ಎಸ್ ಸಾಮಾನಿ ಸಂಪಿಗೆದಡಿ ಉಪಸ್ಥಿತರಿದ್ದರು.












