ರೋಟರಿ ಪುತ್ತೂರು ಸ್ವರ್ಣ ಪದ ಪ್ರದಾನ

0

ನೊಂದವರಿಗೆ ಬೆಳಕಾಗುವುದು ರೋಟರಿ ಆಶಯ ಶ್ಲಾಘನೀಯ-ವಾಲ್ಟರ್ ನಂದಳಿಕೆ

ಪುತ್ತೂರು:ಸಮಾಜದಲ್ಲಿ ಬದಲಾವಣೆ ಮಾಡಬೇಕು, ಸಮಾಜದಲ್ಲಿನ ನೊಂದವರ ಬಾಳಿನಲ್ಲಿ ಮಂದಹಾಸ ಮೂಡಬೇಕು, ಸಮಾಜವನ್ನು ಬೆಳಗಿಸಬೇಕು ಎನ್ನುವುದು ರೋಟರಿ ಸಂಸ್ಥೆಯ ಧ್ಯೇಯ ಶ್ಲಾಘನೀಯ. ಸ್ವಾರ್ಥರಹಿತ ಸೇವೆಯ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದೆ ಎಂದು ಮುಖ್ಯ ಅತಿಥಿ, ಮಂಗಳೂರಿನ ದಾಯ್ಜಿ ವಲ್ಡ್೯ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ವಾಲ್ಟರ್ ನಂದಳಿಕೆರವರು ಹೇಳಿದರು.


ಜು.೯ ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ಸಂಜೆ ನಡೆದ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಜೀವನದ ಖುಶಿ, ನೆಮ್ಮದಿ, ಸಂತೋಷ ಅದು ನಮ್ಮ ಕೈಯಲ್ಲಿದೆ. ಬೇರೆಯವರ ಹೊಗಳಿಕೆಗೆ, ತೆಗಳಿಕೆಗೆ ತಲೆ ಕೆಡಿಸಿಕೊಳ್ಳಬೇಡಿ. ಸಾಮಾಜಿಕ ಚಟುವಟಿಕೆಗಳಲ್ಲಿ ನಾವು ನಿಸ್ವಾರ್ಥವಾಗಿ ತೊಡಗಿಸಿಕೊಂಡಾಗ ಕ್ಲಬ್ ಯಶಸ್ವಿಯಾಗಿ ಸಾಗುವುದು ಎಂದರು.


ರೋಟರಿ ಅಧ್ಯಕ್ಷ ಹುದ್ದೆ ಅದು ಜವಾಬ್ದಾರಿಯ ಹುದ್ದೆ-ಪ್ರೊ|ದತ್ತಾತ್ರೇಯ ರಾವ್:
ಜಿಲ್ಲೆಯ ಹಿರಿಯ ಕ್ಲಬ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್‌ರವರು ಕ್ಲಬ್ ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ನೆರವೇರಿಸಿ ಮಾತನಾಡಿ, ಅಂತರರಾಷ್ಟ್ರೀಯ ರೋಟರಿಯಲ್ಲಿ ನಮಗೆ ಕೊಡುವ ಅಧ್ಯಕ್ಷ ಹುದ್ದೆ ಅದು ಜವಾಬ್ದಾರಿಯ ಹುದ್ದೆಯಾಗಿದೆ. ಸಮಾಜಕ್ಕೆ, ಜನರಿಗೆ ಒಳ್ಳೆಯದು ಮಾಡಲಿಕ್ಕೆ ಅದು ವೇದಿಕೆಯಾಗಿದೆ. ರೋಟರಿ ಏನು ಮಾಡುತ್ತದೆ ಎಂದವರಿಗೆ ರೋಟರಿ ಸದಸ್ಯನಾದ ಮೇಲೆ ಗೊತ್ತಾಗುತ್ತದೆ ರೋಟರಿ ಏನೆಂಬುದು. ರೋಟರಿ ಮುಖೇನ ನೀಡುವ ದೇಣಿಗೆ ಅದು ಯಾರಿಗೆ ಸಲ್ಲಬೇಕು ಅಲ್ಲಿ ಸಲ್ಲುತ್ತದೆ. ರೋಟರಿಯಲ್ಲಿ ಜಾತಿ, ಧರ್ಮ, ಮೇಲು-ಕೀಳು ಎಂದು ಇಲ್ಲ, ಇಲ್ಲಿ ಎಲ್ಲರೂ ಸಮಾನರೇ ಎಂದರು.


ಆಶಾ ರೆಬೆಲ್ಲೋರವರಲ್ಲಿ ಕನಸುಗಳನ್ನು ಸಾಧಿಸುವ ಛಲವಿದೆ-ಪ್ರೊ|ಝೇವಿಯರ್ ಡಿ’ಸೋಜ:
ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರೊ|ಝೇವಿಯರ್ ಡಿ’ಸೋಜರವರು ಕ್ಲಬ್ ಬುಲೆಟಿನ್ ಅನಾವರಣಗೊಳಿಸಿ ಮಾತನಾಡಿ, ಸಾಕಷ್ಟು ಕನಸುಗಳನ್ನು ಹೊತ್ತುಕೊಂಡು ಆಶಾ ರೆಬೆಲ್ಲೋರವರು ಕ್ಲಬ್ ಅಧ್ಯಕ್ಷರಾಗಿದ್ದಾರೆ ಮಾತ್ರವಲ್ಲ ಅವರಲ್ಲಿ ಕನಸುಗಳನ್ನು ಸಾಧಿಸುವ ಛಲವಿದೆ. ಕ್ಲಬ್ ಪೂರ್ವಾಧ್ಯಕ್ಷರು ಕ್ಲಬ್‌ನ್ನು ಮುನ್ನೆಡೆಸಿಕೊಂಡು ಬಂದಿದ್ದು ಕ್ಲಬ್‌ನ ಮುಂದಿನ ಯೋಜನೆಗಳು ಯಶಸ್ವಿಯಾಗಲಿ ಎಂದರು.


ಕನಸುಗಳು ನನಸಾಗಿ ಕ್ಲಬ್ ಸ್ವರ್ಣಮಯ ಹೊಂದಲಿ-ಸುಂದರ ರೈ:
ರೋಟರಿ ವಲಯ ಸೇನಾನಿ, ರೋಟರಿ ಸ್ವರ್ಣ ಪೂರ್ವಾಧ್ಯಕ್ಷ ಸುಂದರ್ ರೈ ಬಲ್ಕಾಡಿ ಮಾತನಾಡಿ, ಕ್ಲಬ್ ಪೂರ್ವಾಧ್ಯಕ್ಷ ಸುಭಾಷ್ ರೈರವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದರೂ ಬಿಡುವಿಲ್ಲದ ಸಮಯದಲ್ಲೂ ಕ್ಲಬ್‌ನಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ. ನೂತನ ಅಧ್ಯಕ್ಷೆ ಆಶಾ ರೆಬೆಲ್ಲೋರವರು ಹಲವಾರು ಕನಸುಗಳನ್ನು ಹೊಂದಿದ್ದು, ಆ ಕನಸುಗಳು ನನಸಾಗಿ ಕ್ಲಬ್ ಸ್ವರ್ಣಮಯ ಹೊಂದಲಿ ಎಂದರು.


ಕ್ಲಬ್‌ನಲ್ಲಿ ಮಹಿಳೆಯರು ಅಧ್ಯಕ್ಷರಾಗಿರುವುದು ಸಾಕ್ಷಿಯಾಗಿದೆ-ಚಿದಾನಂದ ಬೈಲಾಡಿ:
ಕ್ಲಬ್ ಜಿ.ಎಸ್.ಆರ್ ಚಿದಾನಂದ ಬೈಲಾಡಿ ಮಾತನಾಡಿ, ಕಳೆದ ಹನ್ನೊಂದು ವರ್ಷಗಳಿಂದ ಕ್ಲಬ್ ಪೂರ್ವಾಧ್ಯಕ್ಷರು ಕ್ಲಬ್ ಅನ್ನು ಯಶಸ್ವಿಯಾಗಿ ಮುನ್ನೆಡೆಸಿಕೊಂಡು ಬಂದಿದ್ದಾರೆ. ೬೦ ವರ್ಷದ ಪುತ್ತೂರಿನ ಹಿರಿಯ ಕ್ಲಬ್ ರೋಟರಿ ಪುತ್ತೂರು ಅನ್ನು ಮಗನ ಪ್ರಾಯದಲ್ಲಿನ ರೋಟರಿ ಸ್ವರ್ಣ ಮೀರಿಸಿದೆ ಎಂದರೆ ತಪ್ಪಾಗದಿರದು. ರೋಟರಿ ಪುತ್ತೂರಿನ ಚರಿತ್ರೆಯಲ್ಲಿಯೇ ಮಹಿಳೆ ಅಧ್ಯಕ್ಷರಾಗದಿರುವುದು ಆದರೆ ರೋಟರಿ ಸ್ವರ್ಣದಲ್ಲಿ ಮಹಿಳೆಯರು ಅಧ್ಯಕ್ಷರಾಗಿರುವುದು ಸಾಕ್ಷಿಯಾಗಿದೆ. ನಾವೆಲ್ಲಾ ರೋಟರಿ ಚಳುವಳಿಯಲ್ಲಿ ತೊಡಗಿಸಿಕೊಂಡಾಗ ರೋಟರಿ ಸಂಸ್ಥೆ ಬೆಳೆಯುತ್ತದೆ ಎಂದರು.


ಸೇವೆಗಳು ನಿಂತ ನೀರಾಗಬಾರದು, ನಿರಂತರ ಹರಿಯಬೇಕು-ಸುಭಾಷ್ ರೈ:
ಕ್ಲಬ್ ನಿರ್ಗಮಿತ ಅಧ್ಯಕ್ಷ ಸುಭಾಷ್ ರೈ ಬೆಳ್ಳಿಪ್ಪಾಡಿ ಮಾತನಾಡಿ, ಪುತ್ತೂರಿನ ಎಲ್ಲಾ ರೋಟರಿ ಕ್ಲಬ್‌ಗಳ ಪದಾಧಿಕಾರಿಗಳು ಕ್ಲಬ್‌ನ ಯಶಸ್ವಿಗೆ ಸಹಕರಿಸಿದ್ದಾರೆ. ರೋಟರಿ ಸಂಸ್ಥೆಯಲ್ಲಿ ಸಮಾಜಮುಖಿ ಕಾರ್ಯಗಳು ನಿಂತ ನೀರಾಗಬಾರದು, ಅದು ನಿರಂತರ ಹರಿಯುವಂತಾಗಬೇಕು. ಬೇರೆ ಬೇರೆ ಒತ್ತಡ ಇದ್ದರೂ ಕ್ಲಬ್ ಸದಸ್ಯರ ಸಹಕಾರದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನೂತನ ಅಧ್ಯಕ್ಷೆಗೆ ಶುಭ ಹಾರೈಸಿದರು.


ಸದಸ್ಯರ ಸೇರ್ಪಡೆ:
ಕ್ಲಬ್ ನೂತನ ಸದಸ್ಯರಾಗಿ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಗ್ರೆಟ್ಟಾ ಮಸ್ಕರೇನ್ಹಸ್, ನಿವೃತ್ತ ಉಪನ್ಯಾಸಕಿ ಶ್ರೀಮತಿ ವಾರಿಜ ಕೆ.ರವರುಗಳನ್ನು ನೂತನ ಅಧ್ಯಕ್ಷೆ ಆಶಾ ರೆಬೆಲ್ಲೋರವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಅಧಿಕೃತವಾಗಿ ಬರಮಾಡಿಕೊಂಡರು. ಕ್ಲಬ್ ಪೂರ್ವಾಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆರವರು ನೂತನ ಸದಸ್ಯರನ್ನು ಪರಿಚಯಿಸಿದರು.


ಟಿ.ಆರ್.ಎಫ್ ದೇಣಿಗೆ:
ಇಂಟರ್ನ್ಯಾಷನಲ್ ಸರ್ವಿಸ್ ವತಿಯಿಂದ ಟಿ.ಆರ್.ಎಫ್ ಫೌಂಡೇಶನ್‌ಗೆ ಕ್ಲಬ್ ಸದಸ್ಯರ ದೇಣಿಗೆಯಾಗಿ ಚೆಕ್ ಅನ್ನು ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ದೀಪಕ್ ಮಿನೇಜಸ್‌ರವರು ಅಸಿಸ್ಟೆಂಟ್ ಗವರ್ನರ್ ಪ್ರೊ|ಝೇವಿಯರ್ ಡಿ’ಸೋಜರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರೋಟರಿ ಫೌಂಡೇಶನ್‌ಗೆ ದೇಣಿಗೆ ನೀಡಿ ಪಿ.ಎಚ್.ಎಫ್ ಪದವಿ ಗಳಿಸಿದ ಸದಸ್ಯ ರೋಶನ್ ರೈ ಬನ್ನೂರುರವರನ್ನು ಅಭಿನಂದಿಸಲಾಯಿತು.


ಸಹಕರಿಸಿದವರಿಗೆ ಅಭಿನಂದನೆ:,
ಕ್ಲಬ್ ನೂತನ ಅಧ್ಯಕ್ಷೆ ಆಶಾ ರೆಬೆಲ್ಲೋರವರು ತನ್ನ ಕಾರ್ಯ ಕ್ಷೇತ್ರದಲ್ಲಿ ಸಹಕರಿಸಿದ ಶಿಕ್ಷಕಿ ಮೋಲಿ ಪಿಂಟೊ, ಉದ್ಯಮಿ ಜೋನ್ ಕುಟಿನ್ಹಾ, ನ್ಯಾಯವಾದಿ ಪ್ರಕಾಶ್ ಸಿಕ್ವೇರಾ, ಫೋಟೋಗ್ರಾಫರ್ ರೋಶನ್ ಡಾಯಸ್, ಉದ್ಯಮಿ ರೋಹನ್ ಡಾಯಸ್, ಉದ್ಯಮಿ ಸಿಲ್ವೆಸ್ಟರ್ ಗೊನ್ಸಾಲ್ವಿಸ್, ಪತ್ರಕರ್ತ ಸಂತೋಷ್ ಮೊಟ್ಟೆತ್ತಡ್ಕರವರುಗಳನ್ನು ಅಭಿನಂದಿಸಲಾಯಿತು.
ಶ್ರೀಮತಿ ಮೀನಾಕ್ಷಿ ಗೌಡ ಪ್ರಾರ್ಥಿಸಿದರು. ವೇದಿಕೆಯಲ್ಲಿ ನೂತನ ಅಧ್ಯಕ್ಷೆ ಆಶಾ ಮರಿಯಾ ರೆಬೆಲ್ಲೋರವರ ಪತಿ ಫೆಬಿಯನ್ ಗೋವಿಯಸ್, ೨೦೨೪-೨೫ರ ಅಧ್ಯಕ್ಷ ಸುರೇಶ್ ಪಿ. ನಿಕಟಪೂರ್ವ ಕೋಶಾಧಿಕಾರಿ ವಿಜಯ್ ಡಿ’ಸೋಜ ಉಪಸ್ಥಿತರಿದ್ದರು. ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸುಭಾಷ್ ರೈ ಬೆಳ್ಳಿಪ್ಪಾಡಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಶ್ರೀಮತಿ ಸಂಧ್ಯಾ ಬೈಲಾಡಿ ವಂದಿಸಿದರು. ನಿಕಟಪೂರ್ವ ಕಾರ್ಯದರ್ಶಿ ಪ್ರವೀಣ್ ರೈ ಸಾಂತ್ಯ ವರದಿ ಮಂಡಿಸಿದರು. ಪೂರ್ವಾಧ್ಯಕ್ಷರಾದ ಮಹಾಬಲ ಗೌಡ, ಭಾಸ್ಕರ ಕೋಡಿಂಬಾಳ, ವೆಂಕಟ್ರಮಣ ಗೌಡ ಕಳುವಾಜೆ ಹಾಗೂ ಸದಸ್ಯರಾದ ದೀಪಕ್ ಮಿನೇಜಸ್, ರಾಮಣ್ಣ ರೈ, ದೀಪಕ್ ಬೊಳ್ವಾರುರವರು ಅತಿಥಿಗಳ ಪರಿಚಯ ಮಾಡಿದರು. ಮಹೇಶ್ ಕೆ.ಸವಣೂರು ಹಾಗೂ ಶ್ರೀಮತಿ ಸುಶ್ಮಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.


ಸ್ವಾವಲಂಭಿ ಮಹಿಳೆಗೆ ಪಿಂಕ್ ಆಟೋ ಬ್ಯಾಡ್ಜ್..
ನಾನು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು ನನ್ನ ನಿವೃತ್ತಿ ಬಳಿಕ ಕ್ಲಬ್‌ನ ಅಧ್ಯಕ್ಷೆಯಾಗಬೇಕು ಎಂದಿದ್ದೆ. ವಾಲ್ಟರ್ ನಂದಳಿಕೆರವರು ಕೊರೋನಾ ಸಂದರ್ಭದಲ್ಲಿ ಮಾಡಿದ ಜನಸೇವೆಯನ್ನು ವೀಕ್ಷಿಸಿದ ಮೇಲೆ ನಾವ್ಯಾಕೆ ಜನಸೇವೆ ಮಾಡಬಾರದು. ಆದ್ದರಿಂದ ಅಂದು ಕೊರೋನಾ ಸಮಯದಲ್ಲಿ ಮಾಯಿದೆ ದೇವುಸ್ ಚರ್ಚ್ ಐಸಿವೈಎಂ ಗೆಳೆಯರು ಜೊತೆಗೂಡಿ ನಾವೂ ಕೂಡ ಕಿಟ್ ನೀಡುವ ಮೂಲಕ ಸೇವೆ ಮಾಡಿರುವುದು ವಾಲ್ಟರ್ ನಂದಳಿಕೆರವರ ಪ್ರೇರಣೆಯಿಂದಾಗಿದೆ. ರೋಟರಿ ಅಂದರೆ ನಾನು ಅಲ್ಲ ನಾವು ಎಂಬುದಾಗಿದೆ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಇಂಪ್ಯಾಕ್ಟ್ ಮೂಡಿಸುವ ಕೆಲಸವನ್ನು ಮಾಡಲಿದ್ದು ಅದರಲ್ಲಿ ಮುಖ್ಯವಾಗಿ ಸ್ವಾವಲಂಭಿ ಮಹಿಳೆಗೆ ದುಡಿಯಲು ಆರ್.ಟಿ.ಒ ನಿಯಮಾವಳಿಯಂತೆ “ಪಿಂಕ್ ಆಟೋ ಬ್ಯಾಡ್ಜ್” ಒದಗಿಸಿ ಕೊಡಲಿದ್ದೇವೆ.

-ಆಶಾ ಮರಿಯಾ ರೆಬೆಲ್ಲೋ, ನೂತನ ಅಧ್ಯಕ್ಷರು, ರೋಟರಿ ಪುತ್ತೂರು ಸ್ವರ್ಣ

ಸನ್ಮಾನ..
2028-29ರ ಸಾಲಿನ ರೋಟರಿ ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಪೂರ್ವಾಧ್ಯಕ್ಷ ಡಾ.ಸೂರ್ಯನಾರಾಯಣ ಕೆ ದಂಪತಿ, ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಆಗಿ ಸೇವೆ ಸಲ್ಲಿಸಿದ ಪ್ರಮೀಳಾ ರಾವ್ ಹಾಗೂ ಸುರೇಶ್ ಪಿ, ಹೂವಿನ ವ್ಯಾಪಾರಿ, ರಿಯಲ್ ಎಸ್ಟೇಟ್ ಉದ್ಯಮಿ, 27 ಬಾರಿ ರಕ್ತದಾನ ಮಾಡಿರುವ ದ.ಕ ಜಿಲ್ಲೆಯ ಏಕೈಕ ಮಹಿಳೆ ಪ್ಲೋನ್ಸಿ ಸುವಾರಿಸ್, ಶಾಲೆಯಲ್ಲಿ ಕೈದೋಟ ನಿರ್ಮಾಣ, ವೃಕ್ಷಾರೋಹಣ ನಿರ್ಮಾಣ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಿವೃತ್ತ ಮುಖ್ಯ ಶಿಕ್ಷಕ ರಾಮಣ್ಣ ಗೌಡ, ಕ್ಲಬ್‌ನಲ್ಲಿ ಕಳೆದ ವರ್ಷ ಅಧಿಕಾರ ಸ್ವೀಕರಿಸಿ ಮುನ್ನೆಡೆಸಿದ ಅಧ್ಯಕ್ಷ ಸುಭಾಷ್ ರೈ ಬೆಳ್ಳಿಪ್ಪಾಡಿ, ಕಾರ್ಯದರ್ಶಿ ಪ್ರವೀಣ್ ರೈ ಸಾಂತ್ಯ, ಕೋಶಾಧಿಕಾರಿ ವಿಜಯ್ ಡಿ’ಸೋಜರವರುಗಳನ್ನು ಸನ್ಮಾನಿಸಲಾಯಿತು.

ನಂದಳಿಕೆ ಕಾಮಿಡಿ ಝಲಕ್..
ಮುಖ್ಯ ಅತಿಥಿ ವಾಲ್ಟರ್ ನಂದಳಿಕೆ ತನ್ನ ಭಾಷಣದಲ್ಲಿ, ಮಂಗಳೂರಿನ ಒಂದು ಕಾರ್ಯಕ್ರಮದಲ್ಲಿನ ವೇದಿಕೆಯಲ್ಲಿ 18 ಜನ ಅತಿಥಿಗಳಿದ್ದರು. ನನ್ನ ಗ್ರಹಚಾರಕ್ಕೆ ಅಂದು ಅಧ್ಯಕ್ಷತೆ ವಹಿಸಿದ್ದವರು ಬರದ್ದಕ್ಕೆ ನನ್ನನ್ನು ಅಧ್ಯಕ್ಷತೆಯನ್ನಾಗಿ ಮಾಡಿದರು. ಇನ್ನು ಅಧ್ಯಕ್ಷತೆ ವಹಿಸಿದ ಮೇಲೆ ಗೊತ್ತಲ್ಲ ಕೊನೆಗೆ ಭಾಷಣವೆಂದು. ಮಧ್ಯಾಹ್ನ ಗಂಟೆ 1.30ಗೆ ನನ್ನ ಸರದಿ ಬಂತು. ಆವಾಗಲೂ ಸಭೆಯಲ್ಲಿ ಜನರು ತುಂಬಿರುವುದು ನೋಡಿದಾಗ ನನಗೆ ಖುಶಿಯಾಯಿತು. ಆವಾಗ ಕಾರ್ಯಕ್ರಮದ ನಿರೂಪಕರು ಹೀಗೆಂದರು. ಈಗ ನಮ್ಮ ವಾಲ್ಟರ್ ನಂದಳಿಕೆರವರು ಮಾತನಾಡಲಿದ್ದಾರೆ, ಊಟಕ್ಕೆ ಹೋಗುವವರು ಹೋಗಬಹುದು ಎಂದು. ಮತ್ತೊಂದು ರಾತ್ರಿ ಹೊತ್ತಿನ ಕಾರ್ಯಕ್ರಮ. ಆಯೋಜಕರು ಭರ್ತಿ ಏಳು ಗಂಟೆಗೆ ಕಾರ್ಯಕ್ರಮ ಆರಂಭವೆಂದು ಹೇಳಿದ್ದರು. ಆದರೆ ನನ್ನದೊಂದು ಕೆಟ್ಟ ಅಭ್ಯಾಸ, ಸಮಯಕ್ಕೆ ಸರಿಯಾಗಿ ಹಾಜರಾಗುವುದು. ಎಂಟು ಗಂಟೆ ಆಗುತ್ತಾ ಬಂದರೂ ಕಾರ್ಯಕ್ರಮ ಆರಂಭವಾಗಲಿಲ್ಲ. ಸಭೆಯಲ್ಲಿ ಆಯೋಜಕರು ಮಾತ್ರ ಆಚೀಚೆ ಹೋಗುತ್ತಿದ್ದರು. ನಾನು ಆಯೋಜಕರಲ್ಲಿ ಹೇಳಿದೆ, ನನಗೆ 8.30ಕ್ಕೆ ಬೇರೆ ಕಾರ್ಯಕ್ರಮ ಇದೆ, ನನಗೆ ಅಲ್ಲಿಗೆ ಹೋಗಬೇಕು ಎಂದಾಗ ಆಯೋಜಕರು ಇಲ್ಲ, ಈಗಲೇ ಆರಂಭಿಸುತ್ತೇವೆ, ಮೊದಲ ಭಾಷಣವೇ ನಿಮ್ಮದು ಎಂದಾಗ ನನಗೆ ತುಂಬಾ ಸಮಾಧಾನವಾಯಿತು. ಪುಣ್ಯಕ್ಕೆ ನಿರೂಪಕರು ನನಗೆ ಮೊದಲ ಭಾಷಣಗೈಯಲು ಹೇಳಿದರು. ನಾನು ಭಾಷಣಗೈಯ್ದು ಸಭಾಸದನದಿಂದ ಹೊರಗೆ ಹೋಗುವಷ್ಟರಲ್ಲಿ ಕೂಡಲೇ ನಿರೂಪಕರು “ಈಗ ತಾನೇ ನಮ್ಮ ಮುಖ್ಯ ಅತಿಥಿ ವಾಲ್ಟರ್ ನಂದಳಿಕೆರವರು ನಮ್ಮನ್ನು ಬಿಟ್ಟು ಅಗಲಿ ಹೋಗಿದ್ದಾರೆ” ಎಂಬುದು. ನನಗೆ ಅಲ್ಲಿ ಇರಬೇಕೋ, ಹೋಗಬೇಕೋ ಎಂಬುದು ಗೊತ್ತಾಗಲಿಲ್ಲ. ಅದು ಅಷ್ಟಕ್ಕೆ ಮುಗಿಯಲಿಲ್ಲ. ಆ ಕಾರ್ಯಕ್ರಮವನ್ನು ಲೈವ್ ಮಾಡಲಾಗಿತ್ತು. ನಾನು ಕಾರಿನಲ್ಲಿ ಕೂತಿದ ತಕ್ಷಣ ನನ್ನ ಗೆಳೆಯನ ಫೋನ್. ಅವನು ಕಾರ್ಯಕ್ರಮದ ಲೈವ್ ಅನ್ನು ನೋಡುತ್ತಿದ್ದ. ಕಾರ್ಯಕ್ರಮದ ನಿರೂಪಕರು ಕೊನೆಗೆ “ಅಗಲಿ ಹೋಗಿದ್ದಾರೆ” ಎಂದಿದ್ದಕ್ಕೆ “ಈ ನನಲ ಪೋತಿಜನ” ಎಂಬುದಾಗಿತ್ತು.

ಪದ ಪ್ರದಾನ..
ನೂತನ ಅಧ್ಯಕ್ಷೆ ಶ್ರೀಮತಿ ಆಶಾ ರೆಬೆಲ್ಲೋ, ಕಾರ್ಯದರ್ಶಿ ಶ್ರೀಮತಿ ಸಂಧ್ಯಾ ಬೈಲಾಡಿ, ಕೋಶಾಧಿಕಾರಿ ವಿಜಯ್ ವಿಲ್ಫ್ರೆಡ್ ಡಿ’ಸೋಜ, ಉಪಾಧ್ಯಕ್ಷ ರಾಮಣ್ಣ ರೈ, ನಿಕಟಪೂರ್ವ ಅಧ್ಯಕ್ಷ ಸುಭಾಷ್ ರೈ ಬೆಳ್ಳಿಪ್ಪಾಡಿ, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಭಾಸ್ಕರ್ ಕೋಡಿಂಬಾಳ, ಸಾರ್ಜಂಟ್ ಎಟ್ ಆಮ್ಸ್೯ ಮೀನಾಕ್ಷಿ ಗೌಡ, ಎಕ್ಸಿಕ್ಯೂಟಿವ್ ಕಾರ್ಯದರ್ಶಿ ಪ್ರವೀಣ್ ರೈ ಸಾಂತ್ಯ, ಚೇರ್ಮನ್‌ಗಳಾದ ಮೆಂಬರ್‌ಶಿಪ್ ಸುರೇಶ್ ಪಿ, ವೊಕೇಶನಲ್ ಸರ್ವಿಸ್ ದೀಪಕ್ ಬೊಳ್ವಾರು, ಕ್ಲಬ್ ಸರ್ವಿಸ್ ಪ್ರಾಜೆಕ್ಟ್ ದಿನೇಶ್ ಆಚಾರ್ಯ, ಟಿಆರ್‌ಎಫ್ ಫೌಂಡೇಶನ್ ಮಹಾಬಲ ಗೌಡ, ನ್ಯೂ ಜನರೇಶನ್ ದೀಪಕ್ ಮಿನೇಜಸ್, ಪಬ್ಲಿಕ್ ಇಮೇಜ್ ಸುನಿಲ್ ಜಾಧವ್, ಪಲ್ಸ್ ಪೋಲಿಯೊ ಸೆನೋರಿಟಾ ಆನಂದ್, ಬುಲೆಟಿನ್ ಎಡಿಟರ್ ಮಹೇಶ್ ಸವಣೂರು, ಕಮ್ಯೂನಿಟಿ ಸರ್ವಿಸ್ ಉಮೇಶ್ ಮಲುವೇಳು, ಇಂಟರ್ನ್ಯಾಷನಲ್ ಸರ್ವಿಸ್ ಆನಂದ್ ಮೂವಪ್ಪು, ಟೀಚ್ ನಾರಾಯಣ ರೈ, ವಿನ್ಸ್ ರೋಶನ್ ರೈ, ವೆಬ್& ಐಟಿ ಸುಂದರ ಗೌಡ, ಸಿ.ಎಲ್.ಸಿ.ಸಿ ಸುರೇಂದ್ರ ಆಚಾರ್ಯ, ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಉದಯ ಕುಮಾರ್ ಕರ್ಮಲ, ಎಥಿಕ್ಸ್ ಕಮಿಟಿ ಜಯಂತ್ ಶೆಟ್ಟಿ, ಪ್ರೋಗ್ರಾಂ ಸಮಿತಿ ಚಂದ್ರಶೇಖರ ಮೂರ್ತಿರವರಿಗೆ ಪದ ಪ್ರದಾನ ಅಧಿಕಾರಿ ಪ್ರೊ|ದತ್ತಾತ್ರೇಯ ರಾವ್‌ರವರು ಪದ ಪ್ರದಾನ ಮಾಡಿದರು.

LEAVE A REPLY

Please enter your comment!
Please enter your name here