ಲಿಟ್ಲ್ ಫ್ಲವರ್ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ

0

ಮಕ್ಕಳಿಗೆ ಸಮಯ ನೀಡಿ, ಮಾತನ್ನು ಆಲಿಸಿದಾಗ ಮಕ್ಕಳು ಅದ್ಭುತ ಸಾಧಕರಾಗುತ್ತಾರೆ-ಸತೀಶ್ ಭಟ್

ಪುತ್ತೂರು:ಶತಮಾನಕ್ಕೆ ಮುನ್ನುಡಿ ಬರೆಯುತ್ತಿರುವ ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯು ಜು.11ರಂದು ಶಾಲಾ ಸಭಾಂಗಣದಲ್ಲಿ ನೆರವೇರಿತು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಶಾಲೆಯ ರಾಜ್ಯ ಪ್ರಶಸ್ತಿ ವಿಜೇತ ಮುಖ್ಯಶಿಕ್ಷಕ ಸತೀಶ್ ಭಟ್ ರಾಮಕುಂಜ ಮಾತನಾಡಿ, ಪೋಷಕರು ಮಕ್ಕಳಿಗೆ ದಿನಕ್ಕೆ ಒಂದು ಘಂಟೆಯಾದರೂ ಸಮಯ ಮೀಸಲಿಡಬೇಕು. ಮಕ್ಕಳ ಮಾತನ್ನು ಕೇಳುವ ಕನಿಷ್ಠ ಸಂಯಮ ಪೋಷಕರಲ್ಲಿ ಜಾಗೃತವಾಗಲಿ. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುತ್ತಾ ಮುನ್ನಡೆದಾಗ ನಿಮ್ಮ ಮಕ್ಕಳು ಅಧ್ಭುತ ಸಾಧಕರಾಗುವಲ್ಲಿ ಸಂಶಯವಿಲ್ಲ ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಭಗಿನಿ ಪ್ರಶಾಂತಿ ಬಿ.ಎಸ್ ಮಾತನಾಡಿ, ಪ್ರಸ್ತುತ ಶೈಕ್ಷಣಿಕ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಇಡೀ ಸಭಾಂಗಣ ತುಂಬಿ ತುಳುಕುತ್ತಿರುವುದನ್ನು ಕಂಡಾಗ ಆನಂದವಾಗುತ್ತಿದೆ. ಮಕ್ಕಳ ಮೇಲಿನ ಕಾಳಜಿ, ಶಿಕ್ಷಣದ ಮೇಲಿನ ಕರ್ತವ್ಯ ಮತ್ತು ಜವಾಬ್ದಾರಿ ಎದ್ದು ಕಾಣುತ್ತಿದೆ. ಶಾಲೆಯ ಜೊತೆಗಿನ ಸಂಬಂಧ ಇನ್ನಷ್ಟು ಗಟ್ಟಿಯಾಗಲಿ ಎಂದು ಹಾರೈಸಿದರು.


ಶಾಲಾ ರಕ್ಷಕ-ಶಿಕ್ಷಕ ಸಂಘದ ನಿಕಟಪೂರ್ವ ಉಪಾಧ್ಯಕ್ಷ ರಾಮಚಂದ್ರ ಭಟ್, ಸುರಕ್ಷಾ ಸಮಿತಿಯ ಉಪಾಧ್ಯಕ್ಷ ಚೇತನ್ ಮೊಟ್ಟೆತ್ತಡ್ಕ ಸಂದರ್ಭೋಚಿತವಾಗಿ ಮಾತನಾಡಿದರು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ವಿನಯ ಸುವರ್ಣ, ಐಕ್ಯ ಕಲಾಸೇವಾ ಟ್ರಸ್ಟ್‌ನ ಸದಸ್ಯರಾದ ದಕ್ಷಿತ್, ಅವಿನಾಶ್, ಅಬಿಷೇಕ್, ದೀಕ್ಷಿತ್ ಡಿ ಬಿ, ತಮನ್ ಮತ್ತು ಶ್ರೀಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಐಕ್ಯ ಕಲಾಸೇವಾ ಟ್ರಸ್ಟ್ ಪುತ್ತೂರು ಇದರ ವತಿಯಿಂದ ನೀಡಲಾಗುವ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳಾದ ಮಹಮ್ಮದ್ ಮಹರೀಝ್, ದೃತಿ ರೈ, ಖದೀಜತ್ ಝುಲ್ಫಾ, ಯಶಸ್ವಿ ಪಿ, ಹಿತಾಶ್ರೀ, ಸುಜನ್ ಹಾಗೂ ಗಗನ್ ಇವರಿಗೆ ವಿತರಿಸಲಾಯಿತು.


ಮುಖ್ಯ ಶಿಕ್ಷಕಿ ಭಗಿನಿ ಐರಿನ್ ವೇಗಸ್ ಸ್ವಾಗತಿಸಿದರು. ಶಿಕ್ಷಕರಾದ ಶಿಕ್ಷಕಿ ಶಿವಪ್ರಿಯಾ ಪ್ರಾರ್ಥಿಸಿದರು. ವಿಲ್ಮಾ ಫೆರ್ನಾಂಡಿಸ್ ವರದಿ ವಾಚಿಸಿ, ಲೆಕ್ಕ ಪತ್ರ ಮಂಡಿಸಿದರು. ಭಗಿನಿ ಜೆಸಿಂತ ಪ್ರೆಫಿಲ್ಡಾ ಡೆಸಾ ವಂದಿಸಿ, ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here