ಮೈಸೂರು ದಸರಾದಲ್ಲಿ ಕಂಬಳಕ್ಕೆ ವಿವಿಧ ಸಂಘಟನೆಗಳ ವಿರೋಧ

0

ಮೈಸೂರು:ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಕ್ರೀಡೆ ಆಯೋಜಿಸುವುದಕ್ಕೆ ಕೆಲವೊಂದು ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.


ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ನಡೆದ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ, ಕಂಬಳ ಆಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲಾಯಿತು.ಕಂಬಳ ಕ್ರೀಡೆಯ ಆಯೋಜನೆ ವಿರುದ್ಧ ವಿವಿಧ ಹಂತದ ಕಾರ್ಯಕ್ರಮ ರೂಪಿಸಲು ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಕ್ರಿಯಾ ಸಮಿತಿ ರಚಿಸಲು ನಿರ್ಣಯಿಸಲಾಯಿತು.


ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ದಸರಾ ಮಹೋತ್ಸವದಲ್ಲಿ ಮೈಸೂರಿನಲ್ಲಿ ಕಂಬಳ ಆಯೋಜನೆ ಸರಿಯಲ್ಲ.ಇದು ಕರಾವಳಿ ಭಾಗದ ಜನಪ್ರಿಯ ಗ್ರಾಮೀಣ ಕ್ರೀಡೆಯಾಗಿದ್ದು,ಇದಕ್ಕೆ ಆ ನೆಲದ ಪ್ರಾದೇಶಿಕ ವೈಶಿಷ್ಟ್ಯತೆ ಇದೆ.ಅದನ್ನು ವಾಣಿಜ್ಯದ ಉದ್ದೇಶದಿಂದ ಮೈಸೂರಿನಲ್ಲಿ ನಡೆಸುವುದನ್ನು ನಾವೆಲ್ಲ ವಿರೋಽಸೋಣ, ಕಂಬಳ ನಡೆಯದಂತೆ ತಡೆಯೋಣ’ ಎಂದು ಹೇಳಿದರು.


ಇತಿಹಾಸ ತಜ್ಞ ಪ್ರೊ|ಎನ್.ಎಸ್.ರಂಗರಾಜು ಮಾತನಾಡಿ, ‘ದಸರಾ ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಕಾಲದಿಂದ ನಡೆಯುತ್ತಿದೆ.ಈ ಉತ್ಸವದಲ್ಲಿ ಕಂಬಳ ನಡೆಸಿದ್ದು ದಾಖಲೆಯಲ್ಲಿ ಇಲ್ಲ. ಹೀಗಿರುವಾಗ ಹೊಸದಾಗಿ ಸೇರ್ಪಡೆ ಮಾಡುವ ಅಗತ್ಯವೇನಿದೆ?’ ಎಂದು ಕೇಳಿದರು.‘ಮೈಸೂರು ದಸರೆಯ ಪರಂಪರೆ, ಹಿರಿಮೆ-ಗರಿಮೆಗೆ ಧಕ್ಕೆ ತರುವ ಇಂತಹ ಕ್ರೀಡೆ ಇಲ್ಲಿ ಬೇಡ’ ಎಂದು ಅವರು ಹೇಳಿದರು.‘ಸ್ಥಳೀಯ ಕಲೆ ಮತ್ತು ಕಲಾವಿದರನ್ನು ಕಡೆಗಣಿಸಿ ಬೇರೆ ಜಿಲ್ಲೆಯ ಕ್ರೀಡೆಯನ್ನು ದಸರಾ ಸಂದರ್ಭದಲ್ಲಿ ಆಯೋಜಿಸುವುದನ್ನು ನಾವು ಒಪ್ಪುವುದಿಲ್ಲ’ ಎಂದು ಪರಿಸರ ಹೋರಾಟಗಾರ್ತಿ ಭಾನುಮೋಹನ್ ಹೇಳಿದರು.

‘ಪರಿಸರಕ್ಕಾಗಿ ನಾವು’ ಸಂಘಟನೆಯ ಕಾರ್ಯಕರ್ತ ಬಾನುಪ್ರಶಾಂತ್, ‘ನಾವೀಗ ಕಂಬಳ ಕ್ರೀಡೆ ನಡೆಯಲು ಬಿಟ್ಟರೆ ಮುಂದೆ ಜಲ್ಲಿಕಟ್ಟು ಕ್ರೀಡೆ, ಕೋಳಿ ಅಂಕ ಮೊದಲಾದವು ಸೇರ್ಪಡೆ ಆಗಬಹುದು. ಆದ್ದರಿಂದ ಕಂಬಳ ಕ್ರೀಡೆ ನಮಗೆ ಬೇಡ’ ಎಂದರು.‘ಪರಿಸರಕ್ಕಾಗಿ ನಾವು ಸಂಘಟನೆ’ಯ ಮುಖಂಡ ಪರಶುರಾಮೇಗೌಡ ಮಾತನಾಡಿ, ‘ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರು ಕಡಿಮೆ ಆಗುತ್ತಿದೆ. ಕೇರಳ, ಮಲೆನಾಡು ಭಾಗದಲ್ಲೂ ಮಳೆ ಆಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೆ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಅದ್ದೂರಿ ದಸರಾ ಬದಲಿಗೆ ಸರಳ ಮತ್ತು ಸಾಂಸ್ಕೃತಿಕ ದಸರಾ ಆಚರಣೆ ಮಾಡುವುದು ಸೂಕ್ತ’ ಎಂದು ಪ್ರತಿಪಾದಿಸಿದರು.


‘ಮರಗಳನ್ನು ಕಡಿದು, ಅಪಾರ ಪ್ರಮಾಣದ ನೀರನ್ನು ಬಳಸಿಕೊಂಡು ಕೆಸರು ಗದ್ದೆಗಳನ್ನು ಸಿದ್ಧಪಡಿಸಿ ಕಂಬಳ ಕ್ರೀಡೆ ಆಯೋಜಿಸುವುದನ್ನು ಮೈಸೂರಿನ ನಾಗರಿಕರು ತೀವ್ರವಾಗಿ ವಿರೋಽಸಬೇಕು’ ಎಂದು ಹೇಳಿದರು.‘ಮೈಸೂರಿನ ಎಲ್ಲಾ ಸಂಘ-ಸಂಸ್ಥೆಗಳು, ಇಲ್ಲಿನ ಪರಂಪರೆ ಮತ್ತು ಪರಿಸರ ಉಳಿಯಬೇಕು ಎಂದು ಬಯಸುವ ಎಲ್ಲರೂ ಒಗ್ಗೂಡಿ ಕಂಬಳ ನಡೆಯದಂತೆ ಹೋರಾಡೋಣ’ ಎಂದರು.

ರೈತ ಮುಖಂಡ ಮಂಜು ಕಿರಣ್, ‘ಈ ಹೋರಾಟಕ್ಕೆ ನಮ್ಮ ಬೆಂಬಲವಿದೆ’ ಎಂದು ತಿಳಿಸಿದರು.‘ಕಂಬಳಕ್ಕಾಗಿ ಈಗ ನಡೆಯುತ್ತಿರುವ ಸಿದ್ಧತೆಗಳನ್ನು ನಿಲ್ಲಿಸಲು ತಕ್ಷಣ ಕಾರ್ಯೋನ್ಮುಖರಾಗುವ ಅಗತ್ಯವಿದೆ’ ಎಂದು ನಿವೃತ್ತ ಮೇಜರ್ ಜನರಲ್ ಎಸ್.ಜಿ. ಒಂಬತ್ಕೆರೆ ಹೇಳಿದರು.

ಶಿಕ್ಷಣ ತಜ್ಞ ಪ್ರೊ|ನಬಿಜಾನ್, ರೈತ ಸಂಘದ ಮೈಸೂರು ವಿಭಾಗದ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಕನ್ನಡ ಕ್ರಿಯಾ ಸಮಿತಿಯ ಸಿದ್ದೇಗೌಡ, ಕನ್ನಡ ಪರ ಹೋರಾಟಗಾರ ಶ್ರೀನಿವಾಸ ಮಿತ್ರ,ಟೀಮ್ ಮೈಸೂರಿನ ಗೋಕುಲ್ ಗೋವರ್ಧನ್, ಪರಿಸರಕ್ಕಾಗಿ ನಾವು ಸಂಘಟನೆಯ ಲೀಲಾ ಶಿವಕುಮಾರ್, ಅಂಜನಾ, ಪ್ರಭಾ, ಸ್ವಪ್ನಾ, ಗಾಯತ್ರಿ, ಸುಮಲತಾ, ಗುರುಸ್ವಾಮಿ, ಅಕ್ಬರ್, ಬಂಗಾರ ನಾಯಕ, ಗಣೇಶ್, ಓಂಶಿವಚರಣ್, ಶೈಲಜೇಶ್, ಸದಾನಂದಯ್ಯ, ರವಿ ಬಳೆ, ರಾಮಸ್ವಾಮಿ, ಸುಬ್ಬರಾವ್, ಗೋಪಾಲ್, ಸುಽರ್ ಗಣಪತಿ, ಪ್ರಗತಿಪರ ಹೋರಾಟಗಾರ ಉಗ್ರನರಸಿಂಹೇಗೌಡ , ವಕೀಲರಾದ ಐಶ್ವರ್ಯಾ, ಕೃಷ್ಣ, ಉಮೇಶ್ ಗೌಡ, ರಾಮು, ಪ್ರಭಾಕರ್ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here