







ರಾಮಕುಂಜ: ಶಿವಳ್ಳಿ ಸಂಪದ ರಾಮಕುಂಜ ವಲಯ ಇದರ ವಾರ್ಷಿಕ ಸಮ್ಮೇಳನ-2026 ಕಾರ್ಯಕ್ರಮ ಜು.12ರಂದು ಶ್ರೀ ರಾಮಕುಂಜೇಶ್ವರ ದೇವಾಲಯದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಲಯದ ಎಲ್ಲಾ ದೇವಾಲಯಗಳ ಅರ್ಚಕರಿಗೆ, ನಿವೃತ್ತ ಶಿಕ್ಷಕರಿಗೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ವಲಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.



ಬೆಳಗ್ಗೆ ಸಾಂಸ್ಕೃತಿಕ ಕಾರ್ಯಕ್ರಮ, ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಬ್ರಾಹ್ಮಣ್ಯವನ್ನು ಅನುಷ್ಠಾನಿಸಿದಾಗಲೇ ಬ್ರಾಹ್ಮಣ ಔನ್ನತ್ಯ ಸಾಧಿಸಲು ಸಾಧ್ಯ. ಭಾರತೀಯ ಸಂಸ್ಕೃತಿಯ ವಿಶಿಷ್ಠ ಮೌಲ್ಯಗಳು ನಶಿಸಿ ಹೋಗುತ್ತಿರುವುದು ನಮ್ಮ ಮಕ್ಕಳು ಹಾದಿ ತಪ್ಪಲು ಕಾರಣವಾಗಿದೆ. ಎಳೆವೆಯಲ್ಲೇ ಸಂಸ್ಕಾರ ನೀಡಿ ಮಕ್ಕಳನ್ನು ಬೆಳೆಸಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೪೫ ಮಂದಿಯನ್ನು ಗುರುತಿಸಿ ಗೌರವಿಸಿರುವುದು ಆದರ್ಶಪ್ರಾಯವಾಗಿದೆ. ವಿದ್ಯಾರ್ಥಿಗಳು ಆಡಳಿತಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಸಾಧನೆ ತೊರಬೇಕು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಪದದ ಅಧ್ಯಕ್ಷ ಸೂರ್ಯಪ್ರಸಾಶ ಉಡುಪ ಸ್ವಾಗತಿಸಿದರು.



ತಾಲೂಕು ಶಿವಳ್ಳಿ ಸಂಪದದ ಅಧ್ಯಕ್ಷ ಸುಧೀಂದ್ರ ಕುದ್ದಣ್ಣಾಯ, ರಾಮಕುಂಜ ವಲಯ ಶಿವಲ್ಲಿ ಸಂಪದದ ಗೌರವಾಧ್ಯಕ್ಷರಾದ ಬಾಲಕೃಷ್ಣ ಎಡಪಡಿತ್ತಾಯ ಕಿಜಾನ, ಭಾಸ್ಕರ ಭಟ್ ಆಲಂಕಾರು, ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟಿ.ನಾರಾಯಣ ಭಟ್ ಸನ್ಮಾನಿತರ ಪರಿಚಯ ಮಾಡಿದರು. ಪ್ರಣಿಧಿ ಪ್ರಾರ್ಥಿಸಿದರು. ಶ್ರೀನಿಧಿ ಉಪಾಧ್ಯಾಯ ಉಪ್ಪಿನಂಗಡಿ, ಅನಿರುದ್ಧ ಉಪಾಧ್ಯಾಯ ಈರಕಿಮಠ, ಸುಬ್ರಹ್ಮಣ್ಯ ಬಾರಿತ್ತಾಯ ಕರಾಯ, ಬಾಲಚಂದ್ರ ಮುಚ್ಚಿಂತಾಯ ಕೋಡಿಲ, ಬಿ.ನಾರಾಯಣ ಭಟ್ ಆಲಂಕಾರು, ಭಾರತಿ ಅತುಲ್ ರಾಮಕುಂಜ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.









