







ನೆಲ್ಯಾಡಿ: ಇಲ್ಲಿನ ಸಂತಜಾರ್ಜ್ ವಿದ್ಯಾಸಂಸ್ಥೆಯ 49ನೇ ಸ್ಥಾಪನಾ ದಿನಾಚರಣೆ ಹಾಗೂ ಸುಮಾರು 7 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಗಣಿತ ಪ್ರಯೋಗಾಲಯದ ಉದ್ಘಾಟನೆ ಜೂ.30ರಂದು ನಡೆಯಿತು.



ಆರಂಭದಲ್ಲಿ ಸಂಸ್ಥೆಯ ಸಂಚಾಲಕ ರೆ.ಫಾ. ನೋಮಿಸ್ ಪಿ. ಕುರಿಯಾಕೋಸ್ ಅವರ ನೇತೃತ್ವದಲ್ಲಿ ಕೃತಜ್ಞತಾ ದಿವ್ಯ ಬಲಿಪೂಜೆ ನಡೆಯಿತು. ಬಳಿಕ ವಿದ್ಯಾರ್ಥಿಗಳ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗಣಿತ ಪ್ರಯೋಗಾಲಯ ಉದ್ಘಾಟಿಸಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೊಬ್ ಎಸ್. ಕೊಯ್ಯೂರು ಮಾತನಾಡಿ, ಯಾವುದೇ ಸ್ವಾರ್ಥವಿಲ್ಲದೆ ದೇವರ ಅನುಗ್ರಹದಿಂದ 49 ವರ್ಷಗಳ ಹಿಂದೆ ಆರಂಭಗೊಂಡ ಈ ಶಿಕ್ಷಣ ಸಂಸ್ಥೆ ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಹೆಮ್ಮೆಯ ಸಂಸ್ಥೆಯಾಗಿ ಬೆಳೆದಿರುವುದು ಶ್ಲಾಘನೀಯ ಸಾಧನೆ ಎಂದರು. ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಮಾತನಾಡಿ, ಶೂನ್ಯದಿಂದ ಆರಂಭಗೊಂಡ ಈ ಶಿಕ್ಷಣ ಸಂಸ್ಥೆ ಇಂದು ಉನ್ನತ ಮಟ್ಟಕ್ಕೆ ಬೆಳೆದಿದೆ. ಸಂಸ್ಥೆಯ ಆರಂಭದ ದಿನಗಳಲ್ಲಿ ಬಿಷಪ್ ಅವರ “ಪ್ರಾರ್ಥಿಸು-ಪ್ರಕಾಶಿಸು-ಪರಿಶ್ರಮಿಸು” ಎಂಬ ಧ್ಯೇಯವಾಕ್ಯವೇ ಸಂಸ್ಥೆಯ ಬೆಳವಣಿಗೆಗೆ ದಿಕ್ಸೂಚಿಯಾಗಿದೆ ಎಂದು ಹೇಳಿದರು.



ಆಡಳಿತ ಮಂಡಳಿ ಉಪಾಧ್ಯಕ್ಷ ರೆ.ಫಾ.ಪಿ.ಕೆ. ಅಬ್ರಹಾಂ ಕೋರ್ ಎಪಿಸ್ಕೋಪಾ, ಬೆಂಗಳೂರು ಟೆಸ್ಕಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ರಿಯಾಜ್ ಎಡಪ್ಪಾಯಿಲ್, ವಿದ್ಯಾಸಂಸ್ಥೆಯ ಕೋಶಾಧಿಕಾರಿ ಪಿ.ಪಿ.ವರ್ಗೀಸ್, ಸಂಸ್ಥೆಯ ಸಂಚಾಲಕ ರೆ.ಫಾ.ನೋಮಿಸ್ ಪಿ. ಕುರಿಯಾಕೋಸ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳಿ ಎಚ್., ಕಾಲೇಜಿನ ಪ್ರಾಚಾರ್ಯ ಏಲಿಯಸ್ ಎಂ.ಕೆ., ಮುಖ್ಯಶಿಕ್ಷಕ ಎಂ.ಐ. ತೋಮಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕೆ. ಸ್ವಾಗತಿಸಿದರು. ಉಪನ್ಯಾಸಕ ಚೇತನ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಮುಖ್ಯಶಿಕ್ಷಕ ಎಂ.ಐ. ತೋಮಸ್ ವಂದಿಸಿದರು.









