






ನೆಲ್ಯಾಡಿ: ಕಾರು ಹಾಗೂ ಟ್ಯಾಂಕರ್ ಲಾರಿ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಐವರು ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪದ ಬರ್ಚಿನಹಳ್ಳದಲ್ಲಿ ಜೂ.28ರಂದು ಮಧ್ಯಾಹ್ನ ನಡೆದಿದೆ.


ಕಾರಿನಲ್ಲಿದ್ದ ಸಕಲೇಶಪುರ ನಿವಾಸಿಗಳಾದ ಸಂಜಯ್(34ವ.), ಲಲಿತಾ(45ವ.), ಮೋನಪ್ಪ (56.), ಪ್ರೇಮಾ(34ವ.)ಹಾಗೂ ಸುರೇಶ(39ವ.)ಎಂಬವರು ಗಾಯಗೊಂಡಿದ್ದು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ನೆಲ್ಯಾಡಿಯಿಂದ ಸಕಲೇಶಪುರ ಕಡೆಗೆ ಹೋಗುತ್ತಿದ್ದವರು ಗುಂಡ್ಯ ಸಮೀಪದ ಬರ್ಚಿನಹಳ್ಳ ತಲುಪುತ್ತಿದ್ದಂತೆ ಸಕಲೇಶಪುರದಿಂದ ನೆಲ್ಯಾಡಿ ಕಡೆಗೆ ಬರುತ್ತಿದ್ದ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಐವರು ಗಾಯಗೊಂಡಿದ್ದು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.



ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್:
ಅಪಘಾತ ಹಾಗೂ ವಾಹನ ದಟ್ಟಣೆಯಿಂದ ಗುಂಡ್ಯದಲ್ಲಿ ಜೂ.೨೬ರಂದು ಸಂಜೆ ತನಕವೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸರಣಿ ರಜೆ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ, ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದ ಯಾತ್ರಾರ್ಥಿಗಳ ವಾಹನಗಳಿಂದಾಗಿ ಗುಂಡ್ಯದಲ್ಲಿ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಮಧ್ಯೆ ಬರ್ಚಿನಹಳ್ಳದಲ್ಲಿ ಹೆದ್ದಾರಿ ಮಧ್ಯೆಯೇ ವಾಹನಗಳ ನಡುವೆ ಅಪಘಾತ ನಡೆದಿದ್ದು ಇದರಿಂದ ವಾಹನಗಳ ಸುಗಮ ಓಡಾಟಕ್ಕೆ ಅಡಚಣೆ ಉಂಟಾಗಿತ್ತು. ಮಧ್ಯಾಹ್ನದಿಂದ ಸಂಜೆ ತನಕವೂ ಹೆದ್ದಾರಿಯಲ್ಲಿ ವಾಹನ ದಟ್ಟಣೆಯಿಂದಾಗಿ ಪದೇ ಪದೇ ಟ್ರಾಫಿಕ್ ಜಾಮ್ ಉಂಟಾಗುತಿತ್ತು. ಕಿ.ಮೀ.ದೂರದ ತನಕ ವಾಹನಗಳು ಸಾಲುಗಟ್ಟಿ ನಿಂತಿದ್ದವು. ನೆಲ್ಯಾಡಿ ಹೊರಠಾಣೆ ಪೊಲೀಸರು ಹರಸಾಹಸಪಟ್ಟು ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿದ್ದರು.










