







ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ನೆಕ್ಕಿಲಾಡಿ ಗ್ರಾಮದ ಕರ್ವೇಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ವಿದ್ಯುತ್ ಉಪ ಕೇಂದ್ರದಿಂದ ಕೊಯಿಲ ವಿದ್ಯುತ್ ಉಪ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ವಿದ್ಯುತ್ ಲೈನ್ ಕಾಮಗಾರಿ ಸಲುವಾಗಿ ಹಾಕಲಾಗಿರುವ ಬೃಹತ್ ವಿದ್ಯುತ್ ಕಂಬಗಳು ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಸಾಲು ಸಾಲಾಗಿ ವಾಲಿ ನಿಂತಿದ್ದು, ಧರೆಗುರುಳಲು ಸಿದ್ಧವಾಗಿವೆ. ತಂತಿಗಳ ನೆರವಿನಿಂದ ಕಂಬಗಳು ವಾಲಿ ನಿಂತುಕೊಂಡಿದ್ದರಿಂದ ಅದೃಷ್ಟವಶಾತ್ ಸಂಭವನೀಯ ದುರಂತ ತಪ್ಪಿದಂತಾಗಿದೆ. ಇಲ್ಲಿ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿರುವುದು ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.



ಕೊಯಿಲದಲ್ಲಿ 33 ಕೆ.ವಿ. ವಿದ್ಯುತ್ ಉಪ ಕೇಂದ್ರ ನಿರ್ಮಾಣಕ್ಕೆ 13 ಕೋಟಿ ರೂಪಾಯಿ ಮಂಜೂರು ಆಗಿ ಅಲ್ಲಿನ ಕಟ್ಟಡ ಕಾಮಗಾರಿ ಆಗಿ, ಅದಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳ ಜೋಡಣೆಯೂ ಆಗಿರುತ್ತದೆ. ಇಲ್ಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಕೊಯಿಲದಿಂದ ಕರ್ವೇಲ್ ತನಕ ಹೆದ್ದಾರಿ ಬದಿಯಲ್ಲಿ ಬೃಹತ್ ವಿದ್ಯುತ್ ಕಂಬ ನಿಲುಗಡೆಗೊಳಿಸುವ ಕೆಲಸ ನಡೆಯುತ್ತಿದ್ದು. ಈ ಕೆಲಸವನ್ನು ಮೈಸೂರು ಮೂಲದ ಗುತ್ತಿಗೆದಾರರೋರ್ವರು ಗುತ್ತಿಗೆ ವಹಿಸಿಕೊಂಡಿದ್ದರು. ಅವರು ಪೆರಿಯಡ್ಕದ ವಿದ್ಯುತ್ ಗುತ್ತಿಗೆದಾರರೋರ್ವರಿಗೆ ಸಬ್ ಗುತ್ತಿಗೆ ನೀಡಿರುವುದಾಗಿ ಹೇಳಲಾಗುತ್ತಿದೆ. ಈ ಕೆಲಸ ಪೂರ್ಣಗೊಳ್ಳುವ ಮೊದಲೇ ಕಂಬಗಳು ಸಂಪೂರ್ಣ ವಾಲತೊಡಗಿರುವುದು ಈ ಕಾಮಗಾರಿಯ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.




ಹೆದ್ದಾರಿ ಬದಿಯಲ್ಲಿ ಬೃಹತ್ ವಿದ್ಯುತ್ ಕಂಬಗಳನ್ನು ನಿಲುಗಡೆಗೊಳಿಸುವ ಕೆಲಸ ಬಹುತೇಕ ಪೂರ್ಣಗೊಂಡಿದೆ. ಕಂಬವನ್ನು ನೆಲದ ಅಡಿಯಲ್ಲಿ 6 ಅಡಿಯಷ್ಟು ಹೊಂಡ ಮಾಡಿ ಹೂಳುವಂತದ್ದು, ಮತ್ತು ಅದರ ಸುತ್ತ ಕಾಂಕ್ರೀಟ್ ಹಾಕಿ ಗಟ್ಟಿಗೊಳಿಸುವಂತದ್ದು ನಿಯಮ. ಆದರೆ ಇಲ್ಲಿ ಕಂಬದ ಬುಡಕ್ಕೆ ಕಾಂಕ್ರೀಟ್ ಹಾಕಿ ಅದನ್ನು ಗಟ್ಟಿಗೊಳಿಸದೇ ಕೇವಲ 4 ಅಡಿಯಷ್ಟು ಹೊಂಡ ತೆಗೆದು ಕಾಟಾಚಾರಕ್ಕೆ ಕಾಮಗಾರಿ ನಡೆಸಲಾಗಿದ್ದು, ಇದರಿಂದಾಗಿ ಈ ಸಣ್ಣ ಮಳೆಗೆ ಮಣ್ಣಿನೊಳಗೆ ಹಿಡಿತ ಸಾಧಿಸಲು ಸಾಧ್ಯವಾಗದೆ ಕಂಬಗಳು ವಾಲುತ್ತಿವೆ. ಒಂದು ಕಂಬ ಧರೆಗುರುಳಿದರೆ ಸಾಲು ಸಾಲು ಕಂಬಗಳೂ ಧರೆಗುರುಳುವ ಅಪಾಯವಿದೆ.
ಈ ರೀತಿಯಾದ ಬೃಹತ್ ಕಂಬಗಳನ್ನು ಕೊಯಿಲದಿಂದ ಉಪ್ಪಿನಂಗಡಿ ತನಕ ರಾಜ್ಯ ಹೆದ್ದಾರಿ ಬದಿಯಲ್ಲಿ ಹಾಗೂ ಉಪ್ಪಿನಂಗಡಿಯಿಂದ ಕರ್ವೇಲ್ ತನಕ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹಾಕಲಾಗಿದೆ. ನೆಕ್ಕಿಲಾಡಿಯಿಂದ ಬೊಳ್ಳಾರು ತನಕ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹಾಕಲಾದ ಸಾಲು ಸಾಲು ಕಂಬಗಳು ಜು. 17ರಂದು ವಾಲಿ ಹೋಗಿದ್ದವು. ಈ ಕಂಬಗಳು ಅದೃಷ್ಠವಶಾತ್ ಹೆದ್ದಾರಿಯ ಆಚೆಯ ಭಾಗಕ್ಕೆ ವಾಲಿದ್ದು, ಒಂದು ವೇಳೆ ಇವುಗಳು ಇತ್ತ ಕಡೆಗೆ ಬಿದ್ದಿದ್ದರೆ ಅವುಗಳು ನೇರವಾಗಿ ಹೆದ್ದಾರಿ ಮೇಲೆ ಬೀಳುತ್ತಿತ್ತು. ಇವುಗಳೇನಾದರೂ ವಾಹನಗಳ ಮೇಲೆ ಬಿದ್ದಿದ್ದರೆ ಸಾವು-ನೋವುಗಳಿಗೆ ಕಾರಣವಾಗುತ್ತಿತ್ತು. ಅದೃಷ್ಠವಶಾತ್ ಇಂತಹ ಅವಘಡವೊಂದು ತಪ್ಪಿದಂತಾಗಿದೆ.
ಆಮೆ ನಡಿಗೆಯಲ್ಲಿ ಕೆಲಸ
ಕೊಯಿಲದಲ್ಲಿ ನಿರ್ಮಾಣವಾಗಿರುವ ವಿದ್ಯುತ್ ಉಪಕೇಂದ್ರ 2025ರ ಡಿಸೆಂಬರ್‌ನಲ್ಲಿ ಲೋಕಾರ್ಪಣೆ ಆಗಬೇಕಿತ್ತು. ಆದರೆ ತೀರಾ ನಿಧಾನಗತಿ, ಆಮೆ ನಡಿಗೆಯ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ವಿದ್ಯುತ್ ಕಂಬ ಅಳವಡಿಕೆ ಕಾಮಗಾರಿ ತೀರಾ ಕಳಪೆಯಾಗಿದೆ. ಇಲ್ಲಿನ ಕಾಮಗಾರಿ ಮುಗಿಯಲು ಇನ್ನೂ ವರ್ಷ ಬೇಕಾದೀತು ಎಂದು ಇಲಾಖಾ ಮೂಲಗಳು ತಿಳಿಸಿವೆ.
ಬೃಹತ್ ಗಾತ್ರದ ವಿದ್ಯುತ್ ಕಂಬ ಹಾಕುವಾಗ ಆಳವಾದ ಹೊಂಡ ತೆಗೆದು, ಕಾಂಕ್ರೀಟ್ ಹಾಕಿ ಕಂಬವನ್ನು ನಿಲ್ಲಿಸಬೇಕಾಗುತ್ತದೆ. ಆದರೆ ಇಲ್ಲಿ ಕಾಂಕ್ರೀಟ್ ಹಾಕದೇ ಹೊಂಡದಲ್ಲಿ ಕಂಬವನ್ನು ಹೂತಿದ್ದು, ನೆಕ್ಕಿಲಾಡಿ ಪಂಚಾಯತ್ ಮುಂಭಾಗದಲ್ಲಿ ಇದೇ ರೀತಿಯಲ್ಲಿ ಕಂಬ ಹಾಕಲಾಗಿದೆ. ಕೆಲ ದಿನಗಳ ಹಿಂದೆ ಇಲ್ಲಿ ಕೆಲಸ ನಡೆಯುತ್ತಿರುವಾಗ ಕಾಂಕ್ರೀಟ್ ಹಾಕದಿರುವ ಬಗ್ಗೆ ನಾನು ವಿಚಾರಿಸಿದ್ದೇನು. ಆದರೆ ಕೆಲಸಗಾರರಿಂದ ಅದಕ್ಕೆ ಸಮರ್ಪಕ ಉತ್ತರ ದೊರೆಯಲಿಲ್ಲ. ಇದೀಗ ಕಂಬಗಳೇ ಬೀಳುವ ಸ್ಥಿತಿಯಲ್ಲಿದೆ. ಮೇಲ್ನೋಟಕ್ಕೆ ಈ ಕೆಲಸ ಕಳಪೆಯಾಗಿ ಕಾಣುತ್ತಿದೆ.
-ಪ್ರಶಾಂತ್ ನೆಕ್ಕಿಲಾಡಿ,
ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ್ 34 ನೆಕ್ಕಿಲಾಡಿ










