ಸರ್ವೋದಯ ಪ್ರೌಢಶಾಲೆಯಲ್ಲಿ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮ

0

ಪೆರಿಯಡ್ಕ: ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಲಕ್ಷ್ಮಿ ಪಿ. ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಜೀವನಶೈಲಿ, ಉತ್ತಮ ಸಂಸ್ಕಾರ ಹಾಗೂ ಜವಾಬ್ದಾರಿಯುತ ಬದುಕಿನ ಅರಿವು ಮೂಡಿಸುವ ಮಹತ್ವದ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ಶಿವಪ್ಪ ಎಂ.ಕೆ., ಪ್ರಗತಿ ಬಂಧು ಸ್ವಸಹಾಯ ಸಂಘದ ವಲಯಾಧ್ಯಕ್ಷರಾದ ನಾರಾಯಣ ಕೆಳಗಿನಮನೆ, ಜನಜಾಗೃತಿ ವಲಯ ಅಧ್ಯಕ್ಷರಾದ ಪ್ರಶಾಂತ್ ಪೆರಿಯಡ್ಕ, ಸೇವಾ ಪ್ರತಿನಿಧಿಗಳಾದ ಮಮತಾ ಆಲಾಜೆ, ಶಶಿ ಪಿ. ಹಾಗೂ ಬೇಬಿ ಉಪಸ್ಥಿತರಿದ್ದರು.

ಆನ್‌ಲೈನ್ ಮೂಲಕ ಸಂಪನ್ಮೂಲ ವ್ಯಕ್ತಿಗಳಾದ ಡಾ. ವೆಂಕಟೇಶ್ ಪ್ರಸನ್ನ ಎಸ್.ಪಿ., ಬೆಂಗಳೂರು ಹಾಗೂ ಖ್ಯಾತ ಹೃದ್ರೋಗ ತಜ್ಞರಾದ ಡಾ. ದೇವಿ ಪ್ರಸಾದ್ ಶೆಟ್ಟಿ, ಬೆಂಗಳೂರು ಅವರು ಮಾದಕ ವಸ್ತುಗಳ ದುಷ್ಪರಿಣಾಮಗಳು, ಅವುಗಳಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಹಾಗೂ ಅವುಗಳಿಂದ ದೂರವಿರುವ ಅಗತ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು. ಉತ್ತಮ ಜೀವನಶೈಲಿ, ಆರೋಗ್ಯ ಸಂರಕ್ಷಣೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರದ ಬಗ್ಗೆ ಅಮೂಲ್ಯ ಮಾರ್ಗದರ್ಶನ ನೀಡಿದರು.

ಹಾಗೆಯೇ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಅಮ್ಮನವರು ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಯುವಜನರ ಜವಾಬ್ದಾರಿ ಮತ್ತು ಉತ್ತಮ ಮೌಲ್ಯಗಳ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಹೆಚ್ಚಿಸಲು ಸಹಕಾರಿಯಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲರೂ ಆರೋಗ್ಯಕರ ಜೀವನ ನಡೆಸುವ ಸಂಕಲ್ಪವನ್ನು ಕೈಗೊಂಡರು.

ಒಕ್ಕೂಟದ ಅಧ್ಯಕ್ಷರಾದ ವಸಂತಿ ಬೊಳ್ಳಾವು ಸ್ವಾಗತಿಸಿದರು. ಶಿಕ್ಷಕಿ ಸವಿತಾ ಪಿ.ಸಿ. ವಂದಿಸಿದರು. ಸಂಸ್ಥೆಯ ಶಿಕ್ಷಕ ವೃಂದದವರು ಸಹಕರಿಸಿದರು. ಶಿವಪ್ಪ ಎಂ.ಕೆ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here