







ಶೈಕ್ಷಣಿಕ ಸಾಧಕರಿಗೆ ಗೌರವ,ಪ್ರತಿಭಾ ಪುರಸ್ಕಾರ,ವಿದ್ಯಾರ್ಥಿ ವೇತನ, ಬುಲೆಟಿನ್, ಬಾವುಟ ಬಿಡುಗಡೆ, ಹಿರಿಯ ನಾಟಿವೈದ್ಯೆಗೆ ಸನ್ಮಾನ


ಪುತ್ತೂರು:ಪುತ್ತೂರು ಇನ್ನರ್ವೀಲ್ ಕ್ಲಬ್ನ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.3ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ನಡೆಯಿತು. ನಿವೃತ್ತ ಪ್ರಾಧ್ಯಾಪಕಿ ತಾರಾ ರಾವ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ,ವಿಶೇಷವಾಗಿ ತುಳಸಿ ಗಿಡಕ್ಕೆ ನೀರೆರೆದು, ದೀಪ ಪ್ರಜ್ವಲಿಸಿದರು.ಇದೇ ಸಂದರ್ಭ ಅವರು ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಿದರು.




ಕ್ಲಬ್ನ ನೂತನ ಅಧ್ಯಕ್ಷೆ ಮನೋರಮಾ ಸೂರ್ಯ, ಕಾರ್ಯದರ್ಶಿ ಶ್ರುತಿ ಎಸ್.ಬಂಗೇರ, ಜೊತೆ ಕಾರ್ಯದರ್ಶಿ ವಕೀಲೆ ದೀಪಿಕಾ ಕಜೆ, ಉಪಾಧ್ಯಕ್ಷೆ ಕೃಷ್ಣವೇಣಿ ಮುಳಿಯ, ಕೋಶಾಧಿಕಾರಿ ಕವಿತಾ ಕೊಳತ್ತಾಯ, ಅಂತರ್ರಾಷ್ಟ್ರೀಯ ಸೇವಾ ಘಟಕ (ಐಎಸ್ಒ) ವಕೀಲೆ ಅರುಣಾ ದಿನಕರ್ ರೈ, ಸಂಪಾದಕಿ ಜ್ಯೋತಿ ಎಸ್ ಅವರಿಗೆ ಪದಪ್ರದಾನ ಮಾಡಲಾಯಿತು.ನಿರ್ದೇಶಕರಾದ ರಾಜಿ ಬಲರಾಮ ಆಚಾರ್ಯ, ಮಂಜುಳಾ ಭಾಸ್ಕರ್, ಅಶ್ವಿನಿಕೃಷ್ಣ ಮುಳಿಯ, ವಿಜಯಲಕ್ಷ್ಮಿ ಯೆಳ್ತಿಮಾರ್ ಹಾಗೂ ವೀಣಾ ಬಿ.ಕೆ.ಅವರನ್ನು ಗೌರವಿಸಲಾಯಿತು.
ನಿರ್ಗಮಿತ ಅಧ್ಯಕ್ಷೆ ರೂಪಲೇಖಾ ಸಹಕರಿಸಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.ಇನ್ನರ್ ವೀಲ್ ಕ್ಲಬ್ನ ಪೂರ್ವ ಅಧ್ಯಕ್ಷೆ ಸೀಮಾ ನಾಗರಾಜ್ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು.ಶೋಭಾ ಕೊಳತ್ತಾಯ ಪದಗ್ರಹಣ ಮಾಡಿದ ಅತಿಥಿಯನ್ನು ಪರಿಚಯಿಸಿದರು.ಇದೇ ಸಂದರ್ಭ ನಿರ್ಗಮಿತ ಅಧ್ಯಕ್ಷರಿಗೆ ಮತ್ತು ಕಾರ್ಯದರ್ಶಿಗೆ ಹಾಗೂ ಪದಪ್ರದಾನ ಅಽಕಾರಿಗೆ ಸನ್ಮಾನ ಮಾಡಲಾಯಿತು.

ಸಮಾಜದ ಜಾಗೃತಿಗೆ ಕ್ಲಬ್ ಸಹಕಾರಿ:
ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿದ ಮುಖ್ಯ ಅತಿಥಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ನಿವೃತ್ತ ಪ್ರಾಂಶುಪಾಲೆ ತಾರಾ ರಾವ್ ಅವರು ಮಾತನಾಡಿ ಯಶಸ್ಸು ಪಡೆದಾಗ ಅದರ ಅನುಭವ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ.ಈಗಾಗಲೇ ನೂತನ ತಂಡ ಹಲವಾರು ಯೊಜನೆ ಜಾರಿಗೊಳಿಸಿದ್ದಾರೆ.ಪುತ್ತೂರಿಗೆ ಸಂಬಂಧಿಸಿ 20 ವರ್ಷದ ಊರಿನ ಚಿತ್ರಣ ಬದಲಾಗಿದೆ.ಆದರೆ ಜನರು ಬದಲಾಗಿಲ್ಲ.ಸ್ವಚ್ಛತಾ ಮನೋಭಾವ ಬೆಳೆಸಿಕೊಳ್ಳಬೇಕು.ಇದನ್ನು ಸಂಘ ಸಂಸ್ಥೆಗಳ ಮೂಲಕ ಮಾಡಬೇಕಾಗಿದೆ.ಈ ನಿಟ್ಟಿನಲ್ಲಿ ಸಮಾಜದ ಜಾಗೃತಿಗಾಗಿ ಕ್ಲಬ್ನ ಹಲವು ಯೋಜನೆ ಅಗತ್ಯ.ಕ್ಲಬ್ ಸದಸ್ಯರಾದ ಬಳಿಕ ತನ್ನಿಂತಾನೆ ನಾಯಕತ್ವ ಗುಣಮಟ್ಟ ನಮ್ಮ ಮೈಯಲ್ಲೇ ತುಂಬಿಕೊಳ್ಳುತ್ತದೆ ಎಂದರು.
ಸಮಾಜಮುಖಿ ಕಾರ್ಯ ಮುಂದುವರಿಸೋಣ:
ಇನ್ನರ್ವೀಲ್ ಕ್ಲಬ್ನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಮನೋರಮಾ ಸೂರ್ಯ ಅವರು ಮಾತನಾಡಿ, ಸ್ವಯಂ ಸೇವಾ ಸಂಸ್ಥೆಯಲ್ಲಿ ಸೇವೆಯೇ ಪ್ರದಾನ,ನನ್ನೆಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತಾ ಮುಂದೆ ತಮ್ಮ ಸಹಕಾರ ಸದಾ ಬಯಸುತ್ತೇನೆ ಎಂದರು.ನಮ್ಮ ಸದಸ್ಯರು ಉತ್ತಮ ಸ್ನೇಹ ಜೀವಿಯಾಗಿದ್ದಾರೆ.ಸಮಾಜಮುಖಿ ಕಾರ್ಯಗಳು,ಸ್ನೇಹದ ಬಾಂಧವ್ಯಗಳನ್ನು ಕ್ಲಬ್ನ ಮೂಲಕ ನಾವೆಲ್ಲ ಮುಂದುವರಿಸೋಣ ಎಂದ ಅವರು ಗ್ರೋ ಆಂಡ್ ಫ್ರೋರೀಶ್ ಅನ್ನುವುದು ಇನ್ನರ್ವೀಲ್ ಕ್ಲಬ್ನ ಈ ವರ್ಷದ ಧ್ಯೇಯ ವಾಕ್ಯ.ಅದೇ ರೀತಿ ಅಂತರ್ರಾಷ್ಟ್ರೀಯವಾಗಿ ರೀಚ್ ಆಂಡ್ ಇನ್ಸ್ಪೈರ್ ಕೂಡಾ ನಮ್ಮ ಮುಂದಿದೆ ಎಂದು ಹೇಳಿ,ಸ್ವಯಂ ಸೇವಾ ಯೋಜನೆಯಲ್ಲಿ ಎಲ್ಲರ ಸಹಕಾರ ಕೋರಿದರು.

ಹಲವು ಯಶಸ್ವಿ ಯೋಜನೆ ತೃಪ್ತಿಯಾಗಿದೆ:
ನಿರ್ಗಮಿತ ಅಧ್ಯಕ್ಷೆ ರೂಪಲೇಖಾ ಅವರು ಮಾತನಾಡಿ,ನಾವು ಸೇವೆಯ ಮನೋಭಾವದಿಂದ ಕೆಲಸ ಮಾಡುವಾಗ ಭಗವಂತ ಕೈ ಬಿಡುವುದಿಲ್ಲ ಎಂಬಂತೆ ನನ್ನ ಒಂದು ವರ್ಷದ ಅವಽಯಲ್ಲಿ 47 ಯೋಜನೆಗಳು ಯಶಸ್ವಿಯಾಗಿದೆ.ಸದಸ್ಯರೆಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ.ಸುಮಾರು 6 ಲಕ್ಷ ರೂಪಾಯಿ ಖರ್ಚಿನಲ್ಲಿ 1 ಲಕ್ಷವನ್ನು ಫಿಕ್ಸೆಡ್ ಡೆಪೋಸಿಟ್ ಇಡಲಾಗಿದೆ.ಸುಮಾರು 6 ಸಾವಿರ ಫಲಾನುಭವಿಗಳಗೆ ಸಹಕಾರ ನೀಡಿದ್ದೇವೆ.ಆದರೆ ಈ ಎಲ್ಲಾ ಅಂಕಿಅಂಶಕ್ಕಿಂತ ಸೇವಾ ಮನೋಭಾವ ಸಂತೋಷ ತಂದಿದೆ.ಅದರಲ್ಲೂ ಆಶ್ರಮದ ಮಕ್ಕಳ ಜೊತೆ ಪಿಕ್ನಿಕ್, ಆನಂದಾಶ್ರಮದ ಹಿರಿಯರೊಂದಿಗೆ ದೀಪಾವಳಿ ಆಚರಣೆ ಮನಸ್ಸಿಗೆ ಹತ್ತಿರವಾಗಿದೆ.ಕನಸಿನ ಪ್ರಾಜೆಕ್ಟ್ನಲ್ಲಿ ಡಿವೈಡರ್ಗೆ ಗಾರ್ಡನ್ಗೆ ವಿಶೇಷ ಪ್ರಶಸ್ತಿಯೂ ಲಭಿಸಿದೆ.ಒಟ್ಟಿನಲ್ಲಿ ಇನ್ನರ್ವೀಲ್ ಕ್ಲಬ್ ಪುತ್ತೂರಿನಲ್ಲಿ ಒಳ್ಳೆಯ ಸ್ಥಾನಮಾನ ಪಡೆದಿದೆ ಎಂದು ಹೇಳಿ, ತನ್ನ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕ್ಲಬ್ ಬುಲೆಟಿನ್ ಬಿಡುಗಡೆ:
ಇನ್ನರ್ ವೀಲ್ ಕ್ಲಬ್ ನೂತನ ತಂಡದ ಕ್ಲಬ್ ಬುಲೆಟಿನ್ ಅನ್ನು ರೋಟರಿ ಕ್ಲಬ್ನ ನಿಯೋಜಿತ ಅಧ್ಯಕ್ಷ ಪ್ರೊ|ದತ್ತಾತ್ರೆಯ ರಾವ್ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.ಬುಲೆಟಿನ್ ಸಂಪಾದಕಿ ಜ್ಯೋತಿ ಎಸ್ ಅವರು ಬಿಡುಗಡೆ ಕಾರ್ಯಕ್ರಮ ನಿರ್ವಹಿಸಿದರು.
ಕ್ಲಬ್ನ ಬಾವುಟ ಬಿಡುಗಡೆ:
ಪ್ರತಿ ವರ್ಷ ಇನ್ನರ್ ವೀಲ್ ಕ್ಲಬ್ನ ನೂತನ ತಂಡ ಒಂದೊಂದು ವಿಚಾರ ಮುಂದಿಟ್ಟು ಬಾವುಟ ಬಿಡುಗಡೆ ಮಾಡುತ್ತಾರೆ.ಈ ಬಾರಿಯ ಬಾವುಟದಲ್ಲಿ ವಾಣಿಜ್ಯಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಅಡಿಕೆ, ಜನಪದ ಕ್ರೀಡೆಯಾಗಿ ಕಂಬಳ, ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಗೇರು ಹಣ್ಣಿನ ಚಿತ್ರಗಳ ಸಹಿತ ದಕ್ಷಿಣ ಕನ್ನಡದ ಸಂಸ್ಕೃತಿಯನ್ನು ಬಿಂಬಿಸಲಾಗಿದೆ.ಐಎಸ್ಒ ಅರುಣಾ ದಿನಕರ್ ರೈ ಕಾರ್ಯಕ್ರಮ ನಿರ್ವಹಿಸಿದರು.

ಹೊಸ ಸದಸ್ಯರ ಸೇರ್ಪಡೆ:
ಇನ್ನರ್ವೀಲ್ ಕ್ಲಬ್ಗೆ ಹೊಸ ಸದಸ್ಯರಾಗಿ ಸೇರ್ಪಡೆಗೊಂಡ ವಸಂತಲಕ್ಷ್ಮೀ, ಡಾ|ಶೋಭಿತಾ ಸತೀಶ್ ಅವರಿಗೆ ಕ್ಲಬ್ ಅಧ್ಯಕ್ಷೆ ಮನೋರಮಾ ಸೂರ್ಯ ಅವರು ಕ್ಲಬ್ ಚಿಹ್ನೆ ನೀಡಿ ಗೌರವಿಸಿದರು.
ಹಿರಿಯ ಸದಸ್ಯೆಗೆ ಗೌರವ:
ಸ್ಥಾಪಕ ಸದಸ್ಯೆಯಾಗಿರುವ ಹಿರಿಯರಾದ ಪುಷ್ಪಾ ಅವರನ್ನು ಗೌರವಿಸಲಾಯಿತು.ಗೌರವ ಸ್ವೀಕರಿಸಿದ ಅವರು ಸದಸ್ಯರಿಗೆ ಸಂದೇಶ ನೀಡಿದರು.
ನಾಟಿವೈದ್ಯೆಗೆ ಗೌರವ:
ನಾಟಿವೈದ್ಯೆಯಾಗಿದ್ದು ‘ಸುಲಭ ಔಷಧಿ’ ಪುಸ್ತಕ ಬರೆದ ಹಿರಿಯರಾದ ಲಕ್ಷ್ಮೀ ಬಳ್ಳಕ್ಕುರಾಯ ಅವರನ್ನು ಕ್ಲಬ್ ವತಿಯಿಂದ ಗೌರವಿಸಲಾಯಿತು.ಕ್ಲಬ್ನ ಪೂರ್ವ ಅಧ್ಯಕ್ಷೆ ಸೀಮಾ ನಾಗರಾಜ್ ಪರಿಚಯಿಸಿದರು.
ವಿದ್ಯಾ ನಿಧಿ ಹಸ್ತಾಂತರ:
2025-26ನೇ ಶೈಕ್ಷಣಿಕ ವರ್ಷದಲ್ಲಿ ಶಂಕರಿ ಎಂ.ಎಸ್ ಭಟ್, ಮತ್ತು ಡಾ.ಎಂ.ಎಸ್ ಭಟ್ ಅವರಿಂದ ಇಬ್ಬರು ವಿದ್ಯಾರ್ಥಿಗಳಿಗೆ ಶಾಲಾ ಶೈಕ್ಷಣಿಕ ಶುಲ್ಕ ವಿತರಿಸುವ ಕಾರ್ಯಕ್ರಮ ನಡೆಯಿತು. ಕ್ಲಬ್ನ ಅಧ್ಯಕ್ಷೆ ಮನೋರಮಾ ಸೂರ್ಯ ಅವರು ಪದವಿ ವಿದ್ಯಾರ್ಥಿಗೆ ವಿದ್ಯಾರ್ಥಿವೇತನ ಹಸ್ತಾಂತರಿಸಿದರು.ಅದೇ ರೀತಿ ಕ್ಲಬ್ನ ಮಾಜಿ ಅಧ್ಯಕ್ಷೆ ಪ್ರಮೀಳಾ ರಾವ್ ಇಂಜಿನಿಯರಿಂಗ್ ವಿದ್ಯಾರ್ಥಿಗೆ ವಿದ್ಯಾರ್ಥಿವೇತನ ನೀಡಿದರು.
ಕ್ಲಬ್ ಸದಸ್ಯರ ಮಕ್ಕಳಿಗೆ ಗೌರವ:
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಕಿ ಉತ್ತಮ ಅಂಕ ಗಳಿಸಿದ ಕ್ಲಬ್ ಸದಸ್ಯರ ಮಕ್ಕಳಾದ ಕೀರ್ತಿಕಾರ್ಯಪ್ಪ,ಆಪ್ತ ಚಂದ್ರಮತಿ ಮುಳಿಯ, ಚಿರಾಗ್ ದೀಪಕ್ ಗೌಡ, ಇಶಿತಾ ನಾಯರ್, ಅರುಂಧತಿ, ಮುಕುಂದಕೃಷ್ಣ ಮುಳಿಯ, ಮಂದಿರ ಕಜೆ, ಲ್ಯಾಸ್ಯ ಸಂತೋಷ ಅವರನ್ನು ಗೌರವಿಸಲಾಯಿತು.ಪೂರ್ವಾಧ್ಯಕ್ಷರಾದ ರಾಜೇಶ್ವರಿ, ಅಶ್ವಿನಿಕೃಷ್ಣ ಮುಳಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ಲೇಡಿಸಿಂಗ್ ವಿಂಗ್ನಿಂದ ಜು.26ಕ್ಕೆ ಆರೋಗ್ಯ ಮಾಹಿತಿ ಕಾರ್ಯಕ್ರಮವು ಮನೀಷಾ ಹಾಲ್ನಲ್ಲಿ ನಡೆಯಲಿದೆ ಎಂದು ಡಾ.ಸುಲೇಖಾ ವರದರಾಜ್ ಅವರು ಸಭೆಗೆ ತಿಳಿಸಿದರು.
ನಿರ್ಗಮಿತ ಕಾರ್ಯದರ್ಶಿ ಸಂಧ್ಯಾ ಸಾಯ ವರದಿ ವಾಚಿಸಿದರು.ಇನ್ನರ್ಕ್ಲಬ್ನ ಇತರ ತಾಲೂಕು ಮತ್ತು ಜಿಲ್ಲಾ ಘಟಕಗಳ ಪದಾಧಿಕಾರಿಗಳ ಶುಭ ಹಾರೈಕೆ ಪತ್ರವನ್ನು ಶ್ರುತಿ ಬಂಗೇರ ಅವರು ಮಂಡಿಸಿದರು.ರಮಾಪ್ರಭಾಕರ್ ಪ್ರಾರ್ಥಿಸಿದರು.ಶಾಂತೇರಿ ಶೆಣೈ ಇನ್ನರ್ ವೀಲ್ ಪ್ರಾರ್ಥನೆ ನಡೆಸಿದರು.ನಿರ್ಗಮಿತ ಅಧ್ಯಕ್ಷೆ ರೂಪಲೇಖಾ ಸ್ವಾಗತಿಸಿ, ಉಪಾಧ್ಯಕ್ಷೆ ಕೃಷ್ಣವೇಣಿ ಮುಳಿಯ ವಂದಿಸಿದರು.ಕ್ಲಬ್ನ ಜೊತೆ ಕಾರ್ಯದರ್ಶಿ ದೀಪಿಕಾ ಕಜೆ, ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.ಸಭೆಯಲ್ಲಿ ರೋಟರಿ ಕ್ಲಬ್ನ ಕೆ.ಆರ್.ಶೆಣೈ, ಪ್ರೊ|ದತ್ತಾತ್ರೆಯ ರಾವ್, ರೋಟರಿ ಕ್ಲಬ್ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಡಾ.ಸೂರ್ಯನಾರಾಯಣ, ಸಾಕೇತ್, ಡಾ.ಎಂ.ಎಸ್ ಭಟ್, ಭುಜಂಗ ಆಚಾರ್ಯ, ಶಿವಪ್ರಸಾದ್, ಡಾ.ಸುಲೇಖವರದರಾಜ್, ಶಶಿಧರ್ ಕಿನ್ನಿಮಜಲು, ಡಾ|ಪೀಟರ್ ವಿಲ್ಸನ್ ಪ್ರಭಾಕರ್, ಹರ್ಷ ಕುಮಾರ್,ಡಾ.ಶ್ಯಾಮ್, ಡಾ.ಶ್ರೀಪ್ರಕಾಶ್, ಝೇವಿಯರ್ ಡಿ’ಸೋಜ, ಮಹಮ್ಮದ್ ಶಾಕೀರ್, ಉಲ್ಲಾಸ್ ಪೈ, ಮೌನೇಶ್ ವಿಶ್ವಕರ್ಮ, ಶಿವರಾಮ್, ಈಶ,ಶ್ರೀಧರ್, ಶಿವರಾಮ್ ಏನೆಕಲ್, ಪ್ರದೀಪ್ ಶೆಟ್ಟಿ, ಸುಶಾಂತ್, ಭರತ್ ಪೈ, ಚಿದಾನಂದ ಬೈಲಾಡಿ, ಶ್ರೀಧರ್ ಗೌಡ ಕಣಜಾಲು, ಕುಸುಮ್ರಾಜ್, ನರಸಿಂಹ ಪೈ, ರವಿ ಕುಮಾರ್ ರೈ ಮಠ, ಶಿವರಾಮ್ ಮತಾವು ಸಹಿತ ಹಲವಾರು ಮಂದಿ ರೋಟರಿ ಸದಸ್ಯರು ಉಪಸ್ಥಿತರಿದ್ದರು.
ವಿಶೇಷ ವ್ಯಕ್ತಿತ್ವದ ಅಧ್ಯಕ್ಷರು
ಮನೋರಮಾ ಸೂರ್ಯ ಅವರು ಅನೇಕ ವರ್ಷ ‘ತರಂಗ’ವಾರ ಪತ್ರಿಕೆಯ ಉಪಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ.ಇವರ ಪತಿ ಪುತ್ತೂರು ಸಿಟಿ ಆಸ್ಪತ್ರೆ ಪಾಲುದಾರ ನಿರ್ದೇಶಕ ಡಾ. ಸೂರ್ಯನಾರಾಯಣ ಅವರು 2028-29ನೇ ಸಾಲಿನ ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಆಗಿ ಆಯ್ಕೆಗೊಂಡಿದ್ದಾರೆ.ಪುತ್ರ ಮಣಿಪಾಲದಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಮನೋರಮಾ ಸೂರ್ಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆದ ಆರಂಭದಿಂದಲೇ ಹಲವಾರು ಯೋಜನೆ, ಕಾರ್ಯಕ್ರಮ ಹಾಕಿಕೊಂಡಿದ್ದಾರೆ.ಸಭಾ ಕಾರ್ಯಕ್ರಮದಲ್ಲಿ ಇವರು ಎಲ್ಲರನ್ನೂ ಆದರದಿಂದ ಸ್ವಾಗತಿಸಿ, ಹಿರಿಯರನ್ನು ಗೌರವಿಸುತ್ತಿದ್ದರು.ವೇದಿಕೆಯಿಂದ ಕೆಳಗಿಳಿದು ಹಿರಿಯರಾದ ಕೆ.ಆರ್ ಶೆಣೈ ಅವರ ಬಳಿಗೆ ಹೋಗಿ ಆಶೀರ್ವಾದ ಪಡೆದುಕೊಂಡು, ಅವರನ್ನು ಗೌರವಿಸಿದರು.










