ತುಳುಕೂಟ ಕತಾರ್ ನ ನೂತನ ಅಧ್ಯಕ್ಷರಾಗಿ ವಿಜಯ್ ರೈ ಕುಂಬ್ರ ಅವಿರೋಧ ಆಯ್ಕೆ

0

ಪುತ್ತೂರು: ಕತಾರ್‌ನ ಭಾರತೀಯ ರಾಯಭಾರ ಕಚೇರಿಯ ಅಧೀನದಲ್ಲಿರುವ ಇಂಡಿಯನ್ ಕಲ್ಚರಲ್ ಸೆಂಟರ್ (ICC)ನ ಅಂಗಸಂಸ್ಥೆಯಾದ ಪ್ರತಿಷ್ಠಿತ ತುಳುಕೂಟ ಕತಾರ್‌ನ ಮುಂದಿನ ಅಧ್ಯಕ್ಷರಾಗಿ  ವಿಜಯ್ ರೈ ಕುಂಬ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜು.3ರಂದು ಐಸಿಸಿ ಕತಾರ್ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಯಿತು.

ಇತ್ತೀಚೆಗಷ್ಟೇ ತನ್ನ ಬೆಳ್ಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡ ತುಳುಕೂಟ ಕತಾರ್, ಕತಾರ್‌ನ ಅತ್ಯಂತ ಕ್ರಿಯಾಶೀಲ ಹಾಗೂ ಮಾದರಿ ಭಾರತೀಯ ಸಂಘಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಕಳೆದ 26 ವರ್ಷಗಳಿಂದ ಭಾಷೆ, ಸಂಸ್ಕೃತಿ, ಪರಂಪರೆ, ಕ್ರೀಡೆ, ಸಮಾಜಸೇವೆ ಹಾಗೂ ಸಮುದಾಯದ ಏಳಿಗೆಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಘವು ಅನೇಕ ಗಮನಾರ್ಹ ಕಾರ್ಯಕ್ರಮಗಳ ಮೂಲಕ ಸದಸ್ಯರ ವಿಶ್ವಾಸ ಮತ್ತು ಪ್ರೀತಿಯನ್ನು ಗಳಿಸಿದೆ.

ಹಾಲಿ ಅಧ್ಯಕ್ಷರಾದ  ಸಂದೇಶ್ ಆನಂದ್ ಅವರು ಸಭೆಗೆ ಆಗಮಿಸಿದ ಎಲ್ಲಾ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ, ಕಳೆದ ಎರಡು ವರ್ಷಗಳಲ್ಲಿ ಸಂಘವು ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳ ಪಕ್ಷಿನೋಟವನ್ನು ನೀಡಿದರು. ಈ ಅವಧಿಯಲ್ಲಿ ಸಂಘದ ಚಟುವಟಿಕೆಗಳಿಗೆ ಬೆಂಬಲ ನೀಡಿದ ಎಲ್ಲಾ ಸ್ವಯಂಸೇವಕರು, ಪ್ರಾಯೋಜಕರು ಹಾಗೂ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ತಮ್ಮ ಹಾಲಿ ಕಾರ್ಯಕಾರಿ ಮಂಡಳಿಯ ಸದಸ್ಯರಾದ ವಿಜಯ್ ರೈ ಕುಂಬ್ರ,  ಪ್ರವೀಣ ಶೆಟ್ಟಿ,  ಜೀವನ್ ಪ್ರಕಾಶ್, ದಿವ್ಯಶ್ರೀ, ವಿಜಯಾ ಶೆಟ್ಟಿ,  ಸೌರಭ್ ಶೆಟ್ಟಿ,  ಪ್ರಶಾಂತ್ ಗೌಡ,  ನಿಯಾಝ್,  ಮೋಹನ್ ರಾವ್ ಹಾಗೂ  ಜೆರಾಲ್ಡ್ ಡಿ’ಮೆಲ್ಲೋ ಅವರಿಗೆ, ಜೊತೆಗೆ ಸಲಹಾ ಸಮಿತಿಯ ಅಧ್ಯಕ್ಷರಾದ  ಕಿರಣ್ ಆನಂದ್ ಹಾಗೂ ಸದಸ್ಯರಾದ  ಅಸ್ಮತ್ ಅಲಿ ಮತ್ತು  ಚೈತಾಲಿ ಉದಯ್ ಶೆಟ್ಟಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯದರ್ಶಿ ಪ್ರವೀಣ ಶೆಟ್ಟಿ ಅವರು ಹಿಂದಿನ ಮಹಾಸಭೆಯ ವರದಿಯೊಂದಿಗೆ ಕಳೆದ ಎರಡು ವರ್ಷಗಳ ಕಾರ್ಯಚಟುವಟಿಕೆಗಳ ಸಮಗ್ರ ವರದಿಯನ್ನು ಮಂಡಿಸಿದರು. ಖಜಾಂಚಿ ಜೀವನ್ ಪ್ರಕಾಶ್ ಅವರು ಲೆಕ್ಕಪತ್ರವನ್ನು ಸಭೆಯ ಅನುಮೋದನೆಗೆ ಮಂಡಿಸಿದರು.

ಚುನಾವಣಾಧಿಕಾರಿಯಾಗಿದ್ದ ಐಸಿಸಿ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಸದಸ್ಯೆಯಾದ  ಮಿಲನ್ ಅರುಣ್ ಅವರು ಹಾಲಿ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ, ನೂತನ ಕಾರ್ಯಕಾರಿ ಸಮಿತಿಯನ್ನು ಘೋಷಿಸಿದರು.

2026–2028ನೇ ಸಾಲಿನ ಅಧ್ಯಕ್ಷರಾಗಿ ವಿಜಯ್ ರೈ ಕುಂಬ್ರ ಅವರು ಅವಿರೋಧವಾಗಿ ಆಯ್ಕೆಯಾದರು. ಅವರೊಂದಿಗೆ  ಪ್ರವೀಣ ಪ್ರಕಾಶ್ ಶೆಟ್ಟಿ,  ಸುಪ್ರಿಯಾ ಸುರೇಶ್ ಭಟ್,  ಮಹಾಲಕ್ಷ್ಮಿ ವಿಠ್ಠಲ್,  ಸಂಜಯ್ ಜತನ್,  ಮಂಜಪ್ಪ ಕೃಷ್ಣಪ್ಪ ಕರಿಗಾರ್,  ಶೌಕತ್ ಅಲಿ, ಸುಮಂತ್ ಶೆಟ್ಟಿ,  ರೋಸ್ಟನ್ ಡಿಸೋಜಾ,  ಲೋಕೇಶ್ ವಿಶ್ವನಾಥ ಅಮೀನ್ ಹಾಗೂ  ರಾಘವೇಂದ್ರ ಅಂಚನ್ ಅವರು ಕಾರ್ಯಕಾರಿ ಸಮಿತಿಗೆ ಆಯ್ಕೆಯಾದರು.

ನೂತನ ಅಧ್ಯಕ್ಷರಾದ  ವಿಜಯ್ ರೈ ಕುಂಬ್ರ ಅವರು ಮಾತನಾಡಿ, ಸದಸ್ಯರ ಸಲಹೆ, ಸಹಕಾರ ಹಾಗೂ ಮಾರ್ಗದರ್ಶನದೊಂದಿಗೆ ತುಳುಕೂಟ ಕತಾರ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಸ್ಥಾಪಕ ಸದಸ್ಯರಾದ ಕೃಷ್ಣ ಶೆಟ್ಟಿ, ಹಿರಿಯ ಸದಸ್ಯರು ಹಾಗೂ ಪ್ರಾಯೋಜಕರಾದ     ಎಂ. ಪಲ್ಲೋಂಜಿ ಗ್ರೂಪ್‌ನ  ಚಿದಾನಂದ ನಾಯ್ಕ್, ಐಸಿಸಿ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಸದಸ್ಯೆಯಾದ ಶಮಿಲನ್ ಅರುಣ್, ಹಿರಿಯ ಸದಸ್ಯರು ಹಾಗೂ ICBF ನ ಪ್ರಧಾನ ಕಾರ್ಯದರ್ಶಿ  ದೀಪಕ್ ಶೆಟ್ಟಿ, ಸಕ್ರಿಯ ಸದಸ್ಯರು ಹಾಗೂ ಬಿಲ್ಲವಾಸ್ ಕತಾರ್ ಅಧ್ಯಕ್ಷೆ  ಅಪರ್ಣಾ ಶರತ್, ಸಲಹಾ ಸಮಿತಿಯ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರುಗಳಾದ ಕಿರಣ್ ಆನಂದ್,  ಅಸ್ಮತ್ ಅಲಿ ಮತ್ತು  ಚೈತಾಲಿ ಉದಯ್ ಶೆಟ್ಟಿ, ಹಿರಿಯ ಸದಸ್ಯರುಗಳಾದ  ಅಬ್ದುಲ್ಲಾ ಮೋನು, ರೋಶನ್ ಶೆಟ್ಟಿ, ಪದ್ಮಶ್ರೀ ಶೆಟ್ಟಿ, ಶ್ರೀಧರ್ ನಾಯಕ್, ಮನೋಜ್ ಶೆಟ್ಟಿ, ಸುನಿಲ್ ಭಂಡಾರಿ, ಅನಿಲ್ ಶೆಟ್ಟಿ, ಧನಂಜಯ ರೈ, ಚಂದ್ರಶೇಖರ್ ಶೆಟ್ಟಿ ಪೇಜಾವರ, ಸತೀಶ್ ಅಮಿನ್, ಚೈತಾಲಿ ಸುಹಾಸ್ ಶೆಟ್ಟಿ, ಸಾಗರ್ ಕೋಟ್ಯಾನ್ ಸೇರಿದಂತೆ ಹಲವು ಗಣ್ಯರು ಹಾಗೂ ಅನೇಕ ಮಂದಿ ಸದಸ್ಯರು ಉಪಸ್ಥಿತರಿದ್ದರು.

ಉಮೇಶ್ ಆಚಾರ್ಯ ಹಾಗೂ ಮನೋಜ್ ಆಚಾರ್ಯ ಅವರು ಛಾಯಾಗ್ರಹಣ ಹಾಗೂ ವೀಡಿಯೊ ಚಿತ್ರೀಕರಣದಲ್ಲಿ ಸಹಕರಿಸಿದರು.

ಕಾರ್ಯಕ್ರಮವನ್ನು  ಪ್ರವೀಣ ಪ್ರಕಾಶ್ ಶೆಟ್ಟಿ ಅವರು ನಿರೂಪಿಸಿ,  ಸೌರಭ್ ಶೆಟ್ಟಿ  ವಂದಿಸಿದರು.

LEAVE A REPLY

Please enter your comment!
Please enter your name here