






ಪುತ್ತೂರು: ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಒಳಕುಮೇರಿ ನಿವಾಸಿ ಮಮತಾ ಅವರ ಸಾವಿನ ಪ್ರಕರಣದಲ್ಲಿ ಕೊಲೆ ಆರೋಪ ಎದುರಿಸುತ್ತಿದ್ದ ಮೈದುನ ಲೋಕಯ್ಯ ಅವರಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.


2025ರ ಆ.6ರಂದು ಮಮತಾ ಅವರನ್ನು ಮೈದುನ ಲೋಕಯ್ಯ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ಪೊಲೀಸರು ಲೋಕಯ್ಯರನ್ನು ಬಂಧಿಸಿದ್ದರು.



ಬಳಿಕ ಜಾಮೀನು ಕೋರಿ ಲೋಕಯ್ಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆರೋಪಿ ಪರ ವಾದ ಮಂಡಿಸಿದ ನ್ಯಾಯವಾದಿ ಅಶ್ವಿನ್ ಎಲ್. ಶೆಟ್ಟಿ, ಇದು ಕೊಲೆ ಪ್ರಕರಣವಲ್ಲ, ಮಮತಾ ಅವರು ಹಳ್ಳದ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.ನ್ಯಾಯಾಲಯವು ಲೋಕಯ್ಯ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ನ್ಯಾಯವಾದಿ ಅಶ್ವಿನ್ ಎಲ್. ಶೆಟ್ಟಿ ಅವರಿಗೆ ನ್ಯಾಯವಾದಿಗಳಾದ ಚಂದ್ರಹಾಸ ಈಶ್ವರಮಂಗಲ, ಸಿಂಚನ ರೈ ಹಾಗೂ ಶುಭಲಕ್ಷ್ಮೀ ಬಿ. ಅವರು ಸಹಕರಿಸಿದರು.










