







ಮಂಗಳೂರು: ದೇಶದ ಕುಗ್ರಾಮಗಳು ಸೇರಿದಂತೆ ಮೊಬೈಲ್ ನೆಟ್ವರ್ಕ್ ಸಿಗದ ಪ್ರದೇಶಗಳ ಸಂಪರ್ಕ ಸಮಸ್ಯೆಗೆ ಪರಿಹಾರವಾಗಿ ಬಿಎಸ್ಎನ್ಎಲ್ ಸ್ಯಾಟಲೈಟ್ ಫೋನ್ ಸೇವೆಯನ್ನು ಪರಿಚಯಿಸಿದೆ.


ಸಾಮಾನ್ಯ ಸ್ಮಾರ್ಟ್ಫೋನ್ಗಳಂತೆ ಸೆಲ್ಯುಲಾರ್ ಟವರ್ ಅವಲಂಬಿಸದೇ ನೇರವಾಗಿ ಉಪಗ್ರಹದ ಮೂಲಕ ಸಂಪರ್ಕ ಕಲ್ಪಿಸುವಂತೆ ಈ ಫೋನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇನ್ಮರ್ಸಾಟ್ನ ಜಾಗತಿಕ ಉಪಗ್ರಹ ನೆಟ್ವರ್ಕ್ ಸಹಭಾಗಿತ್ವದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.



ನೆಟ್ವರ್ಕ್ ಇಲ್ಲದ ಪ್ರದೇಶಗಳಿಂದ ಕರೆ ಮಾಡಲು, SOS ತುರ್ತು ಸಂದೇಶ ಕಳುಹಿಸಲು ಮತ್ತು ದೀರ್ಘಕಾಲ ಬ್ಯಾಟರಿ ಬಾಳಿಕೆ ಈ ಫೋನ್ನ ಪ್ರಮುಖ ವೈಶಿಷ್ಟ್ಯಗಳಾಗಿವೆ.
ಯಾರು ಬಳಸಬಹುದು?
ರಕ್ಷಣಾ ಇಲಾಖೆ, ಸಮುದ್ರ ನೌಕರರು, ವಿಪತ್ತು ನಿರ್ವಹಣಾ ತಂಡ, ಗಣಿಗಾರಿಕೆ ಮತ್ತು ಕೈಗಾರಿಕಾ ಪ್ರದೇಶದವರು, ಸಾಹಸ ಪ್ರವಾಸಿಗರು ಮತ್ತು ದುರ್ಗಮ ಪ್ರದೇಶದಲ್ಲಿ ಪ್ರಯಾಣಿಸುವವರು ಈ ಫೋನ್ ಬಳಸಬಹುದು. ಸಾಮಾನ್ಯ ಗ್ರಾಹಕರು ಇದನ್ನು ಖರೀದಿಸಲು ಅವಕಾಶವಿಲ್ಲ.
ಬೆಲೆ ಮತ್ತು ಅನುಮತಿ
ಒಂದು ಸ್ಯಾಟಲೈಟ್ ಫೋನ್ನ ಬೆಲೆ ₹1,34,166 ಆಗಿದೆ. ಫೋನ್ ಖರೀದಿಸುವ ಮತ್ತು ಬಳಸುವ ಮೊದಲು ದೂರಸಂಪರ್ಕ ಇಲಾಖೆ – DoT ಯಿಂದ ಕಡ್ಡಾಯ ಅನುಮತಿ ಪಡೆಯಬೇಕು. ಅನುಮತಿಯಿಲ್ಲದೆ ಹೊಂದಿರುವುದು ಕಾನೂನುಬದ್ಧ ಅಪರಾಧ ಎಂದು ಬಿಎಸ್ಎನ್ಎಲ್ ಸ್ಪಷ್ಟಪಡಿಸಿದೆ.ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಬಿಎಸ್ಎನ್ಎಲ್ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ 9768866652 ಸಂಖ್ಯೆಗೆ ಕರೆ ಮಾಡಬಹುದು.










