






ನೆಲ್ಯಾಡಿ: ನೆಲ್ಯಾಡಿ-ಕಡಬ ರಸ್ತೆಯ ಪಡುಬೆಟ್ಟು ಸಮೀಪದ ಕಲ್ಲಚೆಡವು ಎಂಬಲ್ಲಿ ರಸ್ತೆಯ ಎರಡು ಬದಿಯಲ್ಲಿದ್ದ ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖೆ ಜೂ.25ರಂದು ತೆರವುಗೊಳಿಸಿದೆ.
ಕಲ್ಲಚೆಡವು ಎಂಬಲ್ಲಿ ರಸ್ತೆಯ ಎರಡು ಬದಿಯಲ್ಲಿ ಬೃಹತ್ ಮರಗಳು ಬೆಳೆದು ನಿಂತಿದ್ದು ರಸ್ತೆಗೆ ಕುಸಿದು ಬೀಳುವಂತೆ ಅಪಾಯಕಾರಿ ಸ್ಥಿತಿಯಲ್ಲಿತ್ತು.



ಅದರ ಅಡಿ ಭಾಗದಿಂದ ಹೆಚ್ಪಿ ಲೈನ್ ವಿದ್ಯುತ್ ತಂತಿ ಸಹ ಹಾದು ಹೋಗಿತ್ತು. ಸದ್ರಿ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಾಹನಗಳು ಓಡಾಟ ನಡೆಸುತ್ತಿದ್ದು, ಪಡುಬೆಟ್ಟು ಅಂಗನವಾಡಿ, ಸರಕಾರಿ ಹಿ.ಪ್ರಾ.ಶಾಲೆ ಮತ್ತು ಹೈಸ್ಕೂಲ್ಗೆ ಹೋಗುವ ನೂರಾರು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ಮರಗಳಿಂದ ಉಂಟಾಗುವ ಸಂಭವನೀಯ ಅಪಾಯದ ಬಗ್ಗೆ ಪಡುಬೆಟ್ಟು ಸೌಹಾರ್ದ ಫ್ರೆಂಡ್ಸ್ ಕ್ಲಬ್ ಹಾಗೂ ಇನ್ನಿತರ ಸಂಘಟನೆಯವರು ನೆಲ್ಯಾಡಿ ಗ್ರಾ.ಪಂ.ನ ಗಮನಕ್ಕೆ ತಂದಿದ್ದರು. ಇದಕ್ಕೆ ಸ್ಪಂದಿಸಿದ ಗ್ರಾ.ಪಂ. ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿತ್ತು. ಗ್ರಾ.ಪಂ.ಮನವಿ ಮೇರೆಗೆ ಅರಣ್ಯ ಇಲಾಖೆಯವರು ಮೆಸ್ಕಾಂನವರ ಸಹಕಾರದೊಂದಿಗೆ ಮರಗಳನ್ನು ತೆರವುಗೊಳಿಸಿ ಸಂಭವನೀಯ ಅಪಾಯವನ್ನು ತಪ್ಪಿಸಿದೆ.



ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷರೂ, ಪಡುಬೆಟ್ಟು ಸೌಹಾರ್ದ ಫ್ರೆಂಡ್ಸ್ ಕ್ಲಬ್ ಅಧ್ಷಕರೂ ಆದ ಸಲಾಂ ಬಿಲಾಲ್, ನೆಲ್ಯಾಡಿ ಗ್ರಾ.ಪಂ.ಮಾಜಿ ಸದಸ್ಯ ಪ್ರಕಾಶ್ ರಾಮನಗರ, ಸೌಹಾರ್ದ ಫ್ರೆಂಡ್ಸ್ ಕ್ಲಬ್ನ ಗೌರವಾಧ್ಯಕ್ಷ ಮಹಾಲಿಂಗ ಕೆ., ಉಪಾಧ್ಯಕ್ಷ ಇಕ್ಬಾಲ್ ಪಡುಬೆಟ್ಟು, ಸಾಮಾಜಿಕ ಕಾರ್ಯಕರ್ತರಾದ ಅಣ್ಣು ಎಂ., ಸುರೇಶ ಮುಂತಾದವರು ಮರ ತೆರವು ಸಂದರ್ಭದಲ್ಲಿ ಉಪಸ್ಥಿತರಿದ್ದರು.









