







ಉಪ್ಪಿನಂಗಡಿ: 2019 ರಲ್ಲಿ ಭೀಕರ ನೆರೆಗೆ ಸಿಲುಕಿ ಕಾರ್ಯ ಸ್ಥಗಿತಗೊಳಿಸಿದ್ದ ನೀರಕಟ್ಟೆಯ ಸಾಗರ್ ಪವರ್ ಪ್ರಾಜೆಕ್ಟ್ ಎಲ್ಲಾ ಅಡೆತಡೆಗಳನ್ನು ದಾಟಿ 2026 ರ ಈ ಮಳೆಗಾಲದಲ್ಲಿ ಮತ್ತೆ ವಿದ್ಯುತ್ ಉತ್ಪಾದನೆಗೆ ಸಿದ್ದವಾಗಿದೆ.



2019 ರಲ್ಲಿ ನೇತ್ರಾವತಿ ನದಿಯಲ್ಲಿ ಉಂಟಾದ ಭಾರೀ ನೀರಿನ ಪ್ರವಾಹದಿಂದಾಗಿ ಡಿಢೀರ್ ನೆರೆಯುಂಟಾಗಿ ನೆರೆ ನೀರು ವಿದ್ಯುತ್ ಉತ್ಪಾದನಾ ಘಟಕದೊಳಗೆ ನುಗ್ಗಿ ಹಾನಿಯುಂಟಾಗಿತ್ತು. ಇದರ ಪರಿಣಾಮ ವಿದ್ಯುತ್ ಉತ್ಪಾದನಾ ವ್ಯವಸ್ಥೆ ಸ್ಥಗಿತಗೊಂಡಿತ್ತು. ಆ ಬಳಿಕ ಆಡಳಿತಾತ್ಮಕ ಸಮಸ್ಯೆಗಳು ಎದುರಾಗಿ ಕಳೆದ ಐದಾರು ವರ್ಷಗಳಲ್ಲಿ ವಿದ್ಯುತ್ ಉತ್ಪಾದನಾ ಘಟಕ ಸಂಪೂರ್ಣ ಸ್ತಬ್ಧಗೊಂಡು ಅಣೆಕಟ್ಟಿನ ಎಲ್ಲಾ ಗೇಟುಗಳು ತೆರಯಲ್ಪಟ್ಟು ನದಿ ನೀರು ಸರಾಗವಾಗಿ ಹರಿಯುವಂತಾಗಿತ್ತು. ಒಂದು ಹಂತದಲ್ಲಿ ಕೋಟ್ಯಾಂತರ ರೂಪಾಯಿ ವ್ಯಯಿಸಿ ನಿರ್ಮಿಸಲಾದ ಈ ಯೋಜನೆ ನಿಷ್ಪ್ರಯೋಜಕವಾಯಿತೇ ಎಂಬ ಪ್ರಶ್ನೆ ಮೂಡಿತ್ತು. ಸಾಲದಕ್ಕೆ ಈ ಘಟಕದ ನಿರ್ಮಾಣದ ಸಮಯದಲ್ಲೇ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಕುಸಿತವುಂಟಾಗಿ ನಾಲ್ವರು ಸಾವನ್ನಪ್ಪಿದ ಹಿನ್ನೆಲೆಯೂ ಈ ಘಟಕ ಹೊಂದಿತ್ತು. ಅಲ್ಲದೇ ಬ್ಯಾಂಕಿಂಗ್ ವ್ಯವಹಾರದ ಅಡೆತಡೆಯೂ ಘಟಕಕ್ಕೆ ಎದುರಾಗಿತ್ತು.



ಆದರೆ ಈಗ ಬ್ಯಾಂಕಿಂಗ್ ವ್ಯವಹಾರದ ಸೂಕ್ಷ್ಮತೆಯನ್ನು ಬಗೆಹರಿಸಲಾಗಿದ್ದು, ಹೊಸದಾದ ಆಡಳಿತ ವ್ಯವಸ್ಥೆ ರೂಪುಗೊಂಡು ವಿದ್ಯುತ್ ಉತ್ಪಾದನಾ ಘಟಕವನ್ನು ಪುನರಾಂಭಿಸಲು ಮುಂದಾಗಿದೆ. ಅದರಂತೆ ಘಟಕದ ಯಂತ್ರೋಪಕರಣಗಳನ್ನು ಸುಸ್ಥಿತಿಗೊಳಪಡಿಸುವ ಕಾರ್ಯ ಭರದಿಂದ ನಡೆದಿದ್ದು, ಈ ಬಾರಿಯ ಮಳೆಗಾಲದಲ್ಲಿ ವಿದ್ಯುತ್ ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ. ಪ್ರಸಕ್ತ ನೇತ್ರಾವತಿ ನದಿಯಲ್ಲಿ ಅಣೆಕಟ್ಟನ್ನು ನಿರ್ಮಿಸಿ ಚಾರ್ಮಾಡಿ, ದೊಂಡೊಳೆ, ನೆರಿಯ, ಹಣಿಯೂರು ,ನೀರಕಟ್ಟೆ , ಶಂಭೂರು ಹೀಗೆ ಆರು ಕಡೆಗಳಲ್ಲಿ ಜಲವಿದ್ಯುತ್ ಘಟಕಗಳನ್ನು ನಿರ್ಮಿಸಲಾಗಿದೆ. ನದಿಯ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಮೂಲಕ ಪ್ರಾಕೃತಿಕ ಸಂಪತ್ತಿನ ಸದ್ಭಳಕೆಯ ಗುರಿಯನ್ನು ಹೊಂದಲಾಗಿದೆ. ನೀರಕಟ್ಟೆಯ ಘಟಕದಿಂದ 15 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, ಅದನ್ನು ಗುರುವಾಯನಕೆರೆ ಸಬ್ಸ್ಟೇಷನ್ಗೆ ವಿತರಿಸಲಾಗುತ್ತಿತ್ತು. ನೀರಕಟ್ಟೆಯಲ್ಲಿನ ಜಲ ವಿದ್ಯುತ್ ಸ್ಥಾವರದ ಅಣೆಕಟ್ಟಿನಲ್ಲಿ 8 ಗೇಟುಗಳಿದ್ದು, 3 ಟರ್ಮಿನಲ್ ಮೂಲಕ ನೀರು ಹಾಯಿಸಿ ವಿದ್ಯುತ್ ಉತ್ಪಾದನೆಯನ್ನು ಮಾಡಲಾಗುತ್ತಿದೆ.
ಅಣೆಕಟ್ಟಿನ ಗೇಟು ಅಳವಡಿಕೆ: ಈ ಬಗ್ಗೆ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸ್ಥಾವರದ ಮೇನೇಜರ್ ಆಗಿರುವ ಸುರೇಶ್ ಬಂಗೇರರವರು, ಈ ವರ್ಷದ ಮಳೆಗಾಲದಲ್ಲಿ ವಿದ್ಯುತ್ ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ. ಕಳೆದ ಐದಾರು ವರ್ಷಗಳಲ್ಲಿ ಸ್ಥಾವರ ಸ್ಥಗಿತಗೊಂಡ ಕಾರಣಕ್ಕೆ ತಾಂತ್ರಿಕ ವ್ಯವಸ್ಥೆಯಲ್ಲಿ ಸಮರ್ಪಕತೆಯನ್ನು ಸಾಧಿಸಿದ ತಕ್ಷಣ ವಿದ್ಯುತ್ ಉತ್ಪಾದನೆಯನ್ನು ಪ್ರಾರಂಭಿಸಲಾಗುವುದು. ಈ ಕಾರಣಕ್ಕೆ ಕಳೆದ ಎರಡು ದಿನಗಳ ಹಿಂದೆ ಅಣೆಕಟ್ಟಿನ ಎಲ್ಲಾ ಗೇಟುಗಳನ್ನು ಹಾಕಲಾಗಿದ್ದು, ಸಮುದ್ರ ಮಟ್ಟದಿಂದ 38 ಮೀಟರ್ ಎತ್ತರದವರೆಗೆ ನೀರಿನ ಸಂಗ್ರಹವನ್ನು ಈ ಸ್ಥಾವರದಲ್ಲಿ ಹೊಂದುತ್ತೇವೆ. ಅದಕ್ಕಿಂತ ಹೆಚ್ಚಿಗೆ ನೀರು ನದಿಯಲ್ಲಿ ಬಂದಲ್ಲಿ ಗೇಟು ತೆರೆದು ನೀರಿನ ಮಟ್ಟವನ್ನು ಅಗತ್ಯಕ್ಕೆ ತಕ್ಕಂತೆ ಕಾಯ್ದುಕೊಳ್ಳಲಾಗುವುದೆಂದು ತಿಳಿಸಿದ್ದಾರೆ.










